ಕೊಚ್ಚಿ, ಜೂನ್ 18: ನಕಲಿ ದಾಖಲೆಗಳನ್ನು ಬಳಸಿ ಅಕ್ರಮ ಅಂಗಾಂಗ ದಾನಕ್ಕೆ ನೆರವಾಗುತ್ತಿದ್ದ ಆರೋಪದ ಜಾಲಕ್ಕೆ ಸಂಬಂಧಿಸಿದ ಹಣ ಅಕ್ರಮ ರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ (ಇಡಿ)ಇಂದು ಕೇರಳದ ವಿವಿಧ ಆಸ್ಪತ್ರೆಗಳು ಹಾಗೂ ನಿವಾಸಗಳ ಮೇಲೆ ದಾಳಿ ನಡೆಸಿದೆ. ಅಧಿಕಾರಿಗಳ ಪ್ರಕಾರ, ಕೊಚ್ಚಿ, ತಿರುವನಂತಪುರಂ ಹಾಗೂ ಕೊಟ್ಟಾಯಂ ಜಿಲ್ಲೆಗಳಲ್ಲಿರುವ ಆಸ್ಪತ್ರೆಗಳು ಮತ್ತು ನಿವಾಸಗಳು ಸೇರಿದಂತೆ ಒಟ್ಟು ಐದು ಸ್ಥಳಗಳಲ್ಲಿ ಮುಂಜಾನೆ ಶೋಧ ಕಾರ್ಯಾಚರಣೆ ಆರಂಭಿಸಲಾಯಿತು.
ಇಡಿ ಮೂಲಗಳ ಪ್ರಕಾರ, ಕಳೆದ ಕೆಲವು ರ್ಷಗಳಿಂದ ಅಕ್ರಮ ಅಂಗಾಂಗ ದಾನ ವ್ಯವಸ್ಥೆ ನಡೆಸುತ್ತಿದ್ದ ಜಾಲದ ವಿರುದ್ಧ ಕೇರಳದ ವಿವಿಧ ಜಿಲ್ಲೆಗಳಲ್ಲಿ ಪೊಲೀಸರು ದಾಖಲಿಸಿದ್ದ ಹಲವು ಎಫ್ಐಆರ್ಗಳ ಆಧಾರದ ಮೇಲೆ ತನಿಖೆ ಆರಂಭಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಆರೋಪಿಗಳು ಅಂಗಾಂಗ ದಾನಿಗಳು, ಅಂಗಾಂಗ ಸ್ವೀಕರಿಸುವವರು ಹಾಗೂ ಆಸ್ಪತ್ರೆಗಳ ನಡುವೆ ಮಧ್ಯರ್ತಿಗಳಾಗಿ ಕಾರ್ಯನಿರ್ವಹಿಸುತ್ತಿದ್ದು, ಅಂಗಾಂಗ ದಾನ ವ್ಯವಸ್ಥೆ ಕಲ್ಪಿಸಲು ದೊಡ್ಡ ಮೊತ್ತದ ಹಣ ವಸೂಲಿ ಮಾಡುತ್ತಿದ್ದರು ಎಂಬುದು ಬೆಳಕಿಗೆ ಬಂದಿದೆ.
ಈ ಮಾಹಿತಿಯ ಆಧಾರದ ಮೇಲೆ ಇಡಿ ಹಣ ಅಕ್ರಮ ರ್ಗಾವಣೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದೆ. ಪ್ರಮುಖ ಆರೋಪಿ ನಜೀಬ್ ಜೊತೆ ಹಣಕಾಸು ವ್ಯವಹಾರ ನಡೆಸಿರುವ ಶಂಕೆಯಿರುವ ಆಸ್ಪತ್ರೆಗಳ ಮೇಲೂ ಶೋಧ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೊಚ್ಚಿಯಲ್ಲೇ ಮೂರು ಸ್ಥಳಗಳಲ್ಲಿ ದಾಳಿ ನಡೆದಿದ್ದು, ಬೆಳಿಗ್ಗೆ 6 ಗಂಟೆಯಿಂದಲೇ ಏಕಕಾಲದಲ್ಲಿ ಕಾರ್ಯಾಚರಣೆ ಆರಂಭಗೊಂಡಿದೆ. ತನಿಖಾಧಿಕಾರಿಗಳು ಅಂಗಾಂಗ ದಾನಕ್ಕೆ ಸಂಬಂಧಿಸಿದ ಬ್ಯಾಂಕ್ ವಹಿವಾಟುಗಳು ಹಾಗೂ ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
ಪೊಲೀಸ್ ತನಿಖೆಯ ಪ್ರಕಾರ, ಅಂಗಾಂಗ ದಾನ ಪ್ರಕ್ರಿಯೆಯಲ್ಲಿ ಪೊಲೀಸ್ ಇಲಾಖೆ, ಸ್ಥಳೀಯ ಸಂಸ್ಥೆಗಳು, ವೈದ್ಯರು, ಶಾಸಕರು ಹಾಗೂ ಸಂಸದರಿಂದ ಅಗತ್ಯ ಪ್ರಮಾಣಪತ್ರಗಳು ಮತ್ತು ಅನುಮೋದನೆಗಳನ್ನು ಪಡೆಯಬೇಕಾಗುತ್ತದೆ. ಆರೋಪಿಗಳು ಈ ನಿಯಮಗಳನ್ನು ತಪ್ಪಿಸಲು ನಕಲಿ ದಾಖಲೆಗಳನ್ನು ಬಳಸಿದ್ದಾರೆ ಎನ್ನಲಾಗಿದೆ. ಪೊಲೀಸ್ ಎಫ್ಐಆರ್ಗಳ ಪ್ರಕಾರ, ಈ ಜಾಲವು 2023ರ ಆಗಸ್ಟ್ನಿಂದ ಸಕ್ರಿಯವಾಗಿದ್ದು, ಕೊಚ್ಚಿಯ ಎರಡು ಖಾಸಗಿ ಆಸ್ಪತ್ರೆಗಳ ಲೆಟರ್ಹೆಡ್ಗಳು, ಪೊಲೀಸ್ ಕ್ಲಿಯರೆನ್್ಸ ಪ್ರಮಾಣಪತ್ರಗಳು, ಶಾಸಕರು, ಸಂಸದರು ಹಾಗೂ ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿನ ಪತ್ರಗಳನ್ನು ನಕಲಿ ಮಾಡಿರುವ ಆರೋಪವಿದೆ.
ಇದಲ್ಲದೆ, ಹಲವಾರು ಖ್ಯಾತ ವೈದ್ಯರ ಶಿಫಾರಸು ಪತ್ರಗಳನ್ನೂ ಕೃತಕವಾಗಿ ಸೃಷ್ಟಿಸಲಾಗಿದೆ ಎಂದು ಪೊಲೀಸರು ಆರೋಪಿಸಿದ್ದಾರೆ. ಈ ಜಾಲವು ಕೇರಳದಾದ್ಯಂತ ಕರ್ಯನರ್ವಹಿಸುತ್ತಿದ್ದ ಕಾರಣ, ಹಲವು ಜಿಲ್ಲೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಪ್ರಕರಣದ ಪ್ರಮುಖ ಆರೋಪಿ ಕಾಸರಗೋಡು ಮೂಲದ ನಜೀಬ್ನನ್ನು ಪೊಲೀಸರು ಕಳೆದ ತಿಂಗಳು ಉತ್ತರ ಪ್ರದೇಶದಲ್ಲಿ ಬಂಧಿಸಿದ್ದರು. ಇದೀಗ ಇಡಿ ಹಣಕಾಸು ವಹಿವಾಟಿನ ಜಾಡು ಪತ್ತೆಹಚ್ಚಲು ವ್ಯಾಪಕ ತನಿಖೆ ಮುಂದುವರಿಸಿದೆ.
