Homeರಾಜಕೀಯಬಿಡದಿ ಹಿಂಸಾಕೃತ್ಯಗಳಿಗೆ ಕುಮಾರಸ್ವಾಮಿಯವರೇ ಹೊಣೆ : ಕುಣಿಗಲ್‌ ಶಾಸಕ ರಂಗನಾಥ್‌ ಆರೋಪ

ಬಿಡದಿ ಹಿಂಸಾಕೃತ್ಯಗಳಿಗೆ ಕುಮಾರಸ್ವಾಮಿಯವರೇ ಹೊಣೆ : ಕುಣಿಗಲ್‌ ಶಾಸಕ ರಂಗನಾಥ್‌ ಆರೋಪ

Kumaraswamy is responsible for Bidadi violence: Kunigal MLA Ranganath

ಬೆಂಗಳೂರು, ಜು.14- ಬಿಡದಿ ಉಪನಗರ ನಿರ್ಮಾಣಕ್ಕಾಗಿ ಭೂ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿ, 20 ವರ್ಷಗಳಿಂದಲೂ ರೈತರನ್ನು ಅತಂತ್ರಸ್ಥಿತಿಗೆ ತಂದಿಟ್ಟಿರುವ ಹೆಚ್‌.ಡಿ.ಕುಮಾರಸ್ವಾಮಿಯವರೇ, ನಿನ್ನೆಯ ಹಿಂಸಾತಕ ಕೃತ್ಯಗಳಿಗೆ ಪ್ರೇರಣೆ ಎಂದು ಕುಣಿಗಲ್‌ ಕ್ಷೇತ್ರದ ಕಾಂಗ್ರೆಸ್‌‍ ಶಾಸಕ ಹೆಚ್‌.ಡಿ.ರಂಗನಾಥ್‌ ಆರೋಪಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಬಿಡದಿಗೆ ಜಿಎಂಸಿಗೆ ತೆರಳಿದ್ದ ಅಧಿಕಾರಿಗಳಿಗೆ ಪೊರಕೆಯಲ್ಲಿ ಹೊಡೆದು, ಕಲ್ಲು ತೂರಿರುವ ಘಟನೆ ಹಿಂದೆ ಕುಮಾರಸ್ವಾಮಿಯವರ ಕುಮಕ್ಕಿದೆ ಎಂದು ದೂರಿದರು.

2005-06ರಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿಯವರು ಬಿಡದಿ ಉಪನಗರ ನಿರ್ಮಾಣಕ್ಕೆ ಯೋಜನೆ ರೂಪಿಸಿ, ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿದ್ದರು. ಅಂದಿನಿಂದ ಬಿಡದಿ ಭಾಗದ ಭೂಮಿ ರೆಡ್‌ ಝೋನ್‌ ಆಗಿಯೇ ಉಳಿದಿದೆ. ರೈತರು ತಮ ಜಮೀನನ್ನು ಮಾರಲೂ ಆಗದೆ, ಉಳಿಸಿಕೊಳ್ಳಲೂ ಆಗದೆ ಅತಂತ್ರಕ್ಕೆ ಸಿಲುಕಿ ಒದ್ದಾಡುತ್ತಿದ್ದಾರೆ ಎಂದು ವಿವರಿಸಿದರು.

ಉಪನಗರ ಯೋಜನೆಯನ್ನು ಆಗಲೇ ಕೈ ಬಿಟ್ಟಿರುವುದಾಗಿ ಹೇಳುತ್ತಿರುವ ಕುಮಾರಸ್ವಾಮಿಯವರು ದಾಖಲೆಗಳಲ್ಲಿ ಅದನ್ನು ಏಕೆ ದೃಢಪಡಿಸಲಿಲ್ಲ? ರೆಡ್‌ ಝೋನ್‌ ಮತ್ತು ಭೂ ಸ್ವಾಧೀನದ ಪ್ರಾಥಮಿಕ ಅಧಿಸೂಚನೆಯಿಂದ ಏಕೆ ಕೈ ಬಿಡಲಿಲ್ಲ ಎಂದು ರಂಗನಾಥ್‌ ಪ್ರಶ್ನಿಸಿದರು.

ಕುಮಾರ ಸ್ವಾಮಿಯವರು ಮಾಡಿದ ತಪ್ಪನ್ನು ನಮ ಸರ್ಕಾರ ಸರಿ ಪಡಿಸಲು ಯತ್ನಿಸುತ್ತಿದೆ. ಸಾವಿರಾರು ಯುವಕರು ಉದ್ಯೋಗಕ್ಕಾಗಿ ಒತ್ತಾಯಿಸುತ್ತಿದ್ದಾರೆ. ಔದ್ಯೋಗಿಕತೆ ಹೆಚ್ಚಾಗಬೇಕಾದರೆ ಕೈಗಾರಿಕಾ ಪ್ರದೇಶಗಳು ಬೆಳೆಯಬೇಕು. ಈ ನಿಟ್ಟಿನಲ್ಲಿ ನಮ ಸರ್ಕಾರ ಯತ್ನಿಸುತ್ತಿದೆ. ಇದನ್ನು ತಪ್ಪಾಗಿ ಗ್ರಹಿಸಿ ಜನರನ್ನು ಎತ್ತಿಕಟ್ಟಲಾಗುತ್ತಿದೆ ಎಂದು ಹೇಳಿದರು.

ಉಪನಗರಕ್ಕೆ ಶೇ.95ರಷ್ಟು ರೈತರು ಜಮೀನು ಬಿಟ್ಟುಕೊಡಲು ಒಪ್ಪಿಕೊಂಡಿದ್ದಾರೆ. ನಿನ್ನೆ ಅಧಿಕಾರಿಗಳು ಸ್ಥಳಕ್ಕೆ ಹೋಗಿದ್ದ ಪ್ರದೇಶದಲ್ಲಿ 27 ರೈತರ ಪೈಕಿ, 21 ಮಂದಿ ರೈತರು ತಮ ಜಮೀನನ್ನು ಸ್ವಾಧೀನ ಪಡಿಸಿಕೊಂಡು ಪರಿಹಾರ ನೀಡಲು ಮನವಿ ಮಾಡಿಕೊಂಡಿದ್ದಾರೆ. ಭೂಮಿ ಬಿಟ್ಟುಕೊಡಲು ಇಷ್ಟವಿಲ್ಲದ ರೈತರ ಭೂಮಿ ಉಳಿಸಲು ಸರ್ಕಾರ ಯತ್ನಿಸುತ್ತಿದೆ ಎಂದರು. ರೈತರು ಪ್ರಚೋದನೆಗೆ ಒಳಗಾಗಿ ಕಾನೂನು ಕೈಗೆತ್ತಿಕೊಂಡರೆ ಪ್ರಕರಣ ದಾಖಲಾಗುತ್ತದೆ. ಮುಂದಿನ ದಿನಗಳಲ್ಲಿ ಕೋರ್ಟ್‌, ಪೊಲೀಸ್‌‍ ಠಾಣೆಗೆ ಅಲೆಯಬೇಕಾಗುತ್ತದೆ. ಅದಕ್ಕೆ ತಗಲುವ ವೆಚ್ಚಗಳನ್ನು ಭರಿಸುವವರು ಯಾರು? ಎಂದು ವಿಷಾದಿಸಿದರು.

ಎಲ್ಲದಕ್ಕೂ ಕಾರಣವಾಗಿರುವ ಕುಮಾರಸ್ವಾಮಿ, ಈಗ ತಾವೇ ಮುಂದೆ ನಿಂತು ಗೊಂದಲ ಮೂಡಿಸಿ ಪ್ರತಿಭಟನೆ ನಡೆಸುವಂತೆ ಮಾಡಿದ್ದಾರೆ. ನಿನ್ನೆಯ ಅಧಿಕಾರಿಗಳ ಮೇಲೆ ಕಲ್ಲು ತೂರಾಟವಾಗಿರುವುದು, ಪೊರಕೆಯಲ್ಲಿ ಹೊಡೆದಿರುವುದು ಸರಿಯಲ್ಲ. ಯಾರೇ ಆದರೂ ಕಾನೂನನ್ನು ಕೈಗೆತ್ತಿಕೊಳ್ಳುವುದು ಸರಿಯಲ್ಲ ಎಂದರು.

RELATED ARTICLES

Latest News