ಬೆಂಗಳೂರು, ಸೆ.28- ಬರ ನಿರ್ವಹಣೆಗೆ ಕೇಂದ್ರ ಸರ್ಕಾರದಿಂದ ಅನುದಾನ ದೊರೆಯದೇ ಇದ್ದರೆ ಮತ್ತೆ ಸುಪ್ರೀಂ ಕೋರ್ಟ್ ಮೊರೆ ಹೋಗುವುದು ಅನಿವಾರ್ಯ ವಾಗಲಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಹಾಗೂ ಸಂಬಂಧಪಟ್ಟವರು ಅಂತಹ ಅವಕಾಶವನ್ನು ನೀಡಬಾರದು ಎಂದು ಹೇಳಿದರು.
ರಾಜ್ಯದಲ್ಲಿನ ಬರ ಅಧ್ಯಯನಕ್ಕಾಗಿ ಕೇಂದ್ರದಿಂದ ಹಿರಿಯ ಅಧಿಕಾರಿಗಳನ್ನೊಳಗೊಂಡ 3 ತಂಡಗಳು ರಾಜ್ಯಕ್ಕಾಗಮಿಸಲಿವೆ. ತುಮಕೂರು, ಚಿತ್ರದುರ್ಗ, ದಾವಣಗೆರೆ ಭಾಗದಲ್ಲಿ ಒಂದು ತಂಡ, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಮತ್ತೊಂದು ತಂಡ ಹಾಗೂ ಮಂಡ್ಯ, ಮೈಸೂರು, ಚಾಮರಾಜನಗರ ಸೇರಿದಂತೆ ಮೈಸೂರು ಭಾಗದಲ್ಲಿ ಮೂರನೇ ತಂಡ ಅಧ್ಯಯನ ನಡೆಸಲಿದೆ ಎಂದು ಹೇಳಿದರು.
ಕೇಂದ್ರದ ತಂಡಗಳು ಬರಪೀಡಿತ ಪ್ರದೇಶಗಳಲ್ಲಿ ಅಧ್ಯಯನ ನಡೆಸಿ ತಮ ವರದಿಯನ್ನು ಸಲ್ಲಿಸಲಿವೆ. ರಾಜ್ಯ ಸರ್ಕಾರ ಈಗಾಗಲೇ ಕೇಂದ್ರಕ್ಕೆ ಮೆಮೊರಾಂಡಂ ಸಲ್ಲಿಸಿದ್ದು, ಅದರ ಆಧಾರದ ಮೇಲೆಯೇ ಕೇಂದ್ರದ ತಂಡಗಳು ಪರಿಶೀಲನೆ ನಡೆಸಲಿವೆ. ಇದರ ಜೊತೆಗೆ ರಾಜ್ಯ ಸರ್ಕಾರದಿಂದ ಮತ್ತೊಂದು ಮೆಮೊರಾಂಡಂ ಕೂಡ ಸಲ್ಲಿಸಲಾಗುವುದು ಎಂದು ಹೇಳಿದರು. ಕೇಂದ್ರದ ತಂಡಗಳಿಗೆ ತಮದೇ ಆದ ಮಾರ್ಗಸೂಚಿಗಳಿವೆ. ರಾಜ್ಯ ಸರ್ಕಾರವೂ ಬರ ತಾಲ್ಲೂಕುಗಳನ್ನು ಘೋಷಿಸುವ ಸಂದರ್ಭದಲ್ಲಿ ಇದೇ ಮಾರ್ಗಸೂಚಿಗಳನ್ನು ಅನುಸರಿಸಿದೆ ಎಂದು ಹೇಳಿದರು.
ಮಾರ್ಗಸೂಚಿಗಳ ವ್ಯಾಪ್ತಿಗೆ ಒಳ ಪಡದ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿಲ್ಲ. ಸದ್ಯ ಇನ್ನಷ್ಟು ಗ್ರೌಂಡ್ ಟ್ರೂಥಿಂಗ್ ನಡೆಯುತ್ತಿದೆ. ಅದು ಪೂರ್ಣಗೊಂಡ ಬಳಿಕ ಅಂತಿಮ ಮೆಮೊರಾಂಡಂ ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು. ಸೆಪ್ಟೆಂಬರ್ 30ಕ್ಕೆ ಮುಂಗಾರು ಅವಧಿ ಮುಕ್ತಾಯವಾಗಲಿದ್ದು, ಅದರ ನಂತರ ಅಕ್ಟೋಬರ್ ಮೊದಲ ವಾರದಲ್ಲೇ ಅಂತಿಮ ಮೆಮೊರಾಂಡಂ ಸಲ್ಲಿಸಲು ಉದ್ದೇಶಿಸಲಾಗಿದೆ. ರಾಜ್ಯದ ನಷ್ಟ ಹಾಗೂ ಅಗತ್ಯವಿರುವ ಪರಿಹಾರದ ಕುರಿತು ಸಮಗ್ರ ಮಾಹಿತಿಯನ್ನು ಒಳಗೊಂಡ ವರದಿಯನ್ನು ಕೇಂದ್ರದ ಮುಂದೆ ಮಂಡಿಸಲಾಗುವುದು ಎಂದು ಹೇಳಿದರು.
ಬರ ಯಾವುದೇ ಪಕ್ಷದ ಸಮಸ್ಯೆಯಲ್ಲ. ಇದು ಕರ್ನಾಟಕದ ಜನರ ಹಿತಾಸಕ್ತಿಗೆ ಸಂಬಂಧಿಸಿದ ವಿಷಯ. ಆದ್ದರಿಂದ ಎಲ್ಲರೂ ತಮ ಜವಾಬ್ದಾರಿಯನ್ನು ಹಂಚಿಕೊಳ್ಳಬೇಕು. ಕೇಂದ್ರಕ್ಕೆ ಮನವಿ ಸಲ್ಲಿಸುವ ಸಂದರ್ಭದಲ್ಲಿ ಬಿಜೆಪಿಯವರೂ ನಮೊಂದಿಗೆ ಬರಬೇಕು ಎಂದು ಮತ್ತೊಮೆ ಮನವಿ ಮಾಡುವುದಾಗಿ ಅವರು ಹೇಳಿದರು.
ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಸಂದರ್ಭದಲ್ಲಿ ಅವುಗಳಿಗೆ ಹೆಚ್ಚಿನ ಹಣ ಅಗತ್ಯವಿದೆ ಎಂದು ಮೊದಲೇ ತಿಳಿದಿತ್ತು. ಆ ಹೊರೆಯನ್ನು ನಾವು ನಿರ್ವಹಿಸುತ್ತೇವೆ ಎಂದರು. ಹಣಕಾಸಿನ ಮೇಲೆ ಒತ್ತಡ ಇರುವುದನ್ನು ಯಾರೂ ಮುಚ್ಚಿಡಲು ಸಾಧ್ಯವಿಲ್ಲ. ಆದರೆ, ಕಳೆದ ಮೂರು ವರ್ಷಗಳಿಂದ ಸರ್ಕಾರ ಈ ಹಣಕಾಸಿನ ಬದ್ಧತೆಯನ್ನು ನಿರ್ವಹಿಸಿಕೊಂಡು ಬಂದಿದೆ. ಮುಂದಿನ ಎರಡು ವರ್ಷಗಳಲ್ಲೂ ಅದನ್ನು ನಿರ್ವಹಿಸುವ ಸಾಮರ್ಥ್ಯ ಸರ್ಕಾರಕ್ಕಿದೆ ಎಂದು ಅವರು ಹೇಳಿದರು.
ಪಿಂಚಣಿ ವಿಚಾರವಾಗಿ ಮಾತನಾಡಿದ ಅವರು, ಈ ಹಿಂದೆ 32 ಸಾವಿರ ಇದ್ದ ಆದಾಯದ ಮೇಲಿನ ಮಿತಿಯನ್ನು ಈಗ 1.20 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಇದರಿಂದ ಹಿಂದೆ ಪಿಂಚಣಿಯಿಂದ ಹೊರಗುಳಿದಿದ್ದ ಹಲವು ಅರ್ಹರು ಮತ್ತೆ ಯೋಜನೆಯ ವ್ಯಾಪ್ತಿಗೆ ಬರಲಿದ್ದಾರೆ ಎಂದು ತಿಳಿಸಿದರು.
ಹಿಂದೆ ಸುಮಾರು 23 ಲಕ್ಷ ಜನರ ಪಿಂಚಣಿ ರದ್ದಾಗಿತ್ತು. ಈಗ ಆದಾಯದ ಮಿತಿಯನ್ನು ಹೆಚ್ಚಿಸಿರುವುದರಿಂದ ಅರ್ಹ ಫಲಾನುಭವಿಗಳಿಗೆ ಮತ್ತೆ ಪಿಂಚಣಿ ದೊರೆಯಲಿದೆ. ಅದೇ ಸಂದರ್ಭದಲ್ಲಿ ಸೂಕ್ತ ಪ್ರಮಾಣಪತ್ರ ಸಲ್ಲಿಸದವರು ಹಾಗೂ ವಯೋಮಿತಿ ಪೂರೈಸದೇ ಇರುವ ಅರ್ಜಿಗಳನ್ನು ಪರಿಶೀಲಿಸಿ ಅನರ್ಹರನ್ನು ಹೊರಗಿಡುವ ಮೂಲಕ ವ್ಯವಸ್ಥೆಯಲ್ಲಿ ಶುದ್ಧೀಕರಣ ಮಾಡಲಾಗುವುದು ಎಂದು ಹೇಳಿದರು.
ಪ್ರಣಾಳಿಕೆಯಲ್ಲಿ ಭೂಸುಧಾರಣೆ ಕಾಯ್ದೆ ತಿದ್ದುಪಡಿ ಸೇರಿದಂತೆ ಹಲವು ವಿಚಾರಗಳನ್ನು ಪ್ರಸ್ತಾಪಿಸಲಾಗಿತ್ತು. ಅವುಗಳ ಜಾರಿಗೆ ಇನ್ನೂ ಸಮಯವಿದೆ ಎಂದು ಹೇಳಿದರು. ಮೈಸೂರು ಭಾಗದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಗ್ರಾಮಗಳಿಗೆ ಭೇಟಿ ನೀಡಿ ಜಮೀನು ಕಳೆದುಕೊಂಡವರ ಪರವಾಗಿ ಹೋರಾಟ ನಡೆಸುವುದಾಗಿ ಹೇಳಿರುವ ಕುರಿತು ಪ್ರತಿಕ್ರಿಯಿಸಿದ ಡಾ.ಜಿ.ಪರಮೇಶ್ವರ್, ಅವರು ಹೋರಾಟ ನಡೆಸುವುದಕ್ಕೆ ಯಾರೂ ಅಡ್ಡಿಪಡಿಸುವ ಪ್ರಶ್ನೆಯೇ ಇಲ್ಲ. ಅವರು ತಮ ಹೋರಾಟವನ್ನು ಮಾಡಲಿ ಎಂದು ಹೇಳಿದರು.
ನಿಗಮ ಮಂಡಳಿಗೆ ನೇಮಕಾತಿ ಕುರಿತಂತೆ ಪಕ್ಷದ ಪ್ರಮುಖರು ಶೀಘ್ರದಲ್ಲೇ ಪ್ರಮುಖ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದರು.
