ವಾಷಿಂಗ್ಟನ್,ನ.15- ಅಮೆರಿಕದ ವಾಯುಯಾನ ವ್ಯವಸ್ಥೆಯಲ್ಲಿ ಉಂಟಾಗಿರುವ ತಾಂತ್ರಿಕ ವೈಫಲ್ಯದ ಪರಿಣಾಮ ದೇಶಾದ್ಯಂತ ವಿಮಾನ ಸಂಚಾರದಲ್ಲಿ ಭಾರೀ ಅಸ್ತವ್ಯಸ್ತತೆ ಮುಂದುವರಿದಿದ್ದು, ನವೆಂಬರ್ 15ರ ಭಾನುವಾರವೂ ಸಾವಿರಾರು ವಿಮಾನಗಳ ರದ್ದು ಮತ್ತು ವಿಳಂಬ ಸಾಧ್ಯತೆ ಇದೆ.
ಫೆಡರಲ್ ಏವಿಯೇಷನ್ ಅಡಿನಿಸ್ಟ್ರೇಷನ್ (ಎಫ್‌ಎಎ)ಯ ವಾಯು ಸಂಚಾರ ನಿಯಂತ್ರಣ ಸಂವಹನ ವ್ಯವಸ್ಥೆಯಲ್ಲಿ ಉಂಟಾದ ತಾಂತ್ರಿಕ ಸಮಸ್ಯೆಯಿಂದಾಗಿ ಶುಕ್ರವಾರದಿಂದಲೇ ವಿಮಾನ ಸೇವೆಗಳು ತೀವ್ರವಾಗಿ ಬಾಧಿತವಾಗಿವೆ. ಶನಿವಾರ ಸಂಜೆ 6.45 ಇಟಿ ವೇಳೆಗೆ ಅಮೆರಿಕದಲ್ಲಿ 6,150ಕ್ಕೂ ಹೆಚ್ಚು ವಿಮಾನಗಳು ರದ್ದಾಗಿದ್ದು, 7,300ಕ್ಕೂ ಹೆಚ್ಚು ವಿಮಾನಗಳು ವಿಳಂಬಗೊಂಡಿದ್ದವು ಎಂದು ಫ್ಲೈಟ್‌ಅವೇರ್ ಅಂಕಿ-ಅಂಶಗಳು ತಿಳಿಸಿವೆ.
ಇದಕ್ಕೂ ಮುನ್ನ ಶುಕ್ರವಾರ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿತ್ತು. ಸುಮಾರು 9,200 ವಿಮಾನಗಳು ರದ್ದಾಗಿದ್ದು, 7,500 ವಿಮಾನಗಳು ವಿಳಂಬಗೊಂಡಿದ್ದವು. ಭಾನುವಾರ ಸಂಜೆಯ ವೇಳೆಗೆ ನಿಗದಿಯಾಗಿದ್ದ 530ಕ್ಕೂ ಹೆಚ್ಚು ವಿಮಾನಗಳನ್ನೂ ಈಗಾಗಲೇ ರದ್ದುಗೊಳಿಸಲಾಗಿದೆ.
ತಡರಾತ್ರಿಯವರೆಗೆ ಅಡಚಣೆ ಸಾಧ್ಯತೆ
ಎಫ್‌ಎಫ್‌ಎ ಮುಖ್ಯಸ್ಥ ಬ್ರಿಯಾನ್ ಬೆಡ್‌ಫೋರ್ಡ್, ಪ್ರಯಾಣಿಕರಿಗೆ ಉಂಟಾದ ತೊಂದರೆಗೆ ಕ್ಷಮೆಯಾಚಿಸಿದ್ದು, ಭಾನುವಾರ ತಡರಾತ್ರಿಯ ವೇಳೆಗೆ ವಿಮಾನ ಸೇವೆಗಳು ಬಹುತೇಕ ಸಾಮಾನ್ಯ ಸ್ಥಿತಿಗೆ ಮರಳುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.ಆದರೆ ವಿಮಾನಯಾನ ಸಂಸ್ಥೆಗಳಿಗೆ ಪರಿಸ್ಥಿತಿಯನ್ನು ಸರಿಪಡಿಸುವುದು ಸುಲಭವಾಗಿಲ್ಲ. ರದ್ದಾದ ಮತ್ತು ವಿಳಂಬವಾದ ವಿಮಾನಗಳನ್ನು ಮರುನಿಗದಿಪಡಿಸುವುದರ ಜೊತೆಗೆ, ಪೈಲಟ್‌ಗಳು ಹಾಗೂ ಇತರ ಸಿಬ್ಬಂದಿಯನ್ನು ಮತ್ತೆ ಸಾಮಾನ್ಯ ವೇಳಾಪಟ್ಟಿಗೆ ತರಬೇಕಾಗಿದೆ. ಹೀಗಾಗಿ ಎಫ್‌ಎಎ ತಾಂತ್ರಿಕ ಸಮಸ್ಯೆಯನ್ನು ಪರಿಹರಿಸಿದರೂ ಅದರ ಪರಿಣಾಮಗಳು ಇನ್ನೂ ಕೆಲವು ಸಮಯ ಮುಂದುವರಿಯುವ ಸಾಧ್ಯತೆಯಿದೆ.
ಶುಕ್ರವಾರವೇ ಬಿಕ್ಕಟ್ಟು ಆರಂಭ
ಎಫ್‌ಎಫ್‌ಎ ರಾಷ್ಟ್ರವ್ಯಾಪಿ ನೆಲದ ನಿಲುಗಡೆ ಸೂಚನೆ ನೀಡಿದ ಬಳಿಕ ಶುಕ್ರವಾರ ಬಿಕ್ಕಟ್ಟು ತೀವ್ರಗೊಂಡಿತ್ತು. ಇದರ ಪರಿಣಾಮ ದೇಶದ ಬಹುತೇಕ ನಿರ್ಗಮಿಸುವ ವಿಮಾನಗಳು ಸುಮಾರು ಐದು ಗಂಟೆಗಳ ಕಾಲ ಸ್ಥಗಿತಗೊಂಡಿದ್ದವು.ಆರಂಭದಲ್ಲಿ ಈ ವೈಫಲ್ಯಕ್ಕೆ ಸೈಬರ್ ದಾಳಿ ಕಾರಣವಾಗಿರಬಹುದೇ ಎಂಬ ಅನುಮಾನ ವ್ಯಕ್ತವಾಗಿತ್ತು. ಆದರೆ ಅಮೆರಿಕದ ಸಾರಿಗೆ ಕಾರ್ಯದರ್ಶಿ ಸೀನ್ ಡಫಿ ಬಳಿಕ, ಎಫ್‌ಎಎ ಗುತ್ತಿಗೆದಾರ ಎಲ್3ಹರ್ರೀಸ್ ದೂರದ ಒಂದು ಸೌಲಭ್ಯದಲ್ಲಿ ಕನಿಷ್ಠ ಒಂದು ಹೊಸ ರೂಟರ್ ಅಳವಡಿಸಿದ ಹಿನ್ನೆಲೆಯಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿರುವುದಾಗಿ ತಿಳಿಸಿದ್ದಾರೆ.
ಈ ಬೆಳವಣಿಗೆಯಿಂದ ಅಮೆರಿಕದ ವಿಮಾನ ನಿಲ್ದಾಣಗಳಲ್ಲಿ ಸಾವಿರಾರು ಪ್ರಯಾಣಿಕರು ಸಿಲುಕಿದ್ದು, ತಮ ಪ್ರಯಾಣ ಯಾವಾಗ ಪುನರಾರಂಭವಾಗಲಿದೆ ಎಂಬ ಅನಿಶ್ಚಿತತೆಯನ್ನು ಎದುರಿಸುತ್ತಿದ್ದಾರೆ. ಈಂಂ ವ್ಯವಸ್ಥೆಯನ್ನು ಸ್ಥಿರಗೊಳಿಸಲು ಕಾರ್ಯನಿರ್ವಹಿಸುತ್ತಿದ್ದರೂ, ವಿಮಾನಯಾನ ಸಂಸ್ಥೆಗಳು ತಮ ವೇಳಾಪಟ್ಟಿಯನ್ನು ಸಹಜ ಸ್ಥಿತಿಗೆ ತರಲು ಇನ್ನೂ ಹಲವು ಕಾರ್ಯಾಚರಣಾತಕ ಸವಾಲುಗಳನ್ನು ಎದುರಿಸಬೇಕಾಗಿದೆ.
