ಬೆಂಗಳೂರು,ಏ.29- ಬಿರು ಬಿಸಿಲಿನಿಂದ ಬಳಲಿ ಬೆಂಡಾಗಿದ್ದ ರಾಜ್ಯದ ವಿವಿಧೆಡೆ ಸುರಿದ ಭಾರೀ ಬಿರುಗಾಳಿ ಮಳೆ ತುಸು ತಂಪೆರೆದಿದ್ದರೆ ಮತ್ತೊಂದೆಡೆ ಭಾರೀ ಅವಾಂತರವನ್ನು ಸೃಷ್ಟಿಸಿದೆ.ರಣಬಿಸಿಲಿನಿಂದ ರಾಜ್ಯದ ಜನತೆ ತತ್ತರಿಸಿ ಹೋಗಿದ್ದು, ಜನತೆ ಮುಗಿಲು ನೋಡುತ್ತಿದ್ದು, ನಿನ್ನೆ ಮಧ್ಯಾಹ್ನ ಹಾಸನ, ತುಮಕೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ದಾವಣಗೆರೆ, ಶಿವಮೊಗ್ಗ, ಭದ್ರಾವತಿ, ರಾಯಚೂರು ಮತ್ತಿತರ ಜಿಲ್ಲೆಗಳಲ್ಲಿ ಮಳೆಯಾಗಿದ್ದು, ಭಾರೀ ಗಾಳಿಗೆ ವಿದ್ಯುತ್ ಕಂಬಗಳು, ಮರಗಳು ಧರೆಗುರುಳಿದ್ದು, ಭಾರೀ ನಷ್ಟ ತಂದೊಡ್ಡಿದೆ.
ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಜಿ ಅಂಕನಹಳ್ಳಿ ಗ್ರಾಮದಲ್ಲಿ ಸುರಿದ ಮಳೆಗೆ ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡು ರಾತ್ರಿಯಿಡೀ ಕತ್ತಲಲ್ಲೇ ಕಾಲ ಕಳೆಯುವಂತಾಯಿತು. ಜೊತೆಗೆ ಮರಗಳು ಉರುಳಿ ಬಿದ್ದಿದ್ದು ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿತ್ತು.
ಸಿಡಿಲು ಬಡಿದು 60 ಕುರಿ ಸಾವು :
ಯಾದಗಿರಿ ಜಿಲ್ಲೆಯಲ್ಲಿ ಭಾರೀ ಬಿರುಗಾಳಿ, ಮಳೆಯಾಗಿದ್ದು ಸಿಡಿಲು ಬಡಿದು 60 ಕುರಿಗಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಗುರುಮಿಠ್ಕಲ್ ತಾಲ್ಲೂಕಿನ ಬೂದೂರು ಗ್ರಾಮದಲ್ಲಿ ನಡೆದಿದೆ.ಕುರಿಗಾಹಿ ಮಲ್ಲಪ್ಪ, ಜಲ್ಲಪ್ಪನವರಿಗೆ ಸೇರಿದ ಕುರಿಗಳು ಸಾವನ್ನಪ್ಪಿದ್ದು, ಲಕ್ಷಾಂತರ ರೂ ನಷ್ಟ ಸಂಭವಿಸಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೂ ಸಹ ಗಾಳಿ, ಸಿಡಿಲು ಅಬ್ಬರ ಜೋರಾಗಿದ್ದು, ಸಿಡಿಲು ಬಡಿದು ಮೂರು ಹಸುಗಳು ಸಾವನ್ನಪ್ಪಿವೆ. ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬುಗೆರೆ ಹೋಬಳಿಯ ಗಂಟಿಗಾನಹಳ್ಳಿ ಸಮೀಪ ಜಮೀನಿನ ಬಳಿ ಕಟ್ಟಿದ್ದ 2 ಹಸುಗಳು ಸಿಡಿಲು ಬಡಿದು ಸಾವನ್ನಪ್ಪಿವೆ.
ನೆಲಮಂಗಲ ತಾಲ್ಲೂಕಿನ ಮರಳಕುಂಟೆ ಗ್ರಾಮದಲ್ಲಿ ಈರಣ್ಣ ಎಂಬುವವರಿಗೆ ಸೇರಿದ ಹಸುವೊಂದು ಸಿಡಿಲಿಗೆ ಬಲಿಯಾಗಿದೆ. ಮಳೆ ಪ್ರಾರಂಭವಾಗುತ್ತಿದ್ದಂತೆ ಹಸುಗಳನ್ನು ಮನೆಗೆ ಹೊಡೆದುಕೊಂಡು ಹೋಗುವಷ್ಟರಲ್ಲಿ ಸಿಡಿಲು ಬಡಿದು ಹಸು ಸಾವನ್ನಪ್ಪಿದೆ.
ತುಮಕೂರಿನಲ್ಲೂ ಸಹ ಮಳೆಯಾಗಿದ್ದು, ನಗರದ ಮೆಳೆಕೋಟೆಯಲ್ಲಿ ಮರವೊಂದು ಶೀಟ್ ಮನೆಯ ಮೇಲೆ ಉರುಳಿಬಿದ್ದಿದ್ದು ಮನೆ ಸಂಪೂರ್ಣವಾಗಿ ನಾಶವಾಗಿದೆ.ಬಟವಾಡಿಯ ರೈಲ್ವೆ ಗೇಟ್ ಬಳಿ ಮರದ ಕೊಂಬೆಯೊಂದು ವಿದ್ಯುತ್ ತಂತಿ ಮೇಲೆ ಉರುಳಿಬಿದ್ದಿದ್ದು ಸಂಭವನೀಯ ಅನಾಹುತ ತಪ್ಪಿದೆ.
ಕೆಲವೆಡೆ ವಿದ್ಯುತ್ ಕಂಬಗಳು ಧರೆಗುರುಳಿಬಿದ್ದು ವಿದ್ಯುತ್ ಸಂಪರ್ಕವಿಲ್ಲದೇ ಗ್ರಾಮಸ್ಥರು ಪರದಾಡುವಂತಾಗಿದೆ. ಇನ್ನೂ ಎರಡು ದಿನಗಳ ಕಾಲ ವಿವಿಧೆಡೆ ಗುಡುಗು, ಮಿಂಚು, ಬಿರುಗಾಳಿ ಸಹಿತ ಭಾರೀ ಮಳೆಯಾಗುವ ಸೂಚನೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಹಾವೇರಿ, ಗದಗ, ಕೊಪ್ಪಳ, ಬೆಳಗಾವಿ, ಧಾರವಾಡ, ವಿಜಯನಗರ, ದಾವಣಗೆರೆ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಮಂಡ್ಯ, ತುಮಕೂರು, ಬೆಂಗಳೂರು, ಬೆಂಗಳೂರು ಗ್ರಾಮಾಂತರ ಮತ್ತಿತರ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ.
