ನವದೆಹಲಿ,ನ.29:ಮಹಿಳಾ ಮೀಸಲಾತಿ ಜಾರಿ ಹಾಗೂ ಕ್ಷೇತ್ರ ಪುನರ್ವಿಂಗಡಣೆಯನ್ನು ಪರಸ್ಪರ ಜೋಡಿಸುವ ಪ್ರಸ್ತಾವಿತ ಸಂವಿಧಾನ ತಿದ್ದುಪಡಿಗಳಿಗೆ ಬೆಂಬಲ ಸೂಚಿಸಿರುವ ಡಿಎಂಕೆ ಮತ್ತು ವೈಎಸ್ಆರ್ಸಿಪಿ ಸಂಸದರ ನಿಯೋಗಗಳು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿವೆ. ಸಂಸತ್ತಿನಲ್ಲಿ ಈ ತಿದ್ದುಪಡಿಗಳ ಕುರಿತು ಚರ್ಚೆ ನಡೆಯಲು ಕೆಲವೇ ದಿನಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಈ ಭೇಟಿ ನಡೆದಿದೆ.
ಡಿಎಂಕೆ ನಿಯೋಗದಲ್ಲಿ ಟಿ.ಆರ್. ಬಾಲು, ಕನಿಮೊಳಿ, ದಯಾನಿಧಿ ಮಾರನ್, ಎ. ರಾಜಾ ಮತ್ತು ಪಿ. ವಿಲ್ಸನ್ ಇದ್ದರು. ವೈಎಸ್ರ್ಆ ಕಾಂಗ್ರೆಸ್ ಪಕ್ಷದ ಪರವಾಗಿ ರಾಜ್ಯಸಭಾ ಸದಸ್ಯ ವೈ.ವಿ. ಸುಬ್ಬಾರೆಡ್ಡಿ ಭಾಗವಹಿಸಿದ್ದರು.
ಡಿಎಂಕೆ ಲೋಕಸಭೆಯಲ್ಲಿ 22 ಹಾಗೂ ರಾಜ್ಯಸಭೆಯಲ್ಲಿ 8 ಸದಸ್ಯರನ್ನು ಹೊಂದಿದೆ. ವೈಎಸ್ಆರ್ಸಿಪಿ ಎರಡೂ ಸದನಗಳಲ್ಲಿ ತಲಾ ನಾಲ್ಕು ಸದಸ್ಯರನ್ನು ಹೊಂದಿದೆ. ಕಳೆದ ಏಪ್ರಿಲ್ನಲ್ಲಿ ಮಹಿಳಾ ಮೀಸಲಾತಿ ಕಾಯ್ದೆಗೆ ತಿದ್ದುಪಡಿ ತಂದು ಕ್ಷೇತ್ರ ಪುನರ್ವಿಂಗಡಣೆಯೊಂದಿಗೆ ಮೀಸಲಾತಿ ಜಾರಿಗೊಳಿಸುವ ಹಿಂದಿನ ಮಸೂದೆಯನ್ನು ಡಿಎಂಕೆ ವಿರೋಧಿಸಿತ್ತು. ಆ ಮಸೂದೆ ಲೋಕಸಭೆಯಲ್ಲಿ ಸೋಲು ಕಂಡಿತ್ತು. ಆದರೆ, ವೈಎಸ್ಆರ್ಸಿಪಿ ಆಗ ಮಸೂದೆಗೆ ಬೆಂಬಲ ನೀಡಿತ್ತು.ಇದೀಗ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಜಾರಿ ಹಾಗೂ ಕ್ಷೇತ್ರ ಪುನರ್ವಿಂಗಡಣೆಗಾಗಿ ಮಸೂದೆಗಳನ್ನು ಮತ್ತೆ ಮಂಡಿಸಲು ಎನ್ಡಿಎ ಸರ್ಕಾರ ಮುಂದಾಗಿರುವುದಕ್ಕೆ ಎರಡೂ ಪಕ್ಷಗಳು ಬೆಂಬಲ ಘೋಷಿಸಿವೆ.
ಲೋಕಸಭೆ, ವಿಧಾನಸಭೆ ಸ್ಥಾನಗಳ ಹೆಚ್ಚಳಕ್ಕೆ ಪ್ರಸ್ತಾವ
ಸೋಮವಾರ ಲೋಕಸಭೆಯಲ್ಲಿ ಹೊಸ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಮಂಡಿಸಲು ಮೋದಿ ಸರ್ಕಾರ ಸಿದ್ಧತೆ ನಡೆಸಿದೆ. ಇದರ ಪ್ರಕಾರ, ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆಯಾಗಿರುವ ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು ಶೇ.50ರಷ್ಟು ಹೆಚ್ಚಿಸುವುದರ ಜೊತೆಗೆ ವಿಧಾನಸಭೆಗಳ ಸದಸ್ಯಬಲವನ್ನೂ ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ. ದಕ್ಷಿಣ ರಾಜ್ಯಗಳು ಲೋಕಸಭೆಯಲ್ಲಿ ತಮ ಪ್ರಾತಿನಿಧ್ಯ ಕಡಿಮೆಯಾಗುವ ಆತಂಕ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ, ಹೊಸ ಮಸೂದೆಯಲ್ಲಿ ಎಲ್ಲ ರಾಜ್ಯಗಳಿಗೂ ಸಮಾನ ಪ್ರಮಾಣದ ಸ್ಥಾನಗಳ ಹೆಚ್ಚಳವನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಪರಿಷ್ಕೃತ ಸ್ಥಾನ ಹಂಚಿಕೆ ಹಾಗೂ ಕ್ಷೇತ್ರಗಳ ಗಡಿಗಳನ್ನು 2051ರವರೆಗೆ ಸ್ಥಗಿತಗೊಳಿಸುವ ಪ್ರಸ್ತಾವನೆಯನ್ನೂ ಮಸೂದೆ ಒಳಗೊಂಡಿದೆ.
