Homeಅಂತಾರಾಷ್ಟ್ರೀಯಪಾಕ್‌ ವಿಭಜನೆಗೆ ಮುಂದಾದ ಫೀಲ್ಡ್ ಮಾರ್ಷಲ್‌ ಮುನೀರ್‌

ಪಾಕ್‌ ವಿಭಜನೆಗೆ ಮುಂದಾದ ಫೀಲ್ಡ್ ಮಾರ್ಷಲ್‌ ಮುನೀರ್‌

ಇಸ್ಲಾಮಾಬಾದ್‌, ಅ.9- ಪಾಕಿಸ್ತಾನದ ನಾಲ್ಕು ಪ್ರಾಂತ್ಯಗಳನ್ನು ಸಣ್ಣ ಆಡಳಿತ ಘಟಕಗಳನ್ನಾಗಿ ವಿಭಜಿಸಲು ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್‌ ಅಸಿಮ್‌ ಮುನೀರ್‌ ತೀರ್ಮಾನ ಕೈಗೊಂಡಿದ್ದಾರೆ.ಆದರೆ, ಈ ಯೋಜನೆಗೆ ಸಂಬಂಧಿಸಿದಂತೆ ಅಧಿಕೃತ ನಿರ್ಧಾರ ಪ್ರಕಟವಾಗಿಲ್ಲ.ಪ್ರಸ್ತಾವನೆಯ ಪ್ರಕಾರ, ಪ್ರಸ್ತುತ ನಾಲ್ಕು ಪ್ರಾಂತ್ಯಗಳ ಬದಲಿಗೆ 12ರಿಂದ 15 ಪ್ರಾಂತ್ಯಗಳನ್ನು ರಚಿಸುವ ಸಾಧ್ಯತೆಯಿದೆ. ಮತ್ತೊಂದು ಆಯ್ಕೆಯಾಗಿ ಸುಮಾರು 160 ಜಿಲ್ಲೆಗಳಿಗೆ ಹೆಚ್ಚಿನ ಆಡಳಿತಾಧಿಕಾರ ನೀಡುವ ಚಿಂತನೆಯೂ ಇದೆ.

ಪಾಕಿಸ್ತಾನದ ನಾಲ್ಕು ಪ್ರಾಂತ್ಯಗಳು ಯಾವುವು; ಪ್ರಸ್ತುತ ಪಾಕಿಸ್ತಾನದಲ್ಲಿ ನಾಲ್ಕು ಪ್ರಮುಖ ಪ್ರಾಂತ್ಯಗಳಿವೆ. ಪಂಜಾಬ್‌‍: ದೇಶದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಪ್ರಾಂತ್ಯ. ಇಲ್ಲಿ ಸುಮಾರು 12.8 ಕೋಟಿ ಜನರು ವಾಸಿಸುತ್ತಿದ್ದಾರೆ.ಸಿಂಧ್‌: ಕರಾಚಿ ಸೇರಿದಂತೆ ಪ್ರಮುಖ ನಗರಗಳು ಮತ್ತು ಆರ್ಥಿಕ ಚಟುವಟಿಕೆಗಳ ಕೇಂದ್ರ. ಖೈಬರ್‌ ಪಖ್ತುನ್ಖಾ; ಭದ್ರತಾ ಸವಾಲುಗಳು ಮತ್ತು ಉಗ್ರಗಾಮಿ ಚಟುವಟಿಕೆಗಳಿಂದ ಆಗಾಗ ಸುದ್ದಿಯಲ್ಲಿರುವ ಪ್ರದೇಶ.

ಬಲೂಚಿಸ್ತಾನ್‌:
ವಿಸ್ತೀರ್ಣದಲ್ಲಿ ಅತಿ ದೊಡ್ಡ ಪ್ರಾಂತ್ಯವಾಗಿದ್ದು, ಸುಮಾರು 1.5 ಕೋಟಿ ಜನಸಂಖ್ಯೆ ಹೊಂದಿದೆ.ಈ ಪ್ರಾಂತ್ಯಗಳ ಜನಸಂಖ್ಯೆ, ಭೌಗೋಳಿಕ ವಿಸ್ತೀರ್ಣ ಮತ್ತು ಆಡಳಿತಾತ್ಮಕ ಅಗತ್ಯಗಳಲ್ಲಿ ಭಾರಿ ವ್ಯತ್ಯಾಸವಿದೆ. ದೊಡ್ಡ ಪ್ರಾಂತ್ಯಗಳನ್ನು ಸಣ್ಣ ಘಟಕಗಳಾಗಿ ವಿಭಜಿಸಿದರೆ ಜನರಿಗೆ ಸರ್ಕಾರಿ ಸೇವೆಗಳನ್ನು ಸುಲಭವಾಗಿ ತಲುಪಿಸಬಹುದು ಎಂಬುದು ಈ ಪ್ರಸ್ತಾಪದ ಹಿಂದಿನ ಪ್ರಮುಖ ವಾದವಾಗಿದೆ.

ಪ್ರಾಂತ್ಯಗಳ ವಿಭಜನೆಯಿಂದ ಏನು ಬದಲಾವಣೆಯಾಗಬಹುದು; ಪಂಜಾಬ್‌ನಂತಹ ದೊಡ್ಡ ಪ್ರಾಂತ್ಯಗಳಲ್ಲಿ ಗ್ರಾಮೀಣ ಜನರು ಕುಡಿಯುವ ನೀರು, ಆರೋಗ್ಯ ಸೇವೆ ಮತ್ತು ಇತರ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ದೂರ ಪ್ರಯಾಣಿಸಬೇಕಾಗುತ್ತದೆ. ಸಣ್ಣ ಆಡಳಿತ ಘಟಕಗಳನ್ನು ರಚಿಸುವುದರಿಂದ ಸ್ಥಳೀಯ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಲು ಸಾಧ್ಯವಾಗಬಹುದು. ಆದರೆ, ಈ ಬದಲಾವಣೆ ಕೇವಲ ಆಡಳಿತಕ್ಕೆ ಸೀಮಿತವಾಗಿರುವುದಿಲ್ಲ. ಪಾಕಿಸ್ತಾನದ ಪ್ರಾಂತ್ಯಗಳು ಪ್ರಬಲ ರಾಜಕೀಯ ಪಕ್ಷಗಳ ನೆಲೆಯಾಗಿಯೂ ಕಾರ್ಯನಿರ್ವಹಿಸುತ್ತವೆ.

ಪಂಜಾಬ್‌ನಲ್ಲಿ ಪಾಕಿಸ್ತಾನ್‌ ಮುಸ್ಲಿಂ ಲೀಗ್‌ಪಕ್ಷದ ಪ್ರಭಾವವಿದ್ದರೆ, ಸಿಂಧ್‌ನಲ್ಲಿ ಪಾಕಿಸ್ತಾನ್‌ ಪೀಪಲ್‌್ಸ ಪಾರ್ಟಿ ಪ್ರಬಲವಾಗಿದೆ.ಈ ಪ್ರಾಂತ್ಯಗಳನ್ನು ವಿಭಜಿಸಿದರೆ ಈ ಪಕ್ಷಗಳ ರಾಜಕೀಯ ಪ್ರಭಾವ ಕಡಿಮೆಯಾಗಬಹುದು ಎಂಬ ಆತಂಕವೂ ವ್ಯಕ್ತವಾಗಿದೆ. ಸಣ್ಣ ಪ್ರಾಂತ್ಯಗಳು ಕೇಂದ್ರ ಸರ್ಕಾರದ ಮೇಲೆ ಹೆಚ್ಚು ಅವಲಂಬಿತವಾದರೆ ಸೇನೆಯ ಪ್ರಭಾವ ಹೆಚ್ಚಾಗುವ ಸಾಧ್ಯತೆಯಿದೆ ಎಂಬುದು ಈ ಪ್ರಸ್ತಾಪದ ಮತ್ತೊಂದು ಪ್ರಮುಖ ಚರ್ಚೆಯಾಗಿದೆ.

ಈ ಯೋಜನೆ ಹೊಸದಲ್ಲ;
ಪಾಕಿಸ್ತಾನದ ಯೋಜನಾ ಸಚಿವ ಅಹ್ಸಾನ್‌ ಇಕ್ಬಾಲ್‌ ಅವರು 2026ರ ಸೆಪ್ಟೆಂಬರ್‌ನಲ್ಲಿಯೇ ಆಡಳಿತ ಸುಧಾರಣೆಗೆ ಎರಡು ಆಯ್ಕೆಗಳನ್ನು ಪ್ರಸ್ತಾಪಿಸಿದ್ದರು. ಸುಮಾರು 160 ಜಿಲ್ಲೆಗಳಲ್ಲಿ ಸ್ಥಳೀಯ ಸರ್ಕಾರಗಳಿಗೆ ಹೆಚ್ಚಿನ ಅಧಿಕಾರ ಮತ್ತು ಹಣಕಾಸು ನೀಡುವುದು ಅಥವಾ ದೇಶದಲ್ಲಿ 12ರಿಂದ 15 ಹೊಸ ಪ್ರಾಂತ್ಯಗಳನ್ನು ರಚಿಸುವುದು ಈ ಆಯ್ಕೆಗಳಾಗಿವೆ. ದೇಶದ ಜನಸಂಖ್ಯೆ ಸುಮಾರು 26 ಕೋಟಿಗೆ ಏರಿರುವ ಹಿನ್ನೆಲೆಯಲ್ಲಿ ಪ್ರಸ್ತುತ ಆಡಳಿತ ವ್ಯವಸ್ಥೆಯ ಮೇಲೆ ಒತ್ತಡ ಹೆಚ್ಚಾಗಿದೆ ಎಂದು ಅವರು ವಾದಿಸಿದ್ದರು. ಆದರೆ, ಇಂತಹ ಬದಲಾವಣೆಗಳಿಗೆ ರಾಜಕೀಯ ಒಮ್ಮತ ಅಗತ್ಯವೆಂದು ಅವರು ಒತ್ತಿಹೇಳಿದ್ದರು.

ಇಮ್ರಾನ್‌ ಖಾನ್‌ ವಿಚಾರವೂ ರಾಜಕೀಯ ಚರ್ಚೆಯ ಭಾಗ;
ಪಾಕಿಸ್ತಾನದಲ್ಲಿ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಪಕ್ಷವಾದ ಪಾಕಿಸ್ತಾನ್‌ ತೆಹ್ರೀಕ್‌-ಎ-ಇನ್ಸಾಫ್‌ ಮತ್ತು ಕೇಂದ್ರ ಸರ್ಕಾರದ ನಡುವೆ ಉದ್ವಿಗ್ನತೆ ಮುಂದುವರೆದಿದೆ. ಖೈಬರ್‌ ಪಖ್ತುನ್ಖ್ವಾದಲ್ಲಿ ಪಿಟಿಐ ಪ್ರಭಾವ ಹೊಂದಿದೆ. ಇದೇ ಸಂದರ್ಭದಲ್ಲಿ ಸೇನಾ ಮುಖ್ಯಸ್ಥ ಅಸಿಮ್‌ ಮುನೀರ್‌ ಅವರ ರಾಜಕೀಯ ಪ್ರಭಾವದ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಪ್ರಾಂತ್ಯಗಳ ಗಡಿಗಳನ್ನು ಬದಲಿಸುವ ಪ್ರಯತ್ನವು ಆಡಳಿತ ಸುಧಾರಣೆಯ ಜೊತೆಗೆ ದೇಶದ ರಾಜಕೀಯ ಅಧಿಕಾರ ಹಂಚಿಕೆಯ ಮೇಲೂ ಪರಿಣಾಮ ಬೀರಬಹುದು ಎನ್ನಲಾಗಿದೆ.

ಸಂವಿಧಾನದ ಅನುಮತಿ ಇಲ್ಲದೆ ವಿಭಜನೆ ಸಾಧ್ಯವಿಲ್ಲ;
ಪಾಕಿಸ್ತಾನದ ಸಂವಿಧಾನದ 239ನೇ ವಿಧಿಯ ಪ್ರಕಾರ, ಪ್ರಾಂತ್ಯದ ಗಡಿಗಳನ್ನು ಬದಲಾಯಿಸುವ ಸಂವಿಧಾನ ತಿದ್ದುಪಡಿಗೆ ರಾಷ್ಟ್ರೀಯ ಸಂಸತ್ತಿನ ಎರಡೂ ಸದನಗಳಲ್ಲಿ ಒಟ್ಟು ಸದಸ್ಯರ ಕನಿಷ್ಠ ಮೂರನೇ ಎರಡರಷ್ಟು ಬೆಂಬಲ ಅಗತ್ಯ. ಸಂಬಂಧಿತ ಪ್ರಾಂತೀಯ ವಿಧಾನಸಭೆಯಲ್ಲಿಯೂ ಕನಿಷ್ಠ ಮೂರನೇ ಎರಡರಷ್ಟು ಸದಸ್ಯರ ಅನುಮೋದನೆ ಕಡ್ಡಾಯವಾಗಿದೆ. ಸಿಂಧ್‌ ಪ್ರಾಂತೀಯ ವಿಧಾನಸಭೆಯು ಈ ಹಿಂದೆ ತನ್ನ ಪ್ರಾಂತ್ಯವನ್ನು ವಿಭಜಿಸುವ ಪ್ರಸ್ತಾಪಗಳನ್ನು ವಿರೋಧಿಸಿದೆ. ಹೀಗಾಗಿ, ಈ ಯೋಜನೆ ಮುಂದುವರೆಯಬೇಕಾದರೆ ರಾಜಕೀಯ ವಿರೋಧ ಮತ್ತು ಸಂವಿಧಾನಾತ್ಮಕ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ.

RELATED ARTICLES
spot_img

Latest News