ಬೆಂಗಳೂರು, ಅ.9- ಕುಟುಕು ಕಾರ್ಯಾ ಚರಣೆಗೆ ಸಂಬಂಧಪಟ್ಟಂತೆ ತನಿಖೆ ನಡೆಸುವಂತೆ ಆಡಳಿತ ಪಕ್ಷ ಕಾಂಗ್ರೆಸ್ನ ಶಾಸಕರು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮೇಲೆ ಒತ್ತಡ ಹೇರಲಾರಂಭಿಸಿದ್ದಾರೆ. ಈಗಾಗಲೇ ಎಸ್ಐಆರ್ ಹೆಸರಿನಲ್ಲಿ ಪ್ರಕರಣಗಳನ್ನು ದಾಖಲಿಸುವ ಮೂಲಕ ಬಿಜೆಪಿಯ ಕಾರ್ಯಕರ್ತರಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಕುಟುಕು ಕಾರ್ಯಾಚರಣೆ ಆಧರಿಸಿ ತನಿಖೆ ನಡೆಸಿದರೆ, ಜೆಡಿಎಸ್ ಮತ್ತು ಬಿಜೆಪಿಯ ನಾಯಕರು ತೊಂದರೆಗೆ ಸಿಲುಕುವ ಸಾಧ್ಯತೆ ಇದೆ. ಹೀಗಾಗಿ ತನಿಖೆಗೆ ಆದೇಶಿಸಲು ಮುಖ್ಯಮಂತ್ರಿಯವರ ಬಳಗದಲ್ಲಿರುವ ಶಾಸಕರು ಒತ್ತಡ ಹಾಕುತ್ತಿದ್ದಾರೆ.
ಕಳೆದ ಎರಡು ತಿಂಗಳಿನಿಂದಲೂ ಸ್ಟಿಂಗ್ ಆಪರೇಷನ್ಗೆ ಪ್ರಯತ್ನಗಳಾಗುತ್ತಿವೆ. ಮುಖ್ಯಮಂತ್ರಿಯವರನ್ನೊಳಗೊಂಡು ರಾಜ್ಯದ 10 ಮಂದಿ ಸಚಿವರನ್ನು ಗುರಿಯಾಗಿಸಿಕೊಂಡು ಕಾರ್ಯಾಚರಣೆ ಮಾಡಲಾಗಿದೆ. ಸಚಿವರ ಕಚೇರಿ ಮತ್ತು ನಿವಾಸಗಳ ಬಳಿ ಕುಟುಕು ಕಾರ್ಯಾಚರಣೆಯ ತಂಡ ಸುತ್ತಾಡಿದೆ. ಸಚಿವರನ್ನು ಭೇಟಿ ಮಾಡಿ ಬೇರೆ ಬೇರೆ ವಿಚಾರಗಳಿಗೆ ಸಂಬಂಧಪಟ್ಟಂತೆ ಮಾತುಕತೆ ನಡೆಸಲಾಗಿದೆ ಎಂಬ ಮಾಹಿತಿಗಳಿವೆ.
ಈ ಸಂಬಂಧಪಟ್ಟಂತೆ ವೀಡಿಯೋ, ಆಡಿಯೋ ಮತ್ತು ಫೋಟೋಗಳು ಲಭ್ಯವಾಗಿದ್ದು ಅದನ್ನು ಆಧರಿಸಿ ಸಮಗ್ರ ತನಿಖೆಗೆ ಆದೇಶಿಸುವಂತೆ ಒತ್ತಡಗಳು ಬರುತ್ತಿವೆ. ಡಿ.ಕೆ.ಶಿವಕುಮಾರ್ ಅವರ ಆಪ್ತ ಬಣದಲ್ಲಿ ಗುರುತಿಸಿಕೊಂಡಿರುವ ಶಾಸಕ ಇಕ್ಬಾಲ್ ಹುಸೇನ್ ಕುಟುಕು ಕಾರ್ಯಾಚರಣೆಯ ಮೂಲಕ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನ ನಡೆದಿದೆ.ಮುಖ್ಯಮಂತ್ರಿಯವರು ಈ ಬಗ್ಗೆ ಸಂಪುಟ ಸಭೆಯಲ್ಲಿ ತಮ ಸಹೋದ್ಯೋಗಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಒಂದಷ್ಟು ಮಾಹಿತಿಗಳಿದ್ದು, ತನಿಖೆ ನಡೆದರೆ ಸತ್ಯಾಂಶ ಬಯಲಿಗೆ ಬರಲಿದೆ ಎಂದು ಹೇಳಿದ್ದಾರೆ.
ಮಂಡ್ಯ ಶಾಸಕ ಗಣಿಗ ರವಿಕುಮಾರ್ ರಾಜ್ಯದಿಂದ ಕೇಂದ್ರವನ್ನು ಪ್ರತಿನಿಧಿಸುವ ಸಚಿವರೊಬ್ಬರು ಮತ್ತು ಬಿಜೆಪಿಯ ರಾಜ್ಯ ನಾಯಕರು ಸ್ಟಿಂಗ್ ಆಪರೇಷನ್ಗೆ ಬಂಡವಾಳ ಹೂಡಿಕೆ ಮಾಡಿದ್ದಾರೆ. ಕೋಲ್ಕತ್ತಾ ಮತ್ತು ದೆಹಲಿ ಮೂಲದ ಎರಡು ಕಂಪನಿಗಳಿಗೆ ಈ ಜವಾಬ್ದಾರಿ ವಹಿಸಲಾಗಿದೆ. ಅವರಿಗಾಗಿ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ವಾಸ್ತವ್ಯದ ವ್ಯವಸ್ಥೆ ಮಾಡಿಕೊಟ್ಟು, ಹಣ ಕೂಡ ನೀಡಲಾಗಿದೆ.
ತಂಡದ ಸದಸ್ಯರು ಎಲ್ಲೆಲ್ಲಿ ಹೋಗಿದ್ದಾರೆ, ಯಾರ ಜೊತೆಗೆ ಮಾತುಕತೆ ನಡೆಸಿದ್ದಾರೆ, ಯಾವ ರೀತಿ ಪ್ರಯತ್ನ ಮಾಡಿದ್ದಾರೆ ಎಂಬ ವಿಚಾರಗಳು ನಮ ಬಳಿ ಸಾಕ್ಷಿ ಸಮೇತ ಲಭ್ಯವಿದೆ. ಯಾವ ಕಂಪನಿಗೆ ಯಾವ ಮೂಲದ ಮೂಲಕ ಹಣ ಕೊಡಿಸಲಾಗಿದೆ ಎಂಬುದು ತಿಳಿದಿದೆ. ಇದನ್ನು ಮುಖ್ಯಮಂತ್ರಿಯವರಿಗೆ ತಲುಪಿಸಿ ತನಿಖೆ ನಡೆಸಲು ಒತ್ತಾಯಿಸುತ್ತೇವೆ ಎಂದು ಹೇಳಿದರು.
ಸ್ಟಿಂಗ್ ಆಪರೇಷನ್ ರಾಜ್ಯ ರಾಜಕೀಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ಯಾರ ಯಾರ ಲೋಪಗಳು ಏನೇನು ಬಯಲಾಗಿವೆ ಎಂಬುದು ಗೊಂದಲದ ಗೂಡಾಗಿದೆ. ಚುನಾವಣೆಯ ಸಂದರ್ಭದಲ್ಲಿ ಹೊರ ಬರಬಹುದಾದ ಕುಟುಕು ಕಾರ್ಯಾಚರಣೆ ಫಲಿತಾಂಶಗಳು ಅವಧಿಗೂ ಮುನ್ನವೇ ಕಾವೇರಿದ ಚರ್ಚೆಗೆ ಕಾರಣವಾಗಿವೆ.
