ಬೆಂಗಳೂರು,ಆ.3- ವಿಧಾನಸಭೆಯ ಸಭಾಧ್ಯಕ್ಷ, ಉಪಸಭಾಧ್ಯಕ್ಷ, ವಿಧಾನಪರಿಷತ್‌ನ ಸಭಾಪತಿ, ಉಪಸಭಾಪತಿ ಬದಲಾವಣೆಗೆ ಕಾಂಗ್ರೆಸ್ ಹೈಕಮಾಂಡ್ ಅನುಮೋದನೆ ನೀಡಿದ್ದು, ಹೊಸಬರ ಹೆಸರುಗಳನ್ನು ಅನುಮೋದಿಸಿದೆ.ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂಪುಟದಲ್ಲಿ ವಿಧಾನಸಭಾಧ್ಯಕ್ಷರಾಗಿದ್ದ ಯು.ಟಿ.ಖಾದರ್ ಅವರು ಆರೋಗ್ಯ ಸಚಿವರಾಗಿದ್ದಾರೆ.
ಇಂದು ಸಂಜೆ ವಿಧಾನಸಭೆ ಉಪಸಭಾಧ್ಯಕ್ಷರಾಗಿದ್ದ ರುದ್ರಪ್ಪ ಮಾನಪ್ಪ ಲಮಾಣಿಯವರು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದರಿಂದ ವಿಧಾನಸಭೆಯ ಸಭಾಧ್ಯಕ್ಷ ಹಾಗೂ ಉಪಸಭಾಧ್ಯಕ್ಷ ಸ್ಥಾನಗಳು ತೆರವಾಗಿವೆ.
ತೆರವಾಗಿರುವ ವಿಧಾನಸಭಾಧ್ಯಕ್ಷ ಸ್ಥಾನಕ್ಕೆ ಶಾಸಕ ಜಿ.ಎಸ್.ಪಾಟೀಲ್ ಹಾಗೂ ಉಪಸಭಾಧ್ಯಕ್ಷ ಸ್ಥಾನಕ್ಕೆ ಶಾಸಕ ಎ.ಎಸ್.ಪೊನ್ನಣ್ಣ ಅವರನ್ನು ಆಯ್ಕೆ ಮಾಡಲು ಕಾಂಗ್ರೆಸ್ ಹೈಕಮಾಂಡ್ ಅನುಮೋದನೆ ನೀಡಿದೆ.
ಹಾಗೆಯೇ ವಿಧಾನಪರಿಷತ್‌ನ ಸಭಾಪತಿ ಸ್ಥಾನಕ್ಕೆ ವಿಧಾನಪರಿಷತ್‌ನ ಮುಖ್ಯ ಸಚೇತಕ ಸಲೀಂ ಅಹಮದ್ ಅವರನ್ನು ಹಾಗೂ ಉಪಸಭಾಪತಿ ಸ್ಥಾನಕ್ಕೆ ಮಾಜಿ ಸಚಿವೆ ಉಮಾಶ್ರೀ ಅವರನ್ನು ಆಯ್ಕೆ ಮಾಡಲು ಹೈಕಮಾಂಡ್ ಅನುಮೋದಿಸಿದೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌ರವರು ಹಳೇ ಮೈಸೂರು ಹಾಗೂ ದ.ಕರ್ನಾಟಕ ಭಾಗಕ್ಕೆ ಸೇರಿದವರಾಗಿದ್ದಾರೆ. ಹೀಗಾಗಿ ಉ.ಕರ್ನಾಟಕ ಭಾಗದ ಜಿ.ಎಸ್.ಪಾಟೀಲ್ ಅವರನ್ನು ಸ್ಪೀಕರ್ ಸ್ಥಾನಕ್ಕೆ ಹಾಗೂ ಸಲೀಂ ಅಹಮದ್ ಅವರನ್ನು ಸಭಾಪತಿ ಸ್ಥಾನಕ್ಕೆ ಆಯ್ಕೆ ಮಾಡಲು ಅನುಮೋದನೆ ನೀಡಲಾಗಿದೆ.
ಜಿ.ಎಸ್.ಪಾಟೀಲ್ ಅವರು ಮಾಜಿ ಸಚಿವ ಎಚ್.ಕೆ.ಪಾಟೀಲ್ ಅವರ ಹತ್ತಿರದ ಸಂಬಂಧಿಯಾಗಿದ್ದಾರೆ. ಯು.ಟಿ.ಖಾದರ್ ಅವರು ವಿಧಾನಸಭಾಧ್ಯಕ್ಷರಾಗಿದ್ದರು. ಈಗ ಅದೇ ಸಮುದಾಯಕ್ಕೆ ಸೇರಿದ ಸಲೀಂ ಅಹಮದ್‌ರನ್ನು ಸಭಾಪತಿಯಾಗಿ ಮಾಡಲಾಗುತ್ತಿದೆ.
ಉಪಸಭಾಪತಿಯಾಗಲಿರುವ ಉಮಾಶ್ರೀಯವರೂ ಕೂಡಾ ಉ.ಕರ್ನಾಟಕ ಭಾಗದವರೇ ಆಗಿದ್ದಾರೆ.
ಸಂಪುಟ ವಿಸ್ತರಣೆಯ ವಿಚಾರಗಳು ಚರ್ಚೆಯಾಗುತ್ತಿದ್ದ ಸಂದರ್ಭದಲ್ಲಿ ವಿಧಾನಸಭಾಧ್ಯಕ್ಷರ ಸ್ಥಾನಕ್ಕೆ ಹಿರಿಯ ಶಾಸಕರಾದ ಎಚ್.ಕೆ.ಪಾಟೀಲ್, ಟಿ.ಬಿ.ಜಯಚಂದ್ರ, ಆರ್.ವಿ.ದೇಶಪಾಂಡೆ, ದಿನೇಶ್ ಗುಂಡೂರಾವ್ ಹೆಸರುಗಳು ಚಲಾವಣೆಯಲ್ಲಿದ್ದವು.ಹೈಕಮಾಂಡ್‌ನಿಂದ ಬಿಡುಗಡೆಯಾಗಿರುವ ಪಟ್ಟಿಯಲ್ಲಿ ಈ ಯಾವ ಹೆಸರುಗಳೂ ಇಲ್ಲದೆ ಹೊಸದಾಗಿ ಜಿ.ಎಸ್.ಪಾಟೀಲ್ ಅವರ ಹೆಸರು ಸೇರ್ಪಡೆಗೊಂಡಿರುವುದು ಅಚ್ಚರಿ ಮೂಡಿಸಿದೆ.
