ಬೆಂಗಳೂರು, ಆ.2- ಕಾವೇರಿ ನದಿ ನೀರಿನ ವಿಚಾರವಾಗಿ ರಾಜ್ಯದ ಎಲ್ಲಾ ಪಕ್ಷಗಳು ಅಭಿಪ್ರಾಯ ಭೇದ ಮರೆತು ಒಗ್ಗಟ್ಟು ಪ್ರದರ್ಶಿಸಿದ್ದು, ನಾಡಿನ ಹಿತರಕ್ಷಣೆಗೆ ಬದ್ಧತೆ ಘೋಷಿಸಿವೆ.
ತಮಿಳುನಾಡಿಗೆ 15 ದಿನಗಳವರೆಗೂ ನಿತ್ಯ 3,500 ಕ್ಯೂಸೆಕ್ಸ್ ನೀರು ಹರಿಸಬೇಕು ಎಂದು ಕಾವೇರಿ ನೀರು ನಿರ್ವಹಣಾ ಸಮಿತಿ ಮತ್ತು ಪ್ರಾಧಿಕಾರ ಆದೇಶ ನೀಡಿದ ಬಳಿಕ ರಾಜ್ಯದಲ್ಲಿ ಆಕ್ರೋಶದ ಸನ್ನಿವೇಶ ಸೃಷ್ಟಿಯಾಗಿತ್ತು. ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಸರ್ವಪಕ್ಷ ಸಭೆ ನಡೆಸಿದರು. ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ,
ಬಿ.ಎಸ್. ಯಡಿಯೂರಪ್ಪ, ಎಚ್.ಡಿ.ಕುಮಾರ ಸ್ವಾಮಿ, ಸದಾನಂದ ಗೌಡ, ಬಸವರಾಜ ಬೊಮಾಯಿ, ಕೇಂದ್ರ ಸಚಿವರಾದ ವಿ.ಸೋಮಣ್ಣ, ಶೋಭಾ ಕರಂದ್ಲಾಜೆ, ಉಪಮುಖ್ಯಮಂತ್ರಿ ಜಿ.ಪರಮೇಶ್ವರ, ಸಚಿವರಾದ ರಾಮಲಿಂಗಾ ರೆಡ್ಡಿ, ಕೃಷ್ಣಭೈರೇಗೌಡ, ಎಂ.ಬಿ.ಪಾಟೀಲ್, ಕೆ.ಜೆ.ಜಾರ್ಜ್, ನವದೆಹಲಿಯಲ್ಲಿ ಕರ್ನಾಟಕದ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಸಂಸತ್ ಸದಸ್ಯ ಗೋವಿಂದ ಕಾರಜೋಳ, ವಿರೋಧ ಪಕ್ಷದ ನಾಯಕರಾದ ಅಶೋಕ್, ಛಲವಾದಿ ನಾರಾಯಣಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್, ಮಾಜಿ ಸಚಿವರಾದ ಎಚ್.ಕೆ.ಪಾಟೀಲ್, ಚೆಲುವರಾಯ ಸ್ವಾಮಿ, ಸಿ.ಎಸ್.ಪುಟ್ಟರಾಜು, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್ ಬಾಬು, ಎಸ್.ಎಲ್.ಭೋಜೇಗೌಡ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ನಿವೃತ್ತ ನ್ಯಾಯಾಧೀಶ ನ್ಯಾ. ನಾಗಮೋಹನದಾಸ್, ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಮುಖ್ಯಮಂತ್ರಿಯವರ ವಿಶೇಷ ಸಲಹೆಗಾರ ಜಿ.ಸಿ.ಚಂದ್ರಶೇಖರ್, ಆರ್ಥಿಕ ಸಲಹೆಗಾರ ಎಲ್.ಕೆ.ಅತೀಕ್, ಅಪರ ಮುಖ್ಯಕಾರ್ಯದರ್ಶಿ ತುಷಾರ್ ಗಿರಿನಾಥ್ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಹಾಜರಿದ್ದರು.
ಕೊಡಗು ಮತ್ತು ಕೇರಳದ ವಯನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಸದ್ಯಕ್ಕೆ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಪಾಲನೆ ಕಷ್ಟಸಾಧ್ಯ ಅಲ್ಲ ಎಂಬ ಅಭಿಪ್ರಾಯಗಳು ಕೇಳಿ ಬಂದವು. ರಾಜ್ಯದ ರೈತರ ಹಿತಾಸಕ್ತಿ ಮತ್ತು ಕುಡಿಯುವ ನೀರಿನ ಭದ್ರತೆಗೆ ಸರ್ಕಾರ ಎಚ್ಚರಿಕೆ ವಹಿಸಬೇಕೆಂಬ ಸಲಹೆಗಳು ವ್ಯಕ್ತವಾದವು.
ಪ್ರಮುಖವಾಗಿ ಮೇಕೆದಾಟು ಯೋಜನೆಯ ಬಗ್ಗೆ ಚರ್ಚೆಯಾಗಿದೆ. ಕೇಂದ್ರ ಸರ್ಕಾರ ಅಣೆಕಟ್ಟು ನಿರ್ಮಾಣಕ್ಕೆ ನೆರೆ ರಾಜ್ಯಗಳ ಅನುಮತಿ ಅಗತ್ಯ ಇಲ್ಲ ಎಂದು ಅಧಿಕೃತವಾಗಿ ಹೇಳಿಕೆ ನೀಡಿದೆ. ನ್ಯಾಯಾಲಯವು ಅಣೆಕಟ್ಟೆ ನಿರ್ಮಾಣದ ಪರವಾಗಿದೆ.ರಾಜ್ಯ ಸರ್ಕಾರ ವಿಳಂಬ ಮಾಡದೇ ಕೂಡಲೇ ವಿಸ್ತೃತ ಯೋಜನಾ ವರದಿಯಲ್ಲಿನ ಸಣ್ಣಪುಟ್ಟ ಲೋಪದೋಷಗಳನ್ನು ಸರಿ ಪಡಿಸಿ, ಪರಿಷ್ಕೃತ ವರದಿಯನ್ನು ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸಬೇಕೆಂದು ವಿರೋಧ ಪಕ್ಷದ ನಾಯಕರುಗಳು ಸಲಹೆ ನೀಡಿದ್ದಾರೆ.

ಕೆಂದ್ರ ಸರ್ಕಾರ ರಾಜ್ಯದ ಹಿತರಕ್ಷಣೆ ವಿಚಾರವಾಗಿ ಸಹಕಾರ ನೀಡುತ್ತವೆ ಎಂದು ಮುಖ್ಯಮಂತ್ರಿಯವರು ಸಭೆಗೆ ತಿಳಿಸಿದ್ದಾರೆ. ಸಕಾಲಿಕವಾಗಿ ಸರ್ವ ಪಕ್ಷ ಸಭೆ ಕರೆದ ಮುಖ್ಯಮಂತ್ರಿಯವರ ನಡೆಗೆ ವಿರೋಧ ಪಕ್ಷಗಳು ಮೆಚ್ಚುಗೆ ವ್ಯಕ್ತಪಡಿಸಿವೆ.ಉತ್ತಮ ಮಳೆಯಾಗುತ್ತಿದೆ ಎಂಬ ಕಾರಣಕ್ಕೆ ತಮಿಳುನಾಡಿಗೆ ನೀರು ಹರಿಸುವ ಬದಲಾಗಿ ರಾಜ್ಯದ ಕೆರೆ ಕಟ್ಟೆಗಳು ಮತ್ತು ನಾಲೆಗಳಿಗೆ ನೀರು ಹರಿಸಿ ನಮ ನೀರಿನ ಭದ್ರತೆಯನ್ನು ಖಾತ್ರಿ ಪಡಿಸಿಕೊಳ್ಳಬೇಕೆಂದು ವಿರೋಧ ಪಕ್ಷದ ಸದಸ್ಯರು ಒತ್ತಾಯಿಸಿದ್ದಾರೆ.
ಸರ್ವಪಕ್ಷಗಳ ಸಭೆ ಕರೆದಿರುವಾಗ ಇಲ್ಲಿ ಚರ್ಚೆಯಾಗಿ, ನಿರ್ಣಯ ಕೈಗೊಳ್ಳುವ ಮೊದಲೇ ತಮಿಳುನಾಡಿಗೆ ನೀರು ಹರಿಸಿರುವುದು ಸರಿಯಲ್ಲ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಸಚಿವ ಎಚ್.ಕೆ.ಪಾಟೀಲ್, ಜಲ ಸಂಪನೂಲ ಇಲಾಖೆಯ ಮಾಜಿ ಸಚಿವ ಎಂ.ಬಿ.ಪಾಟೀಲ್ ಮತ್ತು ಕಾನೂನು ತಜ್ಞರು ಪ್ರಸ್ತುತ ಕಾನೂನು ಸಂಘರ್ಷದ ವಿಚಾರಗಳನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ.
ಮೇಕೆದಾಟು-ಕಳಸಾ ಬಂಡೂರಿ ಅಣೆಕಟ್ಟುಗಳ ನಿರ್ಮಾಣ, ಭದ್ರಾ ಮೇಲ್ದಂಡೆ ಯೋಜನೆ ಸೇರಿದಂತೆ ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳ ವಿಚಾರವಾಗಿ ಕೇಂದ್ರದ ಗಮನ ಸೆಳೆಯಲು ಸರ್ವಪಕ್ಷ ಗಳ ನಿಯೋಗವನ್ನು ದೆಹಲಿಗೆ ಕರೆದೊಯ್ದು ಪ್ರಧಾನಿಯವರನ್ನು ಭೇಟಿ ಮಾಡುವಂತೆ ಸಲಹೆ ಕೇಳಿ ಬಂದಿದೆ.
ರಾಜಕೀಯ ಸಂಘರ್ಷಕ್ಕೆ ಅವಕಾಶ ಮಾಡಿಕೊಡದೇ ನಾಡಿನ ಹಿತರಕ್ಷಣೆಯ ವಿಚಾರವಾಗಿ ಒಮತದ ಅಭಿಪ್ರಾಯಗಳಿರಬೇಕೆಂಬ ಚರ್ಚೆಗಳಾಗಿವೆ. ಸಿಡಬ್ಲ್ಯೂಎಂಎ ಆದೇಶದ ಕುರಿತಂತೆ ಸುಪ್ರೀಂಕೋರ್ಟ್ಗೆ ಮೇಲನವಿ ಸಲ್ಲಿಸಲು ಸಲಹೆಗಳು ಕೇಳಿ ಬಂದಿದ್ದು, ಈಗಾಗಲೇ ಮೇಲನವಿ ಸಲ್ಲಿಸಲಾಗಿದೆ ಎಂದು ಮುಖ್ಯಮಂತ್ರಿಯವರು ಸ್ಪಷ್ಟನೆ ನೀಡಿದ್ದಾರೆ.
ಕೃಷ್ಣಾ, ಗೋದಾವರಿ, ಕಾವೇರಿ ನದಿ ಜೋಡಣೆಗಳ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗದಂತೆ ಎಚ್ಚರಿಕೆ ವಹಿಸಲು ರಾಜಕೀಯ ಪಕ್ಷಗಳ ಮುಖಂಡರುಗಳು ಸಲಹೆ ನೀಡಿದ್ದಾರೆ. ಮಾಜಿ ಮುಖ್ಯಮಂತ್ರಿಗಳು ತಮ ಅನುಭವವನ್ನು ವಿವರಿಸಿದರೆ, ಕೇಂದ್ರ ಸಚಿವರು ರಾಜ್ಯ ಸರ್ಕಾರ ಅನುಸರಿಸಬೇಕಾದ ಕಾರ್ಯತಂತ್ರಗಳ ಬಗ್ಗೆ ತಿಳಿವಳಿಕೆ ನೀಡಿದ್ದಾರೆ.
ಕಾನೂನಾತಕ ಹೋರಾಟದ ಜೊತೆಗೆ, ಮಾತುಕತೆಯ ಮೂಲಕವೂ ವಿವಾದವನ್ನು ಬಗೆಹರಿಸುವ ಪ್ರಯತ್ನಕ್ಕೆ ಸರ್ವಪಕ್ಷಗಳ ನಾಯಕರುಗಳು ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೆ ತಮಿಳುನಾಡು ಮುಖ್ಯಮಂತ್ರಿಯವರೊಂದಿಗೆ ಭವಿಷ್ಯದಲ್ಲಿ ನಡೆಯುವ ಸಭೆಯಲ್ಲಿ ರಾಜ್ಯದ ಹಿತರಕ್ಷಣೆಗೆ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸಲು ಒತ್ತಾಯಿಸಿದ್ದಾರೆ.
ರಾಜಕೀಯಕ್ಕಿಂತ ರೈತರ ಹಿತವೇ ಮುಖ್ಯ
ಬೆಂಗಳೂರು, ಆ.2- ರಾಜಕೀಯಕ್ಕಿಂತ ರೈತರ ಮತ್ತು ಜನರ ಹಿತರಕ್ಷಣೆಯೇ ಮುಖ್ಯವಾಗಿದೆ. ಕುಡಿಯುವ ನೀರಿನ ಭದ್ರತೆಗೆ ತಮ ಸರ್ಕಾರ ಬದ್ಧವಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.ಕಾವೇರಿ ನೀರಿನ ಹಂಚಿಕೆ ವಿಚಾರವಾಗಿ ನಡೆದ ಸರ್ವಪಕ್ಷ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ರಾಜ್ಯದ ಹಿತಾಸಕ್ತಿ ಮತ್ತು ಕುಡಿಯುವ ನೀರಿನ ರಕ್ಷಣೆಯೇ ಸರ್ಕಾರದ ಮೊದಲ ಆದ್ಯತೆ ಎಂದು ಸ್ಪಷ್ಟಪಡಿಸಿದರು.
ಕಾವೇರಿ ವಿವಾದ ನಮಗೂ ಹೊಸದಲ್ಲ, ನಿಮಗೂ ಹೊಸದಲ್ಲ. ಈ ವಿವಾದದೊಂದಿಗೆ ನಾವು ಬೆಳೆದಿದ್ದೇವೆ. ರಾಜಕೀಯಕ್ಕಿಂತ ರಾಜ್ಯದ ರೈತರ ಹಾಗೂ ಜನರ ಹಿತವೇ ಮುಖ್ಯ. ರಾಜ್ಯದ ಹಿತಾಸಕ್ತಿ ವಿಷಯ ಬಂದಾಗ ರಾಜಕೀಯವನ್ನು ಪಕ್ಕಕ್ಕಿಟ್ಟು ಎಲ್ಲ ರಾಜಕೀಯ ಪಕ್ಷಗಳು ಒಗ್ಗಟ್ಟಿನಿಂದ ನಿಂತಿರುವ ಚರಿತ್ರೆ ಕರ್ನಾಟಕಕ್ಕಿದೆ.
ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕು ಎಂಬುದು ಸರ್ಕಾರದ ದೃಢ ನಿಲುವಾಗಿದೆ. ಈ ವಿಚಾರದಲ್ಲಿ ಸರ್ವಪಕ್ಷಗಳಿಗೂ ಸಂಪೂರ್ಣ ಸಹಮತವಿದೆ ಎಂಬ ವಿಶ್ವಾಸ ನನಗಿದೆ ಎಂದರು.
ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯೂಆರ್ಸಿ) ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲೂಎಂಎ) ಸಭೆಗೂ ಮುನ್ನವೇ ಕೇಂದ್ರ ಸಚಿವರಾದ ಸಿ.ಆರ್. ಪಾಟೀಲ್, ಪ್ರಹ್ಲಾದ್ ಜೋಶಿ ಹಾಗೂ ವಿ. ಸೋಮಣ್ಣ ಅವರನ್ನು ಭೇಟಿ ಮಾಡಿ ರಾಜ್ಯದ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟಿದ್ದೆ.
ಅದೇ ರೀತಿ ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮಾಯಿ ಹಾಗೂ ಜಗದೀಶ್ ಶೆಟ್ಟರ್ ಅವರನ್ನೂ ಭೇಟಿ ಮಾಡಿ ರಾಜ್ಯದ ಪರವಾಗಿ ಬೆಂಬಲ ಕೋರಲಾಗಿತ್ತು.ಕೇಂದ್ರ ಸಚಿವರು ಹಾಗೂ ಮಾಜಿ ಮುಖ್ಯಮಂತ್ರಿಗಳು ರಾಜ್ಯದ ಪರವಾಗಿ ತಮ ಧ್ವನಿಯನ್ನು ಎತ್ತಿದ್ದು, ಅವರಿಗೆ ಸರ್ಕಾರದ ಪರವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದಿದ್ದಾರೆ.ದೆಹಲಿಯಲ್ಲಿ ನಡೆದ ಕರ್ನಾಟಕದ ಸಂಸತ್ ಸದಸ್ಯರ ಸಭೆಯಲ್ಲಿಯೂ ಪಕ್ಷಭೇದ ಮರೆತು ಎಲ್ಲರೂ ರಾಜ್ಯದ ಹಿತಾಸಕ್ತಿಗಾಗಿ ಒಗ್ಗಟ್ಟಿನಿಂದ ನಿಲ್ಲುವ ಭರವಸೆ ನೀಡಿದ್ದಾರೆ. ಅವರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ಮಾತುಕತೆಗೆ ಬರುತ್ತೇನೆ ಎಂದು ಹೇಳಿದರು. ಕಾವೇರಿ ಪರಿಸ್ಥಿತಿ ತಿಳಿಯಾದ ನಂತರ ಬರುವಂತೆ ಸಲಹೆ ನೀಡಿದ್ದೇನೆ. ಈಗ ಸಮಾಧಾನದ ಸಂಗತಿ ಅಂದರೆ ಉತ್ತಮ ಮಳೆಯಾಗುತ್ತಿದೆ. ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಇವೆ ಎಂದರು.ನದಿ ನೀರಿನ ಹಂಚಿಕೆ ವಿಚಾರದಲ್ಲಿ ಸೌಹಾರ್ದಯುತ ಸಮಸ್ಯೆ ನಿವಾರಣೆಗೆ ನಮ ಆದ್ಯತೆ. ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ನೀರು ಸಂಗ್ರಹಿಸಿದ್ದೇವೆ. ಕಬಿನಿ ಜಲಾಶಯ ತುಂಬಿದೆ. ಹೆಚ್ಚುವರಿ ಒಳ ಹರಿವು ಸಂಗ್ರಹ ಮಾಡಿಟ್ಟುಕೊಳ್ಳಲು ಸಾಧ್ಯ ಇಲ್ಲ. ಹೀಗಾಗಿ ಸಹಜ ಹರಿವು ಮಾತ್ರ ಆಗುತ್ತಿದೆ ಎಂದು ಹೇಳಿದರು.
ಕೊಡಗು ಭಾಗದಲ್ಲಿ ಮಳೆಯಾಗುತ್ತಿರುವುದರಿಂದ ಕಾವೇರಿ ನದಿ ಪಾತ್ರದ ಜಲಾಶಯಗಳಲ್ಲಿ 57 ಟಿಎಂಸಿ ನೀರು ಲಭ್ಯವಿದೆ. ರೈತರು ಈಗಾಗಲೇ ಹಾಕಿದ್ದ ಬೆಳೆಗಳನ್ನು ರಕ್ಷಿಸುವ ಉದ್ದೇಶದಿಂದ ಕೆಆರ್ಎಸ್, ಕಬಿನಿ ನಾಲೆಗಳಿಗೆ ನೀರು ಹರಿಸಲಾಗಿದೆ ಎಂದು ಹೇಳಿದರು.ರಾಜಕಾರಣ ಏನೇ ಇದ್ದರೂ ಅದನ್ನೆಲ್ಲಾ ಬಿಟ್ಟು ರಾಜ್ಯದ ರೈತರ ಹಿತರಕ್ಷಣೆಗಾಗಿ ಮೊದಲಿನಿಂದಲೂ ಒಗ್ಗಟ್ಟಿನ ಹೋರಾಟ ನಡೆಸಿಕೊಂಡು ಬಂದಿದ್ದೇವೆ. ಹೊರಗಡೆ ಏನೇ ಹೇಳಿಕೆ ನೀಡಿದರೂ ರಾಜ್ಯದ ಹಿತ ರಕ್ಷಣೆ ವಿಷಯದಲ್ಲಿ ಎಲ್ಲರೂ ಸಹಕಾರ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದರು.ಬರ ಪರಿಸ್ಥಿತಿಯ ಬಗ್ಗೆ ಪ್ರಧಾನಿಯವರು ಮೊದಲೇ ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕುಡಿಯುವ ನೀರಿಗೆ ಮೊದಲ ಆದ್ಯತೆ, ಕೃಷಿಗೆ ನಂತರ ಆದ್ಯತೆ ಎಂದು ತಾವು ಮೊದಲೇ ಸ್ಪಷ್ಟಪಡಿಸಿದ್ದಾಗಿ ತಿಳಿಸಿದ್ದರು.
ಕಾವೇರಿ ವಿಚಾರವಾಗಿ ಎಲ್ಲರಿಗೂ ವಾಸ್ತವದ ಅರಿವಿದೆ. ತಮಿಳುನಾಡು 9.9ಟಿಎಂಸಿ ನೀರಿಗಾಗಿ ಮನವಿ ಮಾಡಿದೆ. ಭೀಕರ ಬರ ಪರಿಸ್ಥಿತಿ ಇದೆ. ಸಿಡಬ್ಲ್ಯೂಎಂಎ ಆದೇಶವನ್ನು ಪ್ರಶ್ನಿಸಿ ಈಗಾಗಲೇ ಮೇಲನವಿ ಸಲ್ಲಿಸಿದ್ದೇವೆ ಎಂದು ಹೇಳಿದರು.
ಕೇಂದ್ರ ಸಚಿವ ಸಿ.ಆರ್.ಪಾಟೀಲ್ ಕೃಷ್ಣ ನದಿ ನೀರಿನ ವಿಚಾರವಾಗಿ ಸಂಪೂರ್ಣ ಸಹಕಾರ ನೀಡಿದ್ದಾರೆ. ನವಿಲೆ ಸಮತೋಲಿತ ಅಣೆಕಟ್ಟೆ ನಿರ್ಮಾಣ ಪ್ರಸ್ತಾವಕ್ಕೆ ಸಮತಿ ಸೂಚಿಸಿದ್ದಾರೆ. ಕೃಷ್ಣ, ಗೋದಾವರಿ, ಕಾವೇರಿ ಜೋಡಣೆ ಪ್ರಸ್ತಾವ, ಕೃಷ್ಣ ನದಿ ನೀರಿನ ಹಂಚಿಕೆಗೆ ಸಮನ್ವಯಕ್ಕೆ ನೆರವು ನೀಡಿದ್ದಾರೆ ಎಂದರು.
ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ, ಸದಾನಂದ ಗೌಡ, ಬಸವರಾಜ ಬೊಮಾಯಿ, ಕೇಂದ್ರ ಸಚಿವರಾದ ವಿ.ಸೋಮಣ್ಣ, ಶೋಭಾ ಕರಂದ್ಲಾಜೆ, ಉಪಮುಖ್ಯಮಂತ್ರಿ ಜಿ.ಪರಮೇಶ್ವರ, ಸಚಿವರಾದ ರಾಮಲಿಂಗಾ ರೆಡ್ಡಿ, ಕೃಷ್ಣಭೈರೇಗೌಡ, ಎಂ.ಬಿ.ಪಾಟೀಲ್, ಕೆ.ಜೆ.ಜಾರ್ಜ್, ನವದೆಹಲಿಯಲ್ಲಿ ಕರ್ನಾಟಕದ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಸಂಸತ್ ಸದಸ್ಯ ಗೋವಿಂದ ಕಾರಜೋಳ, ವಿರೋಧ ಪಕ್ಷದ ನಾಯಕರಾದ ಅಶೋಕ್, ಛಲವಾದಿ ನಾರಾಯಣಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್, ಮಾಜಿ ಸಚಿವರಾದ ಎಚ್.ಕೆ.ಪಾಟೀಲ್, ಚೆಲುವರಾಯ ಸ್ವಾಮಿ, ಸಿ.ಎಸ್.ಪುಟ್ಟರಾಜು, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್ ಬಾಬು, ಎಸ್.ಎಲ್.ಬೋಜೇಗೌಡ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ನಿವೃತ್ತ ನ್ಯಾಯಾಧೀಶ ನ್ಯಾ. ನಾಗಮೋಹನದಾಸ್, ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಮುಖ್ಯಮಂತ್ರಿಯವರ ವಿಶೇಷ ಸಲಹೆಗಾರ ಜಿ.ಸಿ.ಚಂದ್ರಶೇಖರ್, ಆರ್ಥಿಕ ಸಲಹೆಗಾರ ಎಲ್.ಕೆ.ಅತೀಕ್, ಅಪರ ಮುಖ್ಯಕಾರ್ಯದರ್ಶಿ ತುಷಾರ್ ಗಿರಿನಾಥ್ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಹಾಜರಿದ್ದರು.
