Homeಅಂತಾರಾಷ್ಟ್ರೀಯಅಮೆರಿಕದ ಹೊಸ ಗ್ರೀನ್‌ ಕಾರ್ಡ್‌ ನೀತಿಗೆ ವಿರೋಧ

ಅಮೆರಿಕದ ಹೊಸ ಗ್ರೀನ್‌ ಕಾರ್ಡ್‌ ನೀತಿಗೆ ವಿರೋಧ

ವಾಷಿಂಗ್ಟನ್‌, ಮೇ.23- ಗ್ರೀನ್‌ ಕಾರ್ಡ್‌ ಪಡೆಯಲು ಅರ್ಜಿ ಸಲ್ಲಿಸುವವರು ತಮ್ಮ ತಾಯ್ನಾಡಿನಿಂದಲೇ ಅರ್ಜಿ ಸಲ್ಲಿಸಬೇಕು ಎಂಬ ಅಮೆರಿಕ ಆಡಳಿತದ ಹೊಸ ನೀತಿಯನ್ನು ಅಮೆರಿಕದ ಸಂಸದರು ಮತ್ತು ವಲಸೆ ಹಕ್ಕು ಹೋರಾಟಗಾರರು ತೀವ್ರವಾಗಿ ಟೀಕಿಸಿದ್ದಾರೆ. ಈ ನಿರ್ಧಾರವನ್ನು ಅಜಾಗರೂಕ ಮತ್ತು ತಪ್ಪಾದ ಕ್ರಮ ಎಂದು ಅವರು ಕರೆದಿದ್ದಾರೆ.

ಡೆಮಾಕ್ರಾಟಿಕ್‌ ಪಕ್ಷದ ಸಂಸದ ಈ ನಿರ್ಧಾರವನ್ನು ಹಿಂಪಡೆಯಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುವುದಾಗಿ ತಿಳಿಸಿದ್ದಾರೆ. ಅಮೆರಿಕ ನಾಗರಿಕತ್ವ ಮತ್ತು ವಲಸೆ ಸೇವೆಗಳ ಇಲಾಖೆ ಯಾವ ವರ್ಗದವರಿಗೆ ವಿನಾಯಿತಿ ಸಿಗಲಿದೆ ಎಂಬುದನ್ನು ಸ್ಪಷ್ಟಪಡಿಸಿಲ್ಲ. ಆದರೆ ಆಶ್ರಯ ಕೋರುವವರಿಗೆ ಈ ನಿಯಮ ಅನ್ವಯಿಸದಿರಬಹುದು ಎಂದು ಸೂಚಿಸಿದೆ.

ಅಮೆರಿಕದ ರಾಷ್ಟ್ರೀಯ ಹಿತಾಸಕ್ತಿ ಅಥವಾ ಆರ್ಥಿಕ ಲಾಭಕ್ಕೆ ಸಹಾಯ ಮಾಡುವವರಿಗೆ ಈಗಿನ ಪ್ರಕ್ರಿಯೆಯೇ ಮುಂದುವರಿಯುವ ಸಾಧ್ಯತೆ ಇದೆ. ಆದರೆ ಈ ವಿನಾಯಿತಿ ಹೆಚ್‌1-ಬಿ ವೀಸಾ ಹೊಂದಿರುವ ನಿಪುಣ ಉದ್ಯೋಗಿಗಳಿಗೆ ಅನ್ವಯವಾಗುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ ಎಂದು ವಕ್ತಾರ ಜಾಕ್‌ ಕಾಲರ್‌ ಹೇಳಿದ್ದಾರೆ.
ಮಾಜಿ ಶ್ವೇತಭವನ ಸಲಹೆಗಾರ ಹಾಗೂ ವಲಸೆ ಹಕ್ಕು ಹೋರಾಟಗಾರ ಅಜಯ್‌ ಭುತೋರಿಯಾ ಮಾತನಾಡಿ, ಈ ನಿರ್ಧಾರದಿಂದ ಸುಮಾರು 12 ಲಕ್ಷ ಭಾರತೀಯ ಅಮೆರಿಕನ್ನರು ಹಾಗೂ ಅವರ ಕುಟುಂಬಗಳು ಅನಿಶ್ಚಿತ ಪರಿಸ್ಥಿತಿಗೆ ತಳ್ಳಲ್ಪಟ್ಟಿದ್ದಾರೆ. ಅವರು ಕಾನೂನಿನಂತೆ ನಡೆದು ತೆರಿಗೆ ಪಾವತಿಸಿ ಹಲವು ವರ್ಷಗಳಿಂದ ಕಾಯುತ್ತಿದ್ದಾರೆ ಎಂದರು.

ಈ ಹೊಸ ನೀತಿಯನ್ನು ಪ್ರಶ್ನಿಸಿ ಹಲವು ಸಂಘಟನೆಗಳು ನ್ಯಾಯಾಲಯದಲ್ಲಿ ದಾವೆ ಹೂಡಲಿವೆ ಎಂದು ಹೇಳಿದರು. ಈ ಹಿಂದೆ ಅಮೆರಿಕದಲ್ಲೇ ಇರುವ ವಿದೇಶಿ ಉದ್ಯೋಗಿಗಳು ತಮ್ಮ ವಲಸೆ ಸ್ಥಿತಿಯನ್ನು ಬದಲಾಯಿಸಲು ಹೊಂದಾಣಿಕೆ ಮೂಲಕ ಅರ್ಜಿ ಸಲ್ಲಿಸಬಹುದಾಗಿತ್ತು. ಭಾರತೀಯ ಮೂಲದ ವಲಸಿಗರು ಅಮೆರಿಕದ ಜನಸಂಖ್ಯೆಯ ಕೇವಲ 1.5% ಇದ್ದರೂ ಅವರು ಸುಮಾರು 6% ತೆರಿಗೆ ಪಾವತಿಸುತ್ತಾರೆ ಎಂದು ಇಂಡಿಯಾಸ್ಪೋರಾ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಸಂಜೀವ್‌ ಜೋಶಿಪುರಾ ತಿಳಿಸಿದ್ದಾರೆ.

ಅಮೆರಿಕದ 60% ಹೋಟೆಲ್‌ಗಳು ಭಾರತೀಯ ವಲಸಿಗರ ಮಾಲೀಕತ್ವದಲ್ಲಿದ್ದು, ಸುಮಾರು 40 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಿವೆ. ಭಾರತೀಯ ಮೂಲದ ವಿಜ್ಞಾನಿಗಳು ಅಮೆರಿಕದ ಒಟ್ಟು ಪೇಟೆಂಟ್‌ಗಳಲ್ಲಿ ಸುಮಾರು 10% ಕೊಡುಗೆ ನೀಡುತ್ತಾರೆ ಹಾಗೂ ಭಾರತೀಯ ಮೂಲದ ವೈದ್ಯರು ಸುಮಾರು 30% ಅಮೆರಿಕನ್‌ ರೋಗಿಗಳಿಗೆ ಸೇವೆ ನೀಡುತ್ತಿದ್ದಾರೆ ಎಂದು ಅವರು ಹೇಳಿದರು. ಹೊಸ ನಿಯಮಗಳಿಂದ ಹೆಚ್ಚುವರಿ ವೆಚ್ಚ, ಕುಟುಂಬಗಳಿಂದ ತಾತ್ಕಾಲಿಕ ದೂರವಾಗುವಿಕೆ ಮತ್ತು ಇತರ ಸಮಸ್ಯೆಗಳು ಉಂಟಾಗಬಹುದು ಎಂದು ಅವರು ಎಚ್ಚರಿಸಿದರು.

ಇದರ ವಿರುದ್ಧ ಕಾಂಗ್ರೆಸ್‌‍ ಸದಸ್ಯರಾದ ಗ್ರೇಸ್‌‍ ಮೆಂಗ್‌‍, ಡ್ಯಾನ್‌ ಗೋಲ್‌್ಡಮನ್‌‍, ಗ್ರೆಗ್‌ ಸ್ಟಾಂಟನ್‌ ಮತ್ತು ಜೋಕ್ವಿನ್‌ ಕ್ಯಾಸ್ಟ್ರೊ ಸೇರಿದಂತೆ ಹಲವು ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದು, ಇದು ಕಾನೂನುಬದ್ಧ ವಲಸಿಗರ ಮೇಲೆ ಅನ್ಯಾಯದ ಹೊರೆ ಎಂದು ಹೇಳಿದ್ದಾರೆ. ವಲಸೆ ಅಧ್ಯಯನ ತಜ್ಞ ಡೇವಿಡ್‌ ಜೆ. ಬಿಯರ್‌ ಕೂಡ ಈ ನೀತಿ ಅಮೆರಿಕದ ಪ್ರತಿಭಾವಂತ ವಲಸಿಗರನ್ನು ಇತರ ದೇಶಗಳತ್ತ ತಳ್ಳುವ ಅಪಾಯವಿದೆ ಎಂದು ಎಚ್ಚರಿಸಿದ್ದಾರೆ.

RELATED ARTICLES

Latest News