ಬೆಂಗಳೂರು, ಆ.22- ಉದ್ದು, ಹುರಳಿ ಹಪ್ಪಳ, ಗಿರ್ ತಳಿಯ ಗಿಣ್ಣು, ಸಿರಿಧಾನ್ಯಗಳ ಅಂಬಲಿ, ಮೊಹಬ್ಬತ್ ಶರ್ಬತ್ (ಕಲ್ಲಂಗಡಿ), ಸಾವಯವ ತರಕಾರಿ ಹಾಗೂ ಹಣ್ಣುಗಳನ್ನು ಸವಿದು ನಗರದ ಜನತೆ ಸಂಭ್ರಮಿಸಿದರು.
ಜಿಕೆವಿಕೆ ಆವರಣದ ಗಣಪತಿ ದೇವಸ್ಥಾನದ ಸಮೀಪದ ಗುಂಡುತೋಪಿನಲ್ಲಿ ಆಯೋಜಿಸಿದ್ದ ರೈತಸಂತೆಯಲ್ಲಿ ಜೈವಿಕ ಗೊಬ್ಬರದ ಕ್ಯಾಪ್ಸೂಲ್ಗಳು, ಅವಕಾಡೊ ಟೋಸ್ಟ್, ಸ್ವರ್ಣಧಾರ ಕೋಳಿ, ನಾಟಿ ಮೊಟ್ಟೆ ಹಾಗೂ ಇತರ ಉತ್ಪನ್ನಗಳು ಗ್ರಾಹಕರನ್ನು ಆಕರ್ಷಿಸಿದವು.
ಇತ್ತೀಚಿನ ದಿನಗಳಲ್ಲಿ ಕೈತೋಟಗಳ ಪ್ರವೃತ್ತಿ ಹೆಚ್ಚಾಗಿದ್ದು, ದೊಡ್ಡ ಚೀಲಗಳಲ್ಲಿ ಗೊಬ್ಬರವನ್ನು ಕೊಂಡೊಯ್ಯುವುದು ಕಷ್ಟಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ರೈತರು ಹಾಗೂ ನಗರ ತೋಟಗಾರಿಕೆ ಮಾಡುವವರ ಅನುಕೂಲಕ್ಕಾಗಿ ಜೈವಿಕ ಗೊಬ್ಬರದ ಕ್ಯಾಪ್ಸೂಲ್ಗಳು ರೈತಸಂತೆಯಲ್ಲಿ ಆಕರ್ಷಣೀಯವಾಗಿದ್ದವು.
ಸೂಕ್ಷ್ಮಜೀವಿಗಳ ಸಮೂಹವನ್ನು ಒಳಗೊಂಡಿರುವ ಈ ಕ್ಯಾಪ್ಸೂಲ್ಗಳು ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಂಡು ಉತ್ತಮ ಇಳುವರಿ ನೀಡಲು ಸಹಕಾರಿಯಾಗುತ್ತವೆ. ಉದ್ದು ಹಾಗೂ ಹುರಳಿಯಿಂದ ತಯಾರಿಸಿದ ಹಪ್ಪಳಗಳು ವಿಶೇಷ ಉತ್ಪನ್ನವಾಗಿದ್ದು, ಸಾಂಪ್ರದಾಯಿಕ ಆಹಾರ ಪದ್ಧತಿಯನ್ನು ಉಳಿಸಿಕೊಂಡು ತಯಾರಿಸಲಾದ ಈ ಹಪ್ಪಳಗಳಿಗೆ ಬೇಡಿಕೆ ಹೆಚ್ಚಾಗಿತ್ತು. ಹಾಲಿನೊಂದಿಗೆ ತಾಜಾ ಕಲ್ಲಂಗಡಿ ಹಣ್ಣಿನಿಂದ ತಯಾರಿಸಲಾದ ಮೊಹಬ್ಬತ್ ಶರ್ಬತ್ ರೈತಸಂತೆಯಲ್ಲಿ ಜನಪ್ರಿಯ ಆಕರ್ಷಣೆಯಾಗಿತ್ತು.
ಪೌಷ್ಟಿಕಾಂಶಭರಿತ ಜೋಳದಿಂದ ತಯಾರಿಸಿದ ಅಂಬಳಿ, ಸಾಂಪ್ರದಾಯಿಕ ಪಾನೀಯಗಳು ಹಾಗೂ ಸಿರಿಧಾನ್ಯಗಳಿಂದ ತಯಾರಿಸಲಾದ ಪಾನೀಯಗಳು ದೇಹಕ್ಕೆ ತಂಪು ಹಾಗೂ ಶಕ್ತಿ ನೀಡುವ ಪೌಷ್ಟಿಕ ಪಾನೀಯಗಳಾಗಿದ್ದು, ಈ ಕುರಿತು ರೈತರು ಹಾಗೂ ಗ್ರಾಹಕರಲ್ಲಿ ಅರಿವು ಮೂಡಿಸಲಾಯಿತು.
ತಾಜಾ ಅವಕಾಡೊ ಬಳಸಿ ತಯಾರಿಸಲಾದ ಟೋಸ್ಟ್ ರೈತಸಂತೆಯಲ್ಲಿ ಆರೋಗ್ಯಕರ ಆಹಾರದ ವಿಶೇಷ ಆಕರ್ಷಣೆಯಾಗಿತ್ತು. ಇದರ ಜೊತೆಗೆ ಸುಗಂಧಯುಕ್ತ ಔಷಧೀಯ ಸಸ್ಯಗಳು, ಅಲಂಕಾರಿಕ ಗಿಡಗಳು, ಪಶುಸಂಗೋಪನೆ, ಎತ್ತಿನ ಬಂಡಿ ಸವಾರಿ ಸೇರಿದಂತೆ ಹಲವು ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಎಲ್ಲರನ್ನೂ ಆಕರ್ಷಿಸಿತು.
ವಿವಿ ಕುಲಪತಿ ಡಾ. ಎಸ್.ವಿ. ಸುರೇಶ್, ವಿಸ್ತರಣಾ ನಿರ್ದೇಶಕ ಡಾ. ವೈ.ಎನ್. ಶಿವಲಿಂಗಯ್ಯ, ಕುಲಸಚಿವ ಮಧುಸೂದನ್, ಸಂಶೋಧನಾ ನಿರ್ದೇಶಕ ಡಾ. ಮೂಡಲಗಿರಿಯಪ್ಪ, ಡಾ. ರಘುಪ್ರಸಾದ್ ಹಾಗೂ ಇತರ ಅಧಿಕಾರಿಗಳು ಪ್ರತಿಯೊಂದು ಮಳಿಗೆಗೂ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಪಡೆದರು.
