Homeರಾಜ್ಯಮನೆಮನೆಗೆ ತೆರಳಿ ಎಸ್‌‍ಐಆರ್‌ ಅರ್ಜಿ ವಿತರಿಸುವಂತೆ ಬಿಎಲ್‌ಓಗಳಿಗೆ ಖಡಕ್‌ ಸೂಚನೆ

ಮನೆಮನೆಗೆ ತೆರಳಿ ಎಸ್‌‍ಐಆರ್‌ ಅರ್ಜಿ ವಿತರಿಸುವಂತೆ ಬಿಎಲ್‌ಓಗಳಿಗೆ ಖಡಕ್‌ ಸೂಚನೆ

Karnataka SIR

ಬೆಂಗಳೂರು,ಜು.3-ರಾಜ್ಯಾದ್ಯಂತ ನಡೆಯುತ್ತಿರುವ ಮತದಾರರ ವಿಶೇಷ ತೀವ್ರ ಪರಿಷ್ಕರಣೆ (ಎಸ್‌‍ಐಆರ್‌)ಗೆ ಸಂಬಂಧಿಸಿದ ಗಣತಿ ಅರ್ಜಿಗಳನ್ನು ಕಡ್ಡಾಯವಾಗಿ ಮನೆ ಮನೆಗೆ ತೆರಳಿ ಮತದಾರರಿಗೆ ವಿತರಣೆ ಮಾಡಬೇಕೆಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಯವರು ಎಲ್ಲಾ ಬಿಎಲ್‌ಓಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಈ ಸಂಬಂಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು, ಭಾರತೀಯ ಚುನಾವಣಾ ಆಯೋಗದ ಮುಖ್ಯ ಆಯುಕ್ತರು ಹಾಗೂ ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್‌ ಅವರಿಗೆ ಎರಡು ಪುಟಗಳ ಪ್ರತ್ಯೇಕ ಪತ್ರ ಬರೆದು ಎಸ್‌‍ಐಆರ್‌ನಲ್ಲಿ ಉಂಟಾಗಿರುವ ಲೋಪದೋಷಗಳನ್ನು ಸರಿಪಡಿಸಬೇಕೆಂದು ಆಗ್ರಹಿಸಿದ್ದರು.

ಇದಕ್ಕೆ ಸ್ಪಂದಿಸಿರುವ ರಾಜ್ಯ ಮುಖ್ಯ ಚುನಾವಣಾಧಿಕಾರಿ, ಭಾರತೀಯ ಚುನಾವಣಾ ಆಯೋಗದ ನಿರ್ದೇಶನದಂತೆ ಎಸ್‌‍ಐಆರ್‌ ಪ್ರಕ್ರಿಯೆ ಕೈಗೊಳ್ಳಬೇಕೆಂದು ಸೂಚಿಸಿದ್ದಾರೆ. ಈ ಸಂಬಂಧ ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾ ಚುನಾವಣಾ ಅಧಿಕಾರಿಗಳು, ವಿಶೇಷ ಆಯುಕ್ತರು (ಚುನಾವಣೆಗಳು), ಜಿಬಿಎ, ಹೆಚ್ಚುವರಿ ಜಿಲ್ಲಾ ಚುನಾವಣಾ ಅಧಿಕಾರಿಗಳು, ಬಿಬಿಎಂಪಿ ಕೇಂದ್ರ, ಬಿಬಿಎಂಪಿ ಉತ್ತರ ಮತ್ತು ಬಿಬಿಎಂಪಿ ದಕ್ಷಿಣ ಚುನಾವಣಾಧಿಕಾರಿಗಳು, ಬೆಂಗಳೂರು ನಗರ ಜಿಲ್ಲಾಧಿಕಾರಿಗಳು (ಬೆಂಗಳೂರು ಉತ್ತರ, ದಕ್ಷಿಣ ಮತ್ತು ಮಧ್ಯ) ಆಯುಕ್ತರು, ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿಗಳು ಮತ್ತು ಉಪ ಆಯುಕ್ತರುಗಳಿಗೆ ಪತ್ರದ ಮೂಲಕ ಈ ನಿರ್ದೇಶನ ನೀಡಿದ್ದಾರೆ.

ಬಿಎಲ್‌ಓಗಳು ಎಸ್‌‍ಐಆರ್‌ ನಡೆಸುವಾಗ ಕಡ್ಡಾಯವಾಗಿ ಮತದಾರರ ಮನೆಮನೆಗೆ ತೆರಳಿ ಗಣತಿ ಅರ್ಜಿಗಳನ್ನು ವಿತರಿಸುವಂತೆ ಸೂಚಿಸಿದ್ದಾರೆ.ಜೂ.30 ರಿಂದ ರಾಜ್ಯಾದ್ಯಂತ ಎಸ್‌‍ಐಆರ್‌ ಪ್ರಕ್ರಿಯೆ ನಡೆಯುತ್ತಿದೆ. ಕೆಲವೊಂದು ಲೋಪದೋಷಗಳ ಬಗ್ಗೆ ನಮ ಕಚೇರಿಗೆ ದೂರುಗಳು ಬಂದಿದ್ದು, ಕಡ್ಡಾಯವಾಗಿ ಆಯೋಗದ ಸೂಚನೆಗಳನ್ನು ಪಾಲಿಸುವಂತೆ ತಿಳಿಸಿದ್ದಾರೆ.

ಬಿಎಲ್‌ಓಗಳು ಮನೆಗಳಿಗೆ ಭೇಟಿ ನೀಡಿ ಫಾರ್ಮ್‌ಗಳನ್ನು ವಿತರಿಸಬೇಕು. ಆದರೆ ಮನೆಗಳಿಗೆ ಭೇಟಿ ನೀಡಿ ಫಾರ್ಮ್‌ಗಳನ್ನು ನೀಡುತ್ತಿಲ್ಲ ಎಂದು ದೂರುಗಳು ಬಂದಿರುವುದನ್ನು ಗಮನದಲ್ಲಿಟ್ಟುಕೊಂಡು, ಎಲ್ಲಾ ಬಿಎಲ್‌ಓಗಳು ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಗಳ ಪ್ರಕಾರ ಗಣತಿ ಫಾರ್ಮ್‌ಗಳನ್ನು ವಿತರಿಸಲು ಮನೆ-ಮನೆಗೆ ಭೇಟಿ ನೀಡುವಂತೆ ಮತ್ತು ವಿಶೇಷ ತೀವ್ರ ಪರಿಷ್ಕರಣೆಯ ಎಲ್ಲಾ ಅಂಶಗಳ ಕುರಿತು ಆಯೋಗದ ನಿರ್ದೇಶನಗಳು ಮತ್ತು ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದ್ದಾರೆ.
ಇದಲ್ಲದೆ, ಗಣತಿ ಫಾರ್ಮ್‌ಗಳನ್ನು ಭರ್ತಿ ಮಾಡಲು ಕಷ್ಟಪಡುವ ಮತದಾರರು ಅಗತ್ಯ ಸಹಾಯಕ್ಕಾಗಿ ಮತದಾರರ ಸೌಲಭ್ಯ ಕೇಂದ್ರಗಳಿಗೆ ಭೇಟಿ ನೀಡುವ ಆಯ್ಕೆಯನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.

ಪತ್ರ ಬರೆದಿದ್ದ ಶೋಭಾ: ಇನ್ನು ಎಸ್‌‍ಐಆರ್‌ನಲ್ಲಿ ನಡೆಯುತ್ತಿರುವ ಗೊಂದಲಗಳ ಕುರಿತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು, ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ ಕುರಿತು, ಈ ವಿಧಾನವು ಚುನಾಯಿತ ಪ್ರತಿನಿಧಿಗಳು, ಬೂತ್‌ ಮಟ್ಟದ ಅಧಿಕಾರಿಗಳು , ರಾಜಕೀಯ ಕಾರ್ಯಕರ್ತರು ಮತ್ತು ಸಾರ್ವಜನಿಕರಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯ ಸಮಗ್ರತೆ, ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆಯ ಬಗ್ಗೆ ವ್ಯಾಪಕ ಆತಂಕವನ್ನು ಹುಟ್ಟುಹಾಕಿದೆ ಎಂದು ಗಮನ ಸೆಳೆದಿದ್ದರು.

ಭಾರತೀಯ ಚುನಾವಣಾ ಆಯೋಗದ ನಿರ್ದೇಶನಗಳಡಿ ಕಲ್ಪಿಸಲಾದ ಕಡ್ಡಾಯ ಮನೆಮನೆ ಪರಿಶೀಲನೆಯನ್ನು ನಡೆಸುವ ಬದಲು, ಹಲವಾರು ಸ್ಥಳಗಳಲ್ಲಿ, ಸಮುದಾಯ ಭವನಗಳು ಮತ್ತು ಇತರ ಸಾಮಾನ್ಯ ಸ್ಥಳಗಳಲ್ಲಿ ಆಯೋಜಿಸಲಾದ ಶಿಬಿರಗಳ ಮೂಲಕ ಎಸ್‌‍ಐಆರ್‌ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು. ಇದು ಪ್ರತಿಯೊಬ್ಬ ಮತದಾರರನ್ನು ಅವರ ಸಾಮಾನ್ಯ ವಾಸಸ್ಥಳದಲ್ಲಿ ಭೌತಿಕವಾಗಿ ಪರಿಶೀಲಿಸುವ ತೀವ್ರ ಪರಿಷ್ಕರಣೆಯ ಉದ್ದೇಶವನ್ನೇ ಬುಡಮೇಲು ಮಾಡುತ್ತದೆ. ಜೊತೆಗೆ ಮತದಾರರ ಪಟ್ಟಿಗಳ ತಯಾರಿಕೆಯಲ್ಲಿ ಅಕ್ರಮಗಳ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದರು.

ಎಸ್‌‍ಐಆರ್‌ ಪ್ರಕ್ರಿಯೆಯನ್ನು ಕಾರ್ಯಗತಗೊಳಿಸುವಾಗ ಬೂತ್‌ ಮಟ್ಟದ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಆಯೋಗದ ಮಾರ್ಗಸೂಚಿಗಳಿಗೆ ಅನುಸಾರವಾಗಿ ಅವರ ಶಾಸನಬದ್ಧ ಕರ್ತವ್ಯಗಳನ್ನು ನಿರ್ವಹಿಸಲು ಅವರಿಗೆ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ ದೂರುಗಳು ಬಂದಿವೆ. ಬಿಎಲ್‌ಒಗಳಿಗೆ ಸರಿಯಾದ ಕ್ಷೇತ್ರ ಪರಿಶೀಲನೆ ನಡೆಸಲು ಅಧಿಕಾರ ನೀಡುವ ಬದಲು, ರಾಜ್ಯ ಆಡಳಿತ ಯಂತ್ರವು ಎಸ್‌‍ಐಆರ್‌ ಪ್ರಕ್ರಿಯೆಯನ್ನು ದುರ್ಬಲಗೊಳಿಸುವ ಕಾರ್ಯವಿಧಾನಗಳನ್ನು ಅಳವಡಿಸಿಕೊಂಡಿದೆ. ಇದು ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯ ಸ್ವಾತಂತ್ರ್ಯ ಮತ್ತು ವಿಶ್ವಾಸಾರ್ಹತೆಯನ್ನು ಗಂಭೀರವಾಗಿ ಹಾಳು ಮಾಡುತ್ತದೆ ಎಂದು ದೂರಿದ್ದರು.

ರಾಜಕೀಯ ಲಾಭಕ್ಕಾಗಿ ರಾಜ್ಯ ಸರ್ಕಾರವು ನಿಗದಿತ ಎಸ್‌‍ಐಆರ್‌ ಕಾರ್ಯವಿಧಾನವನ್ನು ದುರ್ಬಲಗೊಳಿಸುವ ಮೂಲಕ ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂಬ ಆತಂಕ ಹೆಚ್ಚುತ್ತಿದೆ. ಮನೆಮನೆ ಪರಿಶೀಲನೆಯನ್ನು ಪರಿಣಾಮಕಾರಿಯಾಗಿ ಕೈಬಿಡುವುದರಿಂದ ಅಕ್ರಮ ವಲಸಿಗರು ಮತ್ತು 1950ರ ಜನತಾ ಪ್ರಾತಿನಿಧ್ಯ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಮತದಾರರಾಗಿ ದಾಖಲಾಗಲು ಅರ್ಹರಲ್ಲದ ಇತರ ವ್ಯಕ್ತಿಗಳು ಸೇರಿದಂತೆ ಅನರ್ಹ ವ್ಯಕ್ತಿಗಳ ಸೇರ್ಪಡೆಯ ಗಂಭೀರ ಅಪಾಯ ಉಂಟಾಗುತ್ತದೆ. ಅಂತಹ ವ್ಯಕ್ತಿಗಳ ಯಾವುದೇ ಅಕ್ರಮ ಸೇರ್ಪಡೆಯು ಮತದಾರರ ಪಟ್ಟಿಯ ಶುದ್ಧತೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಚುನಾವಣಾ ಪ್ರಕ್ರಿಯೆಯಲ್ಲಿ ಸಾರ್ವಜನಿಕ ವಿಶ್ವಾಸವನ್ನು ಕುಗ್ಗಿಸುತ್ತದೆ ಎಂದು ಉಲ್ಲೇಖಿಸಿದ್ದರು. ಕರ್ನಾಟಕದಾದ್ಯಂತ ವಿಶೇಷ ತೀವ್ರ ಪರಿಷ್ಕರಣೆಯ ನಡವಳಿಕೆಗೆ ಸಂಬಂಧಿಸಿದ ಆರೋಪಗಳ ಬಗ್ಗೆ ತನಿಖೆ ನಡೆಸಬೇಕೆಂದು ಮುಖ್ಯ ಚುನಾವಣಾ ಆಯುಕ್ತರಿಗೆ ಶೋಭಾ ಕರಂದ್ಲಾಜೆ ಒತ್ತಾಯಿಸಿದ್ದರು.

ಚುನಾವಣಾ ಆಯೋಗವು ಸೂಚಿಸಿದ ಕಾರ್ಯವಿಧಾನವನ್ನು ಕಟ್ಟುನಿಟ್ಟಾಗಿ ಪಾಲಿಸಲು ಕರ್ನಾಟಕದ ಎಲ್ಲಾ ಚುನಾವಣಾ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡಬೇಕೆಂದು ಮತ್ತು ನಡೆಯುತ್ತಿರುವ ಪರಿಷ್ಕರಣಾ ಪ್ರಕ್ರಿಯೆಯ ಸಮಗ್ರತೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯವಿರುವಲ್ಲೆಲ್ಲಾ ಸ್ವತಂತ್ರ ವೀಕ್ಷಕರನ್ನು ನಿಯೋಜಿಸಬೇಕೆಂದು ಮನವಿ ಮಾಡಿದ್ದರು.

RELATED ARTICLES

Latest News