Thursday, April 16, 2026
Homeರಾಜ್ಯಬೇಡಿಕೆಗಳು ಈಡೇರುವವರೆಗೂ ಮುಷ್ಕರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ : ಸರ್ಕಾರಕ್ಕೆ ಸಾರಿಗೆ ನೌಕರರ ಸೆಡ್ಡು

ಬೇಡಿಕೆಗಳು ಈಡೇರುವವರೆಗೂ ಮುಷ್ಕರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ : ಸರ್ಕಾರಕ್ಕೆ ಸಾರಿಗೆ ನೌಕರರ ಸೆಡ್ಡು

There is no question of backing down from the strike until demands are met

ಬೆಂಗಳೂರು,ಫೆ.19- ತಾವು ಮುಂದಿಟ್ಟಿರುವ ಪೂರ್ಣ ಪ್ರಮಾಣದ ಬೇಡಿಕೆಗಳನ್ನು ಈಡೇರಿಸುವವರೆಗೂ ಮುಷ್ಕರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸಾರಿಗೆ ನೌಕರರು ಸರ್ಕಾರಕ್ಕೆ ನೇರವಾಗಿ ಸೆಡ್ಡು ಹೊಡೆದಿದ್ದಾರೆ.

ಇದರ ನಡುವೆ ಕೆಎಸ್‌‍ಆರ್‌ಟಿಸಿ, ಈಶಾನ್ಯ, ವಾಯುವ್ಯ ಹಾಗೂ ಬಿಎಂಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳು ಕರೆದಿರುವ ಬೆಂಗಳೂರು ಚಲೋ ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸಾರಿಗೆ ನಿಗಮಗಳು ಕರೆ ಕೊಟ್ಟಿದ್ದ ಮುಷ್ಕರದ ಹಿನ್ನೆಲೆಯಲ್ಲಿ ಬಸ್ಸುಗಳ ಸಂಚಾರ ವ್ಯತ್ಯಯವಾಗಬಹುದೆಂಬ ಆತಂಕ ಸಾರ್ವಜನಿಕರಲ್ಲಿತ್ತು. ಆದರೆ ಬೆಳಗ್ಗೆ 5 ಗಂಟೆಯಿಂದಲೇ ರಾಜ್ಯದ ಬಹುತೇಕ ಎಲ್ಲಾ ಬಸ್‌‍ ನಿಲ್ದಾಣಗಳಿಂದ ಸಂಚಾರ ಎಂದಿನಂತೆ ಇತ್ತು. ಬೆಂಗಳೂರಿನಲ್ಲಿ ಬಿಎಂಟಿಸಿ, ಕೆಎಸ್‌‍ಆರ್‌ಟಿಸಿ ಸಂಚಾರದಲ್ಲಿ ಹೆಚ್ಚಿನ ವ್ಯತ್ಯಾಸ ಕಂಡು ಬರಲಿಲ್ಲ. ಪ್ರಯಾಣಿಕರು ಕೂಡ ಎಂದಿನಂತೆ ತಮತಮ ಊರುಗಳಿಗೆ ತೆರಳುತ್ತಿದ್ದ ದೃಶ್ಯ ಸರ್ವೇಸಾಮಾನ್ಯವಾಗಿತ್ತು.

ಬಸ್ಸು ಸಂಚಾರದಲ್ಲಿ ವ್ಯತ್ಯಯ ಆಗದಂತೆ ಕ್ರಮ ಕೈಗೊಳ್ಳಲು ಕೆಎಸ್‌‍ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷಾ ಆದೇಶ ಮಾಡಿದ್ದು, ತುರ್ತು ಮತ್ತು ಅನಿವಾರ್ಯ ಸಂದರ್ಭ ಹೊರತು ಯಾವುದೇ ರಜೆ ನೀಡಬೇಡಿ ಎಂದು ಸೂಚಿಸಿದ್ದಾರೆ.

ರಾಜಧಾನಿ ಬೆಂಗಳೂರು, ಮೈಸೂರು, ಮಂಡ್ಯ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಹಾಸನ, ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಬಹುತೇಕ ಕಡೆ ಬಸ್ಸುಗಳ ಸಂಚಾರ ಎಂದಿನಂತೆ ಸಹಜ ಸ್ಥಿತಿಯಲ್ಲಿತ್ತು. ಕೆಲವು ಕಡೆ ಮಾತ್ರ ನಿಗಮದ ನೌಕರರು ಕರ್ತವ್ಯಕ್ಕೆ ಗೈರುಹಾಜರಾಗಿ ಬೆಂಗಳೂರು ಚಲೋ ಮುಷ್ಕರದಲ್ಲಿ ಭಾಗಿಯಾಗಿದ್ದರು.

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸೇರಿಕೊಂಡಿರುವ ನೌಕರರು ಸರ್ಕಾರ ತಮ ಪೂರ್ಣ ಪ್ರಮಾಣದ ಬೇಡಿಕೆಗಳನ್ನು ಈಡೇರಿಸದಿದ್ದರೆ ಕರ್ತವ್ಯಕ್ಕೆ ಹಾಜರಾಗುವ ಪ್ರಶ್ನೆ ಇಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಆದರೆ ಸಾರಿಗೆ ಸಂಘಟನೆಗಳು ಮತ್ತು ವಿವಿಧ ನಿಗಮಗಳು ಕರೆಕೊಟ್ಟಿರುವ ಬೆಂಗಳೂರು ಚಲೋ ಮುಷ್ಕರಕ್ಕೆ ಹೇಳಿಕೊಳ್ಳುವಂತಹ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಕಾರಣ ಮುಷ್ಕರದಲ್ಲಿ ಭಾಗಿಯಾದರೆ, ಅಂತಹ ನೌಕರರ ವೇತನವನ್ನು ಕಡಿತಗೊಳಿಸಲಾಗುವುದೆಂದು ಸಾರಿಗೆ ಇಲಾಖೆ ಎಚ್ಚರಿಕೆ ಕೊಟ್ಟಿದೆ. ಹೀಗಾಗಿ ನಿರೀಕ್ಷಿತ ಪ್ರಮಾಣದಲ್ಲಿ ನೌಕರರು ಭಾಗಿಯಾಗಿರಲಿಲ್ಲ.
ಮೈಸೂರು, ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಕೆಲವೇ ಜಿಲ್ಲೆಗಳ ಬೆರಳೆಣಿಕೆಯ ನೌಕರರು ಮಾತ್ರ ಮುಷ್ಕರದಲ್ಲಿ ಪಾಲ್ಗೊಂಡಿದ್ದರು.

ಸಂಜೆ 4 ಗಂಟೆಗೆ ಸಾರಿಗೆ ನೌಕರರ ಮತ್ತು ಕಾರ್ಮಿಕ ನೌಕರರ ಜಂಟಿ ಕ್ರಿಯಾ ಸಮಿತಿ ಪತ್ರಿಕಾಗೋಷ್ಠಿ ನಡೆಸಿ ಮುಂದಿನ ಹೋರಾಟದ ರೂಪುರೇಷಗಳ ಕುರಿತು ತಮ ನಿರ್ಧಾರವನ್ನು ಪ್ರಕಟಿಸಲಿದೆ.

ನಮಗೆ 38 ತಿಂಗಳ ಹಿಂಬಾಕಿ ಸೇರಿದಂತೆ ಸರ್ಕಾರದ ಮುಂದಿಟ್ಟಿರುವ ಬೇಡಿಕೆಗಳನ್ನು ಈಡೇರಿಸಬೇಕು. ಅಲ್ಲಿಯವರೆಗೂ ನಾವು ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎಂದು ನೌಕರರು ಬಿಗಿ ಪಟ್ಟು ಹಿಡಿದಿದ್ದಾರೆ.

38 ತಿಂಗಳ ವೇತನ ಹಿಂಬಾಕಿ ಬಿಡುಗಡೆ ಮತ್ತು 2024ರ ಜನವರಿ 1ರಿಂದ ವೇತನ ಪರಿಷ್ಕರಣೆ ಮಾಡಬೇಕೆಂದು ನೌಕರರು ಬಿಗಿಪಟ್ಟು ಹಿಡಿದಿದ್ದು, ಸರ್ಕಾರದ 26 ತಿಂಗಳ ಹಿಂಬಾಕಿ ಮತ್ತು 2025ರ ಏಪ್ರಿಲ್‌ನಿಂದ ವೇತನ ಪರಿಷ್ಕರಣೆಯ ಪ್ರಸ್ತಾವನೆಯನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ.

ಶುಕ್ರವಾರ ಬೆಳಗ್ಗೆಯಿಂದ ರಾಜ್ಯಾದ್ಯಂತ ಬಸ್ಸು ಸಂಚಾರವನ್ನು ಸ್ಥಗಿತಗೊಳಿಸಿ ಸಂಪೂರ್ಣ ಮುಷ್ಕರಕ್ಕೆ ಕರೆ ನೀಡುವ ಸಾಧ್ಯತೆ ದಟ್ಟವಾಗಿದೆ. ನಾವು ಕಷ್ಟದಲ್ಲಿ ದುಡಿಯುವ ವರ್ಗ. ನಮ ದುಡಿಮೆಗೆ ತಕ್ಕ ಪ್ರತಿಫಲವನ್ನು ಕೇಳುತ್ತಿದ್ದೇವೆ. ಈ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿ ಆಗುವ ಪ್ರಶ್ನೆಯಿಲ್ಲ ಎಂದು ಜಂಟಿ ಕ್ರಿಯಾ ಸಮಿತಿಯ ನಾಯಕರು ಸ್ಪಷ್ಟಪಡಿಸಿದ್ದಾರೆ.

ತಿರಸ್ಕರಿಸಿದ್ದು ಏಕೆ ? :
ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಿನ್ನೆ ನಡೆದ ಸಭೆಯಲ್ಲಿ ಸರ್ಕಾರವು ಒಂದು ಮಧ್ಯಂತರ ಪರಿಹಾರವನ್ನು ಮುಂದಿಟ್ಟಿತ್ತು. ನೌಕರರು 38 ತಿಂಗಳ ವೇತನ ಹಿಂಬಾಕಿ ಮತ್ತು 2024ರ ಜನವರಿಯಿಂದಲೇ ವೇತನ ಪರಿಷ್ಕರಣೆಗೆ ಪಟ್ಟು ಹಿಡಿದಿದ್ದರು. ಆದರೆ ಸರ್ಕಾರವು ಕೇವಲ 26 ತಿಂಗಳ ಹಿಂಬಾಕಿ ನೀಡಲು ಮತ್ತು ವೇತನ ಪರಿಷ್ಕರಣೆಯನ್ನು 2025ರ ಮಾರ್ಚ್‌ನಿಂದ ಅನ್ವಯಿಸಲು ಆದೇಶ ಹೊರಡಿಸಿತ್ತು. ಸರ್ಕಾರದ ಈ ನಡೆ ನೌಕರರಿಗೆ ಕಣ್ಣೊರೆಸುವ ತಂತ್ರದಂತೆ ಕಂಡಿದೆ. ನಮಗೆ ಬರಬೇಕಾದ ಪೂರ್ಣ ಹಕ್ಕನ್ನು ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು ನೌಕರರ ಮುಖಂಡರು ಸ್ಪಷ್ಟಪಡಿಸಿದ್ದಾರೆ.

ನಿನ್ನೆಯಷ್ಟೇ ಸಾರಿಗೆ ನೌಕರರು ಹೋರಾಟ ಜೋರಾಗುವ ಸಾಧ್ಯತೆ ಕಂಡುಕೊಂಡ ಸರ್ಕಾರ, ನೌಕರರನ್ನು ಸಮಾಧಾನ ಪಡಿಸುವ ಯತ್ನಕ್ಕೆ ಮುಂದಾದರೂ ಪ್ರಯೋಜನ ಆಗಿಲ್ಲ. ನೌಕರರ ಬೇಡಿಕೆ ಪ್ರಕಾರ ಸರ್ಕಾರ 38 ತಿಂಗಳ ಅರಿಯರ್ಸ್‌ ಮತ್ತು 2024ರಿಂದ ವೇತನ ಪರಿಷ್ಕರಣೆ ಮಾಡಬೇಕಿದೆ. ಆದರೆ ಇದಕ್ಕೆ ಒಪ್ಪದ ಸರ್ಕಾರ, 26 ತಿಂಗಳ ಅರಿಯರ್ಸ್‌ನೊಂದಿಗೆ 2025ರಿಂದ ವೇತನ ಪರಿಷ್ಕರಣೆ ಆದೇಶ ಮಾಡಿ, ನೌಕರರನ್ನು ಮನವೊಲಿಸಲು ಮುಂದಾಗಿತ್ತು. ಆದರೆ ಸರ್ಕಾರದ ಈ ನಿರ್ಧಾರಕ್ಕೆ ಸೊಪ್ಪು ಹಾಕದ ನೌಕರರು ಇಂದು ಸರ್ಕಾರದ ವಿರುದ್ಧ ಬೆಂಗಳೂರು ಚಲೋಗೆ ಕರೆಕೊಟ್ಟಿದ್ದಾರೆ.

ಬೆಳಗ್ಗೆ 10 ಗಂಟೆಗೆ ಫ್ರೀಡಂ ಪಾರ್ಕ್‌ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ನೌಕರರು ಸರ್ಕಾರದ ವಿರುದ್ಧ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ. ಅಲ್ಲದೇ ಸಂಜೆ 4 ಗಂಟೆವರೆಗೆ ಸರ್ಕಾರಕ್ಕೆ ಬೇಡಿಕೆ ಈಡೇರಿಕೆಗೆ ಅವಕಾಶ ನೀಡಿದ್ದು, ಸಂಜೆ ಒಳಗಾಗಿ ಪೂರ್ಣಪ್ರಮಾಣದಲ್ಲಿ ಬೇಡಿಕೆ ಈಡೇರಿಸಲು ಸರ್ಕಾರ ನಿರ್ಧಾರ ಕೈಗೊಳ್ಳಬೇಕಿದೆ. ಒಂದೊಮೆ ಸರ್ಕಾರ ಇದಕ್ಕೆ ಒಪ್ಪದೇ ಹೋದರೆ ಇಂದು ರಾತ್ರಿಯಿಂದಲೇ ಬಸ್‌‍ ಸಂಚಾರ ಸ್ಥಗಿತಗೊಳಿಸಿ ಮುಷ್ಕರಕ್ಕೆ ಮುಂದಾಗುವ ನಿರ್ಧಾರ ಮಾಡುವ ಸಾಧ್ಯತೆ ಇದೆ.

ಪ್ರಮುಖ ಬೇಡಿಕೆಗಳು ಏನು? :
38 ತಿಂಗಳ ಹಿಂಬಾಕಿ ಹಣ ನೀಡಬೇಕು, ಸರ್ಕಾರಿ ನೌಕರರಿಗೆ ನೀಡುವ ವೇತನಕ್ಕೆ ಸರಿಸಮಾನ ವೇತನ ನೀಡಬೇಕು, ಕಾರ್ಮಿಕರ ಕಿರುಕುಳ ನಿಲ್ಲಬೇಕು ಹಾಗೂ 1-1-2024 ರಿಂದ ವೇತನ ಪರಿಷ್ಕರಣೆ ಜಾರಿಗೊಳಿಸಬೇಕು ಎನ್ನುವುದು ಪ್ರಮುಖ ಬೇಡಿಕೆಯಾಗಿದೆ.

RELATED ARTICLES

Latest News