ಬೆಂಗಳೂರು,ಮೇ 18- ನಿರಾಶ್ರಿತರ ಕೇಂದ್ರದಿಂದ ಪರಾರಿಯಾಗಿರುವ ನಾಲ್ವರು ವಿದೇಶಿ ಮಹಿಳೆಯರ ಪತ್ತೆಗಾಗಿ ಈಶಾನ್ಯ ವಿಭಾಗದ ಪೊಲೀಸರ ನಾಲ್ಕು ತಂಡಗಳನ್ನು ರಚಿಸಲಾಗಿದೆ.ವಿದ್ಯಾರ್ಥಿ ಹಾಗೂ ಪ್ರವಾಸಿ ವೀಸಾದಲ್ಲಿ ಬಂದು ನಂತರ ವೀಸಾ ಅವಧಿ ಮುಗಿದರೂ ತಮ ದೇಶಕ್ಕೆ ಹಿಂದಿರುಗದೇ ಅಕ್ರಮವಾಗಿ ನಗರದಲ್ಲಿ ವಾಸ ಮಾಡುತ್ತಾ ಮಾದಕವಸ್ತು ಮಾರಾಟದಲ್ಲಿ ತೊಡಗಿದ್ದರು.
ನಗರ ಪೊಲೀಸರು ಈ ನಾಲ್ವರನ್ನು ಬಂಧಿಸಿ ವಿದೇಶಿ ಪ್ರಾದೇಶಿಕ ನೋಂದಣಿ ಕಚೇರಿ (ಎಫ್ಆರ್ಆರ್ಒ) ಅಧಿಕಾರಿಗಳ ಸೂಚನೆ ಮೇರೆಗೆ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡಗುಬ್ಬಿಯ ನಿರಾಶ್ರಿತ ಕೇಂದ್ರವಾದ ಹೋಂ ಆಫ್ ಹೋಂನಲ್ಲಿ ಇರಿಸಲಾಗಿತ್ತು.
ಈ ಕೇಂದ್ರದಲ್ಲಿದ್ದ ಉಗಾಂಡ ಹಾಗೂ ನೈಜೀರಿಯಾ ದೇಶದ ನಾಲ್ವರು ಮಹಿಳೆಯರು ಮೇ 11 ರಂದು ಮುಂಜಾನೆ 3 ಗಂಟೆ ಸುಮಾರಿನಲ್ಲಿ ವಸತಿ ಕೇಂದ್ರದ 2ನೇ ಮಹಡಿ ಕೋಣೆಯ ಕಿಟಕಿ ಗ್ರಿಲ್ ಮುರಿದು ಆ ಮೂಲಕ ಪರಾರಿಯಾಗಿದ್ದಾರೆ.
ಈ ನಾಲ್ವರು ಮಹಿಳೆಯರ ವಿರುದ್ಧ ಡ್ರಗ್ಸ್ ಮಾರಾಟ ಹಾಗೂ ಅಕ್ರಮ ವಾಸವಾಗಿರುವ ಬಗ್ಗೆ ದೂರುಗಳು ದಾಖಲಾಗಿವೆ.ಈ ನಾಲ್ವರು ವಿದೇಶಿ ಮಹಿಳೆಯರಿಗಾಗಿ ತನಿಖಾ ತಂಡಗಳು ಶೋಧ ಕಾರ್ಯದಲ್ಲಿ ತೊಡಗಿವೆ. ವಸತಿ ಕೇಂದ್ರದ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿ ಪತ್ತೆಕಾರ್ಯಕ್ಕೆ ಮುಂದಾಗಿವೆ.
ಈ ಮಹಿಳೆಯರನ್ನು ಬಂಧಿಸಿದ್ದ ಆಯಾಯ ಠಾಣಾ ಪೊಲೀಸರಿಗೂ ಮಾಹಿತಿ ರವಾನಿಸಲಾಗಿದ್ದು, ಅವರೂ ಸಹ ವಿದೇಶಿ ಮಹಿಳೆಯರ ಪತ್ತೆಯಲ್ಲಿ ತೊಡಗಿದ್ದಾರೆ. ತಪ್ಪಿಸಿಕೊಂಡಿರುವ ಈ ನಾಲ್ವರು ಮಹಿಳೆಯರು ಮತ್ತೆ ಡ್ರಗ್ಸ್ ಸಾಗಾಟ ಮತ್ತು ಮಾರಾಟದಲ್ಲಿ ತೊಡಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
