ತುಮಕೂರು,ಮೇ 21- ಕಲ್ಪತರ ನಾಡು ಎಂದೇ ಹೆಸರಾಗಿರುವ ತುಮಕೂರು ಜಿಲ್ಲೆಯ ಹೆಸರು ಬದಲಾವಣೆ ಆಗಲಿದೆ ಎಂಬ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳು ಹಾಗೂ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದ್ದ ಚರ್ಚೆಗಳಿಗೆ ಇದೀಗ ಸ್ಪಷ್ಟನೆ ದೊರೆತಿದೆ.
ರಾಜ್ಯಸರ್ಕಾರದ ಸಾಧನಾ ಸಮಾವೇಶದಲ್ಲಿ ತುಮಕೂರನ್ನು ಬೆಂಗಳೂರು ಭಾಗವಾಗಿಸಿ ಬೆಂಗಳೂರು ಉತ್ತರವಾಗಿ ಘೋಷಿಸಬೇಕೆಂದು ಮಾಡಿದ ಪ್ರಸ್ತಾಪ ಸಾಕಷ್ಟು ಚರ್ಚೆಗೆ ಗ್ರಾಸವಾದ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಅವರು ಸ್ಪಷ್ಟನೆ ನೀಡಿದ್ದಾರೆ.
ತುಮಕೂರು ಜಿಲ್ಲೆಯ ಹೆಸರು ಬದಲಾವಣೆ ಹೇಳಿಕೆ ಕುರಿತು ಸ್ಪಷ್ಟನೆ ನೀಡಿರುವ ಸಚಿವರು, ತುಮಕೂರಿನ ಐತಿಹಾಸಿಕ ಗುರುತು, ಅಸಿತೆ ಮತ್ತು ವೈಶಿಷ್ಟ್ಯಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ, ಬೆಂಗಳೂರು ಅಭಿವೃದ್ಧಿ ವಲಯದೊಂದಿಗಿನ ಸಂಪರ್ಕದ ಪರಿಕಲ್ಪನೆ ಕುರಿತು ಉಂಟಾಗಿದ್ದ ಗೊಂದಲಗಳಿಗೆ ಉತ್ತರ ನೀಡಿದರು.
ತುಮಕೂರು ಹೆಸರನ್ನು ಬದಲಿಸುತ್ತೇನೆ ಎಂದು ಹೇಳಿಲ್ಲ. ಜಾಗತಿಕವಾಗಿ ತುಮಕೂರನ್ನು ಗುರುತಿಸಲ್ಪಡಲು ರಾಜಧಾನಿ ಬೆಂಗಳೂರು ಭಾಗವಾಗಿಸಿ ಎಂದು ಸರ್ಕಾರದ ಮುಂದೆ ಪ್ರಸ್ತಾಪ ಇಟ್ಟಿರುವುದಾಗಿ ಸ್ಪಷ್ಟಪಡಿಸಿದರು.
ತುಮಕೂರನ್ನು ಬೆಂಗಳೂರು ಮಾದರಿಯ ಅಭಿವೃದ್ಧಿ ಚಟುವಟಿಕೆಗಳೊಂದಿಗೆ ಸಂಪರ್ಕಿಸುವ ಉದ್ದೇಶ ಕೇವಲ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ವೇಗ ನೀಡುವುದಾಗಿದೆ ಎಂದು ವಿವರಿಸಿದ್ದಾರೆ. ಇದರಿಂದ ಜಿಲ್ಲೆಯ ವಿಸ್ತೀರ್ಣ ಅಥವಾ ಆಡಳಿತಾತಕ ಅಸ್ತಿತ್ವದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂಬುದನ್ನೂ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು ಕೇಂದ್ರಿತ ಕೈಗಾರಿಕಾ, ಮೂಲಸೌಕರ್ಯ ಮತ್ತು ಹೂಡಿಕೆ ಮಾದರಿಯನ್ನು ತುಮಕೂರಿಗೂ ವಿಸ್ತರಿಸುವ ಮೂಲಕ ಜಿಲ್ಲೆಯಲ್ಲಿನ ಕೈಗಾರಿಕಾ ಬೆಳವಣಿಗೆಗೆ ಉತ್ತೇಜನ ಸಿಗಲಿದೆ. ಜೊತೆಗೆ ಹೊಸ ಹೂಡಿಕೆಗಳು ಹರಿದುಬರುವುದರಿಂದ ಉದ್ಯೋಗಾವಕಾಶಗಳು ಹೆಚ್ಚಳವಾಗಿ, ಆರ್ಥಿಕ ಚಟುವಟಿಕೆಗಳಿಗೆ ಮತ್ತಷ್ಟು ಚೈತನ್ಯ ದೊರೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಲಾಗಿದೆ.
ಕಳೆದ ಕೆಲ ದಿನಗಳಿಂದ ತುಮಕೂರಿನ ಹೆಸರು ಬದಲಾಗಲಿದೆ, ಬೆಂಗಳೂರು ವಲಯಕ್ಕೆ ವಿಲೀನವಾಗಲಿದೆ ಎಂಬ ರೀತಿಯ ಊಹಾಪೋಹಗಳು ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸಿದ್ದವು. ಈ ಹಿನ್ನೆಲೆ ಸ್ಪಷ್ಟನೆ ನೀಡಿರುವ ಅವರು, ಕಲ್ಪತರ ನಾಡು ಎಂಬ ತುಮಕೂರಿನ ಐತಿಹಾಸಿಕ ಹೆಗ್ಗಳಿಕೆ ಮತ್ತು ಸಾಂಸ್ಕೃತಿಕ ಗುರುತು ಎಂದಿನಂತೆ ಮುಂದುವರಿಯಲಿದ್ದು, ಜಿಲ್ಲೆಯ ಗೌರವಕ್ಕೆ ಯಾವುದೇ ರೀತಿಯ ಧಕ್ಕೆಯಾಗುವುದಿಲ್ಲ ಎಂದು ತಿಳಿಸಿದ್ದಾರೆ. ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡದೆ, ಜಿಲ್ಲೆಯ ಅಭಿವೃದ್ಧಿ ಪರಿಕಲ್ಪನೆಯನ್ನು ಸರಿಯಾದ ಅರ್ಥದಲ್ಲಿ ಸ್ವೀಕರಿಸಬೇಕು ಎಂದು ಮನವಿ ಮಾಡಲಾಗಿದೆ.
