ಬೆಂಗಳೂರು, ಮೇ18- ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಇಂದು 94 ನೇ ವಸಂತಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಕುಟುಂಬದ ಸದಸ್ಯರು, ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಹಿತೈಷಿಗಳೊಂದಿಗೆ ಗೌಡರು ತಮ ಜನುಮ ದಿನವನ್ನು ಆಚರಿಸಿಕೊಂಡಿದ್ದಾರೆ.
ಹುಟ್ಟುಹಬ್ಬದ ಅಂಗವಾಗಿ ದೇವೇಗೌಡರು, ತಮ ಪತ್ನಿ ಚೆನ್ನಮ ಅವರೊಂದಿಗೆ ಜೆ.ಪಿ.ನಗರದಲ್ಲಿರುವ ವೆಂಕಟೇಶ್ವರಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಲೋಕಸಭಾಧ್ಯಕ್ಷ ಓಂ ಬಿರ್ಲಾ, ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಷ್ಟ್ರ ಹಾಗೂ ರಾಜ್ಯಮಟ್ಟದ ಹಲವು ಗಣ್ಯರು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.
ಲೋಕಸಭಾಧ್ಯಕ್ಷ ಓಂಬಿರ್ಲಾ ಅವರು ದೇವೇಗೌಡರ ಜನ ಕಲ್ಯಾಣದ ಬದ್ಧತೆ ನಿಜಕ್ಕೂ ಶ್ಲಾಘನೀಯ ಎಂದು ಹೇಳಿದ್ದಾರೆ.ದೇವೇಗೌಡರಿಗೆ ಜನುಮ ದಿನದ ಶುಭಾಶಯ ಕೋರಿರುವ ಪ್ರಧಾನಿ ನರೇಂದ್ರ ಮೋದಿ ಅವರು, ದೇವೇಗೌಡರು ನಮ ರಾಷ್ಟ್ರಕ್ಕೆ ದೀರ್ಘಾವಧಿಯಲ್ಲಿ ಅತ್ಯುತ್ತಮ ಕೊಡುಗೆ ನೀಡಿದ್ದಾರೆ. ನೀತಿ ಸಂಬಂಧಿತ ವಿಷಯಗಳ ಬಗ್ಗೆ ಆಳವಾದ ತಿಳಿವಳಿಕೆ ಜನಪರ ಕಾಳಜಿ ಉಳ್ಳವರಾಗಿದ್ದಾರೆ ಎಂದು ಬಣ್ಣಿಸಿದ್ದಾರೆ.
ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರು ಭಾರತದ ಅಭಿವೃದ್ಧಿಗೆ, ವಿಶೇಷವಾಗಿ ರೈತರ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ದೇವೇಗೌಡರು, ಗಮನಾರ್ಹ ಕೊಡುಗೆ ನೀಡಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು, ದೇವೇಗೌಡರಿಗೆ ಉತ್ತಮ ಆಯುರಾರೋಗ್ಯ ಭಗವಂತ ಕರುಣಿಸಲಿ ಎಂದು ಕೋರಿದ್ದು, ಸಾರ್ವಜನಿಕ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಜನಸೇವೆ ಮಾಡುವ ಅವಕಾಶಗಳನ್ನು ನೀಡಲಿ ಎಂದು ಹಾರೈಸಿದ್ದಾರೆ.
ನಾಡಿನ ಜನರರ ಸೇವೆಯನ್ನು ಇನ್ನಷ್ಟು ಕಾಲ ನಡೆಸಲು ದೇವೇಗೌಡರಿಗೆ ಭಗವಂತ ಆಯುರಾರೋಗ್ಯವನ್ನು ಕರುಣಿಸಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾರೈಸಿದ್ದಾರೆ. ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು, ಹೋರಾಟ, ಸಂಘರ್ಷ, ತ್ಯಾಗ, ಸಮರ್ಪಣಾ ಭಾವದಿಂದ ರಾಜಕೀಯದ ಉತ್ತುಂಗಕ್ಕೆ ಏರಿದ ಮಣ್ಣಿನಮಗನ ಹೆಜ್ಜೆಗಳು ಅನುಕರಣೀಯ ಎಂದು ಶ್ಲಾಘಿಸಿದ್ಧಾರೆ.
ಅವರು ತಮ ಬದುಕಿನ ಪ್ರತೀಕ್ಷಣವನ್ನು ಜನಸೇವೆಗೆ ಮೀಸಲಿಟ್ಟವರು. 94ರ ಈ ವಯಸ್ಸಿನಲ್ಲಿಯೂ ಜನಹಿತಕ್ಕಾಗಿ ಸಂಘರ್ಷದ ಹಾದಿಯನ್ನು ಸವೆಸುತ್ತಿದ್ದಾರೆ. ಅವರ ದಾರಿ ತಲೆತಲೆಮಾರಿಗೂ ಮಾದರಿ. ಆ ಹಿರಿಯ ಜೀವಕ್ಕೆ ಭಗವಂತ ಉತ್ತಮ ಆಯುರಾರೋಗ್ಯ ಕರುಣಿಸಿ, ಇನ್ನೂ ಸುದೀರ್ಘ ಕಾಲ ರಾಷ್ಟ್ರಸೇವೆ ಮಾಡುವ ಶಕ್ತಿ, ಚೈತನ್ಯ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್, ಭೂಪೇಂದ್ರ ಯಾದವ್, ರಾಮ್‌ವಿಚಾರ್ ನೇತಮ್, ಕನಕ ವರ್ಧನ್, ಡಾ. ಮೋಹನ್ ಯಾದವ್, ರಾಧಾಮೋಹನ್ ಸಿಂಗ್, ಭೂಪತಿ ರಾಜು, ಪಂಕಚ್ ಚೌಧರಿ, ಹಿಮಂತ್ ಬಿಸ್ವಾಸ್, ಪ್ರತಾಪ್‌ರಾವ್ ಜಾಧವ್ ಸೇರಿದಂತೆ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಹಲವು ಗಣ್ಯರು ಎಕ್ಸ್ ಮೂಲಕ ದೇವೇಗೌಡರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.
ದೇವೇಗೌಡರಿಂದ ಜನಪರ ಹೋರಾಟ ಮಾಡುವ ದೃಢ ಸಂಕಲ್ಪ :
ಬೆಂಗಳೂರು, ಮೇ18- ನನ್ನ ಕೈಲಾದ ಮಟ್ಟಿಗೆ ರಾಜ್ಯದ ಸಮಸ್ಯೆ ಮುಂದಿಟ್ಟು ಜನರಿಗಾಗಿ ಹೋರಾಟ ಮಾಡಬೇಕು ಎಂದು ದೃಢ ಸಂಕಲ್ಪ ಮಾಡಿದ್ದೇನೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ 93 ವರ್ಷವಾಗಿದೆ ಎಂದು ಮನೆಯಲ್ಲೇ ಕುಳಿತುಕೊಳ್ಳುವುದಿಲ್ಲ. ಜನರ ಸಮಸ್ಯೆ ಯಾವ ರೀತಿ ಹದಗೆಟ್ಟಿದೆ ಎಂಬುದನ್ನು ಈಗಾಗಲೇ ಹೇಳಿದ್ದೇನೆ. 68 ವರ್ಷಗಳ ಕಾಲ ರಾಜಕೀಯದಲ್ಲಿ ಹೋರಾಟ ಮಾಡಿಕೊಂಡು ಬಂದಿದ್ದೇನೆ.
ಜನಪರ ಹೋರಾಟ ಮಾಡುವುದು ನನ್ನ ಮುಂದೆ ಇದೆ. ಆ ಕೆಲಸವನ್ನು ನಾನು ಮಾಡುತ್ತೇನೆ. ಈ ಹೋರಾಟದಲ್ಲಿ ಯಾವುದೇ ಕ್ಲಿಷ್ಟ ಸಮಸ್ಯೆ ಬಂದರೂ ಕೂತು ಬಗೆಹರಿಸಿಕೊಂಡು ಹೋರಾಟ ಮಾಡುತ್ತೇನೆ ಎಂಬ ದೃಢ ವಿಶ್ವಾಸ ಇದೆ ಎಂದು ಅವರು ಹೇಳಿದರು.
2028 ರ ವಿಧಾನಸಭೆ ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ನಾವು ಎನ್‌ಡಿಎ ಜೊತೆ ಮೈತ್ರಿ ಮಾಡಿಕೊಂಡಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ನಮ ಸಂಬಂಧವಿದೆ. ಇದರಲ್ಲಿ ಯಾವುದೇ ಬಿಕ್ಕಟ್ಟು ಬರೋದಿಲ್ಲ. ಅವರ ಬಳಿ ನಮ ಸಂಬಂಧ ಇರುವುದರಿಂದ ನನಗೆ ಯಾವುದೇ ಆತಂಕವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ಪಕ್ಷವು ಕೇರಳ, ತೆಲಂಗಾಣ, ಕರ್ನಾಟಕದಲ್ಲಿ ಮಾತ್ರಇದೆ. ಮುಂದೆ ಏನಾಗುತ್ತೆ ಎಂಬುದನ್ನು ನೋಡೋಣ. ಈಗ ನಾನು ಮಾತಾಡುವುದಿಲ್ಲ. ಆ ಸಮಯ ಬಂದಾಗ ಮಾತನಾಡುತ್ತೇನೆ ಎಂದರು.
ಕಾರ್ಯಕರ್ತರಿಗೆ ದೇವೇಗೌಡರ ಸಂದೇಶ :
ನಮ ಪಕ್ಷದ ಕಾರ್ಯಕರ್ತರು ಶಿಸ್ತಿನ ಸಿಪಾಯಿಗಳಾಗಿ ಪಕ್ಷದ ಕೆಲಸವನ್ನು ನಿಷ್ಠೆಯಿಂದ ಮಾಡಬೇಕು. ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ವಹಿಸಿಕೊಡುವ ಜವಾಬ್ದಾರಿಯನ್ನು ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ ನಿಷ್ಠೆಯಿಂದ ಮಾಡಬೇಕು ಎಂದು ಅವರು ಹೇಳಿದರು.
ಪ್ರಧಾನ ಮಂತ್ರಿಗಳು ತುಂಬಾ ಒಳ್ಳೆ ಸಂದೇಶ ಕಳುಸಿದ್ದಾರೆ. ಗೃಹ ಸಚಿವರು ವೈಯಕ್ತಿಕ ವಾಗಿ ಮಾತಾಡಿದ್ದಾರೆ. ಇನ್ನು ಅನೇಕರು ಹುಟ್ಟುಹಬ್ಬದ ಸಂದೇಶ ಕಳುಹಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸಂದೇಶ ಕಳಿಸಿದ್ದಾರೆ ಎಂದರು.
