Homeರಾಷ್ಟ್ರೀಯಮಹಾರಾಷ್ಟ್ರದಲ್ಲಿ ಎನ್‌ಸಿಪಿ-ಎಸ್‌‍ಪಿ ವಿಲೀನದ ಊಹಾಪೋಹಕ್ಕೆ ತೆರೆ

ಮಹಾರಾಷ್ಟ್ರದಲ್ಲಿ ಎನ್‌ಸಿಪಿ-ಎಸ್‌‍ಪಿ ವಿಲೀನದ ಊಹಾಪೋಹಕ್ಕೆ ತೆರೆ

ಮುಂಬೈ,ನ.15- ಮಹಾರಾಷ್ಟ್ರದಲ್ಲಿ ಶರದ್‌ ಪವಾರ್‌ ನೇತೃತ್ವದ ಎನ್‌ಸಿಪಿ-ಎಸ್‌‍ಪಿ ಹಾಗೂ ಉಪಮುಖ್ಯಮಂತ್ರಿ ಸುನೇತ್ರಾ ಪವಾರ್‌ ನೇತೃತ್ವದ ಎನ್‌ಸಿಪಿ ಬಣ ವಿಲೀನವಾಗಲಿದೆ ಎಂಬ ಊಹಾಪೋಹಗಳಿಗೆ ಎನ್‌ಸಿಪಿ-ಎಸ್‌‍ಪಿ ಸ್ಪಷ್ಟನೆ ನೀಡಿದ್ದು, ಇಂತಹ ವರದಿಗಳನ್ನು ಸಂಪೂರ್ಣ ಸುಳ್ಳು ಎಂದು ತಳ್ಳಿಹಾಕಿದೆ.

ಅಜಿತ್‌ ಪವಾರ್‌ ನಿಧನದ ಬಳಿಕ ವಿಲೀನದ ಕುರಿತ ಮಾತುಕತೆಗಳು ಸಂಪೂರ್ಣವಾಗಿ ಅಂತ್ಯಗೊಂಡಿವೆ ಎಂದು ಎನ್‌ಸಿಪಿ-ಎಸ್‌‍ಪಿ ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಳೆ ಹೇಳಿದ ಬೆನ್ನಲ್ಲೇ ಪಕ್ಷದ ವಕ್ತಾರ ಪ್ರವೀಣ್‌ ಕುಂಟೆ ಪಾಟೀಲ್‌ ಈ ಸ್ಪಷ್ಟನೆ ನೀಡಿದ್ದಾರೆ. ವಿಲೀನಗೊಳ್ಳಲು ಬಯಸುವವರು ನಮ ಪಕ್ಷಕ್ಕೆ ಸೇರಬೇಕು ಎಂಬುದು ನಮ ಅಧಿಕೃತ ನಿಲುವು. ನಮ ಪಕ್ಷ ಯಾವುದೇ ರಾಜಕೀಯ ಸಂಘಟನೆಯೊಂದಿಗೆ ವಿಲೀನವಾಗುವುದಿಲ್ಲ ಎಂದು ಕುಂಟೆ ಪಾಟೀಲ್‌ ಹೇಳಿದ್ದಾರೆ.

ಅಜಿತ್‌ ಪವಾರ್‌ ಜೀವಂತವಾಗಿದ್ದ ಸಂದರ್ಭದಲ್ಲಿ ಎರಡೂ ಬಣಗಳ ವಿಲೀನದ ಕುರಿತು ಮಾತುಕತೆ ನಡೆದಿತ್ತು ಹಾಗೂ ದಿನಾಂಕವನ್ನೂ ನಿಗದಿಪಡಿಸಲಾಗಿತ್ತು ಎಂದು ಸುಪ್ರಿಯಾ ಸುಳೆ ತಿಳಿಸಿದ್ದಾರೆ. ಆದರೆ ಅಜಿತ್‌ ಪವಾರ್‌ ನಿಧನರಾದ ದಿನವೇ ವಿಲೀನದ ವಿಚಾರ ತಮ ಪಾಲಿಗೆ ಸಂಪೂರ್ಣವಾಗಿ ಮುಕ್ತಾಯಗೊಂಡಿತು ಎಂದು ಅವರು ಹೇಳಿದ್ದಾರೆ.

ವಿಲೀನದ ಕುರಿತು ಅಜಿತ್‌ ಪವಾರ್‌ ನೇತೃತ್ವದ ಬಣದಿಂದ ಯಾವುದೇ ಸಂದೇಶ ತಮನ್ನು ತಲುಪಿಲ್ಲ ಎಂದೂ ಬಾರಾಮತಿ ಸಂಸದೆ ಸ್ಪಷ್ಟಪಡಿಸಿದ್ದಾರೆ.ಇದೇ ವೇಳೆ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌‍ ಅವರು ಕೂಡ ಸುನೇತ್ರಾ ಪವಾರ್‌ ಅವರೊಂದಿಗೆ ವಿಲೀನದ ಕುರಿತು ಯಾವುದೇ ಚರ್ಚೆ ನಡೆದಿಲ್ಲ ಎಂದು ಹೇಳಿದ್ದಾರೆ. ಸುನೇತ್ರಾ ಪವಾರ್‌ ಅವರು ಸರ್ಕಾರಿ ಕೆಲಸದ ನಿಮಿತ್ತ ತಮನ್ನು ಭೇಟಿಯಾಗಿದ್ದರು. ಆದರೆ ಸಭೆಯಲ್ಲಿ ವಿಲೀನದ ವಿಚಾರ ಪ್ರಸ್ತಾಪವಾಗಿಲ್ಲ ಎಂದು ಫಡ್ನವೀಸ್‌‍ ತಿಳಿಸಿದ್ದಾರೆ.

ಅಜಿತ್‌ ಪವಾರ್‌ ಬಣದಿಂದ ವಿಲೀನದ ಕುರಿತು ಯಾವುದೇ ಫೋನ್‌ ಕರೆ, ವಾಟ್ಸಾಪ್‌ ಸಂದೇಶ, ಎಸ್‌‍ಎಂಎಸ್‌‍, ಪತ್ರ ಅಥವಾ ಇ-ಮೇಲ್‌ ಬಂದಿಲ್ಲ ಎಂದೂ ಫಡ್ನವೀಸ್‌‍ ಹೇಳಿದ್ದಾರೆ. ವಿಲೀನದ ಊಹಾಪೋಹಗಳ ಹಿಂದೆ ಮಹಾರಾಷ್ಟ್ರದ ಪ್ರಮುಖ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಉದ್ದೇಶವಿದೆ ಎಂದು ಎನ್‌ಸಿಪಿ-ಎಸ್‌‍ಪಿ ಆರೋಪಿಸಿದೆ.

ಬರಗಾಲ, ಹಣದುಬ್ಬರ, ನಿರುದ್ಯೋಗ, ಮತ ಕಳ್ಳತನದ ಆರೋಪಗಳು ಹಾಗೂ ಎಂಪಿಎಸ್‌‍ಸಿ ಪರೀಕ್ಷೆಗಳಲ್ಲಿನ ಅಕ್ರಮಗಳಂತಹ ವಿಷಯಗಳ ಬದಲಿಗೆ ವಿಲೀನದ ಚರ್ಚೆಗೆ ಮಾಧ್ಯಮ ಗಮನ ಹರಿಸುತ್ತಿದೆ ಎಂದು ಕುಂಟೆ ಪಾಟೀಲ್‌ ಆರೋಪಿಸಿದ್ದಾರೆ.ಇದೇ ವೇಳೆ, ಎನ್‌ಡಿಎ ಸೇರುವ ಸಾಧ್ಯತೆಯ ಕುರಿತ ಊಹಾಪೋಹಗಳನ್ನೂ ಸುಪ್ರಿಯಾ ಸುಳೆ ತಳ್ಳಿಹಾಕಿದ್ದಾರೆ. ಎನ್‌ಡಿಎ ಸೇರುವ ಬಗ್ಗೆ ಯಾವುದೇ ಚರ್ಚೆಯೇ ನಡೆದಿಲ್ಲ. ಆರಂಭವೇ ಇಲ್ಲದಿರುವಾಗ ಪೂರ್ಣವಿರಾಮದ ಪ್ರಶ್ನೆ ಎಲ್ಲಿಂದ ಬರುತ್ತದೆ? ಎಂದು ಅವರು ಪ್ರಶ್ನಿಸಿದ್ದಾರೆ.

RELATED ARTICLES

Latest News