Homeರಾಜ್ಯ3 ದಿನದ ವಿಶೇಷ ಅಧಿವೇಶನವನ್ನು ಒಂದು ವಾರಕ್ಕೆ ವಿಸ್ತರಿಸಲು ಬಿ.ವೈ.ವಿಜಯೇಂದ್ರ ಆಗ್ರಹ

3 ದಿನದ ವಿಶೇಷ ಅಧಿವೇಶನವನ್ನು ಒಂದು ವಾರಕ್ಕೆ ವಿಸ್ತರಿಸಲು ಬಿ.ವೈ.ವಿಜಯೇಂದ್ರ ಆಗ್ರಹ

ಬೆಂಗಳೂರು,ಸೆ.21- ರಾಜ್ಯದ ವಿವಿಧ ಗಂಭೀರ ಸಮಸ್ಯೆಗಳು ಹಾಗೂ ಸಂಕಷ್ಟಗಳ ಕುರಿತು ಸಮಗ್ರವಾಗಿ ಚರ್ಚಿಸಲು ಕೇವಲ ಮೂರು ದಿನಗಳ ವಿಶೇಷ ಅಧಿವೇಶನ ಸಾಕಾಗುವುದಿಲ್ಲ. ಆದ್ದರಿಂದ ವಿಶೇಷ ಅಧಿವೇಶನವನ್ನು ಕನಿಷ್ಠ ಒಂದು ವಾರಕ್ಕೆ ವಿಸ್ತರಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಸ್ತೂರಿರಂಗನ್‌ ವರದಿ, ರಾಜ್ಯದಲ್ಲಿ ತಲೆದೋರಿರುವ ಭೀಕರ ಬರಗಾಲ, ಸಂಕಷ್ಟದಲ್ಲಿರುವ ರೈತರು ಸೇರಿದಂತೆ ಹಲವು ಪ್ರಮುಖ ವಿಚಾರಗಳ ಕುರಿತು ಚರ್ಚಿಸಲು ಸರ್ಕಾರ ಮೂರು ದಿನಗಳ ವಿಶೇಷ ಅಧಿವೇಶನ ಕರೆದಿದೆ. ಆದರೆ ಈ ಎಲ್ಲ ಗಂಭೀರ ವಿಚಾರಗಳಿಗೆ ಸಮಗ್ರ ಚರ್ಚೆ ನಡೆಸಲು ಮೂರು ದಿನಗಳು ಸಾಕಾಗುವುದಿಲ್ಲ. ಹೀಗಾಗಿ ವಿಧಾನಸಭೆಯ ವಿರೋಧ ಪಕ್ಷದ ನಾಯಕರು, ಬಿಜೆಪಿ ಹಾಗೂ ಜೆಡಿಎಸ್‌‍ ಶಾಸಕರು ಸೇರಿದಂತೆ ನಾವು ಕನಿಷ್ಠ ಒಂದು ವಾರ ಅಧಿವೇಶನ ನಡೆಸಬೇಕೆಂದು ಆಗ್ರಹಿಸಿದ್ದೇವೆ ಎಂದರು.

ಇತ್ತೀಚೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಬಿಜೆಪಿಯವರು ಜನರ ಭಾವನೆಗಳ ಮೇಲೆ ಆಡಳಿತ ನಡೆಸುತ್ತಾರೆ ಹಾಗೂ ಕಾಂಗ್ರೆಸ್‌‍ ಜನರ ಬದುಕನ್ನು ಕಟ್ಟಿಕೊಡುವ ಕೆಲಸ ಮಾಡುತ್ತದೆ ಎಂಬರ್ಥದಲ್ಲಿ ಮಾತನಾಡಿದ್ದರು. ಆದರೆ ಕಳೆದ ಮೂರು ಕಾಲು ವರ್ಷಗಳಲ್ಲಿ ಕಾಂಗ್ರೆಸ್‌‍ ಸರ್ಕಾರ ನಿಜವಾಗಿಯೂ ಜನರ ಬದುಕನ್ನು ಕಟ್ಟಿಕೊಡುವ ಕೆಲಸ ಮಾಡಿದೆಯೇ ಅಥವಾ ಜನರ ಬದುಕಿನೊಂದಿಗೆ ಚೆಲ್ಲಾಟವಾಡಿದೆಯೇ ಎಂಬುದನ್ನೂ ಈ ಅಧಿವೇಶನದಲ್ಲಿ ಚರ್ಚಿಸಬೇಕಿದೆ ಎಂದು ಹೇಳಿದರು.

ಬಿಜೆಪಿ ಹಮಿಕೊಂಡಿದ್ದ 10 ದಿನಗಳ ಬಳ್ಳಾರಿ ಚಲೋ ಪಾದಯಾತ್ರೆ ಅತ್ಯಂತ ಪರಿಣಾಮಕಾರಿಯಾಗಿ ನಡೆದಿದೆ. ಈ ಹೋರಾಟದಿಂದ ರಾಜ್ಯ ಸರ್ಕಾರದ ಮೇಲೆ ಒತ್ತಡ ನಿರ್ಮಾಣವಾಗಿದೆ. ಸರ್ಕಾರದ ಪ್ರತಿಕ್ರಿಯೆಗಳನ್ನು ಗಮನಿಸಿದರೆ, ಬಳ್ಳಾರಿ ಚಲೋ ಹೋರಾಟದಿಂದ ಮುಖ್ಯಮಂತ್ರಿಗಳು ವಿಚಲಿತರಾದಂತೆ ಕಾಣುತ್ತಿದೆ ಎಂದು ಹೇಳಿದರು.
ಬಿಜೆಪಿ ನಡೆಸಿದ ನಿರಂತರ ಹೋರಾಟದ ಒತ್ತಡಕ್ಕೆ ಮಣಿದು ಸರ್ಕಾರ ವಿಶೇಷ ಅಧಿವೇಶನ ಕರೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಅಧಿವೇಶನದಲ್ಲಿ ಬಿಜೆಪಿ ಹಾಗೂ ನಮ ಮಿತ್ರಪಕ್ಷ ಜೆಡಿಎಸ್‌‍ ಒಟ್ಟಾಗಿ ರೈತರ ಪರವಾಗಿ ಬಲವಾಗಿ ಧ್ವನಿ ಎತ್ತಲಿವೆ.

ರಾಜ್ಯದ ರೈತರು ಎದುರಿಸುತ್ತಿರುವ ಬರಗಾಲದ ಸಂಕಷ್ಟ, ಬೆಳೆ ನಷ್ಟ, ರೈತರ ಸಮಸ್ಯೆಗಳು ಸೇರಿದಂತೆ ಅವರ ಬದುಕಿಗೆ ಸಂಬಂಧಿಸಿದ ಎಲ್ಲ ವಿಚಾರಗಳನ್ನು ಸದನದಲ್ಲಿ ಪ್ರಸ್ತಾಪಿಸಲಾಗುವುದು ಎಂದರು.

ಕಸ್ತೂರಿರಂಗನ್‌ ವರದಿ ವಿಚಾರದಲ್ಲಿಯೂ ಬಿಜೆಪಿ ಸ್ಪಷ್ಟ ನಿಲುವು ಹೊಂದಿದೆ. ಪಶ್ಚಿಮಘಟ್ಟದ ಪರಿಸರ ಮತ್ತು ಅರಣ್ಯವನ್ನು ರಕ್ಷಿಸುವುದರ ಜೊತೆಗೆ, ಕಾಡಂಚಿನ ಪ್ರದೇಶಗಳಲ್ಲಿ ಬದುಕುತ್ತಿರುವ ರೈತರು ಹಾಗೂ ಜನರ ಹಿತಾಸಕ್ತಿಯನ್ನೂ ರಕ್ಷಿಸಬೇಕಾಗಿದೆ.

ಅರಣ್ಯ ಸಂರಕ್ಷಣೆ ಮತ್ತು ಜನರ ಬದುಕು?ಇವೆರಡನ್ನೂ ಸಮತೋಲನದಿಂದ ಕಾಪಾಡುವ ರೀತಿಯಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು. ಈ ಎಲ್ಲ ವಿಚಾರಗಳ ಕುರಿತು ವಿಶೇಷ ಅಧಿವೇಶನದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌‍ ಸದಸ್ಯರು ಸಮಗ್ರವಾಗಿ ಚರ್ಚೆ ನಡೆಸಲಿದ್ದಾರೆ ಎಂದು ಬಿ.ವೈ. ವಿಜಯೇಂದ್ರ ತಿಳಿಸಿದರು.

RELATED ARTICLES
spot_img

Latest News