Homeರಾಜಕೀಯಸಿಎಂ ಆದ ಬಳಿಕ ಮೃದುವಾಯಿತೇ ಡಿಕೆಶಿ ಧೋರಣೆ..?

ಸಿಎಂ ಆದ ಬಳಿಕ ಮೃದುವಾಯಿತೇ ಡಿಕೆಶಿ ಧೋರಣೆ..?

ಬೆಂಗಳೂರು, ಆ.20- ‘ದ್ವೇಷ ರಾಜಕಾರಣ ಮಾಡುವುದಿಲ್ಲ, ಅಭಿವೃದ್ಧಿಗೆ ಪಕ್ಷಾತೀತವಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ. ಎಲ್ಲರೂ ಸಹಕಾರ ನೀಡಿ’ ಎಂದು ಡಿ.ಕೆ. ಶಿವಕುಮಾರ್‌ ಕೈಮುಗಿದು ಮನವಿ ಮಾಡಿದ್ದು ಯಾರಿಗೆ ಎಂಬ ಪ್ರಶ್ನೆ ಇದೀಗ ರಾಜಕೀಯ ವಲಯದಲ್ಲಿ ಮೂಡಿದೆ.

ವಿಧಾನಸಭೆಯಲ್ಲಿ ವಿರೋಧ ಪಕ್ಷಗಳು ನಾಗೇಂದ್ರ ಅವರ ಪ್ರಕರಣವನ್ನು ಮುಂದಿಟ್ಟುಕೊಂಡು ನಾಲ್ಕು ದಿನಗಳ ಕಲಾಪವನ್ನು ಹದಗೆಡಿಸಿವೆ. ಒಂದು ವೇಳೆ ಸುಗಮ ಕಲಾಪ ನಡೆದಿದ್ದರೆ ರಾಜ್ಯ ಸರ್ಕಾರದ ಹಲವು ಹುಳುಕುಗಳು ಹೊರಬರುತ್ತಿದ್ದವು. ಮುಖ್ಯಮಂತ್ರಿ ಸೇರಿದಂತೆ ಸಚಿವರು ಭಾರೀ ಮುಜುಗರಕ್ಕೆ ಒಳಗಾಗಬೇಕಾಗುತ್ತಿತ್ತು. ಒಂಬತ್ತು ಮಂದಿ ಮೊದಲ ಬಾರಿಗೆ ಸಚಿವರಾಗಿರುವುದರಿಂದ ಇನ್ನೂ ಇಲಾಖೆಗಳನ್ನೇ ಪರಿಚಯಿಸಿಕೊಳ್ಳಬೇಕಿದೆ. ಅವರಿಗೆ ವಿರೋಧ ಪಕ್ಷಗಳ ಪ್ರಶ್ನೆಗಳನ್ನು ಎದುರಿಸುವುದು ಕಷ್ಟವಾಗುತ್ತಿತ್ತು. ಇದನ್ನು ಅರ್ಥ ಮಾಡಿಕೊಂಡಂತೆ ವಿರೋಧ ಪಕ್ಷದ ನಾಯಕರು ಸುಗಮ ಕಲಾಪಕ್ಕೆ ಅವಕಾಶ ನೀಡಿಲ್ಲ. ಇದು ಒಂದು ರೀತಿಯಲ್ಲಿ ಆಡಳಿತ ಪಕ್ಷಕ್ಕೆ ವರದಾನವಾಗಿದೆ.

ಮತ್ತೊಂದೆಡೆ ಕಾಂಗ್ರೆಸ್‌ನಲ್ಲಿ ಶಾಸಕರ ಒಗ್ಗಟ್ಟಿನ ಕೊರತೆ ಎದ್ದು ಕಾಣುತ್ತಿದೆ. ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಶಾಸಕರಲ್ಲಿದ್ದ ಒಮ್ಮತ ಈಗ ಕಾಣುತ್ತಿಲ್ಲ. ವಿರೋಧ ಪಕ್ಷಗಳು ಸರ್ಕಾರವನ್ನು ವಾಚಾಮಗೋಚರವಾಗಿ ಟೀಕಿಸುತ್ತಿದ್ದರೂ ಬೆರಳೆಣಿಕೆಯಷ್ಟು ಶಾಸಕರು ಮಾತ್ರ ಪ್ರತಿಕ್ರಿಯಿಸುತ್ತಿದ್ದಾರೆ. ಬಹುತೇಕ ಶಾಸಕರು ಕುಳಿತೇ ಇರುವುದೂ ಕಂಡುಬಂದಿದೆ. ಇನ್ನೂ ಕೆಲ ಶಾಸಕರು ಗಲಾಟೆ ಸಂದರ್ಭದಲ್ಲಿ ಸದನದಿಂದ ಹೊರಗುಳಿದು, ಮೊಗಸಾಲೆಯಲ್ಲಿ ಕುಳಿತುಕೊಂಡು ಗಲಾಟೆಗೂ ತಮಗೂ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ.

ಸಚಿವ ಸ್ಥಾನ ಸಿಗದಿರುವ ಹಿರಿಯ ಶಾಸಕರಾದ ಟಿ.ಬಿ. ಜಯಚಂದ್ರ, ಎಂ. ಕೃಷ್ಣಪ್ಪ, ಬಿ.ಆರ್. ಪಾಟೀಲ್‌ ಸೇರಿದಂತೆ ಕೆಲವರು ಸದನಕ್ಕೆ ಬರುತ್ತಿಲ್ಲ. ಸಚಿವ ಸ್ಥಾನ ಪಡೆದವರು ಹಾಗೂ ನಿಗಮ-ಮಂಡಳಿಗಳ ಮೇಲೆ ಕಣ್ಣಿಟ್ಟಿರುವವರು ಮಾತ್ರ ಸದನದಲ್ಲಿ ಸರ್ಕಾರದ ಪರವಾಗಿ ಧ್ವನಿ ಎತ್ತುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡನೇ ದಿನದ ಕಲಾಪಕ್ಕೆ ಆಗಮಿಸಿದ ಬಳಿಕ ತಮ್ಮ ಪಾಡಿಗೆ ತಾವು ಇದ್ದಾರೆ. ಅವರನ್ನು ಬೆಂಬಲಿಸುವ ಬಹುತೇಕ ಶಾಸಕರು ಸದನದಿಂದ ದೂರವೇ ಉಳಿದಿರುವುದು ಕಂಡುಬರುತ್ತಿದೆ. ಒಂದು ವೇಳೆ ವಿರೋಧ ಪಕ್ಷಗಳು ವಿಷಯಾಧಾರಿತ ಚರ್ಚೆಗೆ ಮುಂದಾದರೆ, ಸದನದಲ್ಲಿ ಸರ್ಕಾರವನ್ನು ಸಮರ್ಥಿಸಿಕೊಳ್ಳಲು ಶಾಸಕರ ಕೊರತೆ ಎದ್ದು ಕಾಣುವ ಸಾಧ್ಯತೆಯಿದೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ನಡುವೆ ಉತ್ತಮ ಸಂಬಂಧವಿದೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದ್ದರೂ, ಇತ್ತೀಚೆಗೆ ಒಬ್ಬೊಬ್ಬರು ಒಂದೊಂದು ದಿಕ್ಕಿನಲ್ಲಿ ಸಾಗುತ್ತಿರುವಂತೆ ಕಾಣುತ್ತಿದೆ. ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚೆಗಾಗಿ ದೆಹಲಿಗೆ ಭೇಟಿ ನೀಡಬೇಕಾದ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಜೊತೆಯಾಗಿಯೇ ವಿಶೇಷ ವಿಮಾನದಲ್ಲಿ ದೆಹಲಿಗೆ ಪ್ರಯಾಣಿಸಿದ್ದರು.

ನಿನ್ನೆ ದೆಹಲಿಯಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಭಾಗವಹಿಸಲು ಇಬ್ಬರೂ ಪ್ರತ್ಯೇಕವಾಗಿ ತೆರಳಿದ್ದಾರೆ. ಸಭೆಯಲ್ಲಿ ಹಾಗೂ ಸಭೆಯ ಬಳಿಕವೂ ಇಬ್ಬರ ನಡುವೆ ಹೆಚ್ಚಿನ ಮಾತುಕತೆ ನಡೆದಿರುವುದು ಕಂಡುಬಂದಿಲ್ಲ. ಈ ಎಲ್ಲ ಅಂಶಗಳನ್ನು ಪರಿಗಣಿಸಿದರೆ, ಡಿ.ಕೆ. ಶಿವಕುಮಾರ್‌ ‘ಸಹಕಾರ ನೀಡಿ’ ಎಂದು ಕೇಳಿಕೊಂಡಿದ್ದು ಯಾರ ಬಳಿ ಎಂಬ ಪ್ರಶ್ನೆ ಉದ್ಭವಿಸುತ್ತದೆ.

ವಿರೋಧ ಪಕ್ಷಗಳು ಅಗತ್ಯಕ್ಕಿಂತಲೂ ಹೆಚ್ಚು ಡಿ.ಕೆ. ಶಿವಕುಮಾರ್‌ ಅವರಿಗೆ ಸಹಕಾರ ನೀಡುತ್ತಿರುವುದು ಕಂಡುಬರುತ್ತಿದೆ. ಆದರೆ, ಸ್ವಪಕ್ಷೀಯರೇ ಮುಖ್ಯಮಂತ್ರಿ ವಿರುದ್ಧ ಒಳಗೊಳಗೆ ಮಸಲತ್ತು ನಡೆಸುತ್ತಿದ್ದಾರೆ ಎಂಬ ಗುಮಾನಿಗಳೂ ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.

ಡಿ.ಕೆ. ಶಿವಕುಮಾರ್‌ ರಾಜಕಾರಣದಲ್ಲಿ ‘ಬಂಡೆ’ ಎಂದೇ ಗುರುತಿಸಿಕೊಂಡಿದ್ದಾರೆ. ಆದರೆ ಮುಖ್ಯಮಂತ್ರಿಯಾದ ಬಳಿಕ ಅವರ ನಡವಳಿಕೆಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನದ ಭಾಗವಾಗಿ ಅವರು ಅತ್ಯಂತ ಮೃದು ಧೋರಣೆಯನ್ನು ಪಾಲಿಸುತ್ತಿದ್ದಾರೆ ಎನ್ನಲಾಗುತ್ತಿದೆ.

RELATED ARTICLES
spot_img

Latest News