ಶಿವಮೊಗ್ಗ, ಜು.6- ಶರಾವತಿ ಜಲಾನಯನ ಪ್ರದೇಶದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ವಿಶ್ವ ವಿಖ್ಯಾತ ಜೋಗ ಜಲಪಾತದ ವೈಭವ ಮರಳಿಬಂದಿದೆ. ಮುಂಗಾರುಮಳೆ ಕೊರತೆಯಿಂದ ರಾಜ್ಯದ ವಿವಿಧ ಜಲಪಾತಗಳು ವೈಭವವನ್ನು ಕಳೆದುಕೊಂಡಿದ್ದವು. ಆದರೆ ಈಗ ತಡವಾಗಿಯಾದರೂ ಮುಂಗಾರು ಮಳೆ ಪ್ರಾರಂಭವಾಗಿದ್ದು, ಜಲಾಶಯ ಹಾಗೂ ಜಲಪಾತಗಳಿಗೆ ಜೀವಕಳೆ ಬಂದಿದ್ದು, ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿವೆ.
ಅದೇ ರೀತಿ ಜೋಗ ಜಲಪಾತದ ನಾಲ್ಕು ಪ್ರಮುಖ ಧಾರೆಗಳಾದ ರಾಜ, ರಾಣಿ, ರೋರರ್, ರಾಕೆಟ್ ಜಲಪಾತಗಳಲ್ಲೂ ಸಹ ದಿನದಿಂದ ದಿನಕ್ಕೆ ನೀರಿನ ಪ್ರಮಾಣ ಹೆಚ್ಚುತ್ತಿದ್ದು, ಎತ್ತರದಿಂದ ಬಂಡೆಗಳ ಮೇಲೆ ಹಾಲ್ನೊರೆಯಂತೆ ನೀರು ಧುಮಿಕ್ಕುತ್ತಿರುವ ದೃಶ್ಯ ನಯನ ಮನೋಹರವಾಗಿದೆ.
ಕಳೆದ ಕೆಲವು ತಿಂಗಳುಗಳಿಂದ ನೀರಿನ ರಭಸವಿಲ್ಲದೆ ಸೊರಗಿದ್ದ ಜಲಪಾತಗಳಿಗೆ ಮರುಜೀವ ಬಂದಿದ್ದು, ಭೋರ್ಗರೆವ ಶಬ್ದ, ಹಚ್ಚಹಸಿರಾದ ಗಿಡಮರಗಳು ಹಾಗೂ ದಟ್ಟ ಮಂಜಿನ ನಡುವೆ ಮೂಡಿರುವ ಪ್ರಕೃತಿ ಸೌಂದರ್ಯ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿದೆ. ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ, ಮುಂದಿನ ಕೆಲವು ದಿನ ಮಳೆಯಾಗುವ ಸಾಧ್ಯತೆಯಿದ್ದು, ಜೋಗ ಜಲಪಾತದ ನೀರಿನ ಹರಿವು ಇನ್ನಷ್ಟು ಹೆಚ್ಚಳವಾಗಲಿದೆ.
