ಬೆಂಗಳೂರು, ಸೆ.28- ಬರ ನಿರ್ವಹಣೆಗೆ ಕೇಂದ್ರದಿಂದ ಹೆಚ್ಚಿನ ನೆರವು ಪಡೆಯಲು ತೆರಳುವ ಸರ್ವಪಕ್ಷಗಳ ನಿಯೋಗದಲ್ಲಿ ಭಾಗವಹಿಸುತ್ತಿಲ್ಲ ಎನ್ನುವ ವಿರೋಧ ಪಕ್ಷಗಳ ನಿಲುವು
ರೈತ ವಿರೋಧಿಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ವಪಕ್ಷಗಳ ನಿಯೋಗದ ವಿಚಾರವಾಗಿ ಈಗಾಗಲೇ ಚರ್ಚೆಯಾಗಿದೆ. ವಿಧಾನ ಮಂಡಳದಲ್ಲಿ ವಿರೋಧ ಪಕ್ಷಗಳ ಸದಸ್ಯರು, ಕೇಂದ್ರದ ಬಳಿಗೆ ಸರ್ವಪಕ್ಷಗಳ ನಿಯೋಗದಲ್ಲಿ ಬರುವುದಾಗಿ ಭರವಸೆ ನೀಡಿದ್ದರು. ಕೊಟ್ಟ ಮಾತಿನಂತೆ ಅವರು ನಡೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಈಗ ಸರ್ವಪಕ್ಷಳ ನಿಯೋಗದಲ್ಲಿ ಭಾಗವಹಿಸುವುದಿಲ್ಲ ಎಂದು ಅವರು ಹೇಳುವುದಾದರೆ, ವಿರೋಧ ಪಕ್ಷಗಳಿಗೆ ರೈತರ ಬಗ್ಗೆ ಕಾಳಜಿ ಇಲ್ಲ ಎಂದು ಅರ್ಥವಾಗುತ್ತದೆ. ಅವರ ಮಾತುಗಳು ಕಾಟಾಚಾರಕ್ಕೆ ಮತ್ತು ಕಪಟನಾಟಕ ಎಂದು ಸ್ಪಷ್ಟವಾಗುತ್ತದೆ ಎಂದರು.
ಬರದಿಂದಾಗಿ ನಷ್ಟಕ್ಕೊಳಗಾಗಿರುವ ರೈತರಿಗೆ ಪ್ರತಿ ಎಕರೆಗೆ 25 ಸಾವಿರ ಕೊಡಿ, 50 ಸಾವಿರ ಕೊಡಿ ಎಂದು ವಿರೋಧ ಪಕ್ಷದವರು ರಾಜ್ಯ ಸರ್ಕಾರಕ್ಕೆ ಕೇಳುತ್ತಿದ್ದಾರೆ. ನಾವು ಕೊಡಲು ಸಿದ್ಧರಿದ್ದೇವೆ. ನಿಯೋಗದಲ್ಲಿ ಬಂದು, ನೀವು ಕೇಂದ್ರದಿಂದಲೂ ಹಣ ಕೊಡಿಸಿ ಎಂದು ನಾನು ಅವರಿಗೆ ಹೇಳಿದ್ದೆ ಅದಕ್ಕೆ ವಿರೋಧ ಪಕ್ಷಗಳ ನಾಯಕರು ಒಪ್ಪಿದ್ದರು ಎಂದರು.
ಈಗ ಬರುವುದಿಲ್ಲ ಎಂದು ಹೇಳುವುದಾದರೆ ಅವರಿಗೆ ದೆಹಲಿಯಲ್ಲಿ ತಮ ಪಕ್ಷದ ವರಿಷ್ಠರ ಜೊತೆ ಮಾತನಾಡಲು ಮುಖ ಇಲ್ಲ ಎಂದು ಸ್ಪಷ್ಟವಾಗುತ್ತದೆ. ರೈತರ ಬಗ್ಗೆ ಅವರಿಗೆ ಕಾಳಜಿ ಇಲ್ಲ ಎಂದು ಕಿಡಿಕಾರಿದರು.
ಇಂದು ತಾವು ದೆಹಲಿಗೆ ತೆರಳುತ್ತಿದ್ದು, ಹಲವು ಕೇಂದ್ರ ಸಚಿವರನ್ನು ಭೇಟಿ ಮಾಡುತ್ತೇನೆ. ಜೊತೆಯಲ್ಲಿ ಪಕ್ಷದ ನಾಯಕರನ್ನು ಭೇಟಿ ಮಾಡಿ ವಿವಿಧ ಸಭೆಗಳಲ್ಲಿ ಭಾಗವಹಿಸುತ್ತೇನೆ. ಶೈಕ್ಷಣಿಕ ವಿಚಾರ ಮತ್ತು ಮತಗಳ್ಳತನದ ಸಂಬಂಧಪಟ್ಟಂತೆ ಕಾಂಗ್ರೆಸ್ ವಲಯದಲ್ಲಿ ಚರ್ಚೆಗಳಾಗುತ್ತಿವೆ. ಅದರಲ್ಲಿ ತಾವು ಭಾಗವಹಿಸುವುದಾಗಿ ಹೇಳಿದರು.
ಜೆಡಿಎಸ್-ಬಿಜೆಪಿಯವರು ಸರ್ವಪಕ್ಷಗಳ ನಿಯೋಗದಲ್ಲಿ ಬರದೇ ಇದ್ದರೆ ನಮಗೆ ತೊಂದರೆ ಇಲ್ಲ. ರಾಜ್ಯದ ರೈತರ ಹಿತಕ್ಕಾಗಿ ಏನು ಮಾಡಬೇಕೋ ಅದನ್ನು ನಾನು ಮಾಡುತ್ತೇನೆ. ಕಸ್ತೂರಿ ರಂಗನ್ ವರದಿ ವಿಚಾರವಾಗಿಯೂ ಚರ್ಚೆ ನಡೆಸಲು ಪ್ರಧಾನ ಮಂತ್ರಿ ಮತ್ತು ಕೇಂದ್ರ ಪರಿಸರ ಸಚಿವರ ಸಮಯ ಕೇಳುತ್ತೇನೆ. ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸುತ್ತೇನೆ ಎಂದು ಹೇಳಿದರು.
ರಾಜ್ಯದಲ್ಲಿ ಬರ ಅಧ್ಯಯನಕ್ಕಾಗಿ ಅ.3ರಿಂದ ಕೇಂದ್ರದ ಅಧಿಕಾರಿಗಳ ತಂಡ ಆಗಮಿಸುತ್ತಿದೆ. ತಂಡಕ್ಕೆ ಅಗತ್ಯವಾದ ಮಾಹಿತಿಗಳನ್ನು ಒದಗಿಸಲಾಗುವುದು. ಕಾನೂನು ಚೌಕಟ್ಟಿನಲ್ಲಿ ಎಲ್ಲಾ ರೀತಿಯ ನೆರವನ್ನು ನೀಡುತ್ತೇವೆ ಎಂದರು.
