Saturday, May 2, 2026
Homeರಾಜ್ಯಮೇ.20ಕ್ಕೆ ಸಾರಿಗೆ ನೌಕರರ ಮುಷ್ಕರ

ಮೇ.20ಕ್ಕೆ ಸಾರಿಗೆ ನೌಕರರ ಮುಷ್ಕರ

Transport workers' strike on May 20

ಬೆಂಗಳೂರು,ಮೇ.2-ವೇತನ ಪರಿಷ್ಕರಣೆ, ಬಾಕಿ ವೇತನ ಪಾವತಿ ಸೇರಿದಂತೆ ಹಲವು ದಿನಗಳ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಕರ್ನಾಟಕ ಸಾರಿಗೆ 4 ನಿಗಮಗಳ ಸಾರಿಗೆ ನೌಕರರು ಇದೇ 20ರಂದು ರಾಜ್ಯಾದ್ಯಂತ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ, ವಾಯುವ್ಯ ಕರ್ನಾಟಕ ಸಾರಿಗೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಹಾಗೂ ಬಿಎಂಟಿಸಿ ಸಾರಿಗೆ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಅಂದು ಬಸ್ಸುಗಳು ರಸ್ತೆಗಿಳಿಯುವ ಸಾಧ್ಯತೆ ಕಡಿಮೆ.

ಮುಷ್ಕರದಲ್ಲಿ ನಾಲ್ಕು ನಿಗಮಗಳ ನೌಕರರು ಪಾಲ್ಗೊಳ್ಳುತ್ತಿರುವುದರಿಂದ ಬಸ್ಸುಗಳ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. ಸರ್ಕಾರ ಮತ್ತು ನೌಕರರ ಸಂಘಟನೆಗಳ ನಡುವೆ ನಡೆದ ಮಾತುಕತೆ ವಿಫಲವಾಗಿರುವುದರಿಂದ ಮುಷ್ಕರ ಅನಿವಾರ್ಯವಾಗಿದೆ ಎಂದು ಜಂಟಿ ಕ್ರಿಯಾ ಸಮಿತಿ ಹೇಳಿದೆ.

ನೌಕರರು ಶೇಕಡಾ 25ರಷ್ಟು ವೇತನವನ್ನು ಹೆಚ್ಚಳ ಮಾಡಬೇಕೆಂಬ ಬೇಡಿಕೆ ಇಟ್ಟಿದ್ದಾರೆ. ಅಲ್ಲದೆ ಕಳೆದ 38 ತಿಂಗಳ ಬಾಕಿ ವೇತನವನ್ನು ಬಿಡುಗಡೆ ಮಾಡುವುದು ಇತರ ಭತ್ಯೆಗಳು ನೌಕರರಿಗೆ ಸಂಬಂಧಿಸಿದ ಬೇಡಿಕೆಗಳನ್ನು ಕಾಲ ಮಿತಿಯೊಳಗೆ ಈಡೇರಿಸಬೇಕೆಂಬುದು ಸಂಘಟನೆಗಳ ಒತ್ತಾಯ.

ರಾಜ್ಯ ಸರ್ಕಾರವು ಈಗಾಗಲೇ ಮೊದಲ ಕಂತಿನ ಹಿಂಬಾಕಿ ವೇತನ ಬಿಡುಗಡೆ ಮಾಡಿರುವುದರಿಂದ ನೌಕರರ ಸಂಘಟನೆಗಳ ಬೇಡಿಕೆಯಂತೆ ಶೇ.7ರಷ್ಟು ವೇತನ ಹೆಚ್ಚಳದ ಪ್ರಸ್ತಾವನೆಯನ್ನು ಮುಂದಿಡಲಾಗಿದೆ. ಆದರೆ ಇದಕ್ಕೆ ನೌಕರರು ಒಪ್ಪಿಕೊಂಡಿಲ್ಲ.

38 ತಿಂಗಳ ವೇತನ ಬಾಕಿ ನೀಡಬೇಕು. 2024ರ ಜನವರಿಯಿಂದ ಜಾರಿಗೆ ಬರುವಂತೆ ವೇತನ ಪರಿಷ್ಕರಣೆ ಮಾಡಬೇಕು. ಶೇ 25ರಷ್ಟು ವೇತನ ಹೆಚ್ಚಳ ಮಾಡಬೇಕು. ಇತರೆ ಬೇಡಿಕೆಗಳನ್ನು ಕಾಲಮಿತಿಯ ಒಳಗೆ ಈಡೇರಿಸಬೇಕು ಎಂದು ಸಚಿವರಿಗೆ ಮನವಿ ಮಾಡಿದೆವು. ಅವರು ಶೇ 7ರಷ್ಟು ವೇತನ ಹೆಚ್ಚಳ ಮಾಡುವುದಾಗಿ, 2025ರ ಏಪ್ರಿಲ್‌ 1ರಿಂದ ಪರಿಗಣಿಸುವುದಾಗಿ ಹೇಳಿದರು. ಹಾಗಾಗಿ, ಮಾತುಕತೆ ಫಲಪ್ರದವಾಗಲಿಲ್ಲ ಎಂದು ಜಂಟಿ ಕ್ರಿಯಾ ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.

ನಿವೃತ್ತ ಐಎಎಸ್‌‍ ಅಧಿಕಾರಿ ಎಂ.ಆರ್‌.ಶ್ರೀನಿವಾಸಮೂರ್ತಿ ನೇತೃತ್ವದ ಸಮಿತಿಯ ಶಿಫಾರಸು ಆಧಾರದಲ್ಲಿ ಹಿಂದಿನ ಬಿಜೆಪಿ ಸರ್ಕಾರ 2023ರ ಮಾರ್ಚ್‌ 1ರಿಂದ ಜಾರಿಗೆ ಬರುವಂತೆ ವೇತನ ಪರಿಷ್ಕರಣೆ ಅಧಿಸೂಚನೆ ಹೊರಡಿಸಿತ್ತು. ಮೂಲವೇತನದ ಶೇ.15ರಷ್ಟು ಪರಿಷ್ಕರಣೆ ಮಾಡಲಾಗಿತ್ತು. ಆದರೆ, ಹೆಚ್ಚುವರಿ ವೇತನ ಬಾಕಿ ಪಾವತಿಸಿರಲಿಲ್ಲ.

ನೌಕರರಿಗೆ ಎಚ್ಚರಿಕೆ:
ಜಂಟಿ ಕ್ರಿಯಾ ಸಮಿತಿ ಕರೆ ಕೊಟ್ಟಿರುವ ಪ್ರತಿಭಟನೆಯಲ್ಲಿ ಯಾರೊಬ್ಬರು ಭಾಗಿಯಾಗಬಾರದೆಂದು ಸಾರಿಗೆ ಇಲಾಖೆ ಎಚ್ಚರಿಕೆ ಕೊಟ್ಟಿದೆ. ನೌಕರರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಬದ್ಧವಾಗಿದೆ.

ಈಗಾಗಲೇ ಹಿಂಬಾಕಿ ವೇತನವನ್ನು ಬಿಡುಗಡೆ ಮಾಡಿದ್ದೇವೆ. ಹಂತ ಹಂತವಾಗಿ ಬೇಡಿಕೆಗಳನ್ನು ಈಡೇರಿಸುತ್ತೇವೆ. ಏಕಾಏಕಿ ಶೇ.7ರಷ್ಟು ವೇತನ ಹೆಚ್ಚಳ ಹಾಗೂ 38 ತಿಂಗಳ ಬಾಕಿ ವೇತನವನ್ನು ಬಿಡುಗಡೆ ಮಾಡಬೇಕೆಂದು ಒತ್ತಡ ಹೇರಿದರೆ ಸಾಧ್ಯವಿಲ್ಲ.

ಸಾರಿಗೆ ಇಲಾಖೆಯ ಆರ್ಥಿಕ ಸ್ಥಿತಿಗತಿ ನೋಡಿಕೊಂಡು ನೌಕರರು ಕಾರ್ಯ ನಿರ್ವಹಿಸಬೇಕು. ಒಂದು ವೇಳೆ ಸಾರ್ವಜನಿಕರಿಗೆ ತೊಂದರೆ ಕೊಟ್ಟು ಕರ್ತವ್ಯಕ್ಕೆ ಗೈರು ಹಾಜರಾಗಿ ಮುಷ್ಕರದಲ್ಲಿ ಪಾಲ್ಗೊಂಡರೆ ಅಂಥವರ ವಿರುದ್ಧ ಶಿಸ್ತು ಕ್ರಮ ಜರುಗಿಸುವುದು ಅನಿವಾರ್ಯವಾಗುತ್ತದೆ ಎಂದು ಇಲಾಖೆ ಎಚ್ಚರಿಕೆ ಕೊಟ್ಟಿದೆ.

ಸಮಯ ಈಗಲೂ ಮೀರಿಲ್ಲ. ನೌಕರರು ತಮ ಹಠಮಾರಿ ಧೋರಣೆ ಕೈಬಿಟ್ಟು ಸರ್ಕಾರದ ಜೊತೆ ಮಾತುಕತೆ ನಡೆಸಿದರೆ ಎಲ್ಲವೂ ಸುಖಾಂತ್ಯವಾಗುತ್ತದೆ. ಮುಷ್ಕರ ನಡೆಸುವುದರಿಂದಲೇ ಪರಿಹಾರವಾಗುತ್ತದೆ ಎಂದರೆ ನಾವು ಕೂಡ ಶಿಸ್ತುಕ್ರಮ ಜರುಗಿಸದೆ ಬೇರೆ ದಾರಿಯಿಲ್ಲ ಎಂದು ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

RELATED ARTICLES

Latest News