Homeರಾಷ್ಟ್ರೀಯಸಂಘರ್ಷ ಬಿಡಿ.. ಸಂವಾದ ನಡೆಸಿ.. : ಮೋಹನ್‌ ಭಾಗವತ್‌ ಸಲಹೆ

ಸಂಘರ್ಷ ಬಿಡಿ.. ಸಂವಾದ ನಡೆಸಿ.. : ಮೋಹನ್‌ ಭಾಗವತ್‌ ಸಲಹೆ

'Consensus, Not Orders': Mohan Bhagwat As Students Protest Across India

ನವದೆಹಲಿ,ಜು.25- ಯುವಜನರಿಗೆ ಬೇಕಾ ಗಿರುವುದು ಕಟ್ಟುನಿಟ್ಟಿನ ಆಜ್ಞೆಗಳು ಅಥವಾ ಆದೇಶ ಗಳಲ್ಲ, ಬದಲಾಗಿ ವಿವರಣೆ, ಪ್ರೀತಿ ಮತ್ತು ಅರ್ಥ ಪೂರ್ಣ ಸಂವಾದ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌‍ಎಸ್‌‍) ಮುಖ್ಯಸ್ಥ ಮೋಹನ್‌ ಭಾಗವತ್‌ ಅಭಿಪ್ರಾಯಪಟ್ಟಿದ್ದಾರೆ.

ದೆಹಲಿಯಲ್ಲಿ ನೀಟ್‌‍-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಶೈಕ್ಷಣಿಕ ವ್ಯವಸ್ಥೆಯ ಅವ್ಯವಸ್ಥೆಗಳನ್ನು ಖಂಡಿಸಿ ವಿದ್ಯಾರ್ಥಿಗಳು ಹಾಗೂ ಯುವ ಜನತೆ ತೀವ್ರ ಪ್ರತಿಭಟನೆ ನಡೆಸುತ್ತಿರುವ ನಿರ್ಣಾಯಕ ಘಟ್ಟದಲ್ಲಿ ಅವರ ಈ ಹೇಳಿಕೆಗಳು ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿವೆ.

ದೆಹಲಿಯಲ್ಲಿ ನಡೆದ ವಿಶ್ವ ಮಾಂಗಲ್ಯ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಮೋಹನ್‌ ಭಾಗವತ್‌, ಇಂದಿನ ಯುವಕರು ಯಾವುದನ್ನೂ ಕುರುಡಾಗಿ ಅನುಕರಿಸುವುದಿಲ್ಲ ಬದಲಾಗಿ ಪ್ರತಿ ವಿಷಯದಲ್ಲೂ ತರ್ಕ ಹಾಗೂ ಪ್ರಶ್ನೆಗಳನ್ನು ಕೇಳುತ್ತಾರೆ ಎಂದರು. ಹಿರಿಯರು ಅಥವಾ ಪೋಷಕರು ಯುವಕರ ವಿಶ್ವಾಸಗಳಿಸಲು ಆಜ್ಞೆಗಳನ್ನು ಹೊರಡಿಸುವುದನ್ನು ಬಿಟ್ಟು ಒಮತದ ಚರ್ಚೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.

ದೆಹಲಿ ಜಂತರ್‌ ಮಂತರ್‌ ಪ್ರತಿಭಟನೆ :
ಸಿಜೆಪಿ ಸೇರಿದಂತೆ ವಿವಿಧ ವಿದ್ಯಾರ್ಥಿ ಸಂಘಟನೆಗಳ ನೇತೃತ್ವದಲ್ಲಿ ದೆಹಲಿಯ ಜಂತರ್‌ ಮಂತರ್‌ನಲ್ಲಿ ಲಕ್ಷಾಂತರ ಯುವಕರು ಬೃಹತ್‌ ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರ ರಾಜೀನಾಮೆಗೆ ಆಗ್ರಹಿಸಿ ಹಾಗೂ ಪರೀಕ್ಷಾ ವ್ಯವಸ್ಥೆಯಲ್ಲಿ ಆಗಿರುವ ಲೋಪಗಳನ್ನು ವಿರೋಧಿಸಿ ಮುಂದುವರಿದಿರುವ ಈ ಪ್ರತಿಭಟನೆಯು ತೀವ್ರ ಸ್ವರೂಪ ಪಡೆದುಕೊಂಡಿದೆ.

ಜುಲೈ 20 ರಂದು ಸಂಸತ್‌ ಭವನದ ಹತ್ತಿರ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ನಡೆದ ಘರ್ಷಣೆ ಹಾಗೂ ಲಾಠಿಚಾರ್ಜ್‌ನಿಂದಾಗಿ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ತಿರುಗಿದೆ. ಈ ಎಲ್ಲ ವಿದ್ಯಮಾನಗಳ ಕುರಿತು ಆರ್‌ಎಸ್‌‍ಎಸ್‌‍ ಮುಖ್ಯಸ್ಥರ ಮೌನವನ್ನು ಹಿರಿಯ ವಕೀಲ ಹಾಗೂ ಸಂಸದ ಸೇರಿದಂತೆ ಹಲವು ವಿರೋಧ ಪಕ್ಷದ ನಾಯಕರು ಪ್ರಶ್ನಿಸಿದ್ದರು.

ಸರ್ಕಾರದ ನಿಲುವು ಮತ್ತು ಮುಂದಿನ ಹೆಜ್ಜೆ :
ಪ್ರಶ್ನೆಪತ್ರಿಕೆ ಸೋರಿಕೆ ಪಿಡುಗನ್ನು ತಡೆಯಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕಠಿಣ ಕಾನೂನು ಕ್ರಮಗಳು ಹಾಗೂ ಮಸೂದೆಯನ್ನು ಜಾರಿಗೆ ತಂದಿದ್ದರೂ, ಪ್ರತಿಭಟನಾಕಾರರು ತಮ ಪಟ್ಟು ಸಡಿಲಿಸಿಲ್ಲ. ಸರ್ಕಾರದೊಂದಿಗೆ ನಡೆದ ಮಾತುಕತೆಗಳು ವಿಫಲಗೊಂಡಿದ್ದು, ಸಚಿವರ ರಾಜೀನಾಮೆ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲು ಮುಂದಿನ ಸುತ್ತಿನ ಮಾತುಕತೆಗಳ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

ಸಂಘರ್ಷದ ಧಾಟಿಯನ್ನು ಕೈಬಿಟ್ಟು, ಯುವಜನರ ಭಾವನೆಗಳಿಗೆ ಸ್ಪಂದಿಸುವ ಮೂಲಕ ಸೌಹಾರ್ದಯುತ ಒಮತಕ್ಕೆ ಬರಬೇಕು ಎಂಬ ಭಾಗವತ್‌ ಅವರ ಸಂದೇಶವು ಪ್ರಸ್ತುತ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ವಿಶೇಷ ಮಹತ್ವವನ್ನು ಪಡೆದುಕೊಂಡಿದೆ.

RELATED ARTICLES

Latest News