ಬೆಂಗಳೂರು, ಸೆ.28- ನಂದಿನಿ ಹಾಲಿನ ಮಾರಾಟ ದರವನ್ನು ಹೆಚ್ಚಿಸಲು ನಾಲ್ಕಾರು ದಿನಗಳಲ್ಲಿ ನಿರ್ಧಾರ ತೆಗೆದುಕೊಂಡು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ಘೋಷಿಸಲಿದ್ದಾರೆ ಎಂದು ಸಹಕಾರ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಹಾಲು ಉತ್ಪಾ ದಕರ ಮಹಾಮಂಡಳ ಮತ್ತು ಸಹಕಾರ ಸಂಘಗಳ ಸದಸ್ಯರು ವಿಧಾನಮಂಡಲ ಅಧಿವೇಶನ ನಡೆಯುವ ಸಂದರ್ಭದಲ್ಲಿ ಬೆಂಗಳೂರಿಗೆ ಬಂದು ಸುಮಾರು 50 ಜನ ಸೇರಿ ಪ್ರತಿಭಟನೆ ನಡೆಸಿದ್ದರು. ನಾನೇ ಹೋಗಿ ಮನವಿ ಸ್ವೀಕರಿಸಿದ್ದೆ. ಅವರು ಪ್ರಮುಖವಾಗಿ ಎರಡು ಬೇಡಿಕೆಗಳನ್ನು ಮಂಡಿಸಿದ್ದಾರೆ.
ಬರ ಪರಿಸ್ಥಿತಿಯಿಂದಾಗಿ ಹಾಲು ಉತ್ಪಾದನೆಯ ವೆಚ್ಚ ಹೆಚ್ಚಾಗುತ್ತಿದೆ ಎಂಬುದು ಉತ್ಪಾದಕರ ವಾದವಾದರೆ, ಪ್ಲಾಸ್ಟಿಕ್ ಸೇರಿದಂತೆ ಹಾಲಿನ ಪ್ಯಾಕಿಂಗ್ ಸಲಕರಣೆಗಳ ದರ ಹೆಚ್ಚಾಗಿವೆ. ಎಂಬುದು ಒಕ್ಕೂಟಗಳ ವಾದ. ಹೀಗಾಗಿ ಪ್ರತಿ ಲೀ. ಮೇಲೆ 8 ರಿಂದ 10 ರೂ. ದರ ಹೆಚ್ಚಿಸಲು ಮನವಿ ಸಲ್ಲಿಸಲಾಗಿದೆ. ಮುಖ್ಯಮಂತ್ರಿಯವರು ಈ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದಾರೆ. ಹಾಲು ಉತ್ಪಾದಕರು, ಮಹಾಮಂಡಳಗಳ ಜೊತೆಯಲ್ಲಿ ಗ್ರಾಹಕರ ಹಿತರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು ದರ ನಿಗದಿ ಮಾಡುವುದಾಗಿ ಭರವಸೆ ನೀಡಿದ್ದಾರೆ. ಅದರಂತೆ ಶೀಘ್ರವೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.
ಮಹತ್ವದ ಚಿಂತನೆ:
ಸಹಕಾರ ಇಲಾಖೆಯಲ್ಲಿ ಸಂಘ ಸಂಸ್ಥೆಗಳ ಆಡಿಟ್‌ಗಾಗಿ ಒಂದು ಘಟಕ ಇದೆ. ಅಲ್ಲಿ ಆಡಿಟರ್ ಸಂಖ್ಯೆ ಕಡಿಮೆಯಾಗಿದೆೆ. ಈ ಹಿಂದೆ ತಾವು ಸಹಕಾರ ಸಚಿವನಾಗಿದ್ದಾಗ ಖಾಸಗಿ ಆಡಿಟರ್‌ಗಳಿಂದ ಲೆಕ್ಕ ಪರಿಶೋಧನೆ ಮಾಡಿಸಲು ನಿರ್ಧಾರ ತೆಗೆದುಕೊಂಡಿದ್ದೆ. ಅದೂ ಸಾಲುತ್ತಿಲ್ಲ. ಪ್ರತಿ ವರ್ಷ ಪ್ರತಿ ಸಂಘದ ಆಡಿಟ್ ಮಾಡಿಸಲು ವಿಳಂಬವಾಗುತ್ತಿದೆ. ಅದಕಾಗಿ ಪರ್ಯಾಯ ವ್ಯವಸ್ಥೆಯ ಚಿಂತನೆ ನಡೆಸಲಾಗಿದೆ ಎಂದರು.
ಬಿ.ಕಾಂ., ಎಂ.ಬಿ.ಎ., ಬಿ.ಬಿ.ಎಂ. ವಿದ್ಯಾರ್ಥಿಗಳಿಗೆ ಲೆಕ್ಕ ಪರಿಶೋಧನೆ ಕುರಿತು 6 ತಿಂಗಳ ಉಚಿತ ತರಬೇತಿ ಕೊಟ್ಟು, ಪರವಾನಗಿ ನೀಡಲಾಗುತ್ತಿದೆ. ಕಂದಾಯ ಇಲಾಖೆಯಲ್ಲಿ ಖಾಸಗಿ ಸರ್ವೇಯರ್‌ಗಳಿಗೆ ಪರವಾನಗಿ ಕೊಟ್ಟು ಗೌರವಧನ ನಿಗದಿ ಮಾಡಿದಂತೆ, ಲೆಕ್ಕ ಪರಿಶೋಧನೆಗೂ ಅದೇ ರೀತಿಯ ವ್ಯವಸ್ಥೆ ಜಾರಿಗೆ ತರಲಾಗುವುದು, ಇದರಿಂದ ಸಹಕಾರ ಇಲಾಖೆ ಸಾವಿರಾರು ವಿದ್ಯಾರ್ಥಿಗಳಿಗೆ ಉದ್ಯೋಗ ದೊರೆಯಲಿದೆ. ಆಡಿಟ್ ಕೂಡ ತ್ವರಿತವಾಗಿ ಪೂರ್ಣಗೊಳ್ಳಲಿದೆ ಎಂದರು. ಪ್ರತಿ ಸಂಘವು ತನ್ನ ಲಾಭಾಂಶದಲ್ಲಿ ಶೇ.2 ರಷ್ಟನ್ನು ಶಿಕ್ಷಣ ನಿಧಿಗೆ ದೇಣಿಗೆ ನೀಡುತ್ತಿದೆ. ಆ ರೀತಿ ಸಂಗ್ರಹವಾದ 70ರಿಂದ 80 ಕೋಟಿ ರೂ. ಒಕ್ಕೂಟಗಳಲ್ಲಿ ಲಭ್ಯವಿದೆ. ಅದನ್ನು ಬಳಸಿಕೊಂಡು ಬಡ ವಿದ್ಯಾರ್ಥಿಳಿಗೆ ಉಚಿತ ತರಬೇತಿ ನೀಡುವ ಚಿಂತನೆ ಇದೆ ಎಂದರು.
ಸಹಕಾರ ಸಂಘಗಳಲ್ಲಿನ ವಹಿವಾಟುಗಳಲ್ಲಿ ಪಾರದರ್ಶಕತೆಗೆ ಕ್ಯೂಆರ್‌ಕೋಡ್ ವ್ಯವಸ್ಥೆ ರೂಪಿಸಲಾಗುತ್ತಿದೆ. ಸಹಕಾರ ಸಂಘಗಳು ಪ್ರತಿ ದಿನದ ವಹಿವಾಟನ್ನು ಸಂಗ್ರಹಿಸಿಡಲು ಕೇಂದ್ರೀಕೃತ ವ್ಯವಸ್ಥೆ ಮಾಡಲಾಗುವುದು. ಸದರಿ ಸಂಸ್ಥೆಯ ಮುಂದೆ ಡಿಜಿಟಲ್ ಕ್ಯೂಆರ್ ಕೋಡ್‌ಗಳನ್ನು ಅಳವಡಿಸಿ ಅದನ್ನು ಸದಸ್ಯರಿಗೆ ಸಂಪರ್ಕಿಸಬೇಕು. ಸಂಘದ ಠೇವಣಿ, ಸಾಲವೆಷ್ಟು, ದುಡಿಯುವ ಬಂಡವಾಳ, ಯಾರ ಬಾಕಿ ಎಷ್ಟಿದೆ, ಹೊರ ಬಾಕಿ ಎಷ್ಟು ಎಂಬೆಲ್ಲಾ ವಿಚಾರಗಳು ಕ್ಷಣಾರ್ಧದಲ್ಲೇ ಸದಸ್ಯರಿಗೆ ಸಿಗುವಂತಾಗಬೇಕು ಎಂದು ಚಿಂತನೆ ನಡೆಸಿದ್ದೇನೆ ಎಂದರು.
ಪ್ರತಿ ಸಂಘವು ಇಂತಹ ಬೋರ್ಡ್ ಮತ್ತು ಕ್ಯೂಆರ್ ಕೋಡ್‌ಗಳನ್ನು ಹಾಕಲೇಬೇಕು ಹಾಗೂ ಅದರ ನಿರ್ವಹಣೆ ಮಾಡಬೇಕು. ಈ ಮೂಲಕ ಪಾರದರ್ಶಕತೆ ಜಾರಿಯಾಗಲಿದ್ದು, ಬೆಳಗಾವಿಯಿಂದಲೇ ಅದನ್ನು ಪ್ರಾಯೋಗಿಕವಾಗಿ ಜಾರಿಗೊಳಿಸುತ್ತಿರುವುದಾಗಿ ಹೇಳಿದರು. ಸಹಕಾರ ಇಲಾಖೆಯ ಎರಡು ಪ್ರಮುಖ ಸಂಸ್ಥೆಗಳಾದ ಅಪೆಕ್ಸ್ ಬ್ಯಾಂಕ್ ಮತ್ತು ಸಹಕಾರ ಮಹಾಮಂಡಳ ಅಧ್ಯಕ್ಷರ ಚುನಾವಣೆಯಲ್ಲಿ ಅವಿರೋಧ ಆಯ್ಕೆಯಾಗಿದೆ. ಇನ್ನೂ ಕೆಎಂಎಫ್ ಅಧ್ಯಕ್ಷರ ಆಯ್ಕೆ ಬಾಕಿಯಿದೆ. ಅದಕ್ಕೂ ಕೆಲವೇ ದಿನಗಳಲ್ಲಿ ಚುನಾವಣೆ ನಡೆಸಲಾಗುವುದು ಎಂದರು.
ತಮ ಮೇಲಿನ ದಾಳಿಗೆ ನಮ ಪಕ್ಷದವರೇ ಕಾರಣ ಎಂದು ಸಚಿವ ಸತೀಶ್ ಜಾರಕಿಹೊಳಿ ಯಾವ ಅರ್ಥದಲ್ಲಿ ಹೇಳಿದ್ದಾರೋ ತಮಗೆ ಗೊತ್ತಿಲ್ಲ. ಅದಕ್ಕೆ ನಾನು ಉತ್ತರಿಸುವುದಿಲ್ಲ ಎಂದರು. ಸಕ್ಕರೆ ಕಾರ್ಖಾನೆಗಳ ಕಬ್ಬು ಬೆಳೆಗಾರರು ಮತ್ತುಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಸಕ್ಕರೆಗೆ ಎಂಆರ್‌ಪಿ, ಕಬ್ಬಿಗೆ ಎಫ್‌ಆರ್‌ಪಿ ನಿಗದಿ ಪಡಿಸಬೇಕು.
ಗ್ರಾಹಕರು ಖರೀದಿಸುವ ಸಕ್ಕರೆಗೆ ಒಂದು ರೀತಿಯ ದರ ಹಾಗೂ ಕೂಲ್ ಡಿಂಕ್ಸ್ ಹಾಗೂ ಇತರ ವಾಣಿಜ್ಯ ಉದ್ದೇಶಗಳಿಗೆ ಬಳಸುವ ಸಕ್ಕರೆಗೆ ಪ್ರತ್ಯೇಕ ಎಂಆರ್‌ಪಿ ನಿಗದಿ ಪಡಿಸಬೇಕು. ಎಫ್‌ಆರ್‌ಪಿ ಮತ್ತು ಎಂಆರ್‌ಪಿಗಳ ನಡುವೆ ಸಕ್ಕರೆ ಕಾರ್ಖಾನೆಗಳಿಗೆ ಎಷ್ಟು ಲಾಭವಾಗಲಿದೆ ಎಂಬುದನ್ನು ಖಚಿತಪಡಿಸಿದರೆ ಹೋರಾಟಗಳು ನಡೆಯುವುದಿಲ್ಲ, ಕಾರ್ಖಾನೆಗಳು ಹಣ ಕೊಡುವುದಿಲ್ಲ ಎಂದು ಹೇಳಲು ಸಾಧ್ಯವಾಗುವುದಿಲ್ಲ ಎಂದರು.
