ಬೆಂಗಳೂರು, ಮೇ 26- ನಾಯಕತ್ವ ಬದಲಾವಣೆ ಗೊಂದಲ, ಸಂಪುಟ ಪುನರ್‌ರಚನೆ, ವಿಧಾನ ಪರಿಷತ್ ಹಾಗೂ ರಾಜ್ಯಸಭೆ ಸದಸ್ಯರ ಆಯ್ಕೆ ಕುರಿತಂತೆ ದೆಹಲಿಯ ಎಐಸಿಸಿ ಕಚೇರಿ ಇಂದಿರಾ ಭವನದಲ್ಲಿ ನಡೆದ ಸರಣಿ ಸಭೆಗಳು ಕ್ಷಣಕ್ಷಣಕ್ಕೂ ಕುತೂಹಲ ಕೆರಳಿಸಿ, ತುದಿಗಾಲಲ್ಲಿ ನಿಲ್ಲುವಂತೆ ಮಾಡಿದ್ದವು.
ರಾಜ್ಯರಾಜಕಾರಣದಲ್ಲಿ ಮಹತ್ವದ ಘಟ್ಟವೆಂದು ಪರಿಗಣಿಸಲಾದ ಈ ಸಭೆಗಳಲ್ಲಿ ಆಯ್ದ ನಾಯಕರೂ ಮಾತ್ರ ಭಾಗವಹಿಸಿದ್ದು, ದೆಹಲಿಯಲ್ಲಿ ಡಜನ್ ಗಟ್ಟಲೇ ನಾಯಕರಿದ್ದರು. ಸಭೆ ನಡೆಯುತ್ತಿದ್ದ ಜಾಗಕ್ಕೆ ಯಾರಿಗೂ ಪ್ರವೇಶ ಇರಲಿಲ್ಲ. ಮೊದಲ ಸುತ್ತಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ,
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್, ರಾಜ್ಯ ಉಸ್ತುವಾರಿ ನಾಯಕ ರಣದೀಪ್‌ಸಿಂಗ್ ಸುರ್ಜೇವಾಲ ಅವರು ಮುಚ್ಚಿದ ಕೋಣೆಯಲ್ಲಿ ರಹಸ್ಯ ಸಭೆ ನಡೆಸಿದರು.
ಸುಮಾರು 2 ಗಂಟೆಗಳ ಕಾಲ ನಡೆದ ಈ ಸಭೆ ಕರ್ನಾಟಕದಲ್ಲಿ ಮುಖ್ಯಮಂತ್ರಿಯ ಭವಿಷ್ಯವನ್ನು ನಿರ್ಧರಿಸುವ ಮಹತ್ವದ ಮಾತುಕತೆಗೆ ವೇದಿಕೆಯಾಗಿತ್ತು. ಡಿ.ಕೆ.ಶಿವಕುಮಾರ್ ದೆಹಲಿಯಲ್ಲೇ ಇದ್ದರೂ ಹೈಕಮಾಂಡ್ ನಾಯಕರು ಸಿದ್ದರಾಮಯ್ಯ ಅವರ ಜೊತೆಗೆ ಮಾತ್ರ ಪ್ರತ್ಯೇಕ ಚರ್ಚೆ ನಡೆಸಿರುವುದು ಅಚ್ಚರಿ ಮೂಡಿಸಿದೆ.
ಮೊದಲ ಸುತ್ತಿನ ಸಭೆಯಲ್ಲಿ ವಿಧಾನ ಪರಿಷತ್ತಿನ 7 ಹಾಗೂ ರಾಜ್ಯ ಸಭೆಯ 4 ಸ್ಥಾನಗಳಿಗೆ ಜೂನ್ 18ರಂದು ನಡೆಯುವ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಚರ್ಚೆ ನಡೆದಿದೆ ಎನ್ನಲಾಗಿದೆ.ಇದೇ ವೇಳೇ ಸಿದ್ದರಾಮಯ್ಯ ಅವರ ಜೊತೆ ನಾಯಕತ್ವ ಕುರಿತಂತೆ ಹೈಕಮಾಂಡ್ ನಾಯಕರು ಚರ್ಚೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೊದಲ ಸುತ್ತಿನ ಸಭೆಯ ಬಳಿಕ ಸಿದ್ದರಾಮಯ್ಯ ಅವರು ಹೊರ ಬಂದು ಪ್ರತ್ಯೇಕ ಕೊಠಡಿಯಲ್ಲಿ ಕುಳಿತಿದ್ದರು. ವರಿಷ್ಠ ನಾಯಕರಾದ ಖರ್ಗೆ, ರಾಹುಲ್ ಗಾಂಧಿ, ವೇಣುಗೋಪಾಲ್ ಮತ್ತು ಸುರ್ಜೇವಾಲ ತಮಲೇ ಮಾತುಕತೆ ನಡೆಸಿದರು. ಈ ವೇಳೆ ಡಿ.ಕೆ.ಶಿವಕುಮಾರ್ ಮತ್ತೊಂದು ಕೊಠಡಿಯಲ್ಲಿ ಪ್ರತ್ಯೇಕವಾಗಿ ಕುಳಿತಿದ್ದರು.
ನಂತರ ಡಿ.ಕೆ.ಶಿವಕುಮಾರ್ ಅವರ ಜೊತೆ ಚರ್ಚೆ ನಡೆಯುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ ಒಂದೇ ದಿನದಲ್ಲಿ ಎಲ್ಲವೂ ಬಗೆ ಹರಿಯುತ್ತದೆ ಎಂಬ ನಿರೀಕೆ್ಷಗಳಿಲ್ಲ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿದಂತೆ ಪ್ರಮುಖ ನಾಯಕರ ಜೊತೆ ವರಿಷ್ಠರು ಪ್ರತ್ಯೇಕ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ವರದಿ ಸಲ್ಲಿಕೆ:
ಮಹತ್ವದ ಬೆಳವಣಿಗೆಯಲ್ಲಿ ರಣದೀಪ್‌ಸಿಂಗ್ ಸುರ್ಜೇವಾಲ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಿಂದಾಗುವ ಪರಿಣಾಮಗಳು, ಜಾತಿ ಸಮೀಕರಣ, ಜನರು ಹಾಗೂ ಜನ ಪ್ರತಿನಿಧಿಗಳ ಅಭಿಪ್ರಾಯ, ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮುಂದುವರಿಯಬೇಕೆ? ಅಥವಾ ಬದಲಾಗಬೇಕೆ? ಎಂಬೆಲ್ಲಾ ಮಾಹಿತಿಗಳನ್ನು ಅಧ್ಯಯನ ನಡೆಸಿ ಹೈಕಮಾಂಡ್‌ಗೆ ವರದಿ ಸಲ್ಲಿಸಿದ್ದಾರೆ.
ಈ ಬಗ್ಗೆ ಸಭೆಯಲ್ಲಿ ಸುಧೀರ್ಘ ಚರ್ಚೆಗಳಾಗಿದ್ದು, ಒಂದು ವೇಳೆ ಸಿದ್ದರಾಮಯ್ಯ ಅವರನ್ನು ಬದಲಾಯಿಸಿದರೆ ಮುಂದಿನ ಮುಖ್ಯಮಂತ್ರಿಯಾಗಲು ಯಾರು ಸೂಕ್ತ? ಎಂಬ ಕುರಿತು ವಿಶ್ಲೇಷಣೆಗಳಾಗಿವೆ. ಅಧಿಕಾರ ಬಿಟ್ಟುಕೊಡುವ ಬಗ್ಗೆ ಪಕ್ಷದ ವರಿಷ್ಠರು ಸಿದ್ದರಾಮಯ್ಯ ಅವರ ಅಭಿಪ್ರಾಯ ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಿದ್ದರಾಮಯ್ಯ ಅವರು ನೇರವಾಗಿ ಯಾವುದೇ ಅಭಿಪ್ರಾಯ ಹೇಳದೆ ಹೈಕಮಾಂಡ್ ಮಾತಿಗೆ ಬದ್ಧರಾಗಿರುವುದಾಗಿ ತಿಳಿಸಿದ್ದಾರೆ ಎನ್ನಲಾಗುತ್ತಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಾವು ರಾಜ್ಯ ರಾಜಕಾರಣಕ್ಕೆ ಮರಳುವುದಿಲ್ಲ ಎಂಬ ಸ್ಪಷ್ಟನೆ ನೀಡಿದ್ದರೂ ಕೂಡ, ಪ್ರಸ್ತುತ ಸನ್ನಿವೇಶದಲ್ಲಿ ಸಂಭವನೀಯ ಮುಖ್ಯಮಂತ್ರಿ ಪಟ್ಟಿಯಲ್ಲಿ ಖರ್ಗೆ ಅವರ ಹೆಸರು ಚರ್ಚೆಯಲ್ಲಿದೆ.
ಸಿದ್ದರಾಮಯ್ಯ ಅವರು ದೆಹಲಿಗೆ ತಮ ಜೊತೆ ಪರಮೇಶ್ವರ್ ಅವರನ್ನು ಕರೆದುಕೊಂಡು ಹೋಗಿರುವುದನ್ನು ನೋಡಿದರೆ, ನಾಯಕತ್ವ ಬದಲಾವಣೆ ಅನಿವಾರ್ಯವಾದರೆ ಪರಮೇಶ್ವರ್ ಹೆಸರನ್ನು ಮುನ್ನಲೆಗೆ ತರುವ ವ್ಯವಸ್ಥಿತ ಕಾರ್ಯತಂತ್ರ ನಡೆಸಿದಂತೆ ಕಂಡು ಬರುತ್ತಿದೆ.
ಸಚಿವ ಸಂಪುಟ ಪುನರ್‌ರಚನೆ ವಿಚಾರವಾಗಿ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ಒಮತದ ಅಭಿಪ್ರಾಯಗಳಿಲ್ಲ. ಸಿದ್ದರಾಮಯ್ಯ ಅವರು ಸಂಪುಟ ಪುನರ್‌ರಚನೆಯಾಗಬೇಕು ಎಂದು ಹೇಳುತ್ತಿರುವುದರಿಂದ ಹಲವಾರು ಶಾಸಕರು ಲಾಬಿ ನಡೆಸಲು ದೆಹಲಿಯಲ್ಲಿ ಠಿಕಾಣಿ ಹೂಡಿದ್ದಾರೆ. ಜೊತೆಗೆ ವಿಧಾನ ಪರಿಷತ್ ಮತ್ತು ರಾಜ್ಯಸಭೆಯಲ್ಲಿ ಸ್ಥಾನ ಗಿಟ್ಟಿಸಲು ಕೆಲವು ನಾಯಕರು ದೆಹಲಿಯಲ್ಲಿ ಹಿರಿಯ ಮುಖಂಡರ ಹಿಂದೆ-ಮುಂದೆ ಸುತ್ತುತ್ತಿದ್ದಾರೆ.
ಸಿಎಂ, ಡಿಸಿಎಂ ಭೇಟಿ:
ದೆಹಲಿಯಲ್ಲಿ ವರಿಷ್ಠರ ಜೊತೆಗಿನ ಹೈ ವೊಲ್ಟೇಜ್ ಮೀಟಿಂಗ್ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪ್ರತ್ಯೇಕವಾಗಿ ಸಭೆ ನಡೆಸಿ ಚರ್ಚಿಸಿದ್ದಾರೆ. ಇದು ತೀವ್ರ ಕುತೂಹಲ ಕೆರಳಿಸಿದೆ. ಹೈಕಮಾಂಡ್ ಬುಲಾವ್ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ತಮ ಆಪ್ತ ಸಚಿವರ ಜೊತೆ ದೆಹಲಿಗೆ ತೆರಳಿದರು. ಡಿ.ಕೆ.ಶಿವಕುಮಾರ್ ಕೂಡ ಪ್ರತ್ಯೇಕ ವಿಮಾನದಲ್ಲಿ ದೆಹಲಿಗೆ ಭೇಟಿ ನೀಡಿದರು.
ಆದರೆ ಇಂದು ಬೆಳಗ್ಗೆ ಡಿ.ಕೆ.ಶಿವಕುಮಾರ್ ದೆಹಲಿಯ ತಮ ನಿವಾಸದಿಂದ ಕರ್ನಾಟಕ ಭವನದಲ್ಲಿ ತಂಗಿದ್ದ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ತೆರಳಿದರು. ಆದರೆ ಸಮಯದ ಹೊಂದಾಣಿಕೆ ಕೊರತೆಯಿಂದ ಇಬ್ಬರು ಪರಸ್ಪರ ಭೇಟಿಯಾಗಲು ಸಾಧ್ಯವಾಗಲಿಲ್ಲ. ಅಲ್ಲಿಂದ ಡಿ.ಕೆ.ಶಿವಕುಮಾರ್ ಎಐಸಿಸಿ ಕಚೇರಿಗೆ ಆಗಮಿಸಿ ಅಲ್ಲಿ ಸಿದ್ದರಾಮಯ್ಯ ಅವರ ಜೊತೆ ಸಂದರ್ಶಕರ ಕೊಠಡಿಯಲ್ಲಿ ಪ್ರತ್ಯೇಕವಾಗಿ 10 ನಿಮಿಷಗಳ ಕಾಲ ಚರ್ಚೆ ನಡೆಸಿದ್ದಾರೆ. ಇದು ಮತ್ತಷ್ಟು ಬೆಳವಣಿಗೆಗಳಿಗೆ ಕಾರಣವಾಯಿತು.
ಸಚಿವ ಸಂಪುಟ ಪುನರ್‌ರಚನೆ ಅಥವಾ ನಾಯಕತ್ವ ಬದಲಾವಣೆ ಭಾರೀ ಚರ್ಚೆಯ ವಿಷಯಗಳಾಗಿವೆ. ಇಂದಿನ ಸಭೆಯ ಸಂದರ್ಭದಲ್ಲಿ ರಾಜ್ಯದಿಂದ ಆಗಮಿಸಿದ ಸಚಿವರೂ ಸೇರಿದಂತೆ ಯಾವ ನಾಯಕರನ್ನು ರಹಸ್ಯ ಸಭೆ ನಡೆಸುತ್ತಿದ್ದ ಸ್ಥಳಕ್ಕೆ ಬಿಟ್ಟಿರಲಿಲ್ಲ. ಎಐಸಿಸಿ ಕೇಂದ್ರ ಕಚೇರಿಗೆ ಆಗಮಿಸಿದ ಸಿದ್ದರಾಮಯ್ಯ ಅವರನ್ನು ರಣದೀಪ್‌ಸಿಂಗ್ ಸುರ್ಜೇವಾಲ, ಕೆ.ಸಿ.ವೇಣುಗೋಪಾಲ್ ಅವರು ಹಸ್ತಲಾಘವ ನೀಡಿ ಸ್ವಾಗತಿಸಿದರು. ಬಳಿಕ ಸಭೆಗಳು ನಡೆದವು.
