ಮೈಸೂರು, ಏ.20- ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಬೆಂಗಳೂರಿಗೆ ಆಗಮಿಸಿದ್ದಾಗ ಮಹಿಳಾ ಮೀಸಲಾತಿ ಮಸೂದೆಯ ಬಗ್ಗೆ ನಿಮ ನಿಲುವೇನು ಎಂದು ಕೇಳಿದ್ದರು, ನಾವು ಪರವಾಗಿ ಇದ್ದೇವೆ ಎಂದು ಹೇಳಿದ್ದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.ಮೈಸೂರಿನ ವಿಮಾನ ನಿಲ್ದಾಣದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆ, ಮಹಿಳಾ ಮೀಸಲಾತಿ ಮಸೂದೆ ಹಾಗೂ ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರತಿಕ್ರಿಯಿಸಿದರು.
ಪ್ರಧಾನಿ ಅವರು ಬೆಂಗಳೂರಿಗೆ ಆಗಮಿಸಿದಾಗ ಸಿದ್ದರಾಮಯ್ಯ ಅವರ ಕಿವಿಯಲ್ಲಿ ಗುಟ್ಟಾಗಿ ಮಾತನಾಡಿದ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಈ ಸಂಬಂಧಪಟ್ಟಂತೆ ಸ್ಪಷ್ಟನೆ ನೀಡಿರುವ ಸಿದ್ದರಾಮಯ್ಯರವರು, ಪ್ರಧಾನಿಯವರು ಮಹಿಳಾ ಮೀಸಲಾತಿಯ ಬಗ್ಗೆ ನಿಮ ನಿಲುವೇನು? ಎಂದು ಕೇಳಿದ್ದರು. ನಾವು ಮಹಿಳೆಯರಿಗೆ ಮೀಸಲಾತಿ ನೀಡುವುದರ ಪರವಾಗಿ ಇದ್ದೇವೆ ಎಂದು ತಿಳಿಸಿದ್ದೇನೆ. ಇದೇ ವಿಚಾರವನ್ನು ಅವರು ತಮ ಬಳಿ ಚರ್ಚಿಸಿದ್ದಾಗಿ ಹೇಳಿದರು.
ಕಾಂಗ್ರೆಸ್ ಮಹಿಳಾ ಮೀಸಲಾತಿಗೆ ವಿರೋಧ ಮಾಡಿಲ್ಲ. ಸಾಂವಿಧಾನದ ಕಲಂ 73, 74ನೇ ತಿದ್ದುಪಡಿ ತರುವ ಮೂಲಕ ಮಹಿಳೆಯರಿಗೆ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿ ಶೇ. 50ರಷ್ಟು ಮೀಸಲಾತಿ ನೀಡಿದ್ದು, ಕಾಂಗ್ರೆಸ್ ಪಕ್ಷ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಈಗ ರಾಜಕೀಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
2023ರಲ್ಲೇ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಗೊಂಡಿದೆ. ಅದನ್ನು ಈಗಾಗಲೇ ಜಾರಿಮಾಡಬಹುದಿತ್ತಲ್ಲವೇ? ಇಷ್ಟು ವರ್ಷ ಕಾದು ಕುಳಿತ್ತಿದ್ದು ಏಕೆ? ಎಂದು ಪ್ರಶ್ನಿಸಿದರು.ಪ್ರಧಾನಿಯವರು ದ್ವಿಮುಖ ನೀತಿ ಅನುಸರಿಸುತ್ತಿದ್ದಾರೆ. ಕೇಂದ್ರ ಸರ್ಕಾರಕ್ಕೆ ಮಹಿಳಾ ಮೀಸಲಾತಿಯ ಬದ್ಧತೆ ಇದ್ದಿದ್ದರೆ, ಈಗಾಗಲೇ ಜಾರಿ ಮಾಡಬೇಕಿತ್ತು. ಮೋದಿ ಅವರು ಸಾಮಾಜಿಕ ನ್ಯಾಯದ ಪರವಾಗಿಲ್ಲ ಎಂದು ಹೇಳಿದರು. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು 12 ವರ್ಷವಾಯಿತು. ಇಷ್ಟು ದಿನ ಏಕೆ ಜಾರಿ ಮಾಡಲಿಲ್ಲ, ಸುಮನಿದ್ದದ್ದು ಏಕೆ? ಎಂದು ಪ್ರಶ್ನಿಸಿದರು.
ಕ್ಷೇತ್ರಗಳ ಮರು ವಿಂಗಡನೆಯನ್ನು ಜನಗಣತಿ ಮುಗಿದ ಬಳಿಕವೇ ಕೈಗೊಳ್ಳುವುದು ಸೂಕ್ತ. ಎಲ್ಲಾ ರಾಜ್ಯಗಳಿಗೂ ಶೇ.50 ರಷ್ಟು ಲೋಕಸಭಾ ಕ್ಷೇತ್ರಗಳನ್ನು ಹೆಚ್ಚಿಸುವುದಾಗಿ ಹೇಳಲಾಗುತ್ತಿದೆ. ಉತ್ತರ ಪ್ರದೇಶದಲ್ಲಿ 120 ಸ್ಥಾನಗಳು ಹೆಚ್ಚಾದರೆ, ಕರ್ನಾಟಕಕ್ಕೆ ಕೇವಲ 42 ಸ್ಥಾನಗಳು ಮಾತ್ರ ದೊರೆಯುತ್ತವೆ. ಈ ಅಂತರ ತುಂಬಾ ದೊಡ್ಡದಾಗಿದೆ ಎಂದರು.
ಕ್ಷೇತ್ರ ಪುನರ್ ವಿಂಗಡನೆಯನ್ನು ಸಮನಾಂತರವಾಗಿ ಹಂಚಿಕೆ ಮಾಡಬೇಕು. ಯಾರಿಗೂ ಅನ್ಯಾಯವಾಗದಂತೆೆ ಎಚ್ಚರಿಕೆ ವಹಿಸಬೇಕು. ದಕ್ಷಿಣ ಭಾರತದಲ್ಲಿ ಜನ ಸಂಖ್ಯೆ ನಿಯಂತ್ರಣವನ್ನು ಪರಿಣಾಮಕಾರಿಯಾಗಿ ಜಾರಿ ಮಾಡಿದ್ದೇವೆ. ಉತ್ತರ ಭಾರತದಲ್ಲಿ ಜನಸಂಖ್ಯೆ ಹೆಚ್ಚಾಗಿದೆ. ಈಗಿನ ಪರಿಸ್ಥಿತಿಯಲ್ಲಿ ಕ್ಷೇತ್ರ ಪುನರ್ ವಿಂಗಡನೆಯಾದರೆ, ಉತ್ತರ ಭಾಗಕ್ಕೆ ಲಾಭವಾದರೆ, ದಕ್ಷಿಣಕ್ಕೆ ಅನ್ಯಾಯವಾಗಲಿದೆ ಎಂದರು.
ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಕ್ಕೆ ಮೂರನೇ ಎರಡರಷ್ಟು ಸಂಖ್ಯಾಬಲ ಬೇಕಿತ್ತು. ಅದು ಕೇಂದ್ರ ಸರ್ಕಾರದ ಬಳಿ ಇಲ್ಲ ಎಂಬುದು ಗೊತ್ತಿದ್ದು, ದುರುದ್ದೇಶ ಪೂರಕವಾಗಿ ಮಸೂದೆ ತಂದಿದ್ದಾರೆ. 2023ರಲ್ಲೇ ಮೀಸಲಾತಿ ಮಸೂದೆಯನ್ನು ಅಂಗೀಕರಿಸಲಾಗಿದೆ. ಅದನ್ನು ಜಾರಿಗೊಳಿಸಿದರೆ, ಯಾರೂ ವಿರೋಧ ವ್ಯಕ್ತಪಡಿಸುತ್ತಿರಲಿಲ್ಲ. ಈಗ ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಪುನರ್ ವಿಂಗಡನೆ ಎರಡನ್ನು ಒಟ್ಟಿಗೆ ಮಂಡಿಸಿದ್ದೇಕೆ? ಎಂದು ಪ್ರಶ್ನಿಸಿದರು.
ಬಿಜಿಪಿಯವರು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದ್ದಾರೆ. ಹೀಗಾಗಿ ಮಹಿಳಾ ಮೀಸಲಾತಿ ಪರವಾಗಿ ಬಿಜೆಪಿಯವರು ಇಲ್ಲ ಎಂದು ಟೀಕಿಸಿದರು. ಶಾಸಕ ಎನ್.ಎ.ಹ್ಯಾರಿಸ್ ಅವರ ಮನೆಯ ಮೇಲೆ ಜಾರಿ ನಿರ್ದೇಶನಾಲಯದ ದಾಳಿ ಆಗಿರುವ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ತಿಳಿಸಿದರು.ತಾವು ತಮಿಳುನಾಡಿನ ವಿಧಾನಸಭೆಯ ಚುನಾವಣಾ ಪ್ರಚಾರಕ್ಕೆ ಹೋಗುವುದಿಲ್ಲ. ಲಭ್ಯವಿರುವ ಮಾಹಿತಿ ಪ್ರಕಾರ ತಮಿಳುನಾಡಿನಲ್ಲಿ ಡಿಎಂಕೆ ಮತ್ತೆ ಗೆಲುವು ಕಾಣಲಿದೆ. ಕೇರಳದಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಲಿದೆ ಎಂದು ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಜಸ್ಥಾನದ ಚುನಾವಣಾ ಪ್ರಚಾರದಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದರೆ ರಾಜ್ಯ ಸರ್ಕಾರಗಳು ದಿವಾಳಿಯಾಗುತ್ತವೆ ಎಂದು ಹೇಳಿದ್ದರು. ಈಗ ಎಲ್ಲಾ ಕಡೆ ಕಾಂಗ್ರೆಸ್‌ನ ಗ್ಯಾರಂಟಿಗಳನ್ನೇ ನಕಲು ಮಾಡಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.ಇದೇ ವೇಳೆ ನಾಡಿನ ಜನರಿಗೆ ಮುಖ್ಯಮಂತ್ರಿಯವರು ಬಸವಜಯಂತಿಯ ಶುಭಾಷಯಗಳನ್ನು ತಿಳಿಸಿದರು.
