ಬೆಂಗಳೂರು,ಅ.10- ಉಡುಪಿ ಪವರ್ ಕಾರ್ಪೊ ರೇಷನ್ ಮತ್ತು ಕರ್ನಾಟಕದ ವಿದ್ಯುತ್ ಸರಬರಾಜು ಕಂಪನಿಗಳ ನಡುವಿನ ಸುಂಕ ವಿವಾದ ಈಗ 1,005 ಕೋಟಿ ರೂ. ಮೊತ್ತದ ಆರ್ಥಿಕ ಹೊರೆಯಾಗಿ ಪರಿಣಮಿಸಿದೆ. ಅದಾನಿ ಪವರ್‌ಗೆ ಪಾವತಿಸಿರುವ ಮೊತ್ತದ ಸಂಪೂರ್ಣ ಮರುಪಡೆ ಯುವಿಕೆಗೆ ಸಂಬಂಧಿಸಿದಂತೆ ನಿಯಂತ್ರಣ ಪ್ರಾಧಿಕಾರಗಳ ಮುಂದೆ ವಿವಾದ ಮುಂದು ವರಿದಿದ್ದು, ಈ ಹೊರೆಯನ್ನು ಅಂತಿಮವಾಗಿ ಯಾರು ಭರಿಸಬೇಕು ಎಂಬ ಪ್ರಶ್ನೆ ಮುನ್ನೆಲೆಗೆ ಬಂದಿದೆ.
ಅದಾನಿ ಪವರ್ ಒಡೆತನದ ಉಡುಪಿ ಪವರ್ ಕಾರ್ಪೊರೇಷನ್‌ನ ವಿದ್ಯುತ್ ದರ ನಿಗದಿ ವಿಚಾರವಾಗಿ ಆರಂಭವಾದ ಕಾನೂನು ಹೋರಾಟ ಹಲವು ವರ್ಷಗಳಿಂದ ಮುಂದುವರಿದಿದೆ. ಈ ವಿವಾದದಲ್ಲಿ ಕೇಂದ್ರ ವಿದ್ಯುತ್ ನಿಯಂತ್ರಣ ಆಯೋಗ, ವಿದ್ಯುತ್ ಮೇಲನವಿ ನ್ಯಾಯಮಂಡಳಿ ಹಾಗೂ ಸುಪ್ರೀಂ ಕೋರ್ಟ್‌ನ ವಿವಿಧ ಆದೇಶಗಳು ಮಹತ್ವದ ಪಾತ್ರ ವಹಿಸಿವೆ.ವರದಿಯ ಪ್ರಕಾರ, ಅದಾನಿ ಪವರ್ 786 ಕೋಟಿ ಪಾವತಿಸುವಂತೆ ಬೇಡಿಕೆ ಇಟ್ಟಿತ್ತು. ಇದರಲ್ಲಿ 423 ಕೋಟಿ ಕ್ಯಾರಿಯಿಂಗ್ ಕಾಸ್ಟ್ (ಹಿಂದಿನ ಅವಧಿಯ ಬಾಕಿ ಮೊತ್ತಕ್ಕೆ ಸಂಬಂಧಿಸಿದ ವೆಚ್ಚ) ಹಾಗೂ 363 ಕೋಟಿ ಬಡ್ಡಿ ಸೇರಿತ್ತು.
ಆದರೆ, ಪವರ್ ಕಂಪನಿ ಆಫ್ ಕರ್ನಾಟಕ ಮತ್ತು ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳು ಈ ಬೇಡಿಕೆಯನ್ನು ಪ್ರಶ್ನಿಸಿದ್ದವು. ಅವುಗಳ ಲೆಕ್ಕಾಚಾರದ ಪ್ರಕಾರ, ಪಾವತಿಸಬೇಕಾದ ಮೊತ್ತ 419 ಕೋಟಿ ಮಾತ್ರವಾಗಿದ್ದು, ಅದರಲ್ಲಿ 215 ಕೋಟಿ ಕ್ಯಾರಿಯಿಂಗ್ ಕಾಸ್ಟ್ ಅನ್ನು ಈಗಾಗಲೇ ಪಾವತಿಸಲಾಗಿದೆ ಎಂಬ ವಾದವನ್ನು ಮುಂದಿಟ್ಟಿದ್ದವು.
ಆದರೂ, ಕಾನೂನು ಹೋರಾಟ ಮುಂದುವರಿದಿರುವ ಹಿನ್ನೆಲೆಯಲ್ಲಿ ವಿದ್ಯುತ್ ಸರಬರಾಜು ಕಂಪನಿಗಳು ಆಕ್ಷೇಪಣೆಯೊಂದಿಗೆ ಮೊತ್ತವನ್ನು ಪಾವತಿಸಿವೆ. ಲಭ್ಯ ವರದಿಯ ಪ್ರಕಾರ, ಅದಾನಿ ಪವರ್‌ಗೆ ಒಟ್ಟು 1,005 ಕೋಟಿ ಪಾವತಿಸಲಾಗಿದ್ದು, ಇದರಲ್ಲಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಒಂದೇ 456 ಕೋಟಿ ಪಾವತಿಸಿದೆ. ಇದು ಒಟ್ಟು ಮೊತ್ತದ ಸುಮಾರು ಶೇ.45ರಷ್ಟಾಗಿದೆ.
ವಿವಾದದ ಮೂಲವೇನು? :
ಉಡುಪಿ ವಿದ್ಯುತ್ ಯೋಜನೆಯ ಸುಂಕ ನಿಗದಿ ವಿಚಾರ 2010ರಿಂದಲೇ ನಿಯಂತ್ರಣ ಪ್ರಾಧಿಕಾರಗಳ ಪರಿಶೀಲನೆಗೆ ಒಳಪಟ್ಟಿದೆ. ನಂತರದ ವರ್ಷಗಳಲ್ಲಿ ಸುಂಕದ ಆದೇಶಗಳು ಪರಿಷ್ಕರಣೆಯಾಗಿದ್ದು, ಬಾಕಿ ಮೊತ್ತಗಳ ಪಾವತಿ ಮತ್ತು ಅವುಗಳ ಮೇಲಿನ ಬಡ್ಡಿ ಲೆಕ್ಕಾಚಾರದಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗಿವೆ.2013 ಮತ್ತು 2014ರಲ್ಲಿ ಅಉಔ ನೀಡಿದ ನಿರ್ದೇಶನಗಳು, ಬಳಿಕ ಸಿಇಆರ್‌ಸಿ ಕೈಗೊಂಡ ಸುಂಕ ಪರಿಷ್ಕರಣೆಗಳು ಹಾಗೂ ವಿವಿಧ ಅವಧಿಗಳ ಪಾವತಿಗಳು ಈ ವಿವಾದವನ್ನು ಮತ್ತಷ್ಟು ಸಂಕೀರ್ಣಗೊಳಿಸಿವೆ.
ವಿದ್ಯುತ್ ಸರಬರಾಜು ಕಂಪನಿಗಳು ಮುಖ್ಯವಾಗಿ ಸರಳ ಬಡ್ಡಿಯನ್ನು ಮಾತ್ರ ಪಾವತಿಸಬೇಕು; ಚಕ್ರಬಡ್ಡಿಯನ್ನು ವಿಧಿಸುವುದು ಸರಿಯಲ್ಲ ಎಂದು ವಾದಿಸುತ್ತಿವೆ. ಮತ್ತೊಂದೆಡೆ, ವಿವಿಧ ಸುಂಕ ಆದೇಶಗಳ ಪರಿಷ್ಕರಣೆಯಿಂದ ಉಂಟಾದ ವ್‌ಯತ್ಯಾಸಗಳ ಮೇಲೆ ಕ್ಯಾರಿಯಿಂಗ್ ಕಾಸ್ಟ್ ಪಡೆಯಲು ತಮಗೆ ಅರ್ಹತೆ ಇದೆ ಎಂಬ ನಿಲುವನ್ನು ಅದಾನಿ ಪವರ್ ಮುಂದಿಟ್ಟಿದೆ.
