Homeರಾಜ್ಯಕೆಪಿಎಸ್‌‍ಸಿ ಅಕ್ರಮ ನೇಮಕಾತಿ ಪ್ರಕರಣಗಳ ತನಿಖೆಗೆ ಎಸ್‌‍ಐಟಿ ರಚಿಸಿದ ರಾಜ್ಯ ಸರ್ಕಾರ

ಕೆಪಿಎಸ್‌‍ಸಿ ಅಕ್ರಮ ನೇಮಕಾತಿ ಪ್ರಕರಣಗಳ ತನಿಖೆಗೆ ಎಸ್‌‍ಐಟಿ ರಚಿಸಿದ ರಾಜ್ಯ ಸರ್ಕಾರ

ಬೆಂಗಳೂರು,ನ.2- ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌‍ಸಿ) ನೇಮಕಾತಿಯಲ್ಲಿ ನಡೆದಿರುವ ಅಕ್ರಮಗಳಿಗೆ ಸಂಬಂಧಿಸಿದ ಎರಡು ಪ್ರಮುಖ ಪ್ರಕರಣಗಳ ತನಿಖೆಗಾಗಿ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡವನ್ನು (ಎಸ್‌‍ಐಟಿ) ರಚಿಸಿದೆ. ಕರ್ನಾಟಕ ಹೈಕೋರ್ಟ್‌ ಸೆ.21ರಂದು ನೀಡಿದ್ದ ನಿರ್ದೇಶನದಂತೆ ಎಸ್‌‍ಐಟಿ ರಚನೆಗೆ ಸಂಬಂಧಿಸಿದ ಅಧಿಸೂಚನೆಯನ್ನು ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ಸಲ್ಲಿಸಿದೆ.

ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠದ ಮುಂದೆ ಅಡ್ವೊಕೇಟ್‌ ಜನರಲ್‌ ಶಶಿಕಿರಣ್‌ ಶೆಟ್ಟಿ ಅವರು ಎಸ್‌‍ಐಟಿ ರಚನೆಯ ಅಧಿಸೂಚನೆಯನ್ನು ಮಂಡಿಸಿದರು. ಇದೇ ವೇಳೆ ಎಸ್‌‍ಐಟಿಗೆ ಮುಖ್ಯಸ್ಥರು ಹಾಗೂ ಇತರ ಅಧಿಕಾರಿಗಳ ನೇಮಕಕ್ಕೆ ಸಂಬಂಧಿಸಿದ ವಿಚಾರವೂ ನ್ಯಾಯಾಲಯದಲ್ಲಿ ಚರ್ಚೆಗೆ ಬಂದಿತು.

ಎಸ್‌‍ಐಟಿ ಮುಖ್ಯಸ್ಥರಾಗಿ ಐಪಿಎಸ್‌‍ ಅಧಿಕಾರಿ ಅಲೋಕ್‌ ಕುಮಾರ್‌ ಹಾಗೂ ತಂಡದ ಮತ್ತೊಬ್ಬ ಸದಸ್ಯರಾಗಿ ದಿವ್ಯ ಗೋಪಿನಾಥ್‌ ಅವರನ್ನು ನೇಮಿಸುವ ವಿಚಾರಕ್ಕೆ ರಾಜ್ಯ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಪರ್ಯಾಯವಾಗಿ ನಾಲ್ವರು ಎಡಿಜಿಪಿ ಶ್ರೇಣಿಯ ಅಧಿಕಾರಿಗಳ ಹೆಸರುಗಳನ್ನು ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟ್‌ಗೆ ಸಲ್ಲಿಸಲಾಗಿದೆ.

ಆರ್‌. ಹಿತೇಂದ್ರ, ಬಿ.ಕೆ.ಸಿಂಗ್‌, ಎಸ್‌‍.ಮುರುಗನ್‌ ಹಾಗೂ ಸೌಮೇಂದು ಮುಖರ್ಜಿ ಅವರ ಹೆಸರುಗಳನ್ನು ಸರ್ಕಾರ ಪ್ರಸ್ತಾಪಿಸಿದೆ. ರಾಜ್ಯದಲ್ಲಿ ಒಟ್ಟು 16 ಎಡಿಜಿಪಿ ದರ್ಜೆಯ ಅಧಿಕಾರಿಗಳಿದ್ದಾರೆ ಎಂದು ಅಡ್ವೊಕೇಟ್‌ ಜನರಲ್‌ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.

ಇತ್ತ, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಅರ್ಜಿ ಸಲ್ಲಿಸಿರುವ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌ ಪರ ವಕೀಲರು, ಸರ್ಕಾರ ಸೂಚಿಸಿರುವ ನಾಲ್ವರು ಅಧಿಕಾರಿಗಳ ಹೆಸರುಗಳ ಕುರಿತು ತಮ್ಮ ಆಕ್ಷೇಪಣೆಗಳನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಹೀಗಾಗಿ ಎಸ್‌‍ಐಟಿಯ ಮುಖ್ಯಸ್ಥರು ಮತ್ತು ಸದಸ್ಯರ ಆಯ್ಕೆ ಕುರಿತ ಅಂತಿಮ ನಿರ್ಧಾರ ಇನ್ನಷ್ಟೇ ಹೊರಬೀಳಬೇಕಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ನ್ಯಾಯಾಲಯ ಮುಂದೂಡಿದೆ.

ಕೆಪಿಎಸ್‌‍ಸಿ ನೇಮಕಾತಿ ಅಕ್ರಮಗಳ ತನಿಖೆಯನ್ನು ಎಸ್‌‍ಐಟಿಗೆ ವಹಿಸುವಂತೆ ಕರ್ನಾಟಕ ಹೈಕೋರ್ಟ್‌ ಸೆಪ್ಟೆಂಬರ್‌ 21ರಂದು ನೀಡಿದ್ದ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಈಗಾಗಲೇ ಸಿಐಡಿ ಮತ್ತು ವಿಧಾನಸೌಧ ಪೊಲೀಸರು ತನಿಖೆ ನಡೆಸುತ್ತಿದ್ದು, ಪ್ರಕರಣಗಳು ತನಿಖೆಯ ಅಂತಿಮ ಹಂತದಲ್ಲಿವೆ. ತನಿಖಾ ಸಂಸ್ಥೆಗಳ ವಿರುದ್ಧ ನಿರ್ದಿಷ್ಟ ಆರೋಪಗಳಿಲ್ಲದಿರುವಾಗ ಹೊಸ ತನಿಖೆಯ ಅಗತ್ಯವಿಲ್ಲ ಎಂಬುದು ಸರ್ಕಾರದ ವಾದವಾಗಿತ್ತು.

ಆದರೆ, ಪ್ರಕರಣಗಳ ಗಂಭೀರತೆ ಹಾಗೂ ಕೆಪಿಎಸ್‌‍ಸಿಯ ಉನ್ನತ ಅಧಿಕಾರಿಗಳೂ ಅಕ್ರಮಗಳಲ್ಲಿ ಭಾಗಿಯಾಗಿರುವ ಸಾಧ್ಯತೆಯನ್ನು ಪರಿಗಣಿಸಿ, ಉನ್ನತ ಶ್ರೇಣಿಯ ಅಧಿಕಾರಿಗಳನ್ನು ಒಳಗೊಂಡ ಎಸ್‌‍ಐಟಿಯಿಂದ ತನಿಖೆ ನಡೆಸುವ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಎಸ್‌‍ಐಟಿ ರಚಿಸುವ ಹೈಕೋರ್ಟ್‌ನ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ಸೂಕ್ತ ಕಾರಣಗಳಿಲ್ಲ ಎಂದು ಸ್ಪಷ್ಟಪಡಿಸಿತ್ತು.

ಆದರೆ, ಪ್ರಕರಣಗಳ ಕುರಿತು ಸಂಪೂರ್ಣವಾಗಿ ಹೊಸದಾಗಿ ತನಿಖೆ ಆರಂಭಿಸುವ ಅಗತ್ಯವಿಲ್ಲ ಎಂದು ಹೇಳಿದ್ದ ಸುಪ್ರೀಂ ಕೋರ್ಟ್‌, ಈಗಾಗಲೇ ಸಿಐಡಿ ಮತ್ತು ವಿಧಾನಸೌಧ ಪೊಲೀಸರು ನಡೆಸಿರುವ ತನಿಖೆಯ ಮುಂದುವರಿದ ಭಾಗವಾಗಿ ಹೆಚ್ಚಿನ ತನಿಖೆ ನಡೆಸುವಂತೆ ಎಸ್‌‍ಐಟಿಗೆ ಸೂಚಿಸಿತ್ತು.

ಎಸ್‌‍ಐಟಿಯ ಮುಖ್ಯಸ್ಥರ ನೇಮಕ ಹಾಗೂ ರಾಜ್ಯ ವಿಧಿವಿಜ್ಞಾನ ಪ್ರಯೋಗಾಲಯದ ನಿರ್ದೇಶಕರನ್ನು ತಂಡದಲ್ಲಿ ಸೇರಿಸುವ ವಿಚಾರವಾಗಿಯೂ ಸರ್ಕಾರ ತನ್ನ ಆತಂಕವನ್ನು ವ್ಯಕ್ತಪಡಿಸಿತ್ತು. ತನಿಖೆಯ ಸಂದರ್ಭದಲ್ಲಿ ಸಂಗ್ರಹಿಸಲಾದ ಸಾಕ್ಷ್ಯಗಳು ವಿಧಿವಿಜ್ಞಾನ ವಿಶ್ಲೇಷಣೆಗೆ ಒಳಪಡಬೇಕಾಗಬಹುದು. ಅಂತಹ ಸಂದರ್ಭದಲ್ಲಿ ಹಿತಾಸಕ್ತಿ ಸಂಘರ್ಷ ಉಂಟಾಗುವ ಸಾಧ್ಯತೆಯಿದೆ ಎಂಬುದು ಸರ್ಕಾರದ ಆಕ್ಷೇಪವಾಗಿತ್ತು.

ಈ ಹಿನ್ನೆಲೆಯಲ್ಲಿ ಪರ್ಯಾಯ ಅಧಿಕಾರಿಗಳ ಹೆಸರುಗಳನ್ನು ಹೈಕೋರ್ಟ್‌ಗೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್‌ ಸೂಚಿಸಿತ್ತು. ಒಟ್ಟಿನಲ್ಲಿ, ಕೆಪಿಎಸ್‌‍ಸಿ ನೇಮಕಾತಿ ಅಕ್ರಮಗಳ ಎರಡು ಪ್ರಕರಣಗಳ ಹೆಚ್ಚಿನ ತನಿಖೆಗೆ ಎಸ್‌‍ಐಟಿ ರಚನೆಯ ಪ್ರಕ್ರಿಯೆ ಆರಂಭವಾಗಿದ್ದು, ತನಿಖಾ ತಂಡದ ನೇತೃತ್ವ ಮತ್ತು ಸದಸ್ಯರ ಆಯ್ಕೆ ಕುರಿತು ಇಂದಿನ ಹೈಕೋರ್ಟ್‌ ವಿಚಾರಣೆ ಮಹತ್ವ ಪಡೆದುಕೊಂಡಿದೆ.

RELATED ARTICLES

Latest News