ಬೆಂಗಳೂರು, ಜೂ.30 – ಕಳೆದ ಮೂರು ವರ್ಷಗಳ ಅವಧಿಯಲ್ಲಿ ನಗರದ ಪ್ರಮುಖ ರಸ್ತೆಗಳ ಅಭಿವೃದ್ಧಿ ಹಾಗೂ ರಸ್ತೆ ಗುಂಡಿಗಳನ್ನು ಮುಚ್ಚುವ ಕಾಮಗಾರಿಗಳಿಗೆ ಒಟ್ಟು 8,825.11 ಕೋಟಿ ರೂ. ಅನುದಾನ ಬಿಡುಗಡೆ ಯಾಗಿದ್ದರೂ, ನಗರದ ರಸ್ತೆಗಳ ದುಸ್ಥಿತಿ ಮುಂದುವರಿದಿರುವ ಹಿನ್ನೆಲೆಯಲ್ಲಿ ಈ ಹಣದ ಬಳಕೆಯ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವಂತೆ ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಅವರು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.
ಕಳೆದ ಮೂರು ವರ್ಷಗಳ ಅವಧಿಯಲ್ಲಿ ಪ್ರಮುಖ ರಸ್ತೆಗಳ ಅಭಿವೃದ್ಧಿಗೆ 8,230.52 ಕೋಟಿ ಹಾಗೂ ರಸ್ತೆ ಗುಂಡಿ ಗಳನ್ನು ಮುಚ್ಚಲು 594.58 ಕೋಟಿ ಸೇರಿದಂತೆ ಒಟ್ಟು 8,825.11 ಕೋಟಿ ವೆಚ್ಚಕ್ಕೆ ಅನುದಾನ ಬಿಡುಗಡೆ ಮಾಡ ಲಾಗಿದೆ. ಇಷ್ಟೊಂದು ದೊಡ್ಡ ಮೊತ್ತ ಖರ್ಚಾಗಿದ್ದರೆ ನಗರದ ರಸ್ತೆಗಳು ಕನಿಷ್ಠ ಹತ್ತು ವರ್ಷ ಬಾಳಿಕೆ ಬರುವಂತೆ ನಿರ್ಮಾಣವಾಗಬೇಕಿತ್ತು. ಆದರೆ ವಾಸ್ತವದಲ್ಲಿ ಹೊಸದಾಗಿ ಅಭಿವೃದ್ಧಿಪಡಿಸಿದ ರಸ್ತೆಗಳೂ ಕೆಲವೇ ತಿಂಗಳಲ್ಲಿ ಹಾಳಾಗುತ್ತಿವೆ ಎಂದು ಅವರು ಆರೋಪಿಸಿದ್ದಾರೆ.
ಕಾಮಗಾರಿಗಳ ಟೆಂಡರ್ ಅನುಮೋದನೆಯಿಂದ ಹಿಡಿದು ಬಿಲ್ ಪಾವತಿವರೆಗಿನ ವಿವಿಧ ಹಂತಗಳಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಕಮಿಷನ್ ನೀಡುವ ಭ್ರಷ್ಟ ವ್ಯವಸ್ಥೆ ಇದೆ ಎಂದು ರಮೇಶ್ ಎನ್.ಆರ್. ಆರೋಪಿಸಿದ್ದಾರೆ.
ಇದರಿಂದ ಗುತ್ತಿಗೆದಾರರು ಕಡಿಮೆ ಗುಣಮಟ್ಟದ ಸಾಮಗ್ರಿಗಳನ್ನು ಬಳಸುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಕಾಮಗಾರಿಗಳ ಗುಣಮಟ್ಟ ಕುಸಿದಿದೆ ಎಂದು ತಿಳಿಸಿದ್ದಾರೆ. ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳ ಸಭೆಗಳಲ್ಲಿ ಕಳಪೆ ಕಾಮಗಾರಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವುದನ್ನು ಉಲ್ಲೇಖಿಸಿರುವ ಅವರು, ಈಗ ಆ ಹೇಳಿಕೆಗಳಿಗೆ ತಕ್ಕಂತೆ ಕಾರ್ಯನಿರ್ವಹಿಸಿ ಕಳೆದ ಮೂರು ವರ್ಷಗಳಲ್ಲಿ ಬಿಡುಗಡೆಯಾದ ಅನುದಾನದ ಬಳಕೆ ಕುರಿತು ಉನ್ನತ ಮಟ್ಟದ ಪಾರದರ್ಶಕ ತನಿಖೆಗೆ ಆದೇಶಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸಂಬಂಧ 1,049 ಪುಟಗಳ ದಾಖಲೆಗಳೊಂದಿಗೆ ಸಚಿವರಿಗೆ ಮನವಿ ಸಲ್ಲಿಸಿರುವುದಾಗಿ ರಮೇಶ್ ತಿಳಿಸಿದ್ದಾರೆ. ಅಲ್ಲದೆ, ಜಿಬಿಎ ಹಾಗೂ ಐದು ನಗರ ಪಾಲಿಕೆಗಳಲ್ಲಿ ಪಾರದರ್ಶಕ ಆಡಳಿತ ಜಾರಿಗೆ ತಂದು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸಿದ್ದಾರೆ.ನಗರದ ಪ್ರಮುಖ ರಸ್ತೆಗಳಲ್ಲಿ ಇನ್ನೂ ರಸ್ತೆ ಗುಂಡಿಗಳ ಸಮಸ್ಯೆ ಮುಂದುವರಿದಿರುವ ಕಾರಣವನ್ನು ಸಮಗ್ರ ತನಿಖೆ ಮೂಲಕ ಬಹಿರಂಗಪಡಿಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ರಮೇಶ್ ಒತ್ತಾಯಿಸಿದ್ದಾರೆ.
