Homeಅಂತಾರಾಷ್ಟ್ರೀಯಗಾಜಾದಲ್ಲಿ ಇಸ್ರೇಲ್ ವೈಮಾನಿಕ ದಾಳಿ : ಹಮಾಸ್ ಕಮಾಂಡರ್ ಸಮೀರ್‌ ಅಬು ಯೂನಿಸ್‌ ಉಡೀಸ್

ಗಾಜಾದಲ್ಲಿ ಇಸ್ರೇಲ್ ವೈಮಾನಿಕ ದಾಳಿ : ಹಮಾಸ್ ಕಮಾಂಡರ್ ಸಮೀರ್‌ ಅಬು ಯೂನಿಸ್‌ ಉಡೀಸ್

ಗಾಜಾ, ನ.15- ದಕ್ಷಿಣ ಗಾಜಾದ ಖಾನ್‌ ಯೂನಿಸ್‌ನ ಪಶ್ಚಿಮದಲ್ಲಿರುವ ಅಲ್‌-ಮವಾಸಿ ಪ್ರದೇಶದಲ್ಲಿ ಇಸ್ರೇಲ್‌ ನಡೆಸಿದ ವೈಮಾನಿಕ ದಾಳಿಯಲ್ಲಿ ಹಮಾಸ್‌ನ ಸಶಸ್ತ್ರ ವಿಭಾಗವಾದ ಅಲ್‌-ಖಸ್ಸಾಂ ಬ್ರಿಗೇಡ್‌ನ ರಾಫಾ ಬ್ರಿಗೇಡ್‌ ಕಮಾಂಡರ್‌ ಸಮೀರ್‌ ಅಬು ಯೂನಿಸ್‌ ಹತರಾಗಿದ್ದಾರೆ ಎಂದು ಪ್ಯಾಲೆಸ್ಟೀನಿಯನ್‌ ಮೂಲಗಳು ತಿಳಿಸಿವೆ.

ನವೆಂಬರ್‌ 15ರ ಮುಂಜಾನೆ, ಇಸ್ರೇಲಿ ಸೇನೆ ಮತ್ತು ಆಂತರಿಕ ಭದ್ರತಾ ಸಂಸ್ಥೆ ಶಿನ್‌ ಬೆಟ್‌ ಜಂಟಿ ಹೇಳಿಕೆಯಲ್ಲಿ, ಹಮಾಸ್‌ನ ಮಿಲಿಟರಿ ವಿಭಾಗದ ಹಿರಿಯ ಸದಸ್ಯನನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದಾಗಿ ತಿಳಿಸಿವೆ. ಆದರೆ, ಗುರಿಯಾಗಿದ್ದ ವ್ಯಕ್ತಿಯ ಹೆಸರನ್ನು ಸೇನೆ ಅಧಿಕೃತವಾಗಿ ಬಹಿರಂಗಪಡಿಸಿಲ್ಲ.

ಆದರೆ, ಪ್ಯಾಲೆಸ್ಟೀನಿಯನ್‌ ಭದ್ರತಾ ಮೂಲದ ಪ್ರಕಾರ, ಅಲ್‌-ಮವಾಸಿಯಲ್ಲಿ ಮಧ್ಯರಾತ್ರಿಯ ಬಳಿಕ ನಡೆದ ದಾಳಿಯಲ್ಲಿ 53 ವರ್ಷದ ಸಮೀರ್‌ ಅಬು ಯೂನಿಸ್‌ ಮೃತಪಟ್ಟಿದ್ದಾರೆ. ಗಾಜಾ ನಾಗರಿಕ ರಕ್ಷಣಾ ಪಡೆಯ ವಕ್ತಾರ ಮಹಮೂದ್‌ ಬಸ್ಸಲ್‌ ಅವರು ಯೂನಿಸ್‌ ಅವರ ಮೃತದೇಹವನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ. ದಾಳಿಯಲ್ಲಿ ಮತ್ತಿಬ್ಬರು ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಕದನ ವಿರಾಮದಲ್ಲೂ ಮುಂದುವರಿದ ದಾಳಿ

2025ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಇಸ್ರೇಲ್‌-ಹಮಾಸ್‌ ಕದನ ವಿರಾಮದ ಹೊರತಾಗಿಯೂ ಗಾಜಾದಲ್ಲಿ ದಾಳಿಗಳು ಮುಂದುವರಿದಿವೆ. ಕದನ ವಿರಾಮ ಉಲ್ಲಂಘನೆಗೆ ಇಸ್ರೇಲ್‌ ಮತ್ತು ಹಮಾಸ್‌ ಪರಸ್ಪರ ಆರೋಪ ಮಾಡುತ್ತಿವೆ.

ಗಾಜಾ ಆರೋಗ್ಯ ಸಚಿವಾಲಯದ ಪ್ರಕಾರ, ಕದನ ವಿರಾಮ ಜಾರಿಗೆ ಬಂದ ನಂತರವೂ 1,600ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರು ಮೃತಪಟ್ಟಿದ್ದಾರೆ. ಇದೇ ಅವಧಿಯಲ್ಲಿ ಏಳು ಇಸ್ರೇಲಿ ಸೈನಿಕರು ಮತ್ತು ಒಬ್ಬ ನಾಗರಿಕ ಗುತ್ತಿಗೆದಾರ ಮೃತಪಟ್ಟಿದ್ದಾರೆ ಎಂದು ಇಸ್ರೇಲಿ ಸೇನೆ ಹೇಳಿದೆ.

ನಾಸರ್‌ ಆಸ್ಪತ್ರೆ ಮೇಲಿನ ದಾಳಿ

ಇದರ ನಡುವೆ, ನವೆಂಬರ್‌ 13ರಂದು ಖಾನ್‌ ಯೂನಿಸ್‌ನ ನಾಸರ್‌ ಮೆಡಿಕಲ್‌ ಕಾಂಪ್ಲೆಕ್ಸ್‌ನ ಶಸ್ತ್ರಚಿಕಿತ್ಸಾ ವಿಭಾಗದ ಮೇಲೆ ನಡೆದ ಇಸ್ರೇಲಿ ದಾಳಿಯಲ್ಲಿ ಕನಿಷ್ಠ ಆರು ಮಂದಿ ಮೃತಪಟ್ಟಿದ್ದು, 27 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಮೃತರಲ್ಲಿ ವೈದ್ಯರು, ಇತರ ಆರೋಗ್ಯ ಕಾರ್ಯಕರ್ತರು, ರೋಗಿಗಳು ಹಾಗೂ ಅವರ ಸಂಬಂಧಿಕರು ಸೇರಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯ ತಿಳಿಸಿದೆ.

ವೈದ್ಯಕೀಯ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರು ಮತ್ತು ರೋಗಿಗಳಿಗೆ ಅಂತರರಾಷ್ಟ್ರೀಯ ಕಾನೂನು ನೀಡಿರುವ ರಕ್ಷಣೆಯನ್ನು ಈ ದಾಳಿ ಉಲ್ಲಂಘಿಸಿದೆ ಎಂದು ಗಾಜಾ ಆರೋಗ್ಯ ಸಚಿವಾಲಯ ಆರೋಪಿಸಿದ್ದು, ಆಸ್ಪತ್ರೆಗಳ ರಕ್ಷಣೆಗೆ ಅಂತರರಾಷ್ಟ್ರೀಯ ಸಮುದಾಯ ಮತ್ತು ವಿಶ್ವಸಂಸ್ಥೆ ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸಿದೆ.

RELATED ARTICLES

Latest News