ನವದೆಹಲಿ, ಆ.27- ಸಂಸತ್ತಿನ ಮಳೆಗಾಲದ ಅಧಿವೇಶನ ಮುಕ್ತಾಯಗೊಂಡು ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದ್ದರೂ, ಸದನವನ್ನು ಔಪಚಾರಿಕವಾಗಿ ಮುಕ್ತಾಯಗೊಳಿಸದಿರುವ ಹಿನ್ನೆಲೆಯಲ್ಲಿ ಸಂಸತ್ತನ್ನು ಮತ್ತೆ ಕರೆಯುವ ಸಾಧ್ಯತೆಗಳ ಬಗ್ಗೆ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮಹತ್ವದ ಸುಳಿವು ನೀಡಿದ್ದಾರೆ.ಇಂಡಿಯಾ ಟುಡೇ ಟಿವಿಗೆ ನೀಡಿದ ಸಂದರ್ಶನದಲ್ಲಿ ಅವರು ಈ ಕುರಿತು ಮಾತನಾಡಿದ್ದು, ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ಕಳೆದ ಆ.13ರಂದು ಉಭಯ ಸದನಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದ್ದರೂ, ಇದುವರೆಗೂ ಅಧಿವೇಶನವನ್ನು ಔಪಚಾರಿಕವಾಗಿ ಮುಕ್ತಾಯಗೊಳಿಸಲಾಗಿಲ್ಲ. 1952ರಿಂದಲೂ ಸಂಸತ್ತಿನ ಅಧಿವೇಶನವನ್ನು ಔಪಚಾರಿಕವಾಗಿ ಮುಕ್ತಾಯಗೊಳಿಸದೆ, ಸದನವನ್ನು ಮತ್ತೆ ಕರೆಯಲಾದ ಹಲವು ನಿದರ್ಶನಗಳಿವೆ ಎಂದು ಕಿರಣ್ ರಿಜಿಜು ತಿಳಿಸಿದ್ದಾರೆ.
ಡಿಲಿಮಿಟೇಶನ್ (ಕ್ಷೇತ್ರ ಪುನರ್‌ವಿಂಗಡಣೆ) ಮಸೂದೆ ಹಾಗೂ ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆಯಂತಹ ಪ್ರಮುಖ ಬಾಕಿ ಮಸೂದೆಗಳನ್ನು ಮತ್ತೆ ಮಂಡಿಸಲು ಸರ್ಕಾರ ಇದೇ ಅಧಿವೇಶನವನ್ನು ಬಳಸಿಕೊಳ್ಳಬಹುದೆಂಬ ಚರ್ಚೆಗಳು ಮುನ್ನೆಲೆಗೆ ಬಂದಿವೆ.
ವಿಶೇಷ ಅಧಿವೇಶನ ಅಥವಾ ಸದನವನ್ನು ಮತ್ತೆ ಕರೆಯುವ ಕುರಿತು ನೇರ ಉತ್ತರ ನೀಡಲು ಸಚಿವರು ನಿರಾಕರಿಸಿದ್ದಾರೆ. ತಮ್ಮ ಹೇಳಿಕೆಗಳನ್ನು ಎರಡೂ ರೀತಿಯಲ್ಲಿ ವ್ಯಾಖ್ಯಾನಿಸಬಹುದು ಎಂದು ಹೇಳುವ ಮೂಲಕ ಅವರು ಈ ವಿಚಾರದಲ್ಲಿ ಕುತೂಹಲ ಕಾಯ್ದುಕೊಂಡಿದ್ದಾರೆ.
ಕಳೆದ ಏಪ್ರಿಲ್‌ನಲ್ಲಿ ನಡೆದ ಮೂರು ದಿನಗಳ ವಿಶೇಷ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ಸಂಬಂಧಿಸಿದ 131ನೇ ಸಾಂವಿಧಾನಿಕ ತಿದ್ದುಪಡಿ ಹಾಗೂ ಡಿಲಿಮಿಟೇಶನ್ ಮಸೂದೆಗಳು ಲೋಕಸಭೆಯಲ್ಲಿ ಅಗತ್ಯವಿರುವ ಮೂರನೇ ಎರಡರಷ್ಟು ಬಹುಮತ ಪಡೆಯುವಲ್ಲಿ ವಿಫಲವಾಗಿದ್ದವು.
ಅಧಿವೇಶನವನ್ನು ಸಂಪೂರ್ಣವಾಗಿ ಮುಕ್ತಾಯಗೊಳಿಸದಿರುವ ಹಿನ್ನೆಲೆಯಲ್ಲಿ, ಸರ್ಕಾರ ಮತ್ತೆ ಸದನವನ್ನು ಕರೆದು ಬಾಕಿ ಉಳಿದಿರುವ ಪ್ರಮುಖ ಶಾಸಕಾಂಗ ಕಾರ್ಯಕಲಾಪಗಳನ್ನು ಕೈಗೆತ್ತಿಕೊಳ್ಳಲಿದೆಯೇ ಅಥವಾ ಹೊಸ ತಂತ್ರಗಾರಿಕೆ ರೂಪಿಸಲಿದೆಯೇ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಬೇಕಿದೆ. ಸಂಸತ್ತನ್ನು ಯಾವಾಗ ಮತ್ತೆ ಕರೆಯಬೇಕು ಎಂಬುದು ಸಂಪೂರ್ಣವಾಗಿ ಸರ್ಕಾರದ ತೀರ್ಮಾನಕ್ಕೆ ಬಿಟ್ಟ ವಿಚಾರ ಎಂದು ರಿಜಿಜು ಸ್ಪಷ್ಟಪಡಿಸಿದ್ದಾರೆ.
