Homeರಾಜ್ಯಸಾಂಸ್ಕೃತಿಕ ನಗರಿ ಮೈಸೂರಿನತ್ತ ಗಜಪಯಣ ಆರಂಭ

ಸಾಂಸ್ಕೃತಿಕ ನಗರಿ ಮೈಸೂರಿನತ್ತ ಗಜಪಯಣ ಆರಂಭ

ಮೈಸೂರು, ಆ.26- ವಿಶ್ವವಿಖ್ಯಾತ ಮೈಸೂರು ದಸರಾ-2026ರ ಗಜಪಯಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಹುಣಸೂರು ತಾಲ್ಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ವೀರನಹೊಸಹಳ್ಳಿ ಮುಖ್ಯದ್ವಾರದ ಬಳಿ ಅದ್ಧೂರಿಯಾಗಿ ಚಾಲನೆ ನೀಡಿದರು.

ಗಜಪೂಜೆ ನೆರವೇರಿಸಿದ ಬಳಿಕ ಸಚಿವರು ಆನೆಗಳಿಗೆ ಬೆಲ್ಲ ಹಾಗೂ ಕಬ್ಬು ನೀಡಿ ಗಜಪಯಣಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮಕ್ಕೆ ಮೆರಗು ನೀಡಲು 8ಕ್ಕೂ ಹೆಚ್ಚು ಜಾನಪದ ಕಲಾ ತಂಡಗಳು ಡೊಳ್ಳು ಕುಣಿತ, ವೀರಗಾಸೆ, ಕಂಸಾಳೆ ಹಾಗೂ ಪೂಜಾ ಕುಣಿತ ಪ್ರದರ್ಶಿಸಿದವು. ಸ್ಥಳೀಯ ಶಾಲಾ-ಕಾಲೇಜು ವಿದ್ಯಾರ್ಥಿಗಳು ನಾಡಗೀತೆ ಹಾಗೂ ಜಾನಪದ ನೃತ್ಯ ಪ್ರದರ್ಶಿಸಿ ಗಮನ ಸೆಳೆದರು.

ಸುಮಾರು 170 ಮಹಿಳೆಯರು ಕಳಸ ಹೊತ್ತು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಎನ್‌.ಟಿ.ಆರ್‌. ಗೇಟ್‌ನಿಂದ ವೇದಿಕೆಯವರೆಗೆ ಸುಮಾರು ಒಂದು ಕಿ.ಮೀ. ಉದ್ದದ ಮಿನಿ ಮೆರವಣಿಗೆ ನಡೆಯಿತು.

9 ಆನೆಗಳು ಮೈಸೂರು ದಸರಾಗೆ

ಮೊದಲ ಹಂತದಲ್ಲಿ ಮಹೇಂದ್ರ, ಶ್ರೀಕಂಠ, ಲಕ್ಷ್ಮೀ, ಏಕಲವ್ಯ, ಧನಂಜಯ, ಗೋಪಿ, ಕಾವೇರಿ, ಪ್ರಶಾಂತ ಹಾಗೂ ಶ್ರೀರಾಮ ಸೇರಿದಂತೆ ಒಟ್ಟು 9 ಆನೆಗಳು ಮೈಸೂರು ದಸರಾಗೆ ಆಗಮಿಸಿದವು.ಕಳೆದ ಆರು ವರ್ಷಗಳಿಂದ ಚಿನ್ನದ ಅಂಬಾರಿ ಹೊತ್ತಿದ್ದ ಕ್ಯಾಪ್ಟನ್‌ ಅಭಿಮನ್ಯು ಆನೆಗೆ ಈ ಸಂದರ್ಭದಲ್ಲಿ ಮಾಲಾರ್ಪಣೆ ಮಾಡಿ, ಕಬ್ಬು ಹಾಗೂ ಬೆಲ್ಲ ನೀಡಲಾಯಿತು. ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅರಣ್ಯಾಧಿಕಾರಿಗಳ ಸಮ್ಮುಖದಲ್ಲಿ ಅಭಿಮನ್ಯುವಿಗೆ ಗೌರವಪೂರ್ವಕವಾಗಿ ಬೀಳ್ಕೊಡಲಾಯಿತು.

ಆನೆಗಳು ಸಾಂಕೇತಿಕವಾಗಿ ಹೆಜ್ಜೆ ಹಾಕಿದ ಬಳಿಕ ಲಾರಿಗಳ ಮೂಲಕ ಸಾಂಸ್ಕೃತಿಕ ನಗರಿ ಮೈಸೂರಿನತ್ತ ಪ್ರಯಾಣ ಬೆಳೆಸಿದವು.ವೀರನಹೊಸಹಳ್ಳಿ ಮುಖ್ಯದ್ವಾರದ ಬಳಿ ಇಂದು ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ರಸ್ತೆಯ ಎರಡೂ ಬದಿಗಳಲ್ಲಿ ಸ್ವಾಗತ ಕಮಾನುಗಳು, ತಳಿರು-ತೋರಣಗಳು ರಾರಾಜಿಸುತ್ತಿದ್ದವು. ಗಜಪಡೆಗಳು ಗಾಂಭೀರ್ಯದಿಂದ ನಿಂತಿದ್ದರೆ, ಪುರೋಹಿತರು ಪೂಜೆ ಸಲ್ಲಿಸಿದರು. ಬಳಿಕ ಆನೆಗಳು ಕಬ್ಬು ಹಾಗೂ ಬೆಲ್ಲ ಸವಿದು ಲಾರಿಗಳತ್ತ ಲವಲವಿಕೆಯಿಂದ ಹೆಜ್ಜೆ ಹಾಕಿದವು.

ಆನೆಗಳ ಜತೆಗೆ ಮಾವುತರು, ಕಾವಾಡಿಗರು ಹಾಗೂ ಅವರ ಕುಟುಂಬ ಸದಸ್ಯರೂ ಮೈಸೂರಿನತ್ತ ತೆರಳಿದರು. ಕಾರ್ಯಕ್ರಮದಲ್ಲಿ ಎಚ್‌.ಡಿ.ಕೋಟೆ ಶಾಸಕ ಅನಿಲ್‌ ಕುಮಾರ್‌ ಸಿ., ಹುಣಸೂರು ಶಾಸಕ ಜಿ.ಡಿ. ಹರೀಶ್‌ ಗೌಡ, ಕೆ.ಆರ್‌.ನಗರ ಶಾಸಕ ಡಿ. ರವಿಶಂಕರ್‌, ವಿಧಾನ ಪರಿಷತ್‌ ಸದಸ್ಯ ಸಿ.ಎನ್‌. ಮಂಜೇಗೌಡ, ಪ್ರಾದೇಶಿಕ ಆಯುಕ್ತ ನಿತೀಶ್‌ ಪಾಟೀಲ್‌, ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ಜಿಪಂ ಸಿಇಒ ಎಸ್‌. ಯುಕೇಶ್‌ ಕುಮಾರ್‌ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

RELATED ARTICLES
spot_img

Latest News