ಬೆಂಗಳೂರು, ಜು.31- ಪ್ರಶ್ನೆ ಪತ್ರಿಕೆಗಳ ಸೋರಿಕೆ, ಪರೀಕ್ಷಾ ನಕಲು ಹಾಗೂ ಅಕ್ರಮಗಳನ್ನು ತಡೆಯಲು ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಪತ್ರಿಕೆಗಳನ್ನು ಯಾದೃಚ್ಛಿಕೀಕರಣ (ರ್ಯಾಂಡಮೈಜೆಷನ್) ನಡೆಸಲಾಗುತ್ತಿದೆ. ಜೊತೆಗೆ ಅನೇಕ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಕುರಿತಂತೆ ನಿನ್ನೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಸುಮಾರು ಮೂರೂವರೆ ಗಂಟೆಗಳ ಕಾಲ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಕರ್ನಾಟಕ ಲೋಕಸೇವಾ ಆಯೋಗ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ಸುದೀರ್ಘ ಸಭೆ ನಡೆಸಲಾಗಿದೆ ಎಂದು ಹೇಳಿದರು.
ಹಣಕಾಸು ಇಲಾಖೆಯಿಂದ 74 ಸಾವಿರ ಹುದ್ದೆಗಳ ನೇಮಕಾತಿಗೆ ಈಗಾಗಲೇ ಅನುಮೋದನೆ ದೊರೆತಿದೆ. ಮುಂದಿನ ಒಂದು ವರ್ಷದಲ್ಲಿ ಇವುಗಳಿಗೆ ನೇಮಕಾತಿ ನಡೆಯಲಿದೆ. ಮೊದಲ ಹಂತದಲ್ಲಿ ಮುಂದಿನ ಆರು ತಿಂಗಳೊಳಗೆ 36,773 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿ ಲಿಖಿತ ಪರೀಕ್ಷೆಗಳನ್ನು ನಡೆಸಲಾಗುವುದು. ಸುಮಾರು 35 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ದೇಶದ ನೀಟ್ ಸೇರಿದಂತೆ ಹಲವು ಪರೀಕ್ಷೆಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಕಂಡು ಬಂದಿದೆ. ಆ ಗೊಂದಲಗಳು ರಾಜ್ಯದಲ್ಲಿ ಮರುಕಳಿಸದಂತೆ ಮುಖ್ಯಮಂತ್ರಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಹೊಣೆಗಾರಿಕೆ ನೀಡಿದ್ದಾರೆ ಎಂದು ಹೇಳಿದರು.
ಪ್ರಶ್ನೆ ಪತ್ರಿಕೆ ಸೋರಿಕೆಗೆ ಅವಕಾಶವೇ ಇಲ್ಲದಂತೆ ಈ ಬಾರಿ ಹಲವು ಹೊಸ ಭದ್ರತಾ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ಒಂದೇ ಪ್ರಶ್ನೆ ಪತ್ರಿಕೆಯ ಬದಲಿಗೆ ವಿವಿಧ ಮಾದರಿಯ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಿ, ಪ್ರಶ್ನೆ ಪತ್ರಿಕೆಗಳ ಬ್ಯಾಂಕ್ ನಿರ್ಮಿಸಲಾಗಿದೆ. ವಿಷಯವಾರು ಮತ್ತು ನಿಗದಿತ ಪ್ರಮಾಣದಲ್ಲಿ ವಿವಿಧ ಸೆಟ್‌ಗಳ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಲಾಗಿದ್ದು, ಯಾವ ಪ್ರಶ್ನೆ ಪತ್ರಿಕೆ ಬಳಸಬೇಕು ಎಂಬುದು ಅಂತಿಮ ಕ್ಷಣದವರೆಗೆ ಗೌಪ್ಯವಾಗಿರಲಿದೆ ಎಂದು ವಿವರಿಸಿದರು.
ಪ್ರಶ್ನೆ ಪತ್ರಿಕೆಯ ಟ್ರಂಕ್ ಅಥವಾ ಕವರ್ ಅನ್ನು ಪರೀಕ್ಷೆ ಆರಂಭಕ್ಕೂ ಮುನ್ನ ತೆರೆಯಲಾಗಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಈ ಬಾರಿ ಬಹುಪದರ ಭದ್ರತಾ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಯಾವುದೇ ಅನಧಿಕೃತ ವ್ಯಕ್ತಿ ಪ್ರಶ್ನೆ ಪತ್ರಿಕೆ ಇರುವ ಟ್ರಂಕ್ ತೆರೆಯಲು ಅಥವಾ ಭದ್ರತಾ ವ್ಯವಸ್ಥೆ ಭೇದಿಸಲು ಯತ್ನಿಸಿದರೆ ತಕ್ಷಣವೇ ಎಚ್ಚರಿಕೆಯ ಸೈರನ್ ಮೊಳಗಲಿದೆ.
ಪ್ರಶ್ನೆ ಪತ್ರಿಕೆಗಳ ಮುದ್ರಣ ಹಾಗೂ ಸಾಗಾಣಿಕೆ ಹಂತದಲ್ಲೂ ಕಟ್ಟುನಿಟ್ಟಿನ ಭದ್ರತೆ ಕಲ್ಪಿಸಲಾಗಿದೆ. ಹೊರ ರಾಜ್ಯಗಳಲ್ಲಿ ಬಿಗಿ ಭದ್ರತೆ ಇರುವ ಕಡೆ ಪ್ರಶ್ನೆ ಪತ್ರಿಕೆ ಮುದ್ರಿಸಲಾಗಿದೆ. ಸಾಗಾಣಿಕೆ ಹಂತದಲ್ಲೂ ಪ್ರಮಾಣಿತ ಕಾರ್ಯವಿಧಾನ ಪಾಲಿಸಲಾಗುತ್ತಿದೆ ಎಂದು ಹೇಳಿದರು.
ಈ ಹಿಂದೆ ಪರೀಕ್ಷಾ ಕೇಂದ್ರದ ಸುತ್ತಮುತ್ತ ಮಾತ್ರ ಜಾಮರ್ ಅಳವಡಿಸಲಾಗುತ್ತಿತ್ತು. ಈಗ ಪ್ರತಿಯೊಂದು ಪರೀಕ್ಷಾ ಕೊಠಡಿಯಲ್ಲೂ ಜಾಮರ್ ಅಳವಡಿಸಲಾಗುತ್ತಿದೆ. ತನೂಲಕ ಮೊಬೈಲ್ ಅಥವಾ ಇತರೆ ತಂತ್ರಜ್ಞಾನದ ಮೂಲಕ ಪ್ರಶ್ನೆ ಪತ್ರಿಕೆ ಹೊರಹೋಗದಂತೆ ತಡೆಯಲಾಗುವುದು ಎಂದು ವಿವರಿಸಿದರು.
ಪರೀಕ್ಷಾ ಕೇಂದ್ರಗಳಲ್ಲಿ ನಕಲು ತಡೆಯಲು ಅಭ್ಯರ್ಥಿಗಳ ಪ್ರಶ್ನೆ ಪತ್ರಿಕೆಗಳನ್ನು ರ್ಯಾಂಡಮೈಸೇಶನ್ ಪದ್ಧತಿಯ ಮೂಲಕ ವಿತರಿಸಲಾಗುತ್ತದೆ. ಉದಾಹರಣೆಗೆ ಒಂದು ಕೊಠಡಿಯಲ್ಲಿ 25 ಅಭ್ಯರ್ಥಿಗಳಿದ್ದರೆ ಪ್ರತಿಯೊಬ್ಬರಿಗೂ ವಿಭಿನ್ನ ಕ್ರಮಾಂಕದ ಪ್ರಶ್ನೆ ಪತ್ರಿಕೆ ನೀಡಲಾಗುತ್ತದೆ. ಇದರಿಂದ ಕಾಪಿ ಮಾಡುವ ಸಾಧ್ಯತೆ ಕಡಿಮೆಯಾಗಲಿದೆ ಎಂದು ಹೇಳಿದರು.
ಓಎಂಆರ್ ತಿದ್ದುಪಡಿಗೆ ಅವಕಾಶವಿಲ್ಲ: ಓಎಂಆರ್ ಉತ್ತರ ಪತ್ರಿಕೆಗಳಲ್ಲಿ ತಿದ್ದುಪಡಿ ಮಾಡುವ ಅವಕಾಶವೇ ಇರದಂತೆ ಪರೀಕ್ಷೆ ನಡೆದ ದಿನವೇ ಅಥವಾ 24 ಗಂಟೆಗಳೊಳಗೆ ಉತ್ತರ ಪತ್ರಿಕೆಗಳ ಒಎಂಆರ್ ಶೀಟ್ ಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಿದರು.
ಶಿಕ್ಷಣ ಇಲಾಖೆ ಅಧಿಕಾರಿಗಳು ಪರೀಕ್ಷಾ ಕೇಂದ್ರಗಳ ನಿರ್ವಹಣೆಗೆ ಪೂರ್ಣ ಸಹಕಾರ ನೀಡಬೇಕು. ಫ್ಲೈಯಿಂಗ್ ಸ್ಕ್ವಾಡ್ ಗಳು 24 ಗಂಟೆ ಮೊದಲೇ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಶುದ್ಧೀಕರಣವನ್ನು ಪರಿಶೀಲಿಸಬೇಕು. ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ನಿರ್ಬಂಧಾಜ್ಞೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಸೂಚಿಸಲಾಗಿದೆ.
ಕಾರ್ಯಸೂಚಿ:ಪ್ರಶ್ನೆ ಪತ್ರಿಕೆ ಹಾಗೂ ಓಎಂಆರ್ ಶೀಟ್‌ಗಳನ್ನು ಕನಿಷ್ಠ ಐದು ಅಭ್ಯರ್ಥಿಗಳ ಸಮುಖದಲ್ಲೇ ತೆರೆಯಬೇಕು. ಪರೀಕ್ಷಾ ಕೇಂದ್ರಗಳನ್ನು 24 ಗಂಟೆಗಳ ಮುಂಚಿತವಾಗಿ ಸಂಪೂರ್ಣ ಪರಿಶೀಲಿಸಿ ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಎಲ್ಲೆಡೆ ಸಿಸಿಟಿವಿ ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಗೃಹ ಇಲಾಖೆ ಪ್ರಮಾಣಿತ ಕಾರ್ಯಸೂಚಿ ಹೊರಡಿಸಿದೆ ಎಂದು ಹೇಳಿದರು.
ಅಧಿಕಾರಿಗಳಿಗೂ ಮೊಬೈಲ್ ನಿಷೇಧ: ಪರೀಕ್ಷಾ ಕರ್ತವ್ಯಕ್ಕೆ ನಿಯೋಜನೆಯಾಗಿರುವ ಅಧಿಕಾರಿಗಳಿಗೂ ಮೊಬೈಲ್ ಫೋನ್ ಬಳಸಲು ಅವಕಾಶ ಇರುವುದಿಲ್ಲ. ಸಾಮಾಜಿಕ ಜಾಲತಾಣಗಳ ಮೇಲೆ ನಿರಂತರ ನಿಗಾ ಇರಿಸಲಾಗುತ್ತಿದ್ದು, ವದಂತಿಗಳು ಹಾಗೂ ಸುಳ್ಳು ಸುದ್ದಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ವಿಶೇಷ ನಿಗಾ:ಈ ಹಿಂದೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳು ಹಾಗೂ ಕೆಲವು ಕೋಚಿಂಗ್ ಕೇಂದ್ರಗಳ ಮೇಲೂ ವಿಶೇಷ ನಿಗಾ ಇರಿಸಲಾಗಿದೆ. ಯಾವುದೇ ಕೋಚಿಂಗ್ ಕೇಂದ್ರಗಳಿಗೆ ಅನುಮಾನ ಅಥವಾ ವದ್ಧಂತಿ ಕಂಡು ಬಂದರೆ ತಕ್ಷಣವೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವಂತೆ ಮನವಿ ಮಾಡಿದರು.
ಪರೀಕ್ಷಾ ಕೇಂದ್ರಗಳಲ್ಲಿ ಪ್ರಶ್ನೆ ಪತ್ರಿಕೆ ಕೊರತೆ ಅಥವಾ ವಿತರಣೆಯಲ್ಲಿ ವಿಳಂಬ ಉಂಟಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಗೈರುಹಾಜರಾದ ಅಭ್ಯರ್ಥಿಗಳ ಪ್ರಶ್ನೆ ಪತ್ರಿಕೆಗಳನ್ನೂ ಹೊರಗೆ ತೆಗೆದುಕೊಂಡು ಹೋಗುವಂತಿಲ್ಲ, ಬದಲಾಗಿ ಪರೀಕ್ಷಾ ಅಭ್ಯರ್ಥಿಯ ನಿಗದಿತ ಜಾಗದಲ್ಲೇ ಇಟ್ಟಿರಬೇಕು ಎಂದರು.ನಾಳೆ 3991 ಕಾನ್‌್ಸ ಟೇಬಲ್‌ಗಳ ನೇಮಕಾತಿಗೆ ಲಿಖಿತ ಪರೀಕ್ಷೆ ನಡೆಯಲಿದ್ದು, 3,70,850 ಲಕ್ಷ ಅರ್ಜಿಗಳಿವೆ. 36 ಸಾವಿರ ಹುದ್ದೆಗಳ ಪೈಕಿ ಕೆಪಿಎಸ್‌ಸಿಗೆ 906 ಹುದ್ದೆಗಳ ನೇಮಕಾತಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ವಿವರಿಸಿದರು.
