ಉಡುಪಿ,ನ.14-ತಾಯಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಭೂಗತ ಪಾತಕಿ ರವಿ ಪೂಜಾರಿಯನ್ನು ಪೊಲೀಸ್ ಬಿಗಿ ಭದ್ರತೆಯಲ್ಲಿ ಬೆಂಗಳೂರಿನಿಂದ ಸ್ವಗ್ರಾಮ ಮಲ್ಪೆಗೆ ಕರೆತರಲಾಯಿತು.ಹೃದಯಾಘಾತದಿಂದ ರವಿಪೂಜಾರಿಯ ತಾಯಿ ಸುಶೀಲಾ ಪೂಜಾರ್ತಿ (86) ನಿಧನರಾಗಿದ್ದಾರೆ. ಅವರ ಅಂತ್ಯಕ್ರಿಯೆ ಮಲ್ಪೆಯ ನೆರ್ಗಿಯದಲ್ಲಿ ಸಂಜೆ ನಡೆಯಲಿದೆ.
ನ್ಯಾಯಾಲಯದ ವಿಶೇಷ ಅನುಮತಿ ಮೇರೆಗೆ ಬಿಗಿ ಪೊಲೀಸ್ ಭದ್ರತೆಯಲ್ಲಿ ಆತನನ್ನು ಕರೆದುಕೊಂಡು ಬಂದಿದ್ದು, ಅಂತ್ಯಕ್ರಿಯೆ ಪೂರ್ಣಗೊಂಡ ಬಳಿಕ ಮತ್ತೆ ವಾಪಸ್ ಬೆಂಗಳೂರಿಗೆ ಕರೆದೊಯ್ಯಲಾಗುತ್ತದೆ.
ಸುಮಾರು 26 ವರ್ಷಗಳ ಕಾಲ ಭೂಗತ ಜಗತ್ತಿನಲ್ಲಿ ಸಕ್ರಿಯವಾಗಿದ್ದ ಈತ ಇದೀಗ ತಾಯಿಯ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಸ್ವಗ್ರಾಮಕ್ಕೆ ಬಂದಿದ್ದಾನೆ.ರವಿಪೂಜಾರಿ ಅವರ ತಾಯಿಗೆ ಐದು ಮಕ್ಕಳಲ್ಲಿ ಇಬ್ಬರು ಹೆಣ್ಣು ಮಕ್ಕಳು ಹಾಗೂ ಮೂವರು ಗಂಡು ಮಕ್ಕಳಿದ್ದು,ಅವರಲ್ಲಿ ಈತ ಕೂಡ ಒಬ್ಬ.
ಕೊಲೆ,ಕೊಲೆಯತ್ನ,ಸುಲಿಗೆ,ಹಫ್ತಾ ವಸೂಲಿ, ಜೀವ ಬೆದರಿಕೆ ಸೇರಿದಂತೆ ಹಲವು ಗಂಭೀರ ಪ್ರಕರಣಗಳಲ್ಲಿ ರವಿಪೂಜಾರಿ ಆರೋಪಿಯಾಗಿದ್ದಾನೆ.ಕರ್ನಾಟಕ, ಮಹಾರಾಷ್ಟ್ರ,ಆಂಧ್ರಪ್ರದೇಶ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಆತನ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ.
ಕರ್ನಾಟಕದಲ್ಲೇ 90ಕ್ಕೂ ಹೆಚ್ಚು ಪ್ರಕರಣಗಳಿವೆ. ಭೂಗತ ಪಾತಕಿ ರವಿಪೂಜಾರಿಯನ್ನು 2019 ರ ಜ. 19 ರಂದು ಪಶ್ಚಿಮ ಆಫಿಕ್ರಾದ ಸೆನೆಗಲ್ನಲ್ಲಿ ಬಂಧಿಸಲಾಗಿದ್ದು, ಬೆಂಗಳೂರಿನ ಕಾರಾಗೃಹದಲ್ಲಿ ಸೆರೆವಾಸ ಅನುಭವಿಸುತ್ತಿದ್ದಾನೆ.
