ಮಿರ್ಜಾಪುರ (ಯುಪಿ), ಏ.23- ಬಹು ವಾಹನಗಳು ಡಿಕ್ಕಿಯಾಗಿ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ಮಕ್ಕಳೂ ಸೇರಿದಂತೆ 11 ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯಲ್ಲಿ ಕಳೆದ ರಾತ್ರಿ ನಡೆದಿದೆ.ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಮತ್ತು ಅಗ್ನಿಶಾಮಕ ದಳದ ತಂಡಗಳು ಸ್ಥಳಕ್ಕೆ ಧಾವಿಸಿ ಸ್ಥಳೀಯರ ಸಹಾಯದಿಂದ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿವೆ ಎಂದು ಎಸ್ಪಿ ಅಪರ್ಣಾ ರಜತ್ ಕೌಶಿಕ್ ತಿಳಿಸಿದ್ದಾರೆ.
ಜಿಲ್ಲಾ ಕೇಂದ್ರ ಕಚೇರಿಯಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಡ್ರಾಮಂಡ್ಗಂಜ್ ಕಣಿವೆಯಿಂದ ಲಸೋಡಾ ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿ-135 ರ ವ್ಯಾಪ್ತಿಯಲ್ಲಿ ದುರಂತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆ ಪ್ರಕಾರ, ಚಲಿಸುತ್ತಿದ್ದ ಟ್ರಕ್ನ ಬ್ರೇಕ್ ವೈಫಲ್ಯವಾಗಿದ್ದರಿಂದ ನಿಯಂತ್ರಣ ತಪ್ಪಿ ಮುಂದೆ ಚಲಿಸುತ್ತಿದ್ದ ಮತ್ತೊಂದು ಟ್ರಕ್ಗೆ ಡಿಕ್ಕಿ ಹೊಡೆದಿದೆ ಎಂದು ಶಂಕಿಸಲಾಗಿದೆ. ಡಿಕ್ಕಿಯ ರಭಸಕ್ಕೆ ಎರಡು ಟ್ರಕ್ಗಳ ನಡುವೆ ಪ್ರಯಾಣಿಸುತ್ತಿದ್ದ ಕಾರು ನಜ್ಜುಗುಜ್ಜಾಯಿತು. ನಂತರ ಹಲವು ವಾಹನಕ್ಕೆ ಡಿಕ್ಕಿಯಾಗಿದೆ.
ಇದೇ ವೇಳೆ ಕಾರೊಂದು ಬೆಂಕಿಗೆ ಆಹುತಿಯಾಗಿದೆ. ಸ್ಥಳೀಯರೊಂದಿಗೆ ಪೊಲೀಸರು ಜಖಂಗೊಂಡ ವಾಹನಗಳಲ್ಲಿ ಸಿಲುಕಿಕೊಂಡಿದ್ದ ಜನರನ್ನು ಹೊರತೆಗೆದರು. ಇದುವರೆಗೂ 11 ಮಂದಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿವೆ ಎಂದು ಎಸ್ಪಿ ಕೌಶಿಕ್ ಹೇಳಿದರು.
ಜಿಲ್ಲಾಧಿಕಾರಿ ಪವನ್ ಗಂಗ್ವಾರ್ ಪಿಟಿಐಗೆ ಮಾಹಿತಿ ನೀಡಿ, ಮೃತರಲ್ಲಿ ಏಳು ಮಂದಿ ಮಿರ್ಜಾಪುರ ಜಿಲ್ಲೆಯವರು, ಮೂವರು ಮಧ್ಯಪ್ರದೇಶದವರು ಮತ್ತು ಒಬ್ಬರು ನೆರೆಯ ಸೋನ್ಭದ್ರ ಜಿಲ್ಲೆಯವರು ಎಂದು ತಿಳಿಸಿದ್ದಾರೆ.
ಮೃತರನ್ನು ಮಿರ್ಜಾಪುರದ ಜಿಗ್ನಾ ಪ್ರದೇಶದ ಶಿವ ಸಿಂಗ್ (8), ಸೋನಮ್ ಸಿಂಗ್ (9), ಪಿಯೂಷ್ ಸಿಂಗ್ (14), ಪಂಕಜ್ ಸಿಂಗ್ (40), ವಂದನಾ ಸಿಂಗ್ (43), ವಿಷ್ಣು ಸಿಂಗ್ (45) ಮತ್ತು ವೀಣಾ ಸಿಂಗ್ (47) ಹಾಗೂ ಮಧ್ಯಪ್ರದೇಶದ ಸತ್ನಾದ ಕಾರ್ತಿಕೇಯ ಸಿಂಗ್ (18), ಪ್ರಿಯಾಂಕಾ ಸಿಂಗ್ (42), ಸಾಗರ್ನ ವಿಕಾಸ್ ಶರ್ಮಾ (32) ಮತ್ತು ಸೋನ್ಭದ್ರದ ಜೈ ಪ್ರಕಾಶ್ (27) ಎಂದು ಗುರುತಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಅಪಘಾತದಲ್ಲಿ ಸಿಲುಕಿರುವ ವಾಹನಗಳಲ್ಲಿ ಬಿಹಾರ ನೋಂದಣಿ ಸಂಖ್ಯೆಯನ್ನು ಹೊಂದಿರುವ ಟ್ರಕ್ ಮತ್ತು ಮಧ್ಯಪ್ರದೇಶದಲ್ಲಿ ನೋಂದಾಯಿಸಲಾದ ಇನ್ನೊಂದು ಟ್ರಕ್ ಸೇರಿವೆ. ಕಾರುಗಳಲ್ಲಿ ಒಂದು ಸೋನಭದ್ರ ಜಿಲ್ಲೆಯದ್ದಾಗಿದ್ದು, ಇನ್ನೊಂದು ಮಿರ್ಜಾಪುರದದ್ದಾಗಿತ್ತು. ಇಂದು ಬೆಳಿಗ್ಗೆ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಎಕ್್ಸ ಪೋಸ್ಟ್ನಲ್ಲಿ ಶೋಕ ವ್ಯಕ್ತಪಡಿಸಿ, ಮಿರ್ಜಾಪುರದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಜೀವಹಾನಿ ಅತ್ಯಂತ ದುರಂತ ಮತ್ತು ಹೃದಯ ವಿದ್ರಾವಕವಾಗಿದೆ. ಮೃತರ ಕುಟುಂಬಗಳಿಗೆ ನನ್ನ ಸಂತಾಪಗಳು ಎಂದು ಹೇಳಿದ್ದಾರೆ.
ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಲಾಗಿದೆ ಎಂದರು.
ಮೃತರ ಆತಗಳಿಗೆ ಶಾಂತಿ ಸಿಗಲಿ, ದುಃಖಿತ ಕುಟುಂಬಗಳಿಗೆ ಈ ಅಪಾರ ದುಃಖವನ್ನು ಭರಿಸುವ ಶಕ್ತಿ ಭಗವಂತ ನೀಡಲಿ ಮತ್ತು ಗಾಯಾಳುಗಳು ಬೇಗನೆ ಚೇತರಿಸಿಕೊಳ್ಳಲಿ ಎಂದು ನಾನು ರಾಮನಲ್ಲಿ ಪ್ರಾರ್ಥಿಸುತ್ತೇನೆ ಎಂದು ಮುಖ್ಯಮಂತ್ರಿ ಹೇಳಿದರು.
ಅಪಘಾತದಿಂದ ಜಖಂಗೊಂಡಿರುವ ವಾಹನಗಳನ್ನು ಸ್ಥಳದಿಂದ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಅಪಘಾತದ ನಿಖರವಾದ ಕಾರಣವನ್ನು ಕಂಡುಹಿಡಿಯಲು ವಿವರವಾದ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
