ಲಕ್ನೋ, ಆ.25- ಮುಸ್ಲಿಂ ಮಹಿಳೆಯರು ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.ಶಾಲಾ ಸಮವಸ್ತ್ರದ ಜೊತೆಗೆ ಹಿಜಾಬ್ ಧರಿಸಲು ಅನುಮತಿ ಕೋರಿ ವಿದ್ಯಾರ್ಥಿನಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ಶೈಕ್ಷಣಿಕ ಸಂಸ್ಥೆಗಳು ನಿಗದಿಪಡಿಸಿರುವ ಸಮವಸ್ತ್ರ ಸಂಹಿತೆಯನ್ನು ವಿದ್ಯಾರ್ಥಿಗಳು ತಮ್ಮ ವೈಯಕ್ತಿಕ ಆದ್ಯತೆಗಳಿಗೆ ಅನುಗುಣವಾಗಿ ಬದಲಾಯಿಸಿಕೊಳ್ಳುವ ಹಕ್ಕು ಹೊಂದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಪ್ರಯಾಗ್‌ರಾಜ್‌ನ ಖಾಸಗಿ ಶಾಲೆಯೊಂದರ ಅಪ್ರಾಪ್ತ ವಿದ್ಯಾರ್ಥಿನಿ ತನ್ನ ತಾಯಿಯ ಮೂಲಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. 10ನೇ ತರಗತಿ ಉತ್ತೀರ್ಣರಾಗಿ ಅದೇ ಶಾಲೆಯಲ್ಲಿ 11ನೇ ತರಗತಿಗೆ ಪ್ರವೇಶ ಪಡೆಯಲು ಬಯಸಿದ್ದ ಅವರು, ಶಾಲಾ ಸಮವಸ್ತ್ರದ ಜೊತೆಗೆ ಹಿಜಾಬ್ ಧರಿಸಲು ಅನುಮತಿ ನೀಡಬೇಕು ಎಂದು ಕೋರಿದ್ದರು. ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದ ಅತ್ಯಗತ್ಯ ಆಚರಣೆಯಾಗಿದ್ದು, 6ನೇ ತರಗತಿಯಿಂದಲೂ ತಾವು ಅದನ್ನು ಧರಿಸುತ್ತಿರುವುದಾಗಿ ಅರ್ಜಿಯಲ್ಲಿ ಉಲ್ಲೇಖಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜೆ.ಜೆ. ಮುನೀರ್ ಮತ್ತು ಇಂದ್ರಜಿತ್ ಶುಕ್ಲಾ ಅವರಿದ್ದ ದ್ವಿಸದಸ್ಯ ಪೀಠ, ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಎಂದು ಸ್ಪಷ್ಟಪಡಿಸಿತು. ಈ ವಿಷಯ ನ್ಯಾಯಾಲಯಗಳ ಮುಂದೆ ಬಂದಾಗಲೆಲ್ಲಾ ಹಿಜಾಬ್ ಧರಿಸದಿರುವುದರಿಂದ ಧರ್ಮಕ್ಕೆ ಯಾವುದೇ ಧಕ್ಕೆ ಉಂಟಾಗುವುದಿಲ್ಲ ಎಂಬ ನಿಲುವಿನ ತೀರ್ಪುಗಳು ಬಂದಿವೆ ಎಂದು ಪೀಠ ಉಲ್ಲೇಖಿಸಿತು.
ಶಾಲೆಯ ತರಗತಿಗಳ ಛಾಯಾಚಿತ್ರಗಳನ್ನು ಪರಿಶೀಲಿಸಿದ ನ್ಯಾಯಾಲಯ, ಅರ್ಜಿದಾರ ವಿದ್ಯಾರ್ಥಿನಿಯ ಸಮುದಾಯಕ್ಕೆ ಸೇರಿದ ಇತರ ಯಾವುದೇ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿರಲಿಲ್ಲ. ಕೇವಲ ಅರ್ಜಿದಾರ ವಿದ್ಯಾರ್ಥಿನಿ ಮಾತ್ರ ಹಿಜಾಬ್ ಧರಿಸಿದ್ದರು ಎಂಬುದನ್ನೂ ಗಮನಿಸಿತು. ಸಮವಸ್ತ್ರ ನಿಯಮವು ಎಲ್ಲಾ ವಿದ್ಯಾರ್ಥಿಗಳಿಗೂ ಸಮಾನವಾಗಿ ಅನ್ವಯಿಸುತ್ತದೆ. ವೈಯಕ್ತಿಕ ಆಯ್ಕೆಯ ಆಧಾರದ ಮೇಲೆ ಪ್ರತಿಯೊಬ್ಬ ವಿದ್ಯಾರ್ಥಿಗೂ ವಿನಾಯಿತಿ ನೀಡಿದರೆ ಸಮವಸ್ತ್ರದ ಮೂಲ ಪರಿಕಲ್ಪನೆ ಹಾಗೂ ಶಾಲೆಯ ಶಿಸ್ತು ಹಾಳಾಗುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳಿಗೆ ತಮ್ಮ ಆವರಣದಲ್ಲಿ ಸಮವಸ್ತ್ರ ಸಂಹಿತೆಯನ್ನು ಕಡ್ಡಾಯವಾಗಿ ಜಾರಿಗೊಳಿಸುವ ಸಂಪೂರ್ಣ ಸ್ವಾಯತ್ತತೆ ಹಾಗೂ ಹಕ್ಕು ಇದೆ. ಸಮವಸ್ತ್ರವು ತಾರತಮ್ಯವಿಲ್ಲದೆ ಸಮಾನತೆ ಮತ್ತು ಶಿಸ್ತನ್ನು ಕಾಪಾಡುವ ಉದ್ದೇಶ ಹೊಂದಿರುವವರೆಗೆ ಸಂಸ್ಥೆಯ ನಿರ್ಧಾರವೇ ಅಂತಿಮವಾಗಿರುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಶಾಲಾ ಆಡಳಿತ ಮಂಡಳಿ, ರಾಜ್ಯ ಸರ್ಕಾರ ಹಾಗೂ ಸಿಬಿಎಸ್‌ಇ ಕೂಡ ವಿದ್ಯಾರ್ಥಿನಿಯ ಅರ್ಜಿಯನ್ನು ವಿರೋಧಿಸಿದ್ದವು. ವಿವಿಧ ಸಮುದಾಯಗಳ ಮಕ್ಕಳು ಕಲಿಯುವ ಶಾಲೆಯಲ್ಲಿ ಒಬ್ಬ ವಿದ್ಯಾರ್ಥಿಗೆ ವಿಶೇಷ ವಿನಾಯಿತಿ ನೀಡಿದರೆ ಶಾಲೆಯ ಶಿಸ್ತು ಕದಡುವ ಸಾಧ್ಯತೆಯಿದೆ ಎಂಬ ಶಾಲೆಯ ವಾದವನ್ನು ನ್ಯಾಯಾಲಯ ಪುರಸ್ಕರಿಸಿದೆ.
