Homeರಾಜ್ಯಪರಿಷತ್‌ನ ಏಳು ಸ್ಥಾನಗಳಿಗೆ ನಾಳೆ ಮತದಾನ : ಅಡ್ಡ ಮತದಾನದ ತಡೆಯಲು ಹರಸಾಹಸ

ಪರಿಷತ್‌ನ ಏಳು ಸ್ಥಾನಗಳಿಗೆ ನಾಳೆ ಮತದಾನ : ಅಡ್ಡ ಮತದಾನದ ತಡೆಯಲು ಹರಸಾಹಸ

Voting for seven seats of the Council tomorrow: Efforts to prevent cross-voting

ಬೆಂಗಳೂರು,ಜೂ.17- ಆಡಳಿತರೂಢ ಕಾಂಗ್ರೆಸ್‌‍ ಹಾಗೂ ಪ್ರತಿಪಕ್ಷಗಳ ನಡುವಿನ ಜಿದ್ದಾಜಿದ್ದಿಗೆ ಕಾರಣವಾಗಿರುವ ವಿಧಾನ ಪರಿಷತ್‌ನ ಏಳು ಸ್ಥಾನಗಳಿಗೆ ನಾಳೆ ಮತದಾನ ನಡೆಯಲಿದ್ದು ಅಡ್ಡ ಮತದಾನದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ನಡೆಯುತ್ತಿರುವ ಈ ಚುನಾವಣೆ ಆಡಳಿತಾರೂಢ ಕಾಂಗ್ರೆಸ್‌‍ಗೆ ಪ್ರತಿಷ್ಠೆಯ ಪ್ರಶ್ನೆಯಾದರೆ, ವಿಪಕ್ಷಗಳಿಗೆ ತಮ ಮೈತ್ರಿ ಬಲವನ್ನು ಸಾಬೀತುಪಡಿಸಲು ಇರುವ ಅವಕಾಶವಾಗಿದೆ.

ಈ ಚುನಾವಣೆ ಶಾಸಕರ ಮತಗಳ ಮೂಲಕ ನಡೆಯುವುದರಿಂದ, ಪ್ರತಿ ಅಭ್ಯರ್ಥಿಯ ಗೆಲುವಿಗೆ ನಿಗದಿತ ಮತಗಳ ಅವಶ್ಯಕತೆಯಿದೆ. ಸಂಜೆ ಮತ ಎಣಿಕೆ ಮುಗಿಯುತ್ತಿದ್ದಂತೆ ಸ್ಪಷ್ಟ ಚಿತ್ರಣ ಸಿಗಲಿದೆ. ಕಾಂಗ್ರೆಸ್‌‍ 4, ಬಿಜೆಪಿ 2 ಸ್ಥಾನಗಳನ್ನು ಸುಲಭವಾಗಿ ಗೆಲ್ಲಲಿದ್ದು ಉಳಿದಿರುವ ಒಂದು ಸ್ಥಾನಕ್ಕೆ ಕೈ ಹಾಗೂ ಜೆಡಿಎಸ್‌‍ನಲ್ಲಿ ಬಾರಿ ಪೈಪೋಟಿ ಏರ್ಪಟ್ಟಿದೆ.

ಕಾಂಗ್ರೆಸ್‌‍ ಪಕ್ಷದಿಂದ ಐದನೇ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ವಿನಯ್‌ ಕಾರ್ತಿಕ್‌ ಹಾಗೂ ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಜೆಡಿಎಸ್‌‍ನ ಗೋವಿಂದರಾಜು ನಡುವೆ ಅದೃಷ್ಟ ಯಾರಿಗೆ ಎಂಬುದು ನಾಳೆಯ ಫಲಿತಾಂಶದಿಂದ ತಿಳಿಯಲಿದೆ.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಾಗೂ ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ನಡುವಿನ ಪ್ರತಿಷ್ಠೆಯ ಸಮರದಲ್ಲಿ ಗೆಲುವು ಯಾರಿಗೆ ಎಂಬುದನ್ನು ಶಾಸಕರು ನಾಳೆ ತೀರ್ಮಾನಿಸಲಿದ್ದಾರೆ. ವಿಧಾನಸೌಧದ ಕೊಠಡಿ ಸಂಖ್ಯೆ 106 ರಲ್ಲಿ ಬೆಳಿಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆದು 5 ಗಂಟೆಯ ನಂತರ ಫಲಿತಾಂಶ ಪ್ರಕಟಗೊಳ್ಳಲಿದೆ.

7 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಆಡಳಿತಾರೂಢ ಕಾಂಗ್ರೆಸ್‌‍ 4 ಮತ್ತು ಬಿಜೆಪಿ 2 ಸ್ಥಾನಗಳನ್ನು ಸುಲಭವಾಗಿ ಗೆಲ್ಲುವಷ್ಟು ಬಲವನ್ನು ಹೊಂದಿವೆ. ವಿಧಾನಸಭೆಯ ಒಟ್ಟು ಮತದಾರರ ಸಂಖ್ಯೆ 222 (ಕೆಲವು ಸದಸ್ಯರ ಅನರ್ಹತೆ ಮತ್ತು ನಿಧನದಿಂದಾಗಿ). ಗೆಲುವಿಗೆ ತಲಾ 28 ಮತಗಳ ಅಗತ್ಯವಿದೆ.

ಅಡ್ಡಮತದಾನದ ಭೀತಿ ಮತ್ತು ತಂತ್ರಗಾರಿಕೆ :
ಈ ಚುನಾವಣೆ ಕೇವಲ ಸಂಖ್ಯೆಗಳ ಆಟವಲ್ಲ, ಇದು ರಾಜಕೀಯ ತಂತ್ರಗಾರಿಕೆಯ ಪರೀಕ್ಷೆಯಾಗಿದೆ. ಕಾಂಗ್ರೆಸ್‌‍ನ ತಂತ್ರ: ಗೆಲುವಿನ ಅಂಚಿನಲ್ಲಿರುವ ಕಾಂಗ್ರೆಸ್‌‍, ತನ್ನ ಮತಗಳ ಕ್ರೋಢೀಕರಣಕ್ಕಾಗಿ ಮತ್ತು ಅಡ್ಡಮತದಾನವನ್ನು ತಡೆಯಲು ತನ್ನ ಶಾಸಕರನ್ನು ರೆಸಾರ್ಟ್‌ನಲ್ಲಿ ಇರಿಸಿ, ಮಾಕ್‌ ವೋಟಿಂಗ್‌ ತರಬೇತಿ ನೀಡುತ್ತಿದೆ. ಪಕ್ಷದ ಶಿಸ್ತನ್ನು ಕಾಪಾಡಲು ಸಿಎಂ ಡಿ.ಕೆ. ಶಿವಕುಮಾರ್‌ ಅವರು ಹದ್ದಿನ ಕಣ್ಣಿಟ್ಟಿದ್ದಾರೆ.

ಜೆಡಿಎಸ್‌‍ ತನ್ನ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಬಿಜೆಪಿಯ ಹೆಚ್ಚುವರಿ ಮತಗಳನ್ನು ಮತ್ತು ಅತೃಪ್ತ ಶಾಸಕರ ಬೆಂಬಲವನ್ನು ನಂಬಿಕೊಂಡಿದೆ. ಬಿಜೆಪಿ ಮತ್ತು ಜೆಡಿಎಸ್‌‍ ಮೈತ್ರಿಯ ನಡುವೆಯೂ, ಕೆಲವೊಂದು ರಾಜಕೀಯ ಬದಲಾವಣೆಗಳು ಅಡ್ಡಮತದಾನದ ಸಾಧ್ಯತೆಯನ್ನು ಹೆಚ್ಚಿಸಿವೆ.
ಪಕ್ಷೇತರರ ಪಾತ್ರ: ಪಕ್ಷೇತರ ಶಾಸಕರು ಮತ್ತು ನಿರ್ದಿಷ್ಟವಾಗಿ ಬಿಜೆಪಿಯಿಂದ ಅಂತರ ಕಾಯ್ದುಕೊಂಡಿರುವ ಶಾಸಕರ ಮತಗಳು ನಿರ್ಣಾಯಕವಾಗಿವೆ. ಇವರನ್ನು ತಮತ್ತ ಸೆಳೆಯಲು ಉಭಯ ಪಕ್ಷಗಳು ತೆರೆಮರೆಯಲ್ಲಿ ಭಾರೀ ಕಸರತ್ತು ನಡೆಸುತ್ತಿವೆ.

ಇದು “ಗೌಪ್ಯ ಮತದಾನ” ವ್ಯವಸ್ಥೆಯಾಗಿರುವುದರಿಂದ, ಪಕ್ಷದ ವಿಪ್‌ ಇದ್ದರೂ ಅಡ್ಡಮತದಾನ ನಡೆಯುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಹಳೆಯ ಇತಿಹಾಸಗಳನ್ನು ಗಮನಿಸಿದರೆ, ಈ ಬಾರಿಯೂ ಅಚ್ಚರಿಯ ಫಲಿತಾಂಶ ಬರುವ ಸಾಧ್ಯತೆ ಇದೆ.

ಶಾಸಕರ ಅಸಮಾಧಾನ: ಪಕ್ಷದ ಒಳಗಿನ ಅಸಮಾಧಾನಿತ ಶಾಸಕರ ಮೇಲೆ ಎಲ್ಲರ ಕಣ್ಣಿದೆ. ತಮ ಪಕ್ಷದ ನಿರ್ಧಾರದ ವಿರುದ್ಧವಾಗಿ ಅಥವಾ ಅಡ್ಡಮತದಾನದ ಮೂಲಕ ತಮ ಅಸಮಾಧಾನ ಹೊರಹಾಕುವವರನ್ನು ಗುರುತಿಸುವುದು ನಾಯಕರಿಗೆ ದೊಡ್ಡ ಸವಾಲಾಗಿದೆ.

ಪ್ರತಿಷ್ಠೆಯ ಕಣ:
ಕೇವಲ ಒಂದು ಹೆಚ್ಚುವರಿ ಸ್ಥಾನದ ಮೇಲೆ ಇಡೀ ಚುನಾವಣೆಯ ಗತಿಯೇ ಅವಲಂಬಿತವಾಗಿದೆ. ನಾಳೆ ನಡೆಯುವ ಮತದಾನವು ರಾಜ್ಯ ರಾಜಕಾರಣದ ಮುಂದಿನ ದಿಕ್ಕನ್ನು ಸೂಚಿಸಲಿದೆ. ಅಡ್ಡಮತದಾನದ ಭೀತಿಯನ್ನು ಹೋಗಲಾಡಿಸಲು ಯಾವ ಪಕ್ಷದ ತಂತ್ರಗಾರಿಕೆ ಫಲ ನೀಡಲಿದೆ ಎಂಬುದು ಫಲಿತಾಂಶದ ಬಳಿಕವಷ್ಟೇ ಸ್ಪಷ್ಟವಾಗಲಿದೆ.

ವಿಧಾನಸಭೆಯ ಒಟ್ಟು ಶಾಸಕರು- 222
ಖಾಲಿ ಸ್ಥಾನಗಳು -2
ಕಾಂಗ್ರೆಸ್‌‍ -137
ಬಿಜೆಪಿ- 64
ಜೆಡಿಎಸ್‌‍ -18

ಪಕ್ಷೇತರರು -3

ಕಣದಲ್ಲಿರುವ ಅಭ್ಯರ್ಥಿಗಳು
ಕಾಂಗ್ರೆಸ್‌‍
ಬಿ.ಕೆ. ಹರಿಪ್ರಸಾದ್‌
ತಿಪ್ಪಣ್ಣಪ್ಪ ಕಮಕನೂರು
ಪಿ.ವಿ. ಮೋಹನ್‌
ಶಿವಣ್ಣ ಮಳವಳ್ಳಿ
ವಿನಯ್‌ ಕಾರ್ತಿಕ್‌

ಬಿಜೆಪಿ
ರಘು ಕೌಟಿಲ್ಯ
ಲಿಂಗರಾಜ್‌ ಪಾಟೀಲ್‌

ಎನ್‌ ಡಿ ಎ
ಗೋವಿಂದರಾಜು

RELATED ARTICLES
spot_img

Latest News