ಬೆಂಗಳೂರು,ಅ.9-ನಕಲಿ ಔಷಧ ಜಾಲದ ಬೆನ್ನತ್ತಿರುವ ಎಸ್‌ಐಟಿ ಅಧಿಕಾರಿಗಳು ಮಹತ್ವದ ಮಾಹಿತಿಗಳನ್ನು ಕಲೆಹಾಕಿದ್ದು, ದಂಧೆಕೋರರು ಔಷಧಗಳನ್ನು ಹಿಮಾಚಲ ಪ್ರದೇಶ, ಹರಿಯಾಣ, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ ಸೇರಿದಂತೆ ಹಲವು ರಾಜ್ಯಗಳಿಂದ ಕಡಿಮೆ ಬೆಲೆಯ ಔಷಧಿಗಳನ್ನು ಖರೀದಿಸಿರುವುದು ಗೊತ್ತಾಗಿದೆ.
ಆ ರಾಜ್ಯಗಳಲ್ಲಿರುವ ಫ್ಯಾಕ್ಟರಿಗಳು ಮತ್ತು ಡೀಲರ್‌ಗಳಿಂದ ಅಧಿಕೃತವಾಗಿ ಇಂಡೆಂಟ್ ನೀಡಿ 200 ರಿಂದ 300 ರೂ. ಬೆಲೆಯ ಆ್ಯಂಟಿಬಯೋಟಿಕ್‌ಗಳನ್ನು ತರಿಸಿಕೊಳ್ಳುತ್ತಿದ್ದ ಆರೋಪಿಗಳು ನಗರದ ಬಿಡದಿ ಬಳಿಯ ಸಿಕೆ ಪಾಳ್ಯದ ಫಾರ್ಮ್‌ಹೌಸ್‌ನಲ್ಲಿ ಸಂಗ್ರಹಿಸಿಡುತ್ತಿದ್ದರು.
ಈ ಫಾರ್ಮ್‌ಹೌಸ್‌ನಲ್ಲಿ ಆ್ಯಂಟಿಬಯೋಟಿಕ್‌ಗಳನ್ನು ಅಂತರಾಷ್ಟ್ರೀಯ ಬ್ರ್ಯಾಂಡ್‌ಗಳ ನಕಲಿ ಲೇಬಲ್‌ಗಳನ್ನು ಶೀಷೆಗಳಿಗೆ ಅಂಟಿಸಿ ಮಾರುಕಟ್ಟೆಯಲ್ಲಿ ಇದರ ನೈಜ ಬೆಲೆ 5 ಸಾವಿರದಿಂದ 6 ಸಾವಿರ ರೂ. ಗೆ ಮಾರಾಟ ಮಾಡುತ್ತಿದ್ದ ಜಾಲದ ಕರಾಳ ದಂಧೆ ಬಯಲಾಗಿದೆ.ಇದ್ಯಾವುದರ ಅರಿವಿಲ್ಲದ ಜನರು ಈ ಔಷಧಗಳನ್ನು ಪಡೆಯಲು ಸಾವಿರಾರು ರೂ.ಗಳನ್ನು ಖರ್ಚುಮಾಡುತ್ತಿದ್ದರು.
ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಎಸ್‌ಐಟಿ ಅಧಿಕಾರಿಗಳ ತಂಡ ಖಚಿತ ಮಾಹಿತಿಗಳನ್ನು ಸಂಗ್ರಹಿಸಿ ಹಿಮಾಚಲ ಪ್ರದೇಶ, ಹರಿಯಾಣ,ತೆಲಂಗಾಣ ರಾಜ್ಯಗಳ ಮೇಲೆ ದಿಢೀರ್ ದಾಳಿ ನಡೆಸಿದೆ.ದಾಳಿ ವೇಳೆ ನಕಲಿ ಔಷಧಿಗಳನ್ನು ತರಿಸಿಕೊಳ್ಳಲು ಬಳಸಿದ್ದ ದಾಖಲೆಗಳು, ನಕಲಿ ಬಾಕ್ಸ್ ಹಾಗೂ ಲೇಬಲ್ ಪ್ರಿಂಟ್ ಮಾಡಿಸಲು ನೀಡಿದ್ದ ವಿವರಗಳ ಸಂಪೂರ್ಣ ಸಾಕ್ಷ್ಯಗಳನ್ನು ವಶಪಡಿಸಿಕೊಂಡಿದೆ.ಒಟ್ಟಾರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಏಳು ಮಂದಿಯನ್ನು ಬಂಧಿಸಲಾಗಿದೆ.
