Homeಅಂತಾರಾಷ್ಟ್ರೀಯಮತ್ತೆ ತೀವ್ರಗೊಂಡ ಇರಾನ್‌ ಯುದ್ಧ : ಭೀಕರ ದಾಳಿ ನಡೆಸಿದ ಅಮೆರಿಕ

ಮತ್ತೆ ತೀವ್ರಗೊಂಡ ಇರಾನ್‌ ಯುದ್ಧ : ಭೀಕರ ದಾಳಿ ನಡೆಸಿದ ಅಮೆರಿಕ

ಟೆಹರಾನ್‌( ಇರಾನ್‌),ಜು.9- ಅಮೆರಿಕ -ಇರಾನ್‌ ನಡುವಿನ ಉದ್ವಿಗ್ನತೆ ದಿನೇದಿನೇ ತೀವ್ರಗೊಳ್ಳುತ್ತಿದ್ದು, ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ ಮತ್ತೊಮೆ ತಲೆದೋರಿದೆ. ಈಗಾಗಲೇ ಇರಾನ್‌ನ ಮೂರು ಪ್ರಮುಖ ಪ್ರದೇಶಗಳ ಮೇಲೆ ದಾಳಿ ನಡೆಸಿದ್ದ ಅಮೆರಿಕ, ಮತ್ತೊಮೆ ಭೀಕರ ವಾಯುದಾಳಿ ನಡೆಸಿ ಪರಿಸ್ಥಿತಿಯನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ.

ಒಂದು ವೇಳೆ ಇರಾನ್‌ ಅಂತಾರಾಷ್ಟ್ರೀಯ ಹಡಗು ಸಾಗಣೆಯನ್ನು ಗುರಿಯಾಗಿಸಿಕೊಂಡರೆ ಅಮೆರಿಕದ ಪ್ರತಿಕ್ರಿಯೆ ಇನ್ನಷ್ಟು ತೀವ್ರವಾಗಿರುತ್ತದೆ ಎಂದೂ ಎಚ್ಚರಿಸಲಾಗಿದೆ. ಬುಶೆಹರ್‌ನಲ್ಲಿರುವ ಪರಮಾಣು ವಿದ್ಯುತ್‌ ಸ್ಥಾವರ ಪ್ರದೇಶ ಹಾಗೂ ಇರಾನ್‌ನ ಚಬಹಾರ್‌ ಪ್ರಾಂತ್ಯಗಳನ್ನು ಗುರಿಯಾಗಿಸಿಕೊಂಡು ಅಮೆರಿಕ ದಾಳಿ ನಡೆಸಿದೆ ಎಂದು ಅಮೆರಿಕದ ಯುಎಸ್‌‍ ಸೆಂಟ್ರಲ್‌ ಕಮಾಂಡ್‌ ದೃಢಪಡಿಸಿದ್ದು, ದಾಳಿಯ ಪರಿಣಾಮ ಇರಾನ್‌ ಭೂಭಾಗದಲ್ಲಿ ಭಾರೀ ಆತಂಕದ ವಾತಾವರಣ ನಿರ್ಮಾಣವಾಗಿದೆ. ಎಚ್ಚರಿಕೆ ಸೈರನ್‌ಗಳನ್ನು ಸಕ್ರಿಯಗೊಳಿಸಲಾಗಿದೆ ಎಂದು ಬಹ್ರೇನ್‌ನ ಆಂತರಿಕ ಸಚಿವಾಲಯ ತಿಳಿಸಿದೆ.

ನಾಗರಿಕರು ಮತ್ತು ನಿವಾಸಿಗಳು ಶಾಂತವಾಗಿರಲು, ಹತ್ತಿರದ ಸುರಕ್ಷಿತ ಸ್ಥಳಕ್ಕೆ ತೆರಳಲು ಮತ್ತು ಅಧಿಕೃತ ಮಾರ್ಗಗಳ ಮೂಲಕ ನೀಡಲಾದ ಸೂಚನೆಗಳನ್ನು ಮಾತ್ರ ಅನುಸರಿಸಲು ಸೂಚನೆ ನೀಡಲಾಗಿದ್ದು, ಏತನಧ್ಯೆ ಭದ್ರತಾ ಬೆದರಿಕೆ ಮಟ್ಟ ಹೆಚ್ಚಾಗಿದೆ. ಪ್ರತಿಯೊಬ್ಬರೂ ತಮ ಮನೆಗಳಲ್ಲಿ ಅಥವಾ ಸುರಕ್ಷಿತ ಸ್ಥಳಗಳಲ್ಲಿ ಉಳಿಯಲು ಮತ್ತು ಭದ್ರತಾ ಸಂಸ್ಥೆಗಳ ಸೂಚನೆಗಳನ್ನು ಅನುಸರಿಸಲು ಮನವಿ ಮಾಡಲಾಗಿದೆ.

ಅಮೆರಿಕಾದ ದಾಳಿಯ ನಂತರ ಬಂದರ್‌ ಅಬ್ಬಾಸ್‌‍, ಕೊನಾರಕ್‌ ಮತ್ತು ಚಾಬಹಾರ್‌ ಸೇರಿದಂತೆ ದಕ್ಷಿಣ ಕರಾವಳಿ ಪ್ರದೇಶಗಳಲ್ಲಿ ಹಲವಾರು ಸ್ಫೋಟಗಳ ಶಬ್ದಗಳು ಕೇಳಿಬಂದವು. ಹಾರ್ಮುಜ್‌ ಜಲಸಂಧಿಯ ಮೂಲಕ ಅಂತಾರಾಷ್ಟ್ರೀಯ ಹಡಗು ಸಾಗಣೆಯನ್ನು ಸುರಕ್ಷಿತವಾಗಿ ಸಾಗಿಸುವುದನ್ನು ಖಚಿತಪಡಿಸಿಕೊಳ್ಳುವುದು ಮತ್ತು ಇರಾನ್‌ನ ಮಿಲಿಟರಿ ಸಾಮರ್ಥ್ಯಗಳನ್ನು ದುರ್ಬಲಗೊಳಿಸುವ ಗುರಿಯನ್ನು ಈ ದಾಳಿಗಳು ಹೊಂದಿವೆ ಎಂದು ಅಮೆರಿಕಾ ಹೇಳಿಕೊಂಡಿದೆ.

ಅಮೆರಿಕದ ದಾಳಿಗೆ ಇರಾನ್‌ ಕೂಡ ತಕ್ಷಣ ಪ್ರತಿಕ್ರಿಯೆ ನೀಡಿದ್ದು, ಗಲ್‌್ಫ ಪ್ರದೇಶದಲ್ಲಿರುವ ಅಮೆರಿಕದ ವಾಯುನೆಲೆಗಳನ್ನು ಗುರಿಯಾಗಿಸಿಕೊಂಡು ಪ್ರತಿದಾಳಿ ನಡೆಸಿದೆ. ಬಹ್ರೇನ್‌, ಕುವೈತ್‌ ಸೇರಿದಂತೆ ಅಮೆರಿಕದ ಹಾಜರಾತಿ ಇರುವ ಹಲವು ಪ್ರದೇಶಗಳ ಮೇಲೆ ಇರಾನ್‌ ದಾಳಿ ನಡೆಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಪ್ರತಿ ದಾಳಿ ಕೇವಲ ಎಚ್ಚರಿಕೆಯ ಕ್ರಮವಲ್ಲ, ಅಮೆರಿಕದ ಯಾವುದೇ ದಾಳಿಗೆ ತಕ್ಕ ಪ್ರತಿಕ್ರಿಯೆ ನೀಡುವ ಸನ್ನದ್ಧತೆಯನ್ನು ತೋರಿಸುವ ಪ್ರಯತ್ನವಾಗಿದೆ.

ಅಮೆರಿಕದ ಒಂದು ದಾಳಿಗೆ ನಾವು ಎರಡು ದಾಳಿಗಳನ್ನು ನಡೆಸುತ್ತೇವೆ ಎಂದು ಇರಾನ್‌ ಕಠಿಣ ಎಚ್ಚರಿಕೆ ನೀಡಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿದೆ. ಇರಾನ್‌ ಸಂಸತ್ತಿನ ವಕ್ತಾರರು ಅಮೆರಿಕ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಖಾರ್ಗ್‌ ದ್ವೀಪವನ್ನು ವಶಪಡಿಸಿಕೊಳ್ಳಲು ಅಮೆರಿಕ ಯತ್ನಿಸಿದರೆ, ಅಮೆರಿಕದ ಒಬ್ಬ ಸೈನಿಕನೂ ಜೀವಂತವಾಗಿ ಹಿಂದಿರುಗುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಮಧ್ಯಪ್ರಾಚ್ಯದಲ್ಲಿ ಈಗಾಗಲೇ ಅಸ್ಥಿರತೆಯ ವಾತಾವರಣವಿದ್ದು, ಇಂತಹ ದಾಳಿಗಳು ಜಾಗತಿಕ ಮಟ್ಟದಲ್ಲೂ ಆತಂಕ ಹುಟ್ಟಿಸಿವೆ. ಬುಶೆಹರ್‌ನಂತಹ ಪರಮಾಣು ಸ್ಥಾವರ ಪ್ರದೇಶಗಳ ಮೇಲೆ ದಾಳಿ ನಡೆಯುತ್ತಿರುವುದು ಪರಿಸರ ಹಾಗೂ ಅಂತಾರಾಷ್ಟ್ರೀಯ ಭದ್ರತೆ ದೃಷ್ಟಿಯಿಂದಲೂ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ಯಾವುದೇ ತಪ್ಪು ಲೆಕ್ಕಾಚಾರ ಅಥವಾ ದಾಳಿ-ಪ್ರತಿದಾಳಿಯು ದೊಡ್ಡ ಯುದ್ಧಕ್ಕೆ ಕಾರಣವಾಗುವ ಸಾಧ್ಯತೆ ಇದೆ.

ವಿಶೇಷವಾಗಿ ತೈಲ ಸಾಗಣೆ ಮಾರ್ಗಗಳು, ಗಲ್ಫ್ ರಾಷ್ಟ್ರಗಳ ಭದ್ರತೆ, ಜಾಗತಿಕ ಇಂಧನ ಮಾರುಕಟ್ಟೆ ಮತ್ತು ಅಂತಾರಾಷ್ಟ್ರೀಯ ರಾಜತಾಂತ್ರಿಕ ಸಂಬಂಧಗಳ ಮೇಲೆ ಈ ಬೆಳವಣಿಗೆಗಳು ನೇರ ಪರಿಣಾಮ ಬೀರುವ ಆತಂಕ ವ್ಯಕ್ತವಾಗಿದೆ. ಅಮೆರಿಕ-ಇರಾನ್‌ ನಡುವಿನ ಈ ಹೊಸ ಘರ್ಷಣೆ ಮಧ್ಯಪ್ರಾಚ್ಯವನ್ನು ಮತ್ತೊಮೆ ಯುದ್ಧದ ಅಂಚಿನತ್ತ ಕೊಂಡೊಯ್ದಿದೆ. ಎರಡೂ ದೇಶಗಳ ಕಠಿಣ ನಿಲುವು, ನಿರಂತರ ದಾಳಿ-ಪ್ರತಿದಾಳಿಗಳು ಹಾಗೂ ಉಗ್ರ ಎಚ್ಚರಿಕೆಗಳು ಪರಿಸ್ಥಿತಿಯನ್ನು ಕ್ಷಣಕ್ಷಣಕ್ಕೂ ಗಂಭೀರಗೊಳಿಸುತ್ತಿವೆ.

ಮುಂದಿನ ಕೆಲವು ದಿನಗಳು ಜಾಗತಿಕ ರಾಜಕೀಯದ ದೃಷ್ಟಿಯಿಂದ ಅತ್ಯಂತ ನಿರ್ಣಾಯಕವಾಗಲಿದ್ದು, ವಿಶ್ವದ ಚಿತ್ತ ಈಗ ಮಧ್ಯಪ್ರಾಚ್ಯದತ್ತ ನೆಟ್ಟಿದೆ. ಡೊನಾಲ್ಡ್ ಟ್ರಂಪ್‌ ಅವರು ಇತ್ತೀಚೆಗೆ ಒಪ್ಪಂದ ಅಂತ್ಯವಾಗುವ ಸೂಚನೆ ನೀಡಿದ್ದಲ್ಲದೆ, ರಾತ್ರಿ ವೇಳೆ ದಾಳಿ ನಡೆಸುವ ಎಚ್ಚರಿಕೆ ಕೂಡ ನೀಡಿದ್ದರು. ಇದರ ಬೆನ್ನಲ್ಲೇ ಈ ಹೊಸ ದಾಳಿ ನಡೆದಿರುವುದು ಪರಿಸ್ಥಿತಿಯ ಗಂಭೀರತೆಯನ್ನು ಇನ್ನಷ್ಟು ಹೆಚ್ಚಿಸಿದೆ. ವಿಶೇಷವಾಗಿ ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮನೈ ಅವರ ಅಂತ್ಯಕ್ರಿಯೆ ನಡೆಯಲಿರುವ ದಿನವೇ ಈ ದಾಳಿ ನಡೆದಿರುವುದು ರಾಜಕೀಯ ಹಾಗೂ ಭದ್ರತಾ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

RELATED ARTICLES

Latest News