Homeರಾಜ್ಯಕಾಫಿನಾಡಿನಲ್ಲಿ ಐವರು ಅಕ್ರಮ ಬಾಂಗ್ಲಾದೇಶದ ಪ್ರಜೆಗಳು ಪತ್ತೆ

ಕಾಫಿನಾಡಿನಲ್ಲಿ ಐವರು ಅಕ್ರಮ ಬಾಂಗ್ಲಾದೇಶದ ಪ್ರಜೆಗಳು ಪತ್ತೆ

Five illegal Bangladeshi nationals found in Chikkamagaluru

ಚಿಕ್ಕಮಗಳೂರು, ಆ.5- ಜಿಲ್ಲೆಯ ಕಾಫಿ ತೋಟಗಳು, ಹೋಂಸ್ಟೇಗಳು ಹಾಗೂ ರೆಸಾರ್ಟ್‌ಗಳಲ್ಲಿ ಅಕ್ರಮವಾಗಿ ಬಾಂಗ್ಲಾದೇಶದ ಪ್ರಜೆಗಳು ನೆಲೆಸಿದ್ದಾರೆ ಎಂಬ ಆರೋಪಗಳ ನಡುವೆಯೇ, ಕೇಂದ್ರ ಗುಪ್ತಚರ ಇಲಾಖೆಯ ಮಾಹಿತಿಯ ಆಧಾರದ ಮೇಲೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಐವರು ಅಕ್ರಮ ಬಾಂಗ್ಲಾದೇಶದ ಪ್ರಜೆಗಳನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತರನ್ನು ಜಹಾಂಗೀರ್‌, ಫೈಸುದ್ದಿನ್‌, ನುಮನ್‌ ಬಶೀರ್‌, ಮಹಮದ್‌ ಹುಮೈನ್‌ ಹಾಗೂ ಮಹಮದ್‌ ಹಸೀಬುಲ್‌ ಎಂದು ಗುರುತಿಸಲಾಗಿದೆ. ಇವರು ಕಾಫಿ ತೋಟಗಳು ಹಾಗೂ ಕಟ್ಟಡ ನಿರ್ಮಾಣ ಕಾಮಗಾರಿಗಳಲ್ಲಿ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದು, ಅವರ ಬಳಿಯಿಂದ ಬಾಂಗ್ಲಾದೇಶದ ಗುರುತಿನ ಚೀಟಿಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಎರಡು ತಿಂಗಳಿಂದ ಹೊರರಾಜ್ಯ ಹಾಗೂ ಹೊರಜಿಲ್ಲೆಯಿಂದ ಆಗಮಿಸುತ್ತಿರುವ ಕಾರ್ಮಿಕರ ಮಾಹಿತಿ ಸಂಗ್ರಹಿಸುತ್ತಿದ್ದ ಪೊಲೀಸ್‌‍ ಇಲಾಖೆ, ಕೇಂದ್ರ ಗುಪ್ತಚರ ಇಲಾಖೆಯಿಂದ ದೊರೆತ ಮಾಹಿತಿಯ ಮೇರೆಗೆ ಬಣಕಲ್‌ ಸಮೀಪ ಪರಿಶೀಲನೆ ನಡೆಸಿದ ವೇಳೆ ಇವರನ್ನು ಪತ್ತೆಹಚ್ಚಿದೆ. ಬಂಧಿತರನ್ನು ಜಿಲ್ಲೆಗೆ ಕರೆತಂದವರು ಯಾರು, ಉದ್ಯೋಗಕ್ಕೆ ಸೇರಿಸಿದವರು ಹಾಗೂ ಸಂಪರ್ಕ ಜಾಲದ ಬಗ್ಗೆ ತನಿಖೆ ಮುಂದುವರಿದಿದೆ.

ಜಿಲ್ಲಾ ಪೊಲೀಸ್‌‍ ವರಿಷ್ಠಾಧಿಕಾರಿ ಜೀತೇಂದ್ರ ಕುಮಾರ್‌ ದಯಾಮಾ ಮಾತನಾಡಿ, ಪ್ರಕರಣದ ಸಮಗ್ರ ತನಿಖೆ ನಡೆಯುತ್ತಿದ್ದು, ಕಾನೂನು ಪ್ರಕಾರ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಈ ಮಧ್ಯೆ, ಅಕ್ರಮ ಬಾಂಗ್ಲಾದೇಶದ ಪ್ರಜೆಗಳನ್ನು ಪತ್ತೆಹಚ್ಚಿದ ಪೊಲೀಸ್‌‍ ಇಲಾಖೆಯ ಕ್ರಮವನ್ನು ಬಜರಂಗದಳ ಮುಖಂಡ ಶಾಮ್‌ ವಿ.ಗೌಡ ಸ್ವಾಗತಿಸಿದ್ದು, ಬಂಧಿತರಿಂದ ಮಾಹಿತಿ ಪಡೆದು ಅಕ್ರಮ ವಲಸಿಗರ ಸಂಪೂರ್ಣ ಜಾಲವನ್ನು ಪತ್ತೆಹಚ್ಚುವಂತೆ ಆಗ್ರಹಿಸಿದ್ದಾರೆ.

RELATED ARTICLES
spot_img

Latest News