ನವದೆಹಲಿ,ಜು.31- ರಾಷ್ಟ್ರ ರಾಜಧಾನಿಯ ಜಂತರ್ ಮಂತರ್ನಲ್ಲಿ ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿಸಿ ಇತ್ತೀಚೆಗೆ ನಡೆದ ಸಂಸತ್ ಚಲೋ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದ್ದು, ಈ ವೇಳೆ ಕರ್ತವ್ಯದಲ್ಲಿದ್ದ ದೆಹಲಿ ಪೊಲೀಸ್ ಸಿಬ್ಬಂದಿಯ ಮೇಲೆ ನಡೆದ ಭೀಕರ ಹಲ್ಲೆ ಮತ್ತು ಅವರ ಕುಟುಂಬಗಳು ಎದುರಿಸುತ್ತಿರುವ ಮಾನಸಿಕ ವೇದನೆ ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಪ್ರತಿಭಟನೆಯ ಹೆಸರಿನಲ್ಲಿ ನಡೆದ ಈ ದಾಳಿಯಲ್ಲಿ ಹಲವಾರು ಪೊಲೀಸರು ಗಾಯಗೊಂಡಿದ್ದು, ಘಟನೆಯ ಕೇವಲ ಒಂದು ಮುಖವನ್ನು ಮಾತ್ರ ಬಿಂಬಿಸಲಾಗುತ್ತಿದೆ ಎಂದು ಸಂತ್ರಸ್ತ ಸಿಬ್ಬಂದಿಯ ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ.ಪ್ರತಿಭಟನಾಕಾರರ ಆಕ್ರೋಶಕ್ಕೆ ತುತ್ತಾದ ದೆಹಲಿ ಪೊಲೀಸ್ ಸಿಬ್ಬಂದಿಯ ಕುಟುಂಬಗಳು ಮಾಧ್ಯಮಗಳ ಮುಂದೆ ತಮ ಆಘಾತಕಾರಿ ಅನುಭವಗಳನ್ನು ಹಂಚಿಕೊಂಡಿವೆ.
ಕುಂಜಾಲ್ ಎಂಬ ವಿದ್ಯಾರ್ಥಿಯ ಅನುಭವ :
ನೌಕಾಪಡೆಯ ಮಾಜಿ ಮೆರೈನ್ ಕಮಾಂಡೋ ಹಾಗೂ ಪ್ರಸ್ತುತ ಸಬ್ ಇನ್ಸ್ಪೆಕ್ಟರ್ ಆಗಿರುವ ತಮ ತಂದೆಯ ಮೇಲಿನ ಹಲ್ಲೆ ಕುರಿತು ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಕುಂಜಾಲ್ ಭಾವುಕರಾಗಿ ಮಾತನಾಡಿದ್ದಾರೆ.ಜಂತರ್ ಮಂತರ್ನಲ್ಲಿ ಬ್ಯಾರಿಕೇಡ್ ಬಳಿ ಕರ್ತವ್ಯದಲ್ಲಿದ್ದ ನನ್ನ ತಂದೆಯನ್ನು ಗುಂಪೊಂದು ಎಳೆದೊಯ್ದು ವೇದಿಕೆಯ ಬಳಿ ಹಲ್ಲೆ ನಡೆಸಿತು.
ಆಸ್ಪತ್ರೆಯಲ್ಲಿ ನಾಲ್ಕು ಗಂಟೆ ಪ್ರಜ್ಞಾಹೀನರಾಗಿದ್ದ ಅವರನ್ನು ರಾತ್ರಿ ಸಹೋದ್ಯೋಗಿಗಳು ಮನೆಗೆ ಕರೆತಂದಾಗ, ಅವರ ಸಮವಸ್ತ್ರ ಸಂಪೂರ್ಣವಾಗಿ ರಕ್ತದಿಂದ ಕೆಂಪಾಗಿತ್ತು. ತಲೆಗೆ ನಾಲ್ಕು ಹೊಲಿಗೆಗಳಿದ್ದರೂ, ಮಗು, ಕರ್ತವ್ಯದಲ್ಲಿರುವಾಗ ಸಣ್ಣಪುಟ್ಟ ಗಾಯಗಳು ಸಾಮಾನ್ಯ ಎಂದು ಧೈರ್ಯ ತುಂಬಿದರು. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ನನ್ನ ತಂದೆಯನ್ನೇ ಅಪರಾಧಿಯಂತೆ ಬಿಂಬಿಸುತ್ತಿರುವುದು ನಮಗೆ ಅತಿ ದೊಡ್ಡ ನೋವುಂಟು ಮಾಡಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಸೀಮಾ ಅವರ ಆತಂಕ :
33 ವರ್ಷಗಳಿಂದ ಸೇವೆಯಲ್ಲಿರುವ ಎಎಸ್ಐ (ಸಹಾಯಕ ಸಬ್-ಇನ್ಸ್ಪೆಕ್ಟರ್) ಅವರ ಪತ್ನಿ ಸೀಮಾ ಪ್ರತಿಕ್ರಿಯಿಸಿ, ಪ್ರತಿಭಟನೆಯ ಜನಸಂದಣಿ ಅತಿ ಹೆಚ್ಚು ಆಕ್ರಮಣಕಾರಿಯಾಗಿತ್ತು. ಕಿಡಿಗೇಡಿಗಳು ಪೊಲೀಸ್ ಸಿಬ್ಬಂದಿಯ ಮೇಲೆ ಹೂವಿನ ಕುಂಡಗಳು, ಚಪ್ಪಲಿಗಳು, ಬೂಟುಗಳು ಮತ್ತು ಕಲ್ಲುಗಳಿಂದ ದಾಳಿ ಮಾಡಿದರು. ನನ್ನ ಪತಿಗೆ ನೀಡಿದ್ದ ಹೆಲೆಟ್ ಸಂಪೂರ್ಣವಾಗಿ ಛಿದ್ರವಾಗಿತ್ತು. ಹೆಲೆಟ್ ಮುರಿದು ಕಲ್ಲು ನೇರವಾಗಿ ತಲೆಗೆ ಬಿದ್ದಿದ್ದರೆ ಅವರು ಇಂದು ಜೀವಂತವಾಗಿರುತ್ತಿರಲಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ.
ಲಕ್ಷ್ಯ ಸಿಂಗ್ ಬಿಷ್ಟ್ ಪ್ರತಿಕ್ರಿಯೆ :
ನಾಲ್ಕು ಶೌರ್ಯ ಪ್ರಶಸ್ತಿಗಳನ್ನು ಪಡೆದಿರುವ ಎಸಿಪಿ (ಸಹಾಯಕ ಪೊಲೀಸ್ ಆಯುಕ್ತ) ಅವರ ಮಗ ಲಕ್ಷ್ಯ ಸಿಂಗ್ ಮಾತನಾಡಿ, ತಂದೆಯ ತಲೆ ಬೋಳಿಸಿ ನಾಲ್ಕು ಹೊಲಿಗೆ ಹಾಕಲಾಗಿರುವ ಫೋಟೊ ನೋಡಿ ನಾವು ಬೆಚ್ಚಿಬಿದ್ದೆವು. ವಿದ್ಯಾರ್ಥಿಗಳ ಮುಖವಾಡ ಧರಿಸಿ ಬಂದಿದ್ದ ರೌಡಿಗಳು ಮತ್ತು ಸಮಾಜಘಾತಕ ಶಕ್ತಿಗಳು ಈ ಗೊಂದಲವನ್ನು ಸೃಷ್ಟಿಸಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಏಕಪಕ್ಷೀಯ ವಿರುದ್ಧ ಆಕ್ರೋಶ :
ಸಂತ್ರಸ್ತ ಪೊಲೀಸ್ ಕುಟುಂಬಗಳ ಪ್ರಕಾರ, ಪ್ರತಿಭಟನೆಯನ್ನು ಪೊಲೀಸರು ಕ್ರೂರವಾಗಿ ಹತ್ತಿಕ್ಕಿದರು ಮತ್ತು ವಿದ್ಯಾರ್ಥಿಗಳನ್ನು ಥಳಿಸಿದರು ಎಂಬ ಏಕಪಕ್ಷೀಯ ಮತ್ತು ಸುಳ್ಳು ನಿರೂಪಣೆಯನ್ನು ಮಾತ್ರ ಸಮಾಜದಲ್ಲಿ ಬಿತ್ತರಿಸಲಾಗುತ್ತಿದೆ. ಆದರೆ ವಾಸ್ತವದಲ್ಲಿ ಪೊಲೀಸರ ಜೀವಕ್ಕೆ ಕುತ್ತು ಬರುವ ರೀತಿಯಲ್ಲಿ ಹಿಂಸಾಚಾರ ನಡೆದಿದೆ ಎಂದು ಅವರು ದೂರಿದ್ದಾರೆ.
ಈ ನಿಟ್ಟಿನಲ್ಲಿ ಚುನಾಯಿತ ಪ್ರತಿನಿಧಿಗಳು ಹಾಗೂ ಸಂಸತ್ ಸದಸ್ಯರು ಈ ವಾಸ್ತವಿಕತೆಯನ್ನು ಗಂಭೀರವಾಗಿ ಪರಿಗಣಿಸಿ ಧ್ವನಿ ಎತ್ತಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಕೇಂದ್ರ ಶಿಕ್ಷಣ ಸಚಿವರು ಜವಾಬ್ದಾರಿ ವಹಿಸಿಕೊಂಡಿದ್ದ ಸಂದರ್ಭದಲ್ಲಿ, ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಬೋಸ್ಟನ್ ವಿಶ್ವವಿದ್ಯಾಲಯದ ಪದವೀಧರ ಅಭಿಜೀತ್ ದೀಪ್ಕೆ ನೇತೃತ್ವದ ಕಾಕ್ರೋಚ್ ಜನತಾ ಪಕ್ಷ(ಸಿಜೆಪಿ) ಎಂಬ ವಿಡಂಬನಾತಕ ರಾಜಕೀಯ ಗುಂಪು ಈ ಪ್ರತಿಭಟನೆಯನ್ನು ಹಮಿಕೊಂಡಿತ್ತು. ಪ್ರತಿಭಟನೆಯ ವೇಳೆ ಸಮಾಜ ವಿರೋಧಿ ಅಂಶಗಳು ನುಸುಳಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು ಎಂಬುದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
