Homeರಾಷ್ಟ್ರೀಯಆಂಧ್ರಪ್ರದೇಶದ ಶಾಲೆಯೊಳಗೆ ಚೈನ್ಸಾ ದಾಳಿ: 10ನೇ ತರಗತಿಯ ಇಬ್ಬರು ಬಾಲಕಿಯರ ಸ್ಥಿತಿ ಗಂಭೀರ

ಆಂಧ್ರಪ್ರದೇಶದ ಶಾಲೆಯೊಳಗೆ ಚೈನ್ಸಾ ದಾಳಿ: 10ನೇ ತರಗತಿಯ ಇಬ್ಬರು ಬಾಲಕಿಯರ ಸ್ಥಿತಿ ಗಂಭೀರ

ತಿರುಪತಿ, ಅ.31- ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಶಾಲಾ ತರಗತಿಯೊಳಗೇ 10ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಮರ ಕಡಿಯುವ ಯಂತ್ರ (ಚೈನ್ಸಾ) ಬಳಸಿ ವ್ಯಕ್ತಿಯೊಬ್ಬ ಭೀಕರ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ರಾಪ್ತಾಡು ಮಂಡಲ ಕೇಂದ್ರದಲ್ಲಿರುವ ಜಿಲ್ಲಾ ಪಂಚಾಯಿತಿ ಪ್ರೌಢಶಾಲೆಯಲ್ಲಿ ನಿನ್ನೆ ಈ ಘಟನೆ ನಡೆದಿದ್ದು, ಗೋಪಿಕಾ ಎಂಬ ವಿದ್ಯಾರ್ಥಿನಿ ಗಂಭೀರವಾಗಿ ಗಾಯಗೊಂಡಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ.

ಆರೋಪಿಯು ಚೈನ್ಸಾ ಯಂತ್ರದೊಂದಿಗೆ ನೇರವಾಗಿ 10ನೇ ತರಗತಿಯ ಕೊಠಡಿಗೆ ಪ್ರವೇಶಿಸಿ ವಿದ್ಯಾರ್ಥಿನಿ ಗೋಪಿಕಾ ಮೇಲೆ ದಾಳಿ ನಡೆಸಿದ್ದಾನೆ. ಸಹಪಾಠಿಗಳು ಭಯಭೀತರಾಗಿ ನೋಡುತ್ತಿದ್ದಂತೆಯೇ ಆಕೆಯ ಮುಖ, ತಲೆ ಮತ್ತು ಬೆನ್ನಿನ ಭಾಗಕ್ಕೆ ಯಂತ್ರದಿಂದ ಗಂಭೀರ ಗಾಯಗಳನ್ನುಂಟು ಮಾಡಿದ್ದಾನೆ. ದಾಳಿಯನ್ನು ತಡೆಯಲು ಮುಂದಾದ ಲಕ್ಷಿ ಎಂಬ ಮತ್ತೊಬ್ಬ ವಿದ್ಯಾರ್ಥಿನಿಗೂ ಗಾಯಗಳಾಗಿವೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಗೋಪಿಕಾಳನ್ನು ಕಂಡ ಶಿಕ್ಷಕರು ಹಾಗೂ ಸಹಪಾಠಿಗಳು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಗಾಯಾಳು ವಿದ್ಯಾರ್ಥಿನಿಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ದಾಳಿ ನಡೆಸಿದ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿ ಗೋಪಿಕಾಳ ದೂರದ ಸಂಬಂಧಿಯಾಗಿದ್ದು, ಹಲವು ದಿನಗಳಿಂದ ಆಕೆಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ತನ್ನನ್ನು ಹಿಂಬಾಲಿಸದಂತೆ ಎಚ್ಚರಿಕೆ ನೀಡಿದ್ದ ಗೋಪಿಕಾ, ಆತನ ವರ್ತನೆ ಮುಂದುವರಿದರೆ ಪೋಷಕರಿಗೆ ದೂರು ನೀಡುವುದಾಗಿ ತಿಳಿಸಿದ್ದಳು. ಇದರಿಂದ ಆಕ್ರೋಶಗೊಂಡ ಆರೋಪಿ ಶಾಲೆಯ ತರಗತಿಯೊಳಗೇ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪರಾರಿಯಾಗಿರುವ ಆರೋಪಿಯ ಪತ್ತೆಗೆ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರಲ್ಲಿ ಈ ಘಟನೆ ಆತಂಕ ಮೂಡಿಸಿದೆ.

ವಿದ್ಯಾರ್ಥಿನಿಯ ಆರೋಗ್ಯ ವಿಚಾರಿಸಿದ ಮುಖ್ಯಮಂತ್ರಿ:
ಘಟನೆ ಕುರಿತು ತೀವ್ರ ಆಘಾತ ಮತ್ತು ದುಃಖ ವ್ಯಕ್ತಪಡಿಸಿರುವ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು, ತಕ್ಷಣ ಹಿರಿಯ ಜಿಲ್ಲಾಧಿಕಾರಿಗಳು ಹಾಗೂ ವೈದ್ಯಕೀಯ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ಗಾಯಗೊಂಡಿರುವ ವಿದ್ಯಾರ್ಥಿನಿಯ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ಪಡೆದು, ಆಕೆಗೆ ಅತ್ಯುತ್ತಮ ತುರ್ತು ವೈದ್ಯಕೀಯ ಚಿಕಿತ್ಸೆ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

RELATED ARTICLES

Latest News