Homeರಾಜ್ಯಐಸ್‌‍ ಕ್ರೀಂ ಘಟಕಗಳ ಮೇಲೆ ಅಧಿಕಾರಿಗಳ ದಾಳಿ : ಅವಧಿ ಮೀರಿದ ಉತ್ಪನ್ನಗಳ ವಶ

ಐಸ್‌‍ ಕ್ರೀಂ ಘಟಕಗಳ ಮೇಲೆ ಅಧಿಕಾರಿಗಳ ದಾಳಿ : ಅವಧಿ ಮೀರಿದ ಉತ್ಪನ್ನಗಳ ವಶ

ಬೆಂಗಳೂರು, ಅ. 9- ರಾಜ್ಯದಾದ್ಯಂತ 45 ಐಸ್‌‍ಕ್ರೀಂ ತಯಾರಿಕಾ ಘಟಕಗಳ ಮೇಲೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಅಧಿಕಾರಿಗಳು ತಪಾಸಣೆ ನಡೆಸಿದ್ದು, ಅವಧಿ ಮೀರಿದ ಆಹಾರ ಉತ್ಪನ್ನಗಳನ್ನು ವಶಪಡಿಸಿಕೊಂಡಿದ್ದಾರೆ. ಗುಣಮಟ್ಟ ಪರಿಶೀಲನೆ ಗಾಗಿ 70 ಆಹಾರ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್‌ ಅವರ ನಿರ್ದೇಶನದ ಮೇರೆಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006 ಹಾಗೂ ಸಂಬಂಧಿತ ನಿಯಮಗಳ ಅಡಿಯಲ್ಲಿ ವಿಶೇಷ ತಪಾಸಣಾ ಕಾರ್ಯಾಚರಣೆ ನಡೆಸಲಾಗಿದೆ ಎಂದು ಇಲಾಖೆ ತಿಳಿಸಿದೆ.

ಐಸ್‌‍ಕ್ರೀಂ, ಹಾಲು, ಹಾಲಿನ ಪುಡಿ, ಸುವಾಸನೆ ನೀಡುವ ಪದಾರ್ಥಗಳು, ಸಕ್ಕರೆ, ಆಹಾರ ಸೇರ್ಪಡೆಗಳು ಹಾಗೂ ಇತರ ಕಚ್ಚಾ ವಸ್ತುಗಳ ಮಾದರಿಗಳನ್ನು ಸಂಗ್ರಹಿಸಿ ಸರ್ಕಾರಿ ಆಹಾರ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ. ಉತ್ಪನ್ನಗಳ ಗುಣಮಟ್ಟ ಮತ್ತು ನಿಗದಿತ ಸುರಕ್ಷತಾ ಮಾನದಂಡಗಳ ಪಾಲನೆಯನ್ನು ಪರಿಶೀಲಿಸಲಾಗುತ್ತದೆ.

ಜಿಬಿಎ ದಕ್ಷಿಣ ವಲಯದ ಜಯನಗರ 3ನೇ ಬ್ಲಾಕ್‌ನ ಸವಾರ ಐಸ್‌‍ಕ್ರೀಂ ಕೆಫೆ ಮತ್ತು ಬಿಳೇಕಹಳ್ಳಿಯ ಎಂ.ಎನ್‌‍. ಎಂಟರ್‌ಪ್ರೈಸಸ್‌‍ನಲ್ಲಿ ಅವಧಿ ಮೀರಿದ ಉತ್ಪನ್ನಗಳು ಪತ್ತೆಯಾಗಿವೆ. ಸವಾರ ಐಸ್‌‍ಕ್ರೀಂ ಕೆಫೆಯಲ್ಲಿ ಅವಧಿ ಮೀರಿದ ಬಿಸ್ಕತ್‌, ಹಾಲು, ಕ್ಷಾರೀಕರಿಸಿದ ಚಹಾ ಮತ್ತು ಕಾಫಿ ಮಿಶ್ರಣಗಳು ಹಾಗೂ ಒಣಗಿಸಿದ ತೆಂಗಿನ ತುರಿಯನ್ನು ವಶಪಡಿಸಿಕೊಳ್ಳಲಾಗಿದೆ. ಎಂ.ಎನ್‌‍. ಎಂಟರ್‌ಪ್ರೈಸಸ್‌‍ನಲ್ಲಿ ಅವಧಿ ಮೀರಿದ ಕ್ಯಾರಮೆಲ್‌, ಮಂದಗೊಳಿಸಿದ ಹಾಲು ಮತ್ತು ಖೋವಾ ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ಉತ್ಪನ್ನಗಳ ಲೇಬಲ್‌ ನಿಯಮಗಳ ಪಾಲನೆಯಲ್ಲಿ ಲೋಪಗಳು ಕಂಡುಬಂದಿವೆ.

ರಾಯಚೂರಿನ ಜೆಮಿನಿ ಐಸ್‌‍ಕ್ರೀಂ ತಯಾರಿಕಾ ಘಟಕದಲ್ಲಿ ಅನೈರ್ಮಲ್ಯ ಕಂಡುಬಂದ ಹಿನ್ನೆಲೆಯಲ್ಲಿ ನೋಟಿಸ್‌‍ ನೀಡಲಾಗಿದೆ. ಮೈಸೂರಿನ ಜಾನ್‌ ಕ್ಯಾಂಡಿ ಐಸ್‌‍ಕ್ರೀಂ ತಯಾರಿಕಾ ಘಟಕದಲ್ಲಿ ಲೇಬಲ್‌ ನಿಯಮಗಳ ಉಲ್ಲಂಘನೆ ಪತ್ತೆಯಾಗಿದ್ದು, 20,000 ಮೌಲ್ಯದ ಐಸ್‌‍ಕ್ರೀಂ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸಂಬಂಧಪಟ್ಟ ಘಟಕಗಳ ವಿರುದ್ಧ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಹಾಗೂ ನಿಯಮಗಳ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ತಿಳಿಸಿದೆ. ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ರಾಜ್ಯಾದ್ಯಂತ ಐಸ್‌‍ಕ್ರೀಂ ತಯಾರಿಕಾ ಘಟಕಗಳ ತಪಾಸಣೆ ಮುಂದುವರಿಯಲಿದೆ. ಆಹಾರ ಸುರಕ್ಷತಾ ನಿಯಮ ಉಲ್ಲಂಘಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.

RELATED ARTICLES
spot_img

Latest News