ಬೆಂಗಳೂರು,ಆ.3- ಬಸ್ ಟಿಕೆಟ್ ದರ ಹೆಚ್ಚಳದ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ, ಈ ಕುರಿತು ಅಧ್ಯಯನ ನಡೆಸಿ ವರದಿ ನೀಡಲು ನಿವೃತ್ತ ಐಎಎಸ್ ಅಧಿಕಾರಿ ಅತುಲ್ ಕುಮಾರ್ ತಿವಾರಿ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ. ಈ ಸಮಿತಿಯು ನಾಲ್ಕೂ ಸಾರಿಗೆ ನಿಗಮಗಳ ಆರ್ಥಿಕ ಸ್ಥಿತಿಗತಿಗಳು, ನಷ್ಟದ ಪ್ರಮಾಣ ಹಾಗೂ ಪ್ರಯಾಣಿಕರ ಮೇಲಾಗುವ ಆರ್ಥಿಕ ಪರಿಣಾಮಗಳ ಕುರಿತು ಸಮಗ್ರವಾಗಿ ಪರಿಶೀಲಿಸಿ ಸರ್ಕಾರಕ್ಕೆ ಶಿಫಾರಸ್ಸುಗಳನ್ನು ಸಲ್ಲಿಸಲಿದೆ.
ಸಮಿತಿಯ ವರದಿ ಸಲ್ಲಿಕೆಯಾದ ಬಳಿಕ, ಸರ್ಕಾರ ಕೈಗೊಳ್ಳುವ ಅಂತಿಮ ನಿರ್ಧಾರದ ಆಧಾರದ ಮೇಲೆ ದರ ಏರಿಕೆಯ ಅಧಿಕೃತ ಆದೇಶ ಹೊರಬೀಳಲಿದೆ.ಸಮಿತಿಯ ವರದಿ ಹಾಗೂ ಸರ್ಕಾರದ ಹಸಿರು ನಿಶಾನೆಯ ಬಳಿಕ ದರ ಏರಿಕೆ ಜಾರಿಗೆ ಬರುವುದು ಖಚಿತ ಎನ್ನಲಾಗುತ್ತಿದ್ದು, ಇದು ಲಕ್ಷಾಂತರ ದೈನಂದಿನ ಪ್ರಯಾಣಿಕರಿಗೆ ಬರೆ ಎಳೆಯಲಿದೆ. ನಿಗಮಗಳ ಪ್ರಸ್ತಾವನೆ ಸಾರಿಗೆ ನಿಗಮಗಳು ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ಬೇರೆ ಬೇರೆ ಪ್ರಮಾಣದ ದರ ಏರಿಕೆಗೆ ಬೇಡಿಕೆ ಇಟ್ಟಿವೆ.
ಬಿಎಂಟಿಸಿ : ಬೆಂಗಳೂರು ಮಹಾನಗರ ಸಾರಿಗೆ ನಿಗಮವು ನಗರ ಪ್ರದೇಶದ ಪ್ರಯಾಣಿಕರ ದರವನ್ನು ಶೇ. 44ರಷ್ಟು ಹೆಚ್ಚಿಸುವಂತೆ ಪ್ರಸ್ತಾಪಿಸಿದೆ.ಕೆಎಸ್‌ಆರ್‌ಟಿಸಿ : ರಾಜ್ಯದ ಇತರೆ ಭಾಗಗಳಿಗೆ ಸಂಚರಿಸುವ ಬಸ್‌ಗಳ ಟಿಕೆಟ್ ದರವನ್ನು ಶೇ. 33ರಷ್ಟು ಹೆಚ್ಚಿಸಲು ಮನವಿ ಮಾಡಲಾಗಿದೆ.
ದರ ಏರಿಕೆಗೆ ಕಾರಣವೇನು? :
ಜಾಗತಿಕ ಮಟ್ಟದಲ್ಲಿ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ಏರಿಳಿತ ಉಂಟಾಗಿದ್ದು, ಪರಿಣಾಮವಾಗಿ ಡೀಸೆಲ್ ಬೆಲೆಯಲ್ಲಿ ಗಣನೀಯ ಹೆಚ್ಚಳವಾಗಿದೆ. ಲೀಟರ್‌ಗೆ ಸುಮಾರು 8 ರೂಪಾಯಿಯಷ್ಟು ಡೀಸೆಲ್ ದರ ಹೆಚ್ಚಾಗಿರುವುದರಿಂದ ನಿಗಮಗಳ ದೈನಂದಿನ ಕಾರ್ಯಾಚರಣೆ ವೆಚ್ಚವು ದುಬಾರಿಯಾಗಿದೆ.
ಈಗಿರುವ ಹಳೆಯ ದರದಲ್ಲೇ ಸಾರಿಗೆ ಸೇವೆಗಳನ್ನು ಮುಂದುವರಿಸಿದರೆ ನಿಗಮಗಳ ಮೇಲೆ ಕೋಟ್ಯಂತರ ರೂಪಾಯಿಗಳ ಹೆಚ್ಚುವರಿ ಆರ್ಥಿಕ ಹೊರೆ ಬೀಳಲಿದೆ. ವಾರ್ಷಿಕವಾಗಿ ಅಂದಾಜು 480 ಕೋಟಿ ರೂಪಾಯಿಗೂ ಅಧಿಕ ನಷ್ಟ ಉಂಟಾಗುವ ಸಾಧ್ಯತೆಯಿದೆ ಎಂದು ನಿಗಮಗಳು ಕಳವಳ ವ್ಯಕ್ತಪಡಿಸಿವೆ.
ಮಧ್ಯಪ್ರಾಚ್ಯದಲ್ಲಿನ ಭೌಗೋಳಿಕ ರಾಜಕೀಯ ಬಿಕ್ಕಟ್ಟು ಹಾಗೂ ತೈಲ ಬೆಲೆ ಏರಿಕೆಯ ಬಿಸಿ ಇದೀಗ ಕರ್ನಾಟಕದ ಸಾರಿಗೆ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳಿಸುವ ಮುನ್ಸೂಚನೆ ನೀಡಿದೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನಾಲ್ಕೂ ಸಾರಿಗೆ ನಿಗಮಗಳು ಬಸ್ ಟಿಕೆಟ್ ದರವನ್ನು ಗಣನೀಯವಾಗಿ ಹೆಚ್ಚಿಸುವಂತೆ ಕೋರಿ ರಾಜ್ಯ ಸರ್ಕಾರಕ್ಕೆ ಅಧಿಕೃತ ಪ್ರಸ್ತಾವನೆ ಸಲ್ಲಿಸಿವೆ.
