ಬೆಂಗಳೂರು,ಮೇ 18- ತಮ ಬಹುದಿನಗಳ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಸಾರಿಗೆ ಇಲಾಖೆಯ ನಾಲ್ಕು ನಿಗಮಗಳ ನೌಕರರು ಬುಧವಾರದಿಂದ ಅನಿರ್ಧಿಷ್ಟಾವಧಿಗೆ ನಡೆಸಲು ಉದ್ದೇಶಿಸಿದ್ದ ಮುಷ್ಕರಕ್ಕೆ ರಾಜ್ಯಸರ್ಕಾರ ತಣ್ಣೀರೆರಚಿದೆ.
ಒಂದು ವೇಳೆ ನಿಯಮಗಳನ್ನು ಉಲ್ಲಂಘಿಸಿ ಯಾವುದೇ ನೌಕರರು ಮುಷ್ಕರದಲ್ಲಿ ಭಾಗಿಯಾದರೆ ನೋ ವರ್ಕ್ ನೋ ಪೇ ಹಾಗೂ ಅಂತವರ ವಿರುದ್ಧ ಶಿಸ್ತಿನ ಕ್ರಮ ಜರುಗಿಸಬೇಕಾಗುತ್ತದೆ ಎಂದು ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಕ್ರಂಪಾಷ ಎಚ್ಚರಿಕೆ ನೀಡಿದ್ದಾರೆ.
ಅಲ್ಲದೆ ಅಂದು ನೌಕರರು ಕರ್ತವ್ಯಕ್ಕೆ ಗೈರುಹಾಜರಾಗುವುದು ಇಲ್ಲವೇ ಮುಷ್ಕರದಲ್ಲಿ ಪಾಲ್ಗೊಂಡರೆ ಕೆಲಸ ಮಾಡದಿದ್ದಾಗ ವೇತನವಿಲ್ಲ (ನೋ ವರ್ಕ್ ನೋ ಪೇ) ಎಂಬ ನಿಯಮವನ್ನು ಜಾರಿ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಈ ಸಂಬಂಧ ಸಾರಿಗೆ ಇಲಾಖೆಯ ಹಿರಿಯ/ವಿಭಾಗೀಯ ನಿಯಂತ್ರಣಾಧಿಕಾರಿಗಳು, ಕಾರ್ಯ ವ್ಯವಸ್ಥಾಪಕರು ಸೇರಿದಂತೆ ಮತ್ತಿತರ ಅಧಿಕಾರಿಗಳಿಗೆ ಪತ್ರ ಬರೆದಿದ್ದು, ನೌಕರರಿಗೆ ರಜೆ ಮಂಜೂರು ಮಾಡದಂತೆ ಸೂಚನೆ ಕೊಟ್ಟಿದ್ದಾರೆ.
ಸಾರಿಗೆ ಇಲಾಖೆಯು ಕರ್ನಾಟಕ ಅಗತ್ಯ ಸೇವಾ ನಿರ್ವಹಣಾ ಕಾಯ್ದೆ (ಎಸಾ) 2013ರಡಿ ವ್ಯಾಪ್ತಿಗೆ ಬರಲಿದೆ ಜೊತೆಗೆ ಸಾರಿಗೆ ನೌಕರರು ಯಾವುದೇ ಮುಷ್ಕರ ಹೂಡುವಂತಿಲ್ಲ. ಅಲ್ಲದೆ ಸಂಘ ಸಂಸ್ಥೆ ವ್ಯಕ್ತಿಗಳ ಜೊತೆ ಗುರುತಿಸಿಕೊಂಡು ಪ್ರಚೋದಿಸುವುದು ಇಲ್ಲವೇ ಮುಷ್ಕರಕ್ಕೆ ಬೆಂಬಲವನ್ನು ವ್ಯಕ್ತಪಡಿಸುವಂತಿಲ್ಲ ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಇದೊಂದು ಸಾರ್ವಜನಿಕ ಉಪಯುಕ್ತ ಸೇವಾ ಸಂಸ್ಥೆ ಆಗಿರುವುದರಿಂದ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯವರು ಆಡಳಿತ ವರ್ಗಕ್ಕೆ ನೀಡಿರುವ ಮುಷ್ಕರದ ನೋಟೀಸ್ ಕಾರ್ಮಿಕ ಆಯುಕ್ತರ ಮುಂದೆ ರಾಜಿ ಸಂಧಾನದಲ್ಲಿದೆ. ಕೈಗಾರಿಕಾ ವಿವಾದಗಳ ಕಾಯ್ದೆ 1947 ಮತ್ತು ನಿಯಮಗಳನ್ವಯ ಸಾರ್ವಜನಿಕ ಉಪಯುಕ್ತ ಸೇವಾ ಸಂಸ್ಥೆಯ ನೌಕರರ ನೋಟೀಸ್ ರಾಜಿ ಸಂಧಾನದಲ್ಲಿರುವಾಗ ಮುಷ್ಕರ ಮಾಡಬಾರದು ಎಂದು ಎಚ್ಚರಿಕೆ ಕೊಡಲಾಗಿದೆ.
ಬುಧವಾರದಂದು ಬಸ್ಸುಗಳ ಸಂಚಾರದಲ್ಲಿ ಯಾವುದೇ ರೀತಿಯ ಅಡಚಣೆ ಉಂಟಾಗದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಅಲ್ಲದೆ ಆ ದಿನ ನೌಕರರಿಗೆ ಯಾವುದೇ ಕಾರಣಕ್ಕೂ ರಜೆಯನ್ನು ಮಂಜೂರು ಮಾಡಬಾರದು. ಅಂದಿನಿಂದಲೇ ಜಾರಿಗೆ ಬರುವಂತೆ ಕರ್ತವ್ಯಕ್ಕೆ ಗೈರು ಹಾಜರಾಗುವ ನೌಕರರ ವಿರುದ್ಧ ನೋ ವರ್ಕ್ ನೋ ಪೇ ಕ್ರಮ ಜರುಗಿಸುತ್ತೇವೆ.
ವಾರದ ರಜೆ ಅಥವಾ ದೀರ್ಘಾವಧಿ ರಜೆಯಲ್ಲಿರುವ ನೌಕರರಿಗೆ ಈ ಸೂಚನೆಗಳು ಅನ್ವಯವಾಗುವುದಿಲ್ಲ. ಅನಿವಾರ್ಯವಿದ್ದರೆ ನೌಕರರ ವಾರದ ರಜೆಯನ್ನು ರದ್ದುಪಡಿಸಿ ಕರ್ತವ್ಯಕ್ಕೆ ಹಾಜರಾಗಬೇಕೆಂದು ಸೂಚನೆ ನೀಡಲಾಗಿದೆ.
ಗೈರು ಹಾಜರಾದ ನೌಕರರ ವೇತನವನ್ನು ಕಡಿತಗೊಳಿಸಲಾಗುವುದು. ಸರ್ಕಾರದ ನಿಯಮಗಳನ್ನು ಪಾಲನೆ ಮಾಡಿ ನೌಕರರು ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿ ಸಾರ್ವಜನಿಕರ ಸೇವೆಯಲ್ಲಿ ತೊಡಗಬೇಕೆಂದು ಸುತ್ತೋಲೆಯಲ್ಲಿ ವ್ಯವಸ್ಥಾಪಕ ನಿರ್ದೇಶಕರು ನಿರ್ದೇಶನ ನೀಡಿದ್ದಾರೆ.
ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಬಿಎಂಟಿಸಿ, ಸಾರಿಗೆ, ಕಲ್ಯಾಣ ಕರ್ನಾಟಕ ಮತ್ತು ವಾಯುವ್ಯ ಸಾರಿಗೆ ನೌಕರರು ಬುಧವಾರದಿಂದ ಅನಿರ್ಧಿಷ್ಟಾವಧಿಯವರೆಗೆ ಮುಷ್ಕರ ನಡೆಸಲು ಮುಂದಾಗಿದ್ದಾರೆ.
