ಬೆಂಗಳೂರು, ಆ.2- ರಾಜ್ಯ ಸರ್ಕಾರದ ಬಹು ನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆಗೆ ನಾಳೆ ಸಂಜೆ 4.05 ನಿಮಿಷಕ್ಕೆ ಮುಹೂರ್ತ ನಿಗದಿಯಾಗಿದ್ದರೂ, ಈವರೆಗೂ ನೂತನ ಸಚಿವರ ಪಟ್ಟಿ ಬಗ್ಗೆ ಅಸ್ಪಷ್ಟತೆ ಇರುವುದು ಚರ್ಚೆಗೆ ಗ್ರಾಸವಾಗಿದೆ.
ನಿರೀಕ್ಷೆಯಂತೆ ಎಲ್ಲವೂ ನಡೆದರೆ, ಲೋಕಭವನದಲ್ಲಿ ನಾಳೆ ಸಂಜೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸಂಪುಟದ ಸರಿ ಸುಮಾರು 18 ಜನರಿಗೆ ಪ್ರಮಾಣವಚನ ಬೋಧಿಸಲಿದ್ದಾರೆ. ಬಾಕಿ ಇನ್ನೆರಡು ಸ್ಥಾನಗಳಿಗೆ ಮುಂದಿನ ದಿನಗಳಲ್ಲಿ ನೇಮಕಾತಿ ಮಾಡುವ ಭರವಸೆ ನೀಡಲಾಗಿದೆ.
ಕಾಂಗ್ರೆಸ್ ಹೈಕಮಾಂಡ್ ಇದೇ ಮೊದಲ ಬಾರಿಗೆ ಹಿಂದೆಂದೂ ಇಲ್ಲದಷ್ಟು ಹಸ್ತಕ್ಷೇಪವನ್ನು ಸಚಿವ ಸಂಪುಟ ವಿಸ್ತರಣೆಯಲ್ಲಿ ನಡೆಸಿರುವ ಆರೋಪಗಳು ಕೇಳಿ ಬರುತ್ತಿವೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರುಗಳ ಪಟ್ಟಿ ಒಂದೆಡೆಯಾದರೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪಟ್ಟಿಯೇ ಬೇರೆಯಾಗಿದೆ.
ಇದರ ನಡುವೆ 2023ರ ವಿಧಾನಸಭೆ ಚುನಾವಣೆಗೂ ಮುನ್ನ ರಾಜ್ಯ ಕಾಂಗ್ರೆಸ್ನ ರಣತಂತ್ರ ತಂಡದಲ್ಲಿ ಪ್ರಮುಖರಾಗಿ ಕೆಲಸ ಮಾಡಿದ್ದ ನಿವೃತ್ತ ಐಎಎಸ್ ಅಧಿಕಾರಿ ಮತ್ತು ಹಾಲಿ ತಮಿಳುನಾಡಿನ ಸಂಸದ ಸಸಿಕಾಂತ್ ಸೆಂಥಿಲ್ ಮತ್ತು ಚುನಾವಣಾ ರಣತಂತ್ರಗಾರ ಸುನೀಲ್ ಕನುಗೋಳ್ ಅವರು ನೀಡಿರುವ ವರದಿ ರಾಜಕೀಯವಾಗಿ ಅಲ್ಲೋಲಕಲ್ಲೋಲ ವಾತಾವರಣ ನಿರ್ಮಿಸಿದೆ.
ಹಾಲಿ ಸಚಿವರುಗಳ ಕಾರ್ಯ ದಕ್ಷತೆ, ಇಲಾಖಾ ನಿರ್ವಹಣೆ ಸಾಮರ್ಥ್ಯವನ್ನು ಆಧರಿಸಿ ಸಂಪುಟ ಮರು ಸೇರ್ಪಡೆಗೆ ಅವಕಾಶ ಕಲ್ಪಿಸಬೇಕು ಎಂದು ಶಿಫಾರಸು ಮಾಡಲಾಗಿದೆ. ಅದರ ಜೊತೆಗೆ ಪಕ್ಷ ನಿಷ್ಠರಾಗಿರುವವರನ್ನು ಮತ್ತು ನಾಯಕತ್ವಕ್ಕೆ ವಿರುದ್ಧವಾಗಿ ಮಾತನಾಡದೇ ಇರುವವರನ್ನು, ಪ್ರಮುಖವಾಗಿ ಮೂಲ ಕಾಂಗ್ರೆಸಿಗರನ್ನು ಈ ಬಾರಿ ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂದು ಸಲಹೆ ನೀಡಿದ್ದಾರೆ.
ಇದರಿಂದಾಗಿ ಸಿದ್ದರಾಮಯ್ಯ ನೀಡಿರುವ ಪಟ್ಟಿ ಬಗ್ಗೆ ಗಂಭೀರ ಚರ್ಚೆಗಳಾಗಿದ್ದವು. ಮೂಲ ಕಾಂಗ್ರೆಸಿಗರನ್ನು ಮಾತ್ರ ಪರಿಗಣಿಸಬೇಕು ಎಂದರೆ ಬಹಳಷ್ಟು ಮಂದಿ ಅವಕಾಶ ವಂಚಿತರಾಗುವ ಸಾಧ್ಯತೆ ಇದೆ. ಇದು ರಾಜ್ಯ ರಾಜಕಾರಣದಲ್ಲಿ ಸುನಾಮಿ ಸೃಷ್ಟಿಸಲಿದೆ.
ಸುನೀಲ್ ಕನುಗೋಳ್ ಮತ್ತು ಸಸಿಕಾಂತ್ ಸೆಂಥಿಲ್ ಅವರ ತಂಡ ಸಚಿವರಾಗುವವರನ್ನು ನೇರವಾಗಿ ಸಂಪರ್ಕಿಸಿ ಮಾತುಕತೆ ನಡೆಸುತ್ತಿದೆ ಎಂಬ ಆಕ್ಷೇಪಗಳಿವೆ. ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದ ಜಮೀರ್ ಅಹಮದ್ ಖಾನ್ ಅವರ ಬದಲಿಗೆ, ಶಿವಾಜಿನಗರದ ಶಾಸಕ ರಿಜ್ವಾನ್ ಅರ್ಷದ್ ಅವರನ್ನು ಪರಿಗಣಿಸಬೇಕು. ವಿಧಾನ ಪರಿಷತ್ ಸದಸ್ಯ ಎನ್.ಎಸ್. ಬೋಸ್ರಾಜ್ ಅವರಿಗೆ ಮತ್ತೆ ಅವಕಾಶ ನೀಡಬೇಕು ಎಂದು ವರದಿಯಲ್ಲಿ ಶಿಫಾರಸು ಇರುವುದು ಅನುಮಾನ ಮೂಡಿಸಿದೆ.
ಕಾಂಗ್ರೆಸ್ ಶಾಸಕರು ಚುನಾವಣಾ ರಣನೀತಿಗಾರರ ವಿರುದ್ಧ ತೀವ್ರ ಅಸಮಾಧಾನ ಹೊಂದಿದ್ದು, ಸಂಪುಟದಲ್ಲಿ ಸ್ಥಾನ ಕೊಡಿಸಲು ವ್ಯವಹಾರ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಾರಿ ಅಸಹಾಯಕರಾದಂತೆ ಕಂಡು ಬರುತ್ತಿದೆ.
ನಾಳೆ ಸಂಪುಟ ವಿಸ್ತರಣೆಗೆ ಸಮಯ ನಿಗದಿ ಮಾಡಲಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲ ಅವರು ಇಂದು ಸಂಜೆ ಅಥವಾ ನಾಳೆ ಬೆಳಗ್ಗೆ ಬೆಂಗಳೂರಿಗೆ ಅಗಮಿಸುವ ಸಾಧ್ಯತೆ ಇದ್ದು, ತಮೊಂದಿಗೆ ನೂತನ ಸಚಿವರ ಪಟ್ಟಿಯನ್ನು ತರಲಿದ್ದಾರೆ ಎಂದು ಹೇಳಲಾಗುತ್ತಿದೆ.
ರಾಜ್ಯದ ನಾಯಕರಿಗೆ ಯಾವುದೇ ಸುಳಿವು ನೀಡದೇ ಸಂಪುಟ ಆಕಾಂಕ್ಷಿಗಳ ಜೊತೆ ನೇರವಾಗಿ ಚುನಾವಣಾ ರಣತಂತ್ರಗಾರರು ಸಂಪರ್ಕ ಮಾಡುತ್ತಿರುವುದು ಕುತೂಹಲ ಕೆರಳಿಸಿದೆ.
ರಹಸ್ಯ ವರದಿ ನೆಪದಲ್ಲಿ ಕೆಲ ನಾಯಕರು ತಮ ಸ್ವಹಿತಾಸಕ್ತಿಯನ್ನು ಈಡೇರಿಸಿಕೊಳ್ಳುತ್ತಿದ್ದಾರೆ. ರಾಜಕೀಯವಾಗಿ ಅಪಥ್ಯವಾಗಿರುವವರನ್ನು ತುಳಿಯುವ ಯತ್ನಗಳು ನಡೆದಿವೆ ಎಂದು ಕೆಲ ಶಾಸಕರು ಕಿಡಿ ಕಾರಿದ್ದಾರೆ. ರಾಹುಲ್ ಗಾಂಧಿಯವರಿಗೆ ನೀಡಿರುವ ವರದಿ ರಾಜ್ಯ ರಾಜಕಾರಣವನ್ನು ದಿಕ್ಕು ತಪ್ಪಿಸುತ್ತಿದೆ ಎಂದು ಕೆಲ ಶಾಸಕರು ಅಸಮಾಧಾನ ಹೊರಹಾಕುತ್ತಿದ್ದಾರೆ.
