Thursday, April 16, 2026
Homeರಾಜ್ಯರಾಜ್ಯದ ಬಹುತೇಕ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕುಸಿತ, ಬೇಸಿಗೆ ಆರಂಭಕ್ಕೂ ಮುನ್ನ ಬಿಗ್ ಶಾಕ್..!

ರಾಜ್ಯದ ಬಹುತೇಕ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕುಸಿತ, ಬೇಸಿಗೆ ಆರಂಭಕ್ಕೂ ಮುನ್ನ ಬಿಗ್ ಶಾಕ್..!

ಬೆಂಗಳೂರು,ಫೆ.23- ಕಳೆದ ವರ್ಷ ರಾಜ್ಯದಲ್ಲಿ ನಿರೀಕ್ಷೆಗೂ ಮೀರಿ ಮಳೆಯಾದ್ದರಿಂದ ರಾಜ್ಯದ ಬಹುತೇಕ ಎಲ್ಲಾ ಜಲಾಶಯಗಳು ಅವಧಿಗೂ ಮುನ್ನವೇ ತುಂಬಿದ ಪರಿಣಾಮ ಜನಜಾನುವಾರುಗಳಿಗೆ ಯಾವುದೇ ಕೊರತೆಯಾಗುವುದಿಲ್ಲ ಎಂಬ ಭರವಸೆಯಿತ್ತು. ಆದರೆ ವಾಸ್ತವ ಬೇರೆಯೇ ಇದೆ.

ರಾಜ್ಯದ 13 ಪ್ರಮುಖ ಅಣೆಕಟ್ಟುಗಳ ಪೈಕಿ ಹತ್ತು ಜಲಾಶಯಗಳಲ್ಲಿ ಈಗ ಹಿಂದಿನ ವರ್ಷಕ್ಕಿಂತ ಕಡಿಮೆ ನೀರು ಸಂಗ್ರಹವಾಗಿದೆ. ಹೆಚ್ಚುತ್ತಿರುವ ತಾಪಮಾನದಿಂದಾಗಿ ಅಣೆಕಟ್ಟುಗಳಿಂದ ನೀರು ಆವಿಯಾಗುವಿಕೆ ಇದಕ್ಕೆ ಪ್ರಮುಖ ಕಾರಣವಾಗಿದೆ, ಅತಿಯಾದ ಬಳಕೆ ಅಂತರ್ಜಲದ ಮೇಲೂ ಪರಿಣಾಮ ಬೀರಿದೆ.

ಈ ಬೇಸಿಗೆಯಲ್ಲಿ ರಾಜ್ಯದ ಕೆಲವು ಭಾಗಗಳಲ್ಲಿ ಕುಡಿಯುವ ನೀರು ಕಳವಳಕಾರಿಯಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಮೇಲ್ವಿಚಾರಣಾ ಕೇಂದ್ರದ (ಕೆಎಸ್‌‍ಎನ್‌ಡಿಎಂಸಿ) ಮಾಹಿತಿಯ ಪ್ರಕಾರ, 2025ರಲ್ಲಿ ಎಲ್ಲಾ 13 ಅಣೆಕಟ್ಟುಗಳಲ್ಲಿ ನೀರಿನ ಸಂಗ್ರಹವು 535 ಸಾವಿರ ಮಿಲಿಯನ್‌ ಘನ ಅಡಿ (ಟಿಎಂಸಿ) ಆಗಿತ್ತು, ಆದರೆ ಈಗ ಅದು 493 ಟಿಎಂಸಿಎಫ್‌ಟಿ ಆಗಿದೆ, 42 ಟಿಎಂಸಿಎ ವ್ಯತ್ಯಾಸವಾಗಿದೆ.

ಬೇಸಿಗೆಯಲ್ಲಿ ಹೆಚ್ಚುತ್ತಿರುವ ಬಿಸಿಲಿನ ತಾಪದಿಂದಾಗಿ ಜಲಾಶಯಗಳು, ಕೆರೆ-ಕಟ್ಟೆಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿಯುತ್ತಿದ್ದು, ಕುಡಿಯುವ ನೀರಿಗೆ ತೀವ್ರ ಅಭಾವ ಸೃಷ್ಟಿಯಾಗಿದೆ. ಹವಾಮಾನ ಬದಲಾವಣೆ, ಅಸಮರ್ಪಕ ಮಳೆ ಮತ್ತು ಬತ್ತಿ ಹೋಗುತ್ತಿರುವ ಅಂತರ್ಜಲ ಮಟ್ಟದಿಂದಾಗಿ ಈ ಸಮಸ್ಯೆ ಜಟಿಲವಾಗಿದೆ. ಬೆಂಗಳೂರಿನಂತಹ ನಗರಗಳಲ್ಲಿ ಪರ್ಯಾಯ ನೀರಿನ ಮೂಲಗಳ ಹುಡುಕಾಟ ಮತ್ತು ಜಲ ಸಂರಕ್ಷಣೆ ಅತ್ಯಗತ್ಯವಾಗಿದೆ.

2025ನೇ ಸಾಲು ಕರ್ನಾಟಕಕ್ಕೆ ಹವಾಮಾನದ ವಿಚಾರದಲ್ಲಿ ಅತ್ಯಂತ ಉತ್ತಮ ವರ್ಷವಾಗಿತ್ತು. ರಾಜ್ಯದಲ್ಲಿ ಉತ್ತಮ ಮಳೆಯಿಂದಾಗಿ ಯಾವುದೇ ಸಮಸ್ಯೆ ಆಗಿರಲಿಲ್ಲ. ಆದರೆ 2023 – 2024ನೇ ಸಾಲಿನಲ್ಲಿ ಮಳೆ ಆಗದೆ ಸಮಸ್ಯೆ ಹೆಚ್ಚಾಗಿತ್ತು. ತಾಪಮಾನವೂ ಹೆಚ್ಚಳವಾಗಿತ್ತು. ಇದೀಗ 2026ನೇ ಸಾಲಿನಲ್ಲೂ ಇದೇ ಪರಿಸ್ಥಿತಿ ಎದುರಾಗುವ ಆತಂಕ ಶುರುವಾಗಿದೆ.

ಕರ್ನಾಟಕದಲ್ಲಿ ಈ ಬಾರಿ ಭಾರೀ ಬಿಸಿಲು ಇರಲಿದೆ. ಅಲ್ಲದೇ ಈ ಬಾರಿಯ ಬೇಸಿಗೆಯ ಸಮಯದಲ್ಲಿ ಗರಿಷ್ಠ ತಾಪಮಾನವು ಹೆಚ್ಚಳವಾಗಿದೆ.ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಗರಿಷ್ಠ ತಾಪಮಾನ / ಬಿಸಿಲಿ ಪ್ರಮಾಣವು ಸರಾಸರಿಗಿಂತ 1-3 ಡಿಗ್ರಿ ಸೆಲ್ಸಿಯಸ್‌‍ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ.

2026ನೇ ಸಾಲಿನ ಬೇಸಿಗೆಯಲ್ಲಿ ಬಿಸಿಲ ತೀವ್ರತೆಯು ಹೆಚ್ಚಾಗಿರುವ ಸಾಧ್ಯತೆ ಇದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಉಷ್ಣಾಂಶವು ಸರಾಸರಿಗಿಂತ 1 ರಿಂದ 3 ಡಿಗ್ರಿ ಸೆಲ್ಸಿಯಸ್‌‍ನಷ್ಟು ಹೆಚ್ಚಿರಲಿದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ.

ಈಚೆಗೆ ರಾಜ್ಯದಲ್ಲಿ ಮಳೆಯಾಗದೆ ಬಿಸಿಲಿನ ಪ್ರಮಾಣ ಹೆಚ್ಚಳವಾದ ಸಂದರ್ಭದಲ್ಲಿ ನೀರಿನ ಅಭಾವವೂ ಎದುರಾಗಿತ್ತು. ನೀರಿನ ಸಮಸ್ಯೆಯಿಂದ ಬೆಂಗಳೂರು ಸೇರಿದಂತೆ ಕರ್ನಾಟಕದ ಜನ ಹೈರಾಣಾಗಿದ್ದರು. ಇದೀಗ 2026ರಲ್ಲೂ ಅದೇ ಪರಿಸ್ಥಿತಿ ಮರುಕಳಿಹಿಸುವ ಸಾಧ್ಯತೆ ದಟ್ಟವಾಗಿದೆ.

ಕಳೆದ ವರ್ಷ ತುಂಗಭದ್ರಾ ಅಣೆಕಟ್ಟೆಯಲ್ಲಿ ಸುಮಾರು 40 ಟಿಎಂಸಿ ಅಡಿ ನೀರು ಇದ್ದು, ಈಗ ಅದು 24 ಟಿಎಂಸಿಗೆ ಇಳಿದಿದೆ. ಅದೇ ರೀತಿ, ಲಿಂಗನಮಕ್ಕಿ ಅಣೆಕಟ್ಟೆಯಲ್ಲಿ ಈಗ 87 ಟಿಎಂಸಿ ಇದೆ. ಕಳೆದ ವರ್ಷ 78 ಟಿಎಂಸಿ ಇದೆ. ಸೂಪಾ ಅಣೆಕಟ್ಟಿನ ನೀರಿನ ಮಟ್ಟ 82 ಟಿಎಂಸಿ ಯಿಂದ 77 ಅಡಿಗೆ ಇಳಿದಿದೆ. ಕೃಷ್ಣರಾಜ ಜಲಾಶಯದಲ್ಲಿ ಸ್ವಲ್ಪ ಹೆಚ್ಚಳವಾಗಿದೆ. ಕಳೆದ ವರ್ಷ ಇದು 37.88 ಟಿಎಂಸಿಎಫ್‌ಟಿ ಇತ್ತು, ಈಗ ಅದು 38.64 ಟಿಎಂಸಿ ಆಗಿದೆ. 13 ಅಣೆಕಟ್ಟುಗಳಲ್ಲಿ ಒಟ್ಟು ಸಾಮರ್ಥ್ಯ 895.07 ಟಿಎಂಸಿ ಅಡಿಯಿದೆ. ಆದರೆ ಸದ್ಯ 493.91 ಟಿಎಂಸಿ ಅಡಿಯಿದೆ. ಆಂದರೆ ಸಾಮರ್ಥ್ಯದ ಶೇ.45ರಷ್ಟು ಮಾತ್ರ ನೀರು ಸಂಗ್ರಹವಾಗಿದೆ.

ಕಳೆದ ವರ್ಷ ಕ್ರೆಸ್ಟ್‌ ಗೇಟ್‌ಗಳು ಮುರಿದು ನೀರು ನಷ್ಟವಾದ ಕಾರಣ ತುಂಗಭದ್ರಾ ಅಣೆಕಟ್ಟಿನಲ್ಲಿ ನೀರನ್ನು ಸಂಗ್ರಹಿಸಲು ಸಾಧ್ಯವಿಲ್ಲ. ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದ್ದರೂ, ಜಲಾಶಯವು ಅದರಲ್ಲಿ ಶೇ.70ರಷ್ಟು ಮಾತ್ರ ಸಂಗ್ರಹಿಸಲು ಸಾಧ್ಯವಾಯಿತು ಎಂದು ಹೇಳಿದ್ದಾರೆ. ಕುಡಿಯುವ ನೀರಿನ ಅಗತ್ಯಗಳೇ ಆದ್ಯತೆಯಾಗಿರುವುದರಿಂದ ರೈತರು ಕೃಷಿ ಜಮೀನುಗಳಿಗೆ ನೀರು ಸರಬರಾಜು ಮಾಡದೆ ತೀವ್ರ ಸಂಕಷ್ಟದಲ್ಲಿದ್ದಾರೆ ಎಂದು ನೀರಾವರಿ ಇಲಾಖೆಯ ಅಧಿಕಾರಿಗಳು ಮಾಾಹಿತಿ ನೀಡಿದ್ದಾರೆ.

ನೀರಿನ ನಷ್ಟದ ಬಗ್ಗೆ ವಿವರಿಸಿದ ರೆಡ್ಡಿ, ಹೆಚ್ಚುತ್ತಿರುವ ತಾಪಮಾನವು ನೀರು ಆವಿಯಾಗಲು ಕಾರಣವಾಗುತ್ತಿದೆ. ಕೃಷಿಗೆ ಹೆಚ್ಚಿನ ನೀರಿನ ಅಗತ್ಯವಿರುತ್ತದೆ. ಏಕೆಂದರೆ ಸಸ್ಯಗಳು ಹೆಚ್ಚಿನ ನೀರನ್ನು ಬಯಸುತ್ತವೆ. ಅಂತರ್ಜಲದ ತೀವ್ರ ಬಳಕೆಯಿಂದಾಗಿ 43 ತಾಲ್ಲೂಕುಗಳು ಈಗಾಗಲೇ ನೀರಿನ ಬಿಕ್ಕಟ್ಟನ್ನು ಎದುರಿಸುತ್ತಿವೆ ಎಂದು ವಿಪತ್ತು ನಿರ್ವಹಣಾ ಘಟಕಗದ ಮೂಲಗಳು ತಿಳಿಸಿವೆ.

ಜನರಿಗೆ ಕಡಿಮೆ ನೀರನ್ನು ಬಳಸುವಂತೆ ಮತ್ತು ಅಮೂಲ್ಯವಾದ ನೀರನ್ನು ವ್ಯರ್ಥ ಮಾಡದಂತೆ ಮನವಿ ಮಾಡಿದ್ದು, ಕುಡಿಯುವ ನೀರು ಆದ್ಯತೆಯಾಗಿರುವುದರಿಂದ, ನೀರನ್ನು ಇತರ ಉದ್ದೇಶಗಳಿಗಾಗಿ ಬಳಸಬಾರದು ಎಂದು ತಜ್ಞರು ಸಲಹೆ ನೀಡಿದ್ದಾರೆ.

RELATED ARTICLES

Latest News