ಬೆಂಗಳೂರು, ಸೆ.10- ಸಿಎಂ ಡಿ.ಕೆ.ಶಿವಕುಮಾರ್ ಅವರ ಸರ್ಕಾರಕ್ಕೆ 100 ದಿನಗಳು ತುಂಬಿದ ಸಂದರ್ಭದಲ್ಲಿ ರಾಜ್ಯಾದ್ಯಂತ 15 ಲಕ್ಷ ನಿವೇಶನಗಳ ಹಂಚಿಕೆ ಹಾಗೂ ದೃಢ ಕರ್ನಾಟಕ ನಿರ್ಮಾಣದ ಸಂಕಲ್ಪವನ್ನು ಘೋಷಿಸಲಾಗಿದೆ.ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ಶತಕದ ಪಥ ಪ್ರಗತಿಯ ರಥ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹಲವು ರೀತಿಯ ಜನ ಕಲ್ಯಾಣ ಯೋಜನೆಗಳನ್ನು ಪ್ರಕಟಿಸಿದ್ದಾರೆ.ಯುವ ಜನರಿಗೆ, ರೈತರಿಗೆ, ಮಹಿಳೆಯರ ಸಮಗ್ರ ಅಭಿವೃದ್ಧಿಗೆ ಕೆಲವು ಯೋಜನೆಗಳನ್ನು ಘೋಷಿಸಲಾಗಿದೆ. ಆರಂಭದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ,
ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಮಾತ್ರ ಆಸೀನರಾಗಿದ್ದರು.
ಕಾರ್ಯಕ್ರಮವನ್ನು ವಿಭಿನ್ನವಾಗಿ ಆಯೋಜಿಸಲಾಗಿತ್ತು. ಗ್ರೇಟರ್ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಕಾರ್ಯಕ್ರಮಕ್ಕೆ ಎಲ್ಲರನ್ನೂ ಸ್ವಾಗತಿಸಿದರು. ಈ ವೇಳೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಎಷ್ಟೇ ಅಡೆ-ತಡೆಗಳು ಇದ್ದರೂ ಜಗ್ಗದ ಛಲದಂಕಮಲ್ಲ ಎಂದು ಹೊಗಳಿದರು. ಸಿದ್ದರಾಮಯ್ಯ ಅವರು ದೇಶಕ್ಕೆ ಮಾದರಿ ರಾಜಕಾರಣಿ ಎಂದು ಬಣ್ಣಿಸಿದರು. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಪ್ರಾಸ್ತಾವಿಕ ಮಾತುಗಳನ್ನಾಡಿ, ಹಿಂದಿನ ಬಿಜೆಪಿ ಸರ್ಕಾರದ ಭ್ರಷ್ಟಾಚಾರದಿಂದ ಬೇಸತ್ತ ಜನ ಕಾಂಗ್ರೆಸ್ಗೆ ಮತ ಹಾಕಿದ್ದರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು. ಆ ನಂತರ ಡಿ.ಕೆ.ಶಿವಕುಮಾರ್ ಈಗ ಮುಖ್ಯಮಂತ್ರಿಯಾಗಿದ್ದಾರೆ ಎಂದು ವಿವರಿಸಿದರು.
ರಾಜ್ಯದಲ್ಲಿ 150 ವರ್ಷಗಳ ಬಳಿಕ ಭೀಕರ ಬರಗಾಲ ಎದುರಾಗಿದೆ. ಹಿಂದೆ ನೆರೆ ಪರಿಸ್ಥಿತಿಗಾಗಿ ಸುಪ್ರೀಂಕೋರ್ಟ್ ಮೊರೆ ಹೋಗಿ ಪರಿಹಾರ ಪಡೆಯಬೇಕಾಗಿತ್ತು. ಜಿಎಸ್ಟಿ ತೆರಿಗೆ ಪದ್ಧತಿ ಮತ್ತು 15ನೇ ಹಣಕಾಸು ಆಯೋಗದಿಂದ ರಾಜ್ಯಕ್ಕಾಗಿರುವ ಸಾವಿರಾರು ಕೋಟಿ ರೂ. ನಷ್ಟ ಪರಿಹಾರವನ್ನು ಕೇಂದ್ರ ಸರ್ಕಾರ ಪಾವತಿಸಿಲ್ಲ ಎಂದರು.ಬರ ನಿರ್ವಹಣೆಗೆ ರಾಜ್ಯ ಸರ್ಕಾರ ವ್ಯಾಪಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರ ರಾಜ್ಯದ ನೆರವಿಗೆ ಬರುತ್ತಿಲ್ಲ ಎಂದು ಆರೋಪಿಸಿದರು.
ಭಾರತ್ ಜೋಡೋ ಸಂಘಗಳನ್ನು ರಚಿಸಲಾಗುತ್ತಿದೆ. ಡಿ.ಕೆ.ಶಿವಕುಮಾರ್ ಅವರ ಹೊಸ ನಾಯಕತ್ವ, ಹೊಸ ಆಲೋಚನೆಗಳ ಜೊತೆ ಸಿದ್ದರಾಮಯ್ಯ ಅವರ ಸರ್ಕಾರದ ಯೋಜನೆಗಳನ್ನು ಮುಂದುವರೆಸಲಾಗಿದೆ. ರೈತರ ಅಭಿವೃದ್ಧಿಗಾಗಿ ನೇಗಿಲ ಯೋಗಿ ಕಾರ್ಯಕ್ರಮ ಜಾರಿಗೊಳಿಸುವ ಕುರಿತು ನಿನ್ನೆ ಸಂಪುಟದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ. 3 ಎಕರೆಗಿಂತಲೂ ಕಡಿಮೆ ಜಮೀನು ಹೊಂದಿರುವ ರೈತರ ಭೂಮಿಯಲ್ಲಿ ಸರ್ಕಾರವೇ ಉಳುಮೆ ಮಾಡಿಸಲಿದೆ ಎಂದರು.
ಪ್ರಜಾಸೇವೆ ಇಲಾಖೆ ಮೂಲಕ ಜನರ ಮನೆ ಬಾಗಿಲಿಗೆ ಸರ್ಕಾರದ ಸೇವೆಗಳನ್ನು ಕಲ್ಪಿಸಲಾಗುತ್ತದೆ. ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆ ಕಲಿಸಲು ಕ್ರಮ ಕೈಗೊಳ್ಳಲಾದೆ ಕಂದಾಯ ಇಲಾಖೆಯಿಂದ ಡಿಜಿಟಲೈಜೆಷನ್ ಮೂಲಕ ಆಸ್ತಿ ದಾಖಲಾತಿಗಳನ್ನು ಕ್ರಮಬದ್ಧಗೊಳಿಸಲಾಗುತ್ತಿದೆ.
ಕೈಗಾರಿಕೆಗಳ ಪಕ್ಕದಲ್ಲಿ ಕಾರ್ಮಿಕರಿಗೆ ಮನೆ ಕಟ್ಟಿಕೊಡಲು ಶ್ರಮಿಕ ನಿವಾಸ, ರಸ್ತೆ ಬದಿಯಲ್ಲಿ ತೇಗದ ಮರ ಬೆಳೆಸಲು ಪಕ್ಕದ ಜಮೀನಿನ ರೈತರಿಗೆ ಅವಕಾಶ ಕಲ್ಪಿಸಿ, ಕಟಾವಿನ ವೇಳೆ ಶೇ. 70 ರಷ್ಟು ಪಾಲು ನೀಡಲು ನಿರ್ಧರಿಸಲಾಗಿದೆ.ನೂತನ ಜವಳಿ ನೀತಿ ಮೂಲಕ ಬೆಂಗಳೂರಿನಾಚೆ ಉದ್ಯಮಗಳ ಸ್ಥಾಪನೆ, ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘಗಳಿಗೆ ಚುನಾವಣೆ ನಡೆಸುವುದು ಸೇರಿದಂತೆ ಹಲವು ಪ್ರಮುಖ ನಿರ್ಧಾರಗಳನ್ನು ನಿನ್ನೆ ಸಂಪುಟದಲ್ಲಿ ತೆಗೆದುಕೊಳ್ಳಲಾಗಿದೆ.
ಶಕ್ತಿ ಯೋಜನೆಯ ಫಲಾನುಭವಿಗಳಿಗೆ ಸಾರ್ಟ್ಕಾರ್ಡ್ ನೀಡಲಾಗುತ್ತಿದೆ ಎಂದು ಹೇಳಿದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸಿ ಭಾಷಣ ಮಾಡಿ ತಮ ಸರ್ಕಾರದ ಅವಧಿಯ ಹಲವು ಯೋಜನೆಗಳ ಕುರಿತು ಸರಿಸಿಕೊಂಡರು. ಕಾರ್ಯಕ್ರಮದ ಕೇಂದ್ರ ಬಿಂದು ಡಿ.ಕೆ.ಶಿವಕುಮಾರ್ ಅವರು ಭಾಷಣದ ಬದಲಾಗಿ ಪ್ರಾತ್ಯಕ್ಷಿಕೆ ರೂಪದಲ್ಲಿ ತಮ ಸರ್ಕಾರದ ಗುರಿ, ಉದ್ದೇಶ ಹಾಗೂ ಭವಿಷ್ಯದ ಮುನ್ನೋಟಗಳ ಬಗ್ಗೆ ವಿವರಣೆ ನೀಡಿದರು. ಕಳೆದ 100 ದಿನಗಳಲ್ಲಿ ತಾವು ಕೈಗೊಂಡ ಯೋಜನೆಗಳ ಬಗ್ಗೆ ಸವಿಸ್ತಾರವಾದ ವರದಿಯನ್ನು ಮಂಡಿಸಿದರು. ನಂತರ ರಾಜ್ಯಾದ್ಯಂತ ದಿಂದ ಕಾರ್ಯಕ್ರಮಕ್ಕೆ ಆಗಮಿಸಿದ ಜನ ಪ್ರತಿನಿಧಿಗಳ ಜೊತೆ ಸಂವಾದ ನಡೆಸಿದ್ದು ವಿಶೇಷವಾಗಿತ್ತು. ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಸರಳ ಕಾರ್ಯಕ್ರಮದ ಮೊರೆ ಹೋಗಿರುವ ಡಿ.ಕೆ.ಶಿವಕುಮಾರ್ ಭಿನ್ನವಾದ ಮತ್ತು ಅರ್ಥಪೂರ್ಣವಾದ ಆಚರಣೆಯ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ.
