Homeಅಂತಾರಾಷ್ಟ್ರೀಯಅಮೆರಿಕ ವಾಯುದಾಳಿ ಬೆನ್ನಲ್ಲೇ ಬಹರೈನ್‌, ಕುವೈತ್‌ ನೆಲೆಗಳ ಮೇಲೆ ಇರಾನ್ ಪ್ರತಿದಾಳಿ

ಅಮೆರಿಕ ವಾಯುದಾಳಿ ಬೆನ್ನಲ್ಲೇ ಬಹರೈನ್‌, ಕುವೈತ್‌ ನೆಲೆಗಳ ಮೇಲೆ ಇರಾನ್ ಪ್ರತಿದಾಳಿ

US and Iran exchange strikes across Middle East for second day in a row

ದುಬೈ,ಜೂ.11-ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಎಚ್ಚರಿಕೆ ನೀಡಿದ ಬೆನ್ನಲ್ಲೇ,ಇಂದು ಮುಂಜಾನೆ ಇರಾನ್‌ ಮೇಲೆ ಎರಡನೇ ಸುತ್ತಿನ ವಾಯುದಾಳಿಗಳನ್ನು ನಡೆದಿದೆ. ಇದಕ್ಕೆ ಪ್ರತಿಯಾಗಿ ಇರಾನ್‌ ಸೇನೆ ಅಮೆರಿಕ ನೆಲೆಗಳಿರುವ ಬಹರೈನ್‌, ಕುವೈತ್‌ ಮತ್ತು ಜೋರ್ಡನ್‌ ಮೇಲೆ ದಾಳಿಗಳನ್ನು ನಡೆಸಿದೆ.

ಯುದ್ಧ ಅಂತ್ಯಗೊಳಿಸುವ ನಿಟ್ಟಿನ ಮಾತುಕತೆಗಳು ಮತ್ತೆ ಸ್ಥಗಿತಗೊಂಡಿರುವಂತೆಯೇ ಈ ಬೆಳವಣಿಗೆ ನಡೆದಿದೆ. ಮತ್ತೊಂದೆಡೆ, ಜಾಗತಿಕ ಇಂಧನ ಪೂರೈಕೆಗೆ ಮಹತ್ವದ ಮಾರ್ಗವಾಗಿರುವ ಹೋರ್ಮುಜ್‌ ಜಲಸಂಧಿಯ ಮೇಲಿನ ತನ್ನ ಹಿಡಿತವನ್ನು ಮುಂದುವರಿಸುವುದಾಗಿ ಇರಾನ್‌ ಪಟ್ಟು ಹಿಡಿದಿದ್ದು, ಇದರಿಂದ ತೈಲ ಬೆಲೆಗಳು ಮತ್ತಷ್ಟು ಏರಿಕೆಯಾಗಿವೆ.

ಕಳೆದ ಎರಡು ತಿಂಗಳ ಅಸ್ಥಿರ ಕದನ ವಿರಾಮದ ಅವಧಿಯಲ್ಲಿ ಈ ವಾರ ಮೂರನೇ ಬಾರಿಗೆ ಉಭಯ ದೇಶಗಳ ನಡುವೆ ಪ್ರತಿದಾಳಿ ನಡೆದಂತಾಗಿದೆ.ಯುದ್ಧಕ್ಕೆ ಅಂತ್ಯ ಹಾಡುವ ಒಪ್ಪಂದಕ್ಕೆ ಸಹಿ ಹಾಕುವಂತೆ ಟ್ರಂಪ್‌ ಇರಾನ್‌ಗೆ ಒತ್ತಾಯಿಸಿದ್ದು, ಕೆಲವೇ ದಿನಗಳಲ್ಲಿ ಒಪ್ಪಂದ ಸಾಧ್ಯವಾಗಬಹುದು ಎಂಬ ಆಶಾವಾದವನ್ನೂ ವ್ಯಕ್ತಪಡಿಸಿದ್ದರು.

ಆದರೆ, ವಿಶ್ವಸಂಸ್ಥೆಯಲ್ಲಿನ ಇರಾನ್‌ ರಾಯಭಾರಿ ಅಮೀರ್‌ ಸಯೀದ್‌ ಇರವಾನಿ, ಬೆದರಿಕೆ ಮತ್ತು ಒತ್ತಡದ ನಡುವೆಯೇ ಇರಾನ್‌ ಎಂದಿಗೂ ಮಾತುಕತೆ ನಡೆಸಿಲ್ಲ. ಮುಂದೆಯೂ ಒತ್ತಡಕ್ಕೆ ಮಣಿಯುವುದಿಲ್ಲ ಎಂದು ಭದ್ರತಾ ಮಂಡಳಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಆದಾಗ್ಯೂ, ಉಭಯ ರಾಷ್ಟ್ರಗಳೂ ತಮ ಪಾಲಿಗೆ ಗೆಲುವಿನ ಚಿತ್ರಣ ನೀಡುವ ರೀತಿಯಲ್ಲಿ ಸಂಘರ್ಷಕ್ಕೆ ತೆರೆ ಎಳೆಯುವ ಮಾರ್ಗವನ್ನು ಹುಡುಕುತ್ತಿರುವಂತೆ ಕಾಣುತ್ತಿದೆ. ಭಾರೀ ಬಾಂಬ್‌ ದಾಳಿಗಳ ನಡುವೆಯೂ ಇರಾನ್‌ ತನ್ನ ಸ್ಥೈರ್ಯವನ್ನು ಪ್ರದರ್ಶಿಸಿದೆ. ಜಾಗತಿಕ ತೈಲ ಮತ್ತು ನೈಸರ್ಗಿಕ ಅನಿಲ ಸಾಗಣೆಗೆ ಪ್ರಮುಖವಾಗಿರುವ ಹೋರ್ಮುಜ್‌ ಜಲಸಂಧಿಯನ್ನು ಪರಿಣಾಮಕಾರಿಯಾಗಿ ಮುಚ್ಚುವ ಸಾಮರ್ಥ್ಯವೇ ತನ್ನ ಪ್ರಮುಖ ಮಾತುಕತೆ ಅಸ್ತ್ರವೆಂದು ಅದು ನಂಬಿದೆ.

ಇದೇ ವೇಳೆ, ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರು ಇರಾನ್‌ನ ಧಾರ್ಮಿಕ ಆಡಳಿತದ ಪತನ, ಅದರ ಅಣು ಕಾರ್ಯಕ್ರಮದ ಸಂಪೂರ್ಣ ನಿರ್ಮೂಲನೆ ಹಾಗೂ ಲೆಬನಾನ್‌ನ ಹಿಜ್ಬುಲ್ಲಾ ಸಂಘಟನೆಯ ನಾಶದಂತಹ ಗುರಿಗಳನ್ನು ಮುಂದುವರಿಸುತ್ತಿರುವುದು ರಾಜಿ ಪ್ರಯತ್ನಗಳನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ.

ಅಮೆರಿಕದ ಸೆಂಟ್ರಲ್‌ ಕಮಾಂಡ್‌‍, ಇರಾನ್‌ನ ವಿವಿಧ ನಗರಗಳ ಮೇಲೆ ನಡೆಸಿದ ಹೊಸ ವಾಯುದಾಳಿ ಕಾರ್ಯಾಚರಣೆ ಪೂರ್ಣಗೊಂಡಿದೆ ಎಂದು ತಿಳಿಸಿದೆ.ಇರಾನ್‌ನ ನಿರಂತರ ಮತ್ತು ಅನಗತ್ಯ ಆಕ್ರಮಣಗಳಿಗೆ ಪ್ರತಿಕ್ರಿಯೆಯಾಗಿ ಈ ದಾಳಿಗಳನ್ನು ನಡೆಸಲಾಗಿದೆ. ಇರಾನ್‌ನ ಸೇನಾ ನಿಗಾ ವ್ಯವಸ್ಥೆಗಳು, ಸಂವಹನ ಜಾಲ ಹಾಗೂ ವಾಯು ರಕ್ಷಣಾ ತಾಣಗಳನ್ನು ಗುರಿಯಾಗಿಸಲಾಗಿದೆ ಎಂದು ಅದು ಹೇಳಿದೆ.

ಈ ದಾಳಿಗಳ ಸ್ಫೋಟದ ಶಬ್ದಗಳು ಇರಾನ್‌ ರಾಜಧಾನಿ ತೆಹ್ರಾನ್‌ ಸೇರಿದಂತೆ ಹೋರ್ಮುಜ್‌ ಜಲಸಂಧಿಯ ಸಮೀಪದ ಬಂದರ್‌ ಅಬ್ಬಾಸ್‌‍ ಹಾಗೂ ದಕ್ಷಿಣ ಭಾಗದ ಹಲವು ಪ್ರದೇಶಗಳಲ್ಲಿ ಕೇಳಿಬಂದಿವೆ.

ಇದಕ್ಕೆ ಪ್ರತಿಯಾಗಿ ಇರಾನ್‌ ಬಹರೈನ್‌‍, ಕುವೈತ್‌ ಮತ್ತು ಜೋರ್ಡನ್‌ ಮೇಲೆ ಕ್ಷಿಪಣಿ ದಾಳಿಗಳನ್ನು ನಡೆಸಿದೆ. ಕುವೈತ್‌ ತನ್ನ ವಾಯುಪ್ರದೇಶವನ್ನು ತಾತ್ಕಾಲಿಕವಾಗಿ ಮುಚ್ಚಿದ್ದು, ವಿಮಾನಗಳನ್ನು ಬೇರೆ ವಿಮಾನ ನಿಲ್ದಾಣಗಳಿಗೆ ತಿರುಗಿಸಲಾಗಿದೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ ತಿಳಿಸಿದೆ. ಇರಾನ್‌ನ ದುಷ್ಕೃತ್ಯಪೂರ್ಣ ದಾಳಿಗಳು ಹಾಗೂ ನಾಗರಿಕ ವಿಮಾನ ಸಂಚಾರಕ್ಕೆ ಉಂಟಾಗಬಹುದಾದ ಅಪಾಯವನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕುವೈತ್‌ ಹೇಳಿದೆ.

ಇತ್ತೀಚಿನ ದಿನಗಳಲ್ಲಿ ಕುವೈತ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೂ ಇರಾನ್‌ ದಾಳಿ ನಡೆಸಿದ್ದು, ಒಬ್ಬರು ಮೃತಪಟ್ಟರೆ ಹಲವರು ಗಾಯಗೊಂಡಿದ್ದರು.ಮುಂಜಾನೆ ಲೆಬನಾನ್‌ನಿಂದ ಕ್ಷಿಪಣಿ ಅಥವಾ ರಾಕೆಟ್‌ ದಾಳಿ ಸಂಭವಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಉತ್ತರ ಭಾಗದ ನಿವಾಸಿಗಳು ಸುರಕ್ಷಿತ ಆಶ್ರಯ ಪಡೆಯುವಂತೆ ಇಸ್ರೇಲ್‌ ಎಚ್ಚರಿಕೆ ನೀಡಿದೆ.

ಅದೇ ವೇಳೆ, ಜೋರ್ಡನ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿ, ಜೋರ್ಡನ್‌ ವಾಯುಪ್ರದೇಶದಲ್ಲಿ ಕ್ಷಿಪಣಿ, ಡ್ರೋನ್‌ ಅಥವಾ ರಾಕೆಟ್‌ಗಳು ಸಂಚರಿಸುತ್ತಿರುವ ವರದಿಗಳಿವೆ ಎಂದು ಎಚ್ಚರಿಸಿದೆ.ಕಳೆದ ತಿಂಗಳಿಂದ ಅಮೆರಿಕ ಸೇನೆ, ಇರಾನ್‌ನ ನಿಯಂತ್ರಣವನ್ನು ತಪ್ಪಿಸಿ ಹೋರ್ಮುಜ್‌ ಜಲಸಂಧಿ ಮೂಲಕ ತೈಲ ಸಾಗಣೆ ನಡೆಸಲು ರಹಸ್ಯ ಕಾರ್ಯಾಚರಣೆ ಕೈಗೊಂಡಿದೆ ಎಂದು ಟ್ರಂಪ್‌ ಹೇಳಿದ್ದಾರೆ.

ಇರಾನ್‌ನ ರಾಡಾರ್‌ ವ್ಯವಸ್ಥೆಗಳನ್ನು ನಾಶಪಡಿಸಿರುವ ಹಿನ್ನೆಲೆಯಲ್ಲಿ, ರಾತ್ರಿ ವೇಳೆ ಹಡಗುಗಳು ಸುರಕ್ಷಿತವಾಗಿ ಸಾಗುತ್ತಿವೆ ಎಂದು ಅವರು ತಿಳಿಸಿದ್ದಾರೆ.ಈ ಮೂಲಕ 100 ಮಿಲಿಯನ್‌ ಬ್ಯಾರೆಲ್‌ಗಿಂತ ಹೆಚ್ಚು ತೈಲವನ್ನು ಇರಾನ್‌ನ ನಿರ್ಬಂಧದಿಂದ ತಪ್ಪಿಸಿ ಸಾಗಿಸಲಾಗಿದೆ ಎಂದು ಟ್ರಂಪ್‌ ಹೇಳಿದ್ದಾರೆ. ಆದರೆ, ಈ ಅಂಕಿ-ಅಂಶಕ್ಕೆ ತಕ್ಷಣದ ಸ್ವತಂತ್ರ ದೃಢೀಕರಣ ಲಭ್ಯವಾಗಿಲ್ಲ. ಯುದ್ಧಕ್ಕೂ ಮುನ್ನ ಐದು ದಿನಗಳಲ್ಲಿ ಸಾಗಣೆಯಾಗುತ್ತಿದ್ದ ತೈಲದ ಪ್ರಮಾಣಕ್ಕೆ ಇದು ಸಮನಾಗಿದೆ.

RELATED ARTICLES

Latest News